ಶಿವಣ್ಣನ ಎದುರು ಟಗರು ಚಿತ್ರದಲ್ಲಿ ಮಾನ್ವಿತಾ ಕಾಮತ್ ನಟಿಸುತ್ತಾರೆ ಎಂದಾಗ.. ಶಿವಣ್ಣನ ಮುಂದೆ ಈ ಚಿಕ್ಕ ಹುಡುಗೀನಾ.. ಶಿವಣ್ಣನ ಎನರ್ಜಿ ಎದುರು ಡಲ್ ಹೊಡೀತಾಳೆ ಎಂದುಕೊಂಡಿದ್ದವರಿಗೆ.. ಅಕ್ಷರಶಃ ಶಾಕ್ ಕೊಟ್ಟಿದ್ದರು ಮಾನ್ವಿತಾ ಕಾಮತ್. ಕೆಂಡ ಸಂಪಿಗೆ ನೋಡಿದವರು ದಂಗು ಬಡಿಯುವಂತೆ ಉತ್ಸಾಹದಿಂದ ನಟಿಸಿದ್ದರಷ್ಟೇ ಅಲ್ಲ.. ಟಗರು ನಂತರ ಟಗರು ಪುಟ್ಟಿ ಎಂದೇ ಖ್ಯಾತರಾಗಿದ್ದರು. ಇವತ್ತಿಗೂ ಈ ಚೆಲುವೆಯನ್ನು ಟಗರು ಪುಟ್ಟಿ ಎಂದೇ ಜನ ಗುರುತಿಸೋದು. ಅವರು ಮದುವೆಯಾದ ಅರುಣ್ ಅವರಿಗೆ ಏನ್ ಮಚ್ಚಾ.. ಟಗರು ಪುಟ್ಟಿನ ಮದ್ವೆ ಆಗ್ತಿದ್ಯಾ ಎಂದು ರೇಗಿಸ್ತಿದ್ದರಂತೆ ಅವರ ಫ್ರೆಂಡ್ಸ್. ಅಂತಹ ಟಗರು ಪುಟ್ಟಿ ಮಾನ್ವಿತಾ ಕಾಮತ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಧಾರೆ.
ಕೊಂಕಣಿ ಸಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆದ ಮದುವೆಯಲ್ಲಿ ಮಾನ್ವಿತಾ ಕಾಮತ್, ಮೈಸೂರು ಮೂಲದ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಅವರನ್ನು ಮದುವೆಯಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಕಳಸದಲ್ಲಿರುವ 500 ವರ್ಷ ಹಳೆಯ ವೆಂಕಟರಮಣ ದೇವಸ್ಥಾನದಲ್ಲಿ ಮಾಂಗಲ್ಯ ಧಾರಣೆ ಶಾಸ್ತ್ರ ನೆರವೇರಿದೆ. ಮಾನ್ವಿತಾ ಅವರ ವಿವಾಹದಲ್ಲಿ ಆಪ್ತರು ಹಾಗೂ ಗೆಳೆಯರು ಮಾತ್ರ ಇದ್ದರು. ಮಾನ್ವಿತಾ ಅವರು ಸೀರೆ ಉಟ್ಟು ಸಂಪ್ರದಾಯವಾಗಿ ಕಾಣಿಸಿಕೊಂಡರು.
ಏಪ್ರಿಲ್ 29ರಂದು ಮಾನ್ವಿತಾ ಅವರ ಹಳದಿ ಶಾಸ್ತ್ರ ನಡೆದಿತ್ತು. ಏಪ್ರಿಲ್ 30ರಂದು ಸಂಗೀತ್ ಮತ್ತು ನಿಶ್ಚಿತಾರ್ಥ ಶಾಸ್ತ್ರವಾಗಿತ್ತು. ಮಾನ್ವಿತಾ ಅವರ ತಾಯಿ ಕಳೆದ ವರ್ಷ ನಿಧನರಾಗಿದ್ದರು. ತಾಯಿಯ ಆರೈಕೆಗಾಗಿ ವೃತ್ತಿಗೆ ಬ್ರೇಕ್ ಕೊಟ್ಟಿದ್ದ ಮಾನ್ವಿತಾ, ತಾಯಿ ನಿಧನದ ನಂತರ ಮತ್ತೆ ನಟನೆಗೆ ಮರಳಿದ್ದರು. ಮಾನ್ವಿತಾ ಅವರ ಸೋದರ ಮಾವಂದಿರೇ ಮುಂದೆ ನಿಂತು ಮದುವೆ ಮಾಡಿಕೊಟ್ಟಿದ್ಧಾರೆ.
ಆರ್.ಜೆ. ಆಗಿದ್ದ ಮಾನ್ವಿತಾ ಚಿತ್ರರಂಗಕ್ಕೆ ಬಂದಿದ್ದು ದುನಿಯಾ ಸೂರಿಯವರ ಕೆಂಡ ಸಂಪಿಗೆ ಮೂಲಕ. ಕೆಂಡಸಂಪಿಗೆ ಹುಡುಗಿಯಾಗಿದ್ದ ಮಾನ್ವಿತಾ, ಟಗರು ಪುಟ್ಟಿಯಾಗಿದ್ದು ಅದೇ ಸೂರಿಯವರ ಟಗರು ಚಿತ್ರದಿಂದ.



