ವಿಜಯೇಂದ್ರರನ್ನು ಮುಳುಗಿಸಲು ಹೋಗಿ ಬಿಜೆಪಿಯನ್ನೇ ಮುಳುಗಿಸಿತಾ ರೆಬಲ್ ಟೀಂ ಎಂಬ ಲೆಕ್ಕಾಚಾರ ಜೋರಾಗಿದೆ. ಕಾರಣಗಳೂ ಇವೆ. ಮೂರಕ್ಕೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸೋತು ಸುಣ್ಣವಾಗಿದೆ. ಸೋತ ಮೇಲೆ ಸೋತವರಿಗೆ ಪಕ್ಷದಲ್ಲಿ ಯಾರ ಪರ ನಿಲ್ಲಬೇಕು, ಯಾರ ಜೊತೆ ಇರಬೇಕು ಎಂಬ ಗೊಂದಲ ಶುರುವಾಗಿದೆ. ಆದರೆ ಎಲ್ಲರಿಗೂ ಅನಿಸುತ್ತಿರುವ ಒಂದು ಪ್ರಶ್ನೆ, ರೆಬಲ್ ವಿಷಯದಲ್ಲಿ ಕೇವಲ ಯತ್ನಾಳ್, ಜಾರಕಿಹೊಳಿ ಅವರಷ್ಟೇ ತಪ್ಪು ಮಾಡಿದರಾ.. ವಿಜಯೇಂದ್ರ ತಪ್ಪೇ ಮಾಡಲಿಲ್ಲವಾ ಎನ್ನುವುದು. ಯಡಿಯೂರಪ್ಪ ಆಪ್ತರೇ ಹೇಳೋ ಪ್ರಕಾರ ವಿಜಯೇಂದ್ರ ಕೂಡಾ ಒಂದಿಷ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ಒಂದು ಸೂಕ್ಷ್ಮ ಇದೆ. ಮಾಜಿ ಸಚಿವ ಶಾಸಕ ಸುರೇಶ್ ಕುಮಾರ್ ಅವರ ಸೋಷಿಯಲ್ ಮೀಡಿಯಾ ಪೋಸ್ಟು. ಅದು ರಾಜ್ಯದ ಉನ್ನತ ನಾಯಕರಿಗಷ್ಟೇ ಅಲ್ಲ, ಹೈಕಮಾಂಡಿನವರಿಗೂ ಅರ್ಥವಾದರೆ ಬಿಜೆಪಿಯೊಳಗಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಸಿಗಲಿದೆ.
ವಕ್ಫ್ ವಿರುದ್ಧ ಹೋರಾಟವೇ ಇರಲಿ, ಮುಡಾ ಪಾದಯಾತ್ರೆಯೇ ಇರಲಿ, ತಮಗಿಂತ ಹಿರಿಯರಾದ ನಾಯಕರನ್ನು ಖುದ್ದು ಮಾತನಾಡಿಸಿ ಮನವೊಲಿಸಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ನೇರಾನೇರವಾಗಿ ಮಾತನಾಡುವ ಅವಕಾಶಗಳನ್ನು ಕಳೆದುಕೊಂಡ ನಂತರ ಪ್ರಯತ್ನ ಮಾಡಿದರೆ ಪ್ರಯೋಜನ ಇಲ್ಲ ಎನ್ನುವ ನಾಯಕರು, ಬಹಿರಂಗವಾಗಿ ದಿನಕ್ಕೊಮ್ಮೆ ಹೇಳಿಕೆ ಹೊರಬಿದ್ದಾಗ ನೀಡುತ್ತಿದ್ದ ಹೇಳಿಕೆಗಳನ್ನು ನೋಡಿ, ವರಿಷ್ಠರಿಗೆ ಮುಟ್ಟಿಸುವ, ಯಡಿಯೂರಪ್ಪ, ಬಿಎಲ್ ಸಂತೋಷ್ ಮೊದಲಾದವರ ಮೂಲಕ ಸರಿದೂಗಿಸುವ ಪ್ರಯತ್ನ ಮಾಡಿದರು. ಇದೆಲ್ಲವನ್ನೂ ಮೊದಲೇ ಎಚ್ಚರಿಕೆಯಿಂದ ನಿಭಾಯಿಸಬಹುದಿತ್ತು ಎನ್ನುವ ಮಾತುಗಳೂ ಇವೆ. ಈ ಎಲ್ಲ ಮಾತನಾಡುತ್ತಿರುವುದು ಖುದ್ದು ಯಡಿಯೂರಪ್ಪ ನಿಷ್ಠರು ಎಂಬುದೇ ವಿಶೇಷ. ಸದ್ಯಕ್ಕೆ ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ಮಾತುಕತೆ ಮಾಧ್ಯಮಗಳ ಮೂಲಕವೇ ನಡೆಯುತ್ತಿದೆ.
ಇನ್ನು ಹೈಕಮಾಂಡ್ ವಿಷಯಕ್ಕೆ ಬಂದರೆ, ಅವರದ್ದೂ ಅದೇ ಹಳಹಳಿಕೆ. ಉಪಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಸೋಲಿಗೆ ವಿಜಯೇಂದ್ರ ಟೀಂ ಕಾರಣ ಎಂದು ಕಣ್ಣೀರಿಡುತ್ತಿದ್ದಾರೆ ಬಸವರಾಜ ಬೊಮ್ಮಾಯಿ. ಇದೇ ರೀತಿ ಈ ಹಿಂದೆ ವಿ ಸೋಮಣ್ಣ, ಸಿಟಿ ರವಿ ಮೊದಲಾದ ನಾಯಕರು ಕಣ್ಣೀರಿಟ್ಟಿದ್ದರು. ಈಗಲೂ ಯತ್ನಾಳ್ ಜೊತೆ ಇರುವ ನಾಯಕರಲ್ಲಿ ಈ ರೀತಿಯ ಕಣ್ಣೀರು ಕ್ರಾಂತಿ ನಾಯಕರೇ ಹೆಚ್ಚು. ಇಲ್ಲಿ ಹೈಕಮಾಂಡ್ ನವರಿಗೂ ಒಂದು ವಿಷಯ ಅರ್ಥವಾಗಬೇಕಿತ್ತು. ಒಬ್ಬರನ್ನು ಸೋಲಿಸುವ ಶಕ್ತಿ ಇರುವ ನಾಯಕನಿಗೆ, ಇನ್ನೊಂದಿಷ್ಟು ಶಕ್ತಿ ತುಂಬಿದರೆ ಗೆಲ್ಲಿಸಿಕೊಂಡು ಬರುತ್ತಾನೆ ಎಂಬ ಸತ್ಯ ಅರಿವಾಗಬೇಕಿತ್ತು.
ಆದರೆ ಬಿಜೆಪಿ ಹೈಕಮಾಂಡ್‌ನವರಿಗೂ ಕಣ್ಣೀರು ಹಾಕುವವರೆಂದರೇ ಇಷ್ಟ ಎಂಬಂತೆ ಕಾಣುತ್ತಿದೆ. ಹೀಗಾಗಿ ವಿಜಯೇಂದ್ರ ಅವರು ಕೊಡುವ ದೂರುಗಳನ್ನು ಸೀರಿಯಸ್ ಆಗಿ ಪರಿಗಣಿಸುತ್ತಿಲ್ಲ. ಮಾತುಕತೆ, ಮನವೊಲಿಕೆಯ ಪ್ರಯತ್ನಗಳನ್ನೂ ಮಾಡುತ್ತಿಲ್ಲ. ಜೊತೆಗೆ ವಿಜಯೇಂದ್ರ ವಿರೋಧಿಗಳನ್ನೂ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಹೈಕಮಾಂಡಿಗೆ ಒಂದು ವಿಷಯವಂತೂ ಅರ್ಥವಾಗಿರಬೇಕಿತ್ತು.
ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ದೂರ ಇಟ್ಟರೆ ಲಿಂಗಾಯತರನ್ನು ಒಲಿಸಿಕೊಳ್ಳುವ ಇನ್ನೊಬ್ಬ ನಾಯಕ ಇಲ್ಲ ಎನ್ನುವ ಸತ್ಯ ಇಷ್ಟು ಹೊತ್ತಿಗೆ ಅರಿವಾಗಿರಬೇಕಿತ್ತು. ವಿಜಯೇಂದ್ರ ಅವರಂತೆ ರಾಜ್ಯದ ಎಲ್ಲ ಕ್ಷೇತ್ರಗಳನ್ನೂ ತಲುಪಬಲ್ಲ ನಾಯಕರೂ ಇಲ್ಲ ಎಂಬ ವಿಷಯವೂ ಗೊತ್ತಿರಬೇಕಿತ್ತು. ಆದರೆ ಹೈಕಮಾಂಡ್ ಕೂಡಾ ಸೋಷಿಯಲ್ ಮೀಡಿಯಾ ಮತ್ತು ಕ್ಯಾಮೆರಾ ಹುಲಿಗಳನ್ನೇ ನೆಚ್ಚಿಕೊಂಡಂತಿದೆ. ಸೋಷಿಯಲ್ ಮೀಡಿಯಾದಲ್ಲಿ ಲೈಕುಗಳನ್ನು ಪಡೆಯುವಷ್ಟು ಸಲೀಸಾಗಿ ವೋಟು ಪಡೆಯುವುದಕ್ಕೆ ಆಗುವುದಿಲ್ಲ ಎಂಬ ಸತ್ಯ ಅರ್ಥವಾದಂತೆ ಕಾಣುತ್ತಿಲ್ಲ.
ಮಾಜಿ ಸಚಿವ ಸುರೇಶ್ ಕುಮಾರ್ ಪೋಸ್ಟ್ʻನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅದು ಅರ್ಥವಾಗುತ್ತದೆ. ಅವರು ಮುಂಬೈನ ಸೋಷಿಯಲ್ ಮೀಡಿಯಾ ಹೀರೋ ಬಿಗ್ ಬಾಸ್ ಅಜಾಜ್ ಅವರಿಗೆ 6 ಲಕ್ಷ ಫಾಲೋವರ್ಸ್ ಇದ್ದರು. ಅವರ ಒಂದೊಂದು ಪೋಸ್ಟಿಗೂ ಸಾವಿರಾರು ಲೈಕ್ಸ್, ಕಮೆಂಟ್ಸ್ ಬರುತ್ತಿದ್ದವು. ಆದರೆ ಅದೇ ವ್ಯಕ್ತಿ ಚುನಾವಣೆಗೆ ನಿಂತಾಗ ಬಂದಿದ್ದು ಕೇವಲ 131 ಮತಗಳು. ಅದು ಅರ್ಥವಾದರೆ ವಿಜಯೇಂದ್ರ, ಯತ್ನಾಳ್, ಜಾರಕಿಹೊಳಿ ಸಮಸ್ಯೆಯೂ ಇತ್ಯರ್ಥವಾಗುತ್ತದೆ.



