ಗೋಲ್ಡನ್ ಸ್ಟಾರ್ ಎಂದರೆ ಪ್ರೀತಿ, ರೊಮ್ಯಾನ್ಸ್, ಕಾಮಿಡಿ.. ಇರುತ್ತದೆ. ಅಲ್ಲೋ ಇಲ್ಲೋ ಫೈಟ್ಸ್ ಕೂಡಾ ಇರುತ್ತವೆ. ಅಂತಾದ್ದರಲ್ಲಿ ಗಣೇಶ್ ತಮ್ಮ ಅವತಾರವನ್ನೇ ಬದಲಿಸಿದ್ದಾರೆ. ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಮತ್ತದೇ ಮಾದರಿಯ ರೊಮ್ಯಾಂಟಿಕ್ ಕಾಮಿಡಿ ಚಿತ್ರವನ್ನು ಗಣೇಶ್ ಒಪ್ಪಿಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಹುಸಿ ಮಾಡಿದ್ದಾರೆ ಗಣೇಶ್. ಹಾರರ್ ಸಸ್ಪೆನ್ಸ್ ಥ್ರಿಲ್ಲರ್ ಮತ್ತು ಕ್ಷುದ್ರ ಕಥೆಯುಳ್ಳ ಸಿನಿಮಾ ಒಪ್ಪಿಕೊಂಡಿದ್ದಾರೆ. ಚಿತ್ರದ ಹೆಸರು ಪಿನಾಕ.
ಗಣೇಶ್ ಮಾಟಗಾರನೋ.. ಅಘೋರಿಯೋ.. ಗೊತ್ತಾಗದಂತೆ ಪಿನಾಕಾ ಚಿತ್ರದ ಟೀಸರ್ ಹೊರ ಬಂದಿದೆ. ಹಿಂದೆಂದೂ ಗಣೇಶ್ ಇಷ್ಟು ಕ್ಷುದ್ರಾವತಾರದಲ್ಲಿ ಕಾಣಿಸಿಕೊಂಡಿಲ್ಲ. ಟೀಸರಿನಲ್ಲಿ ಬರು ʻಕ್ಷುದ್ರ ಶಕ್ತಿಯ ಎದುರು ರುದ್ರ ಶಕ್ತಿಯ ಸಮರ’ ಎಂಬ ಬರಹ ಇಡೀ ಚಿತ್ರದ ಕಥೆ ಹೇಳಿ ಬಿಡುತ್ತದೆ. ಆದರೆ, ಅಷ್ಟು ಸುಲಭವಿಲ್ಲ. ‘ಪಿನಾಕ’ ಪುರಾಣ ಮತ್ತು ಇತಿಹಾಸದ ಮಿಶ್ರಣದ ಕಥೆ ಹೊಂದಿದೆ.
ಉದ್ದ ಕೂದಲು, ಕುರುಚಲು ಗಡ್ಡ, ಬಣ್ಣಗಟ್ಟಿದ ಹಲ್ಲುಗಳು, ಮುಖದಲ್ಲೊಂದು ಕ್ರೌರ್ಯ, ಗಗ್ಗರ ಎನಿಸುವ ಧ್ವನಿ, ತಲೆಬುರುಡೆ, ಅಸ್ಥಿಪಂಜರದ ಸಿಂಹಾಸನ, ಕೈಯಲ್ಲೊಂದು ಮಂತ್ರದಂಡ.. ಇದು ಗಣೇಶ್ ರೂಪ. ಪಿನಾಕ ಎಂದರೆ ತ್ರಿಶೂಲ ಎಂಬ ಅರ್ಥವೂ ಇದೆ. ಶಿವನ ಬಿಲ್ಲು ಎಂಬ ಅರ್ಥವೂ ಇದೆ. ಹೀಗಾಗಿಯೇ ಭಾರತ ಸರ್ಕಾರ ಇತ್ತೀಚೆಗೆ ನಿರ್ಮಿಸಿರುವ ಸ್ವದೇಶಿ ನಿರ್ಮಿತ ರಾಕೆಟ್ ಲಾಂಚರ್ʻಗೆ ಪಿನಾಕ ಎಂದೇ ಹೆಸರಿಟ್ಟಿದೆ.
ಇನ್ನು ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಎಲ್ಲವೂ ಸಿದ್ಧವಾಗಿದ್ದು, ಫೆಬ್ರವರಿಯಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ.
ಚಿತ್ರಕ್ಕೆ ಧನಂಜಯ ನಿರ್ದೇಶಕ. ಕೊರಿಯೋಗ್ರಾಫರ್ ಆಗಿದ್ದ ಧನಂಜಯ ಅವರಿಗೆ ಇದು ಮೊದಲ ನಿರ್ದೇಶನ. ಇನ್ನು ಚಿತ್ರದ ನಿರ್ಮಾಣ ಸಂಸ್ಥೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿಯ ವಿಶ್ವಪ್ರಸಾದ್ ಅವರಿಗೆ ಇದು ೪೯ನೇ ನಿರ್ಮಾಣದ ಸಿನಿಮಾ. ತೆಲುಗಿನಲ್ಲಿ ಬಹುದೊಡ್ಡ ಪ್ರೊಡಕ್ಷನ್ ಹೌಸ್ ಆಗಿರುವ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಇದುವರೆಗೆ ‘ಕಾರ್ತಿಕೇಯ 2’, ‘ಓ ಬೇಬಿ’, ‘ಧಮಾಕಾ’ ರೀತಿಯ ಹಿಟ್ ಚಿತ್ರಗಳನ್ನು ನೀಡಿದೆ. ಟಾಲಿವುಡ್‌ನಲ್ಲಿ ಪ್ರಭಾಸ್, ರವಿತೇಜ, ಪವನ್ ಕಲ್ಯಾಣ್ ಸೇರಿದಂತೆ ಅನೇಕ ಕಲಾವಿದರ ಜೊತೆಗೆ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಕನ್ನಡಕ್ಕೆ ಕಾಲಿಟ್ಟಿದೆ ಅಷ್ಟೇ ಅಲ್ಲ, ಗಣೇಶ್ ಅವರನ್ನು ತೆಲುಗು, ತಮಿಳಿಗೂ ಕರೆದೊಯ್ಯುತ್ತಿದೆ.
ನಾನು ಚಿತ್ರರಂಗಕ್ಕೆ ವಿಲನ್ ಪಾತ್ರದ ಮೂಲಕ ಪ್ರವೇಶ ನೀಡಿದೆ. ‘ಮುಂಗಾರು ಮಳೆ’ ನಂತರ ನನ್ನನ್ನು ರೊಮ್ಯಾಂಟಿಕ್ ಹೀರೋ ಆಗಿಯೇ ನೋಡಲು ಫ್ಯಾನ್ಸ್ ಇಷ್ಟಪಟ್ಟರು.ಈ ಚಿತ್ರದಿಂದ ನಾನು ಬದಲಾವಣೆ ಮಾಡಿಕೊಂಡಿದ್ದೇನೆ. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದು ಗಣೇಶ್ ಹೇಳಿಕೊಂಡಿದ್ದಾರೆ.



