ಉಪೇಂದ್ರ ಅವರು ಒಂದು ಸೆನ್ಸೇಷನ್ ಆದರೆ, ಸನ್ನಿ ಲಿಯೋನ್ ಅವರದ್ದು ಇನ್ನೊಂದು ಕ್ರೇಜ್. ಅವರಿಬ್ಬರೂ ಒಂದಾದರೆ.. ಹೇಗಿರುತ್ತೆ ಅನ್ನೋ ಪ್ರಶ್ನೆಗೆ ರಿಯಲ್ ಆಗಿಯೇ ಉತ್ತರ ಕೊಟ್ಟಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ. ರಿಯಲ್ ಸ್ಟಾರ್ ಉಪ್ಪಿ ನಟನೆಯ ಯುಐ ಸಿನಿಮಾದ ಕ್ರೇಜ್ ದಿನೇ ದಿನೇ ಜಾಸ್ತಿ ಆಗುತ್ತಿದ್ದು, ಉಪ್ಪಿ ಡೈರೆಕ್ಷನ್ ಕಂ ಆ್ಯಕ್ಟಿಂಗ್ ಇರೋದ್ರಿಂದ ಈ ರೇಂಜಿನ ಕ್ರೇಜ್ ಸೃಷ್ಟಿಯಾಗಿದೆ. ಇದೀಗ ಉಪೇಂದ್ರರ ಯುಐ ಲೋಕಕ್ಕೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ.
ಸನ್ನಿ ಲಿಯೋನ್ ಬಾಲಿವುಡ್ ನಟಿಯಾದರೂ, ಬಾಲಿವುಡ್ ಪ್ರವೇಶಕ್ಕೂ ಮೊದಲೇ ಯುವಕರ ಹೃದಯಕ್ಕೆ ನುಗ್ಗಿದ್ದವರು. ಕನ್ನಡದಲ್ಲಿ ಸನ್ನಿ ಲಿಯೋನ್ ಈಗಾಗಲೇ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಹಾಡಿನಲ್ಲಿ ಮಾತ್ರ ನಟಿಸಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ವರ್ಷನ್ ಬೇರೆಯದೇ ಇರುತ್ತದೆ ಎಂದು ನಂಬಲಾಗಿದೆ.
ಸನ್ನಿ ಲಿಯೋನ್ ಅವರನ್ನು ಕನ್ನಡಕ್ಕೆ ಕರೆತಂದಿದ್ದವರು ಜೋಗಿ ಪ್ರೇಮ್.. ಪ್ರೇಮ್ ಅವರು ಹೀರೋ ಆಗಿದ್ದ ಡಿಕೆ ಚಿತ್ರದಲ್ಲಿ ಸೇಸಮ್ಮ.. ಹಾಡಿಗೆ ಕಿಚ್ಚು ಹಚ್ಚಿದ್ದರು ಸನ್ನಿ. ಅದಾದ ಮೇಲೆ ಲವ್ ಯು ಅಲಿಯಾ ಚಿತ್ರದಲ್ಲೂ ನಟಿಸಿದ್ದರು. ಚಿತ್ರರಂಗಕ್ಕೆ ಬರುವ ಮೊದಲು ನೀಲಿ ಚಿತ್ರಗಳಲ್ಲಿ ಸಂಚಲನ ಸೃಷ್ಟಿಸಿದ್ದ ಸನ್ನಿ ಲಿಯೋನ್, ಪಡ್ಡೆ ಹುಡುಗರ ರಾತ್ರಿಗಳನ್ನು ಕಿಡ್ನಾಪ್ ಮಾಡಿದ್ದ ಚೆಲುವೆ. ಈಗ ಯುಐನಲ್ಲಿ ನಟಿಸುತ್ತಿದ್ದಾರೆ.
ಯುಐ ಚಿತ್ರದ ಕಥೆ ಏನಿರಬಹುದು ಅನ್ನೋದನ್ನೇ ಬಿಟ್ಟು ಕೊಡದ ಉಪ್ಪಿ, ಸನ್ನಿ ಲಿಯೋನ್ ಅವರನ್ನು ಕರೆತಂದಿದ್ದಾರೆ. ಯುಐ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರಂತೆ. ಯುಐ ಚಿತ್ರತಂಡ ಸನ್ನಿ ಲಿಯೋನ್ ಪೋಸ್ಟರ್ ರಿವೀಲ್ ಮಾಡಿದ್ದು, ಸನ್ನಿ ಕೇವಲ ಹಾಡಿನಲ್ಲಷ್ಟೇ ಇರುತ್ತಾರಾ, ಇಲ್ಲ ಸಿನಿಮಾದಲ್ಲಿ ವಿಶೇಷ ಪಾತ್ರವೇನಾದರೂ ಮಾಡಿದ್ದಾರಾ ಅನ್ನೋ ಕುತೂಹಲ ಪಡ್ಡೆ ಹುಡುಗರದ್ದು.
ಯುಐ ಸಿನಿಮಾಗೆ ಜಿ.ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ನಿರ್ಮಾಪಕರಾಗಿದ್ದಾರೆ. ರೀಷ್ಮಾ ನಾಣಯ್ಯ ಹಾಗು ನಿಧಿ ಸುಭಯ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ ಯುಐ. ನಿರ್ದೇಶಕರಾದ ಇಂದ್ರಜಿತ್ ಲಂಕೇಶ್, ಗುರುಪ್ರಸಾದ್ ಹಾಗೂ ಓಂಪ್ರಕಾಶ್ ರಾವ್ ಅವರೂ ನಟಿಸುತ್ತಿರುವ ಚಿತ್ರ ಯುಐ.
ಉಪ್ಪಿ ಏನೇ ಮಾಡಿದರೂ ಅದನ್ನು ವಿಭಿನ್ನವಾಗಿ ಮಾಡಿ ತೋರಿಸುತ್ತಾರೆ. ಉಪೇಂದ್ರ ನಿರ್ದೇಶನ ಎಂದರೆ ಯಾರೂ ಊಹೆ ಮಾಡದಂತಹ ಸೀನ್ಗಳು ಇದ್ದೆ ಇರುತ್ತವೆ. ಯುಐ ಮೂಲಕ ಜನರಿಗೆ ಏನೋ ಸಂದೇಶ ನೀಡಲು ಹೊರಟಿದ್ದಾರೆ ಎಂದು ಅಭಿಮಾನಿಗಳ ಕುತೂಹಲ. ಇದೆಲ್ಲದರ ನಡುವೆ ಬಾಲಿವುಡ್ ಬ್ಯೂಟಿ ಸಖತ್ ಹಾಟ್ ಹಾಟ್ ಎನಿಸಿರುವ ಸನ್ನಿ ಲಿಯೋನ್ ಯುಐ ಸಿನಿಮಾದಲ್ಲಿ ಆ್ಯಕ್ಟ್ ಮಾಡುತ್ತಿರುವುದು ಬೇರೆಯದೇ ಕಥೆ ಹೇಳುತ್ತಿದೆ.



