ಕನ್ನಡದ ಉದಯ ಟಿವಿ, ಉದಯ ಮೂವೀಸ್, ಉದಯ ಕಾಮಿಡಿ, ಉದಯ ಮ್ಯೂಸಿಕ್ ಸೇರಿದಂತೆ ಸನ್ ಟಿವಿ ನೆಟ್ ವರ್ಕ್ ಗ್ರೂಪಿನ ಎಲ್ಲ ಚಾನೆಲ್ಲುಗಳೂ ಬಂದ್ ಆಗುತ್ತವಾ.. ಏಕೆಂದರೆ ಸನ್ ಗ್ರೂಪ್‌ನಲ್ಲಿ ಒಟ್ಟು 37 ಸ್ಯಾಟಲೈಟ್ ಟಿವಿ ಚಾನೆಲ್ಲುಗಳಿವೆ. ಅದಕ್ಕೆ ಕಾರಣವಾಗಿರೋದು ಸನ್ ಗ್ರೂಪ್ ಮಾಲೀಕರ ಕುಟುಂಬದ ಜಗಳ. ಓಪನ್ ಆಗಿಯೇ ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಸನ್ ಟಿವಿ ಸಮೂಹದ ಮುಖ್ಯಸ್ಥರಾಗಿರುವ ತಮ್ಮ ಸಹೋದರ ಕಲಾನಿಧಿ ಮಾರನ್ ಜಗಳಕ್ಕಿಳಿದಿದ್ದಾರೆ. ಇವರಿಬ್ಬರದ್ದೂ ಒಂದೇ ಕುಟುಂಬ.
ಸನ್ ನೆಟ್ ವರ್ಕ್ ನಲ್ಲಿ
ಸನ್ ಟಿವಿ, ಕೆಟಿವಿ, ಸನ್ ಮ್ಯೂಸಿಕ್, ಸನ್ ನ್ಯೂಸ್, ಚುಟ್ಟಿ ಟಿವಿ, ಆದಿತ್ಯ ಟಿವಿ, ಸನ್ ಲೈಫ್ (ಎಲ್ಲವೂ ತಮಿಳು)
ಜೆಮಿನಿ ಟಿವಿ, ಜೆಮಿನಿ ಮೂವೀಸ್, ಜೆಮಿನಿ ಮ್ಯೂಸಿಕ್, ಜೆಮಿನಿ ಕಾಮಿಡಿ, ಜೆಮಿನಿ ಲೈಫ್ (ಎಲ್ಲವೂ ತೆಲುಗು)
ಕನ್ನಡದ ಉದಯ ಟಿವಿ, ಉದಯ ಮೂವೀಸ್, ಉದಯ ಕಾಮಿಡಿ, ಉದಯ ಮ್ಯೂಸಿಕ್, ಚಿಂಟು ಟಿವಿ (ಎಲ್ಲವೂ ಕನ್ನಡ)
ಸೂರ್ಯ ಟಿವಿ, ಸೂರ್ಯ ಮೂವಿಸ್, ಕೊಚ್ಚು ಟಿವಿ, ಸೂರ್ಯ ಮ್ಯೂಸಿಕ್, ಸೂರ್ಯ ಕಾಮಿಡಿ (ಎಲ್ಲವೂ ಮಲಯಾಳಂ)
ಬೆಂಗಾಳಿ ಭಾಷೆಯ ಸನ್ ಬಾಂಗ್ಲಾ, ಮರಾಠಿಯ ಸನ್ ಮರಾಠಿ, ಹಿಂದಿಯ ಸನ್ ನಿಯೋ ಟಿವಿ ಚಾನೆಲ್ಲುಗಳಿವೆ. ಅವೆಲ್ಲವೂ ಬಂದ್ ಆಗುತ್ತವಾ..?
ಡಿಟಿಎಚ್ ಸನ್ ಡೈರೆಕ್ಟ್, ರೆಡ್ ಎಫ್‌ಎಂ, ಸೂರ್ಯ ಎಫ್‌ಎಂ ರೇಡಿಯೋ, ಪತ್ರಿಕೆಗಳಾದ ದಿನತಂತಿ, ತಮಿಳ್ ದಿನಕರನ್, ಸಿನಿಮಾ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್, ಒಟಿಟಿ ವೇದಿಕೆಯಾದ ಸನ್ NXT, ಐಪಿಎಲ್ ಟೀಂ ಸನ್ ರೈಸರ್ಸ್ ಹೈದರಾಬಾದ್, ವಾಯುವಿಮಾನ ಸಂಸ್ಥೆ ಸ್ಪೈಸ್ ಜೆಟ್.. ಹೀಗೆ ಹಲವಾರು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ. ಅದಕ್ಕೆ ಕಾರಣ ಅಣ್ಣ ತಮ್ಮಂದಿರ ಜಗಳ.
ಏಕೆ..? ಏನಾಯ್ತು..?
2003ರಲ್ಲಿ ನಡೆದ ಸನ್ ಗ್ರೂಪ್ ಷೇರು ವರ್ಗಾವಣೆಗೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ, ಡಿಎಂಕೆ ಸಂಸದ ದಯಾನಿಧಿ ಮಾರನ್ ಅವರು ಸನ್ ಟಿವಿ ಸಮೂಹದ ಮುಖ್ಯಸ್ಥರಾಗಿರುವ ತಮ್ಮ ಸಹೋದರ ಕಲಾನಿಧಿ ಮಾರನ್, ಅವರ ಪತ್ನಿ ಕಾವೇರಿ ಸೇರಿ 6 ಮಂದಿಗೆ ಲೀಗಲ್ ನೋಟಿಸ್ ನೀಡಿದ್ದಾರೆ. ನೋಟಿಸ್‌ನಲ್ಲಿ ದಯಾನಿಧಿ ಅವರು ಕಲಾನಿಧಿ ಮೇಲೆ ವ್ಯಾಪಕ ಷೇರು ಅವ್ಯವಹಾರದ ಆರೋಪ ಹೊರಿಸಿದ್ದು, ಇದನ್ನು ಸರಿಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಇಲ್ಲದೇ ಹೋದರೆ ಸನ್ ಸಮೂಹದ ಮಾಲೀಕತ್ವದ 37 ಟೀವಿ ವಾಹಿನಿಗಳು, ಪತ್ರಿಕೆಗಳು, ರೇಡಿಯೋ ವಾಹಿನಿಗಳು, ಸನ್‌ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಹಾಗೂ ಸ್ಪೈಸ್‌ಜೆಟ್ ವಿಮಾನಯಾನ ಸಂಸ್ಥೆ ಸೇರಿ ಹಲವಾರು ವ್ಯವಹಾರ ಸ್ಥಗಿತ ಕೋರಿ ಕೋರ್ಟಿಗೆ ಹೋಗುವ ಎಚ್ಚರಿಕೆ ನೀಡಿದ್ದಾರೆ. 2003ರಲ್ಲಿ ಕಲಾನಿಧಿ ಹಾಗೂ ದಯಾನಿಧಿ ಅವರ ತಂದೆ ಮುರಸೋಳಿ ಮಾರನ್ ನಿಧನರಾದ ಮೇಲೆ ಅಕ್ರಮಗಳು ನಡೆಯುತ್ತಿವೆ ಎನ್ನಲಾಗಿದೆ.
ತಂದೆಯ ನಿಧನದ ನಂತರ ಕಲಾನಿಧಿ ಮಾರನ್, ಸುಮಾರು 12 ಲಕ್ಷ ಷೇರುಗಳನ್ನು (ಷೇರುಗಳ ಸಂಖ್ಯೆ) ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಪಾಲುದಾರರಿಗೆ ಗೊತ್ತೇ ಇರಲಿಲ್ಲ. ಆಗ ಆ ಷೇರಿನ ಮೌಲ್ಯ 3500 ಕೋಟಿ ಇತ್ತು. ಈಗ ಕಂಪೆನಿ ಮೌಲ್ಯ 24 ಸಾವಿರ ಕೋಟಿ ರೂ.ಗೆ ಏರಿದೆ ಎನ್ನುವುದು ದಯಾನಿಧಿ ಮಾರನ್ ಆರೋಪ.
ದಯಾನಿಧಿ ಮಾರನ್ ಆರೋಪ ತಳ್ಳಿ ಹಾಕಿರುವ ಕಂಪನಿಯು, ‘ಇದು 22 ವರ್ಷ ಹಳೆಯ ವಿಚಾರವಾಗಿದ್ದು, ಕಾನೂನು ಬದ್ಧವಾಗಿಯೇ ವ್ಯವಹರಿಸಲಾಗಿದೆ. ಅಲ್ಲದೇ ದಯಾನಿಧಿ ಮಾರನ್ ಅವರು ಮಾಡಿರುವ ಆರೋಪಗಳು ಆಧಾರರಹಿತ ಎಂದಿದೆ.
ಇತ್ತ ಸನ್ ಟಿವಿ ಷೇರುಗಳ ಮೌಲ್ಯ ಶೇ.5ರಷ್ಟು ಕುಸಿತ ಕಂಡಿದೆ.



