ಮಂಡ್ಯದಲ್ಲಿ ಡಾ.ಅಂಬರೀಷ್ ಫೌಂಡೇಷನ್ ಆರಂಭ ಮಾಡಿರುವ ಸಂಸದೆ (ಇನ್ನು ಕೆಲವೇ ದಿನಗಳಲ್ಲಿ ಮಾಜಿಯಾಗಲಿದ್ಧಾರೆ) ಸುಮಲತಾ ಅಂಬರೀಷ್, ಬಡ ವಿದ್ಯಾರ್ಥಿಗಳನ್ನು ದತ್ತು ತಗೊಳ್ಳೋದಾಗಿ ಘೋಷಿಸಿದ್ಧಾರೆ. ಸುಮಲತಾ ಅವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಆರಂಭದಲ್ಲಿ ಇದು ಕೇವಲ ಮಂಡ್ಯಕ್ಕೆ ಮಾತ್ರ. ಅಂಬರೀಷ್ ಹುಟ್ಟುಹಬ್ಬದ ಸಂದರ್ಭದಲ್ಲಿ ಮಗ, ಸೊಸೆಯ ಜೊತೆ ಈ ಮಹತ್ವದ ಘೋಷಣೆ ಮಾಡಿದ್ಧಾರೆ ಸುಮಲತಾ.
ಡಾ.ಅಂಬರೀಷ್ ಬದುಕಿರುವವರೆಗೂ ಕೊಡುಗೈ ಕರ್ಣ ಎಂದೇ ಹೆಸರಾಗಿದ್ದವರು. ಅಂಬರೀಷ್ ಅವರಿಂದ ನೆರವು ಪಡೆದವರು ಸಾವಿರಾರು ಜನ. ಈಗ ಅಂಬರೀಷ್ ಇಲ್ಲ. ಆದರೆ.. ಅವರ ಪತ್ನಿ ಸುಮಲತಾ ಅಂಬರೀಷ್ ಪತಿಯ ಕೆಲಸವನ್ನು ಸ್ಮರಿಸುತ್ತಿದ್ಧಾರೆ. ಮಂಡ್ಯದಲ್ಲಿ ಡಾ. ಅಂಬರೀಷ್ ಫೌಂಡೇಷನ್ ಆರಂಭಿಸಿದ್ದಾರೆ. ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣ ಕೊಡಿಸುವುದು ಹಾಗೂ ಇನ್ನಿತರ ಸಮಾಜ ಸೇವೆ ಮಾಡುವುದು ಈ ಫೌಂಡೇಷನ್ ಧ್ಯೇಯ ಎನ್ನುವುದು ಸುಮಲತಾ ಅವರ ಮಾತು. ಅಂದರೆ, ಅರ್ಹ ಹಾಗೂ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು, ಆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ವೆಚ್ಚವನ್ನು ಸಂಪೂರ್ಣ ಭರಿಸುವುದು. ಸದ್ಯಕ್ಕೆ ಇದು ಮಂಡ್ಯಕ್ಕೆ ಮಾತ್ರ ಸೀಮಿತ.
ನಾನು ಮಂಡ್ಯ ಜಿಲ್ಲೆಯ ಸಂಸದೆಯಾಗಿರುವುದು ದೊಡ್ಡದಲ್ಲ, ಜಿಲ್ಲೆಯ ಸೊಸೆಯಾಗಿರುವುದು ಹೆಮ್ಮೆಯ ವಿಷಯ ಎಂದಿರುವ ಸುಮಲತಾ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ಧಾರೆ. ಇಂದಿನ ವಿದ್ಯಾರ್ಥಿಗಳು ಸಹ ಸಾಧನೆ ಮಾಡಿದರೆ ಮುಂದೆ ಜಿಲ್ಲೆಗೆ ಮತ್ತಷ್ಟು ಉತ್ತಮ ಹೆಸರು ಬರುತ್ತದೆ. ಈ ನಿಟ್ಟಿನಲ್ಲಿ ಡಾ. ಅಂಬರೀಷ್ ಫೌಂಡೇಷನ್‌ನಿಂದ ವಿದ್ಯಾರ್ಥಿಗಳನ್ನ ದತ್ತು ತೆಗೆದುಕೊಂಡು ವಿದ್ಯಾಭ್ಯಾಸ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ಧಾರೆ.
ನನಗೆ ಸಂಸದೆಯ ಸ್ಥಾನ ಹೋಗಿದೆ. ಆದರೆ, ಮಂಡ್ಯದ ಸೊಸೆ ಅನ್ನೋ ಸ್ಥಾನ ಶಾಶ್ವತವಾಗಿರುತ್ತದೆ. ರಾಜಕಾರಣದಲ್ಲಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯ ಜನರ ಸಂಬಂಧ ನಿರಂತರ. ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮ ಆಗುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದಿರುವ ಸುಮಲತಾ ಅಖಿಲ ಅಂಬರೀಶ್ ಅಭಿಮಾನಿಗಳ ಸಂಘದ ವತಿಯಿಂದ ಒಳ್ಳೆಯ ಕಾರ್ಯಕ್ರಮ ನಡೆಯುತ್ತಿವೆ ಎಂದು ಶ್ಲಾಘಿಸಿದ್ಧಾರೆ.
ಮಂಡ್ಯ ಜಿಲ್ಲೆಯ ಜನತೆ ಅಂಬರೀಶ್ ಅವರನ್ನು ಪ್ರೀತಿ ಅಭಿಮಾನ ಕೊಟ್ಟು ಬೆಳೆಸಿದವರು. ಅಂಬರೀಶ್ ಅವರನ್ನ ರಾಜ್ಯದ ಜನರು ನೋಡುವುದಕ್ಕೆ ಮುಗಿ ಬೀಳುತ್ತಿದ್ದರು. ಆದರೆ, ಅಂಬರೀಶ್ ಮಂಡ್ಯದವರನ್ನ ನೋಡಲು ಇಷ್ಟ ಪಡುತ್ತಿದ್ದರು. ಅವರ ಹುಟ್ಟು ಹಬ್ಬದ ದಿನ ಸಾವಿರಾರು ಜನರು ನೋಡೋಕೆ ಬರೋರು. ಅವರ ಅಗಲಿಕೆ ಬಳಿಕ ಮಂಡ್ಯದಲ್ಲೆ ಅಂಬರೀಶ್ ಹುಟ್ಟುಹಬ್ಬ ಆಚರಣೆ ಮಾಡಲಾಗುತ್ತಿದೆ. ನಿಮ್ಮ ಜೊತೆ ನಾವು ಹುಟ್ಟುಹಬ್ಬ ಆಚರಣೆ ಮಾಡ್ತಿದ್ದೇವೆ ಎಂದಿರುವ ಸುಮಲತಾ ಫೌಂಡೇಶನ್ ಮೂಲಕ ಸಮಾಜಮುಖಿ ಕಾರ್ಯಕ್ರಮ ಆಗುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯವಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಸುಮಲತಾ ಅಂಬರೀಷ್ ಅವರ ಈ ಕಾರ್ಯಕ್ಕೆ ಎಲ್ಲ ಕಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.



