ನಟಿ, ಮಾಜಿ ಸಂಸದೆ, ಅಂಬರೀಷ್ ಪತ್ನಿ ಸುಮಲತಾ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಅವರಿಗೆ ಈಗ ಬಿಜೆಪಿ ಟಿಕೆಟ್ ಬೇಕು. ಅವರಿಗೆ ಅಲ್ಲದಿದ್ದರೆ.. ಅವರ ಮಗನಿಗೆ ಕೊಡಬೇಕು. ಇಂತಾದ್ದೊಂದು ಹೇಳಿಕೆಯನ್ನು ಬಹಿರಂಗವಾಗಿಯೇ ನೀಡಿರುವ ಸುಮಲತಾ, ಬಿಜೆಪಿ ಮೇಲೆ ಒಂದು ಒತ್ತಡವನ್ನಂತೂ ಹೇರೋಕೆ ಶುರು ಮಾಡಿದ್ದಾರೆ. ಈ ಒತ್ತಡದ ಪರಿಣಾಮ.. ಬಿಜೆಪಿ-ಜೆಡಿಎಸ್ ಮೈತ್ರಿಗೆ ಎಫೆಕ್ಟ್ ಆದರೂ ಆಶ್ಚರ್ಯ ಇಲ್ಲ. ಹೇಗೆಂದರೆ..
ಸುಮಲತಾ ಅಂಬರೀಷ್, 2028ರ ವಿಧಾನಸಭೆ ಎಲೆಕ್ಷನ್ನಿಗೆ ಟಿಕೆಟ್ ಕೇಳುತ್ತಿರುವುದು ಮದ್ದೂರಿನಿಂದ. ತನಗಾದರೂ ಟಿಕೆಟ್ ಕೊಡಿ.. ಇಲ್ಲದಿದ್ದರೆ ಅಭಿಷೇಕ್ ಗಾದರೂ ಟಿಕೆಟ್ ಕೊಡಿ ಎನ್ನುತ್ತಿದ್ದಾರೆ. 2018ರಲ್ಲಿ ಸುಮಲತಾ ಪಕ್ಷೇತರರಾಗಿ ನಿಂತಾಗ, ಬಿಜೆಪಿ ಕ್ಯಾಂಡಿಡೇಟ್ ಹಾಕಿರಲಿಲ್ಲ. ಅದು ಲೋಕಸಭೆ. ಎಲ್ಲದಕ್ಕಿಂತ ಹೆಚ್ಚಾಗಿ ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇತ್ತು. ನಿಖಿಲ್ ಕುಮಾರಸ್ವಾಮಿ.. ಆಗ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಕ್ಯಾಂಡಿಡೇಟ್ ಆಗಿದ್ದರು. ಆಗ ಬಿಜೆಪಿ, ಅಭ್ಯರ್ಥಿಯನ್ನು ಹಾಕದೆ ಸುಮಲತಾ ಅವರಿಗೆ ಬೆಂಬಲ ಘೋಷಿಸಿತ್ತು.
ಈಗ ಸುಮಲತಾ ʻʻಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಅದು ಯಾವ ಕ್ಷೇತ್ರ ಎನ್ನುವುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ, ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆ. ಈಗ ನಾನು ಬಿಜೆಪಿಯಲ್ಲಿದ್ದೇನೆ. ಚುನಾವಣಾ ವೇಳೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ ಆಗ ನಾನು ಸಿದ್ಧಳಿರಲಿಲ್ಲ. ಮದ್ದೂರು ನನ್ನ ಪತಿ ದಿ.ಅಂಬರೀಶ್ ಅವರ ಕರ್ಮಭೂಮಿ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ ಅಂಬರೀಶ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಅಂಬಿ ಅಭಿಮಾನಿಗಳ ಅಪೇಕ್ಷೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದʼʼ ಎಂದು ಹೇಳಿದ್ದಾರೆ.
ಅಲ್ಲಿಗೆ ಅಭಿಷೇಕ್ ಕೂಡಾ ರಾಜಕೀಯಕ್ಕೆ ಬರುವುದು ಖಚಿತವಾಗಿದೆ. ಸೂಕ್ತ ಸಮಯದಲ್ಲಿ ಆತನೇ ನಿರ್ಧಾರ ಪ್ರಕಟಿಸುತ್ತಾನೆ ಎಂದಿದ್ದಾರೆ ಸುಮಲತಾ. ಎಲ್ಲ ಓಕೆ, ಈಗ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಅಸ್ಥಿತ್ವದಲ್ಲಿ ಇದೆ. ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ಬಿಜೆಪಿ, ಸುಮಲತಾಗೆ ಟಿಕೆಟ್ ನೀಡಿರಲಿಲ್ಲ. ಮಂಡ್ಯ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಜೆಡಿಎಸ್‌ನಿಂದ ಗೆದ್ದಿರುವ ಕುಮಾರಸ್ವಾಮಿ ಪರ, ಸುಮಲತಾ ಅವರು ಶಾಸ್ತ್ರಕ್ಕೂ ಪ್ರಚಾರಕ್ಕೆ ಬಂದಿರಲಿಲ್ಲ. ಸೋಷಿಯಲ್ ಮೀಡಿಯಾದಲ್ಲೂ ಕ್ಯಾಂಪೇನ್ ಮಾಡಿರಲಿಲ್ಲ.
ಮಂಡ್ಯ, ಜೆಡಿಎಸ್ ಪ್ರಾಬಲ್ಯದ ಕ್ಷೇತ್ರ. 2028ರಲ್ಲೂ ರಾಜ್ಯದಲ್ಲಿ ಮೈತ್ರಿಕೂಟ ಅಸ್ಥಿತ್ವದಲ್ಲಿದ್ದರೆ ಸಹಜವಾಗಿಯೇ ಜೆಡಿಎಸ್ ಮಂಡ್ಯ ಜಿಲ್ಲೆಯನ್ನು ಇಡಿಯಾಗಿಯೇ ಕೇಳುತ್ತದೆ. ಹಾಗೇನಾದರೂ ಆದರೆ.. ಭವಿಷ್ಯ ಏನು.. ಆಗ ಸುಮಲತಾ ಏನು ಮಾಡುತ್ತಾರೆ.. 2018ರಲ್ಲಿ ಆದಂತೆ ಪಕ್ಷೇತರರಾಗಿಯೇ ಸ್ಪರ್ಧೆ ಮಾಡ್ತಾರಾ.. ಕುತೂಹಲವಂತೂ ಇದೆ. ಆದರೆ, 2018ರ ಪರಿಸ್ಥಿತಿಯೇ ಬೇರೆ. 2028ರ ಪರಿಸ್ಥಿತಿಯೇ ಬೇರೆ. ಸುಮಲತಾ ಅಂದುಕೊಂಡಷ್ಟು ರಾಜಕೀಯ ಸುಲಭ ಅಲ್ಲ.



