ಮಾಜಿ ಸಂಸದೆ, ನಟಿ ಸುಮಲತಾ ಅಂಬರೀಷ್ ಅವರನ್ನ ದರ್ಶನ್ ಕರೆಯೋದೇ ಮದರ್ ಇಂಡಿಯಾ ಎಂದು. ನಟ ದರ್ಶನ್ ಅವರನ್ನು ತಮ್ಮ ಮಗ ಎಂದೇ ಭಾವಿಸುತ್ತಾರೆ. ಪ್ರೀತಿಸುತ್ತಾರೆ. ದರ್ಶನ್ ಅವರನ್ನ ಅಂಬರೀಷ್ ಅವರೂ ಕೂಡಾ ಅವನು ನನ್ನ ಹಿರಿಯ ಮಗ ಅಂತಿದ್ರು. ನನಗೂ ಹಾಗೆಯೇ.. ದರ್ಶನ್ ಅವರೂ ಅಷ್ಟೇ. ದರ್ಶನ್ ಕೊಲೆ ಕೇಸಿನಲ್ಲಿ ಜೈಲಿಗೆ ಹೋಗಿದ್ದರೂ ಸುಮಲತಾ ಅವರ ಭಾವನೆಯೇನೂ ಬದಲಾಗಿಲ್ಲ.ಆದರೆ ದರ್ಶನ್ ಮಧ್ಯಂತರ ಜಾಮೀನು ಪಡೆದು ಬಂದಿದ್ದರೂ, ಇದುವರೆಗೆ ದರ್ಶನ್ ಅವರನ್ನು ಭೇಟಿ ಮಾಡಿಲ್ಲ. ಅಷ್ಟೇ ಯಾಕೆ, ಜೈಲಿನಲ್ಲಿದ್ದಾಗಲೂ ಅಷ್ಟೇ. ಸುಮಲತಾ ಅವರು ದರ್ಶನ್ ಅವರನ್ನು ಭೇಟಿ ಮಾಡಲಿಲ್ಲ. ಒಮ್ಮೆ ಮಾತ್ರ ಅಭಿಷೇಕ್ ಹೋಗಿ ಬಂದಿದ್ದರು. ದರ್ಶನ್ ಅವರ ಜೊತೆ ಸುಮಲತಾ ಅವರು ಅಂತರ ಕಾಯ್ದುಕೊಳ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರ ನೀಡಿರುವ ಸುಮಲತಾ ʻಅವನು ನನಗೆ ಮಗನಿದ್ದಂತೆ. ಒಬ್ಬ ತಾಯಿಯಾಗಿ ಎಲ್ಲವನ್ನೂ ಹೇಳಿಕೊಳ್ಳೋಕೆ ಆಗಲ್ಲ. ಮೀಡಿಯಾ ಮುಂದೆ ಎಲ್ಲವನ್ನೂ ಹೇಳೋಕೆ ಆಗಲ್ಲ. ಅವನು ಏನು ಅನ್ನೋದು ನನಗೆ ಗೊತ್ತು. ಅವನನ್ನು ದೇವರೇ ಕಾಪಾಡ್ತಾನೆ ಎಂದಿದ್ದಾರೆ.
ಸುಮಲತಾ ಅಂಬರೀಷ್ ದರ್ಶನ್ ಅವರನ್ನು ಸದ್ಯಕ್ಕೆ ಭೇಟಿ ಆಗಿಲ್ಲ. ಆದರೆ, ವಿಜಯಲಕ್ಷ್ಮಿ ಜೊತೆ ಸಂಪರ್ಕದಲ್ಲಿ ಇದ್ದೇನೆ. ಅವನೀಗ ಮೊಬೈಲ್ ಬಳಸುತ್ತಿಲ್ಲ. ದರ್ಶನ್ʻಗೆ ನೈತಿಕ ಬೆಂಬಲ ನೀಡುತ್ತೇವೆ. ದರ್ಶನ್ಗೆ ಒಳ್ಳೆಯದು ಆಗಲಿ ಎಂಬ ನಿರೀಕ್ಷೆಯಲ್ಲಿ ನಾವು ಇದ್ದೇವೆ. ಅವನು ಸವಾಲು ಗೆದ್ದು ಬರಲಿ ಎಂಬುದು ನನ್ನ ಆಸೆ. ಏನೇ ಆಗಲಿ, ದರ್ಶನ್ ಎಂದೆಂದಿಗೂ ನನ್ನ ಮಗನೇʼʼ ಎಂದು ಹೇಳಿಕೊಂಡಿದ್ದಾರೆ ಸುಮಲತಾ.
ದರ್ಶನ್ಗೆ ಒಳ್ಳೆಯದಾಗಬೇಕು. ಅವರು ನಿರಪರಾಧಿ ಅಂತ ಸಾಬೀತಾಗಬೇಕು ಎಂಬುದು ನನ್ನ ಆಸೆ ಎಂದಿರುವ ಸುಮಲತಾ ಅಂಬರೀಷ್, ದರ್ಶನ್ ಅವರಿಗೆ ಸರ್ಜರಿ ಮಾಡುವ ಕುರಿತೂ ಮಾತನಾಡಿದ್ದಾರೆ. ‘ಬೆನ್ನು ನೋವು ತುಂಬಾ ಇದೆ. ಆದರೆ ಸರ್ಜರಿ ಅವರಿಗೆ ಇಷ್ಟ ಇಲ್ಲ ಅಂತ ನಾನು ಕೇಳ್ಪಟ್ಟೆ. ಯಾಕೆಂದರೆ, ಸರ್ಜರಿ ಮಾಡಿದರೆ ರಿಕವರಿ ಸಮಯ ತುಂಬ ಇರುತ್ತೆ. ಶೂಟಿಂಗ್ ಅರ್ಧಕ್ಕೆ ನಿಂತಿದೆ. ಇದು ಸಿನಿಮಾ ಇಂಡಸ್ಟ್ರಿ ನಷ್ಟ ಎದುರಿಸುತ್ತಿರುವ ಸಂದರ್ಭ. ಹೆಚ್ಚಿನ ಮಾಹಿತಿ ಇಲ್ಲ. ದರ್ಶನ್ ಕೈಯಲ್ಲಿ ಫೋನ್ ಇಲ್ಲ. ಅವರ ಪತ್ನಿ ಜೊತೆ ನಾವು ಸಂಪರ್ಕ ಮಾಡಬೇಕು ಅಷ್ಟೇ’ ಎಂದಿದ್ದಾರೆ ಸುಮಲತಾ.
ಮೂಲಗಳ ಪ್ರಕಾರ ಸುಮಲತಾ ಅಂಬರೀಷ್ ಅವರು ದರ್ಶನ್ ಅವರನ್ನು ಭೇಟಿಯಾಗಲು ಬಂದರೆ ದರ್ಶನ್ ಅವರಿಗೇ ಹೆಚ್ಚು ಡ್ಯಾಮೇಜ್ ಎಂಬ ಕಾರಣಕ್ಕೆ ಸುಮಲತಾ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಏಕೆಂದರೆ ಸುಮಲತಾ ಮಾಜಿ ಸಂಸದೆ, ಬಿಜೆಪಿಯ ಪ್ರಮುಖ ನಾಯಕಿ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಯಲ್ಲೂ ನೇರವಾಗಿ ಮಾತನಾಡುವಷ್ಟು ಪ್ರಭಾವಿ. ಇದೆಲ್ಲವೂ ದರ್ಶನ್ ಅವರಿಗೆ ವರವಾಗುವ ಬದಲು, ಶಾಪವಾಗುವ ಸಾಧ್ಯತೆಯೇ ಹೆಚ್ಚು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವುದು ಕೆಲವರ ವಾದ. ಸತ್ಯ ಯಾವುದು. ದರ್ಶನ್‌ಗೇ ಗೊತ್ತು.



