ಹುಟ್ಟು ರಾಜಕಾರಣಿಗಳ ವರ್ತನೆಯೇ ಬೇರೆ. ಅನಿರೀಕ್ಷಿತ ರಾಜಕಾರಣಿಗಳ ವರ್ತನೆಯೇ ಬೇರೆ. ಈಗ ಸುಮ್ಮನೆ ನೋಡಿ. ವೇದಿಕೆ ಸಿಕ್ಕಲ್ಲೆಲ್ಲ ದೇವೇಗೌಡರನ್ನು ಟೀಕಿಸುತ್ತಿದ್ದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್.. ಯಾವುದೇ ಹಿಂಜರಿಕೆ ಇಲ್ಲದೆ ಕಳೆದ ಬಾರಿ ದೇವೇಗೌಡರ ಜೊತೆಯಲ್ಲಿದ್ದರು. ಈಗ ಹಾಸನದ ವಿಷಯಕ್ಕೇ ಬಂದರೆ.. ಪ್ರಜ್ವಲ್ ರೇವಣ್ಣ ವಿರುದ್ಧ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ಸ್ಪರ್ಧಿಸಿದ್ದ ಎ.ಮಂಜು, ಈಗ ಅದೇ ಪ್ರಜ್ವಲ್ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ಧಾರೆ. ತೀರಾ ಇತ್ತೀಚಿನವರೆಗೂ ಒಂದು ಪಕ್ಷ ಕುಟುಂಬಕ್ಕೆ ಸೀಮಿತವಾಗಿ ಎಂದು ಟೀಕಿಸುತ್ತಿದ್ದ ಮೋದಿ, ಈಗ ಅದೇ ದೇವೇಗೌಡರ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರನ್ನು ವಿಷದ ಸರ್ಪ, ದುರ್ಯೋಧನನಿಗೆ ಹೋಲಿಸಿದ್ದ ಯಡಿಯೂರಪ್ಪ, ಕುಮಾರಸ್ವಾಮಿ ಜೊತೆಯಲ್ಲಿಯೇ ಇದ್ಧಾರೆ. ಕುಮಾರಸ್ವಾಮಿಯವರೂ ಅಷ್ಟೆ, ಆರ್.ಎಸ್.ಎಸ್., ಬಿಜೆಪಿ, ಮೋದಿಯನ್ನು ಹೇಗೆಲ್ಲ ಟೀಕಿಸಬೇಕೋ.. ಹಾಗೆ ಟೀಕಿಸಿದ್ದವರು, ಈಗ ಮೋದಿ, ಯಡಿಯೂರಪ್ಪನವರಿಗೆ ಜೈ ಎನ್ನುತ್ತಿದ್ಧಾರೆ. ಆದರೆ.. ಇದು ಫುಲ್ ಟೈಂ ರಾಜಕಾರಣಿಗಳ ವಿಷಯ. ಅನಿರೀಕ್ಷಿತವಾಗಿ ಬಂದವರ ಪರಿಸ್ಥಿತಿ ಹಾಗೆ ಇರೋದಿಲ್ಲ. ಅದಕ್ಕೆ ಉದಾಹರಣೆ ಸುಮಲತಾ.
2019ರಲ್ಲಿ ಸುಮಲತಾ ಅಂಬರೀಷ್ ಅವರು ಮಂಡ್ಯದಿಂದ ಚುನಾವಣಾ ಅಖಾಡಕ್ಕಿಳಿದಾಗ.. ಎದುರಾಳಿಯಾಗಿದ್ದವರು ನಿಖಿಲ್ ಕುಮಾರಸ್ವಾಮಿ. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಇತ್ತು. ಮಂಡ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿಯೂ ಜೆಡಿಎಸ್ಸಿನವರೇ ಶಾಸಕರಾಗಿದ್ದರು. ಅಂಬರೀಷ್ ನಿಧನರಾಗಿ ಕೆಲವೇ ತಿಂಗಳುಗಳಾಗಿತ್ತು. ಅಂಬರೀಷ್ 2018ರ ನವೆಂಬರ್ʻನಲ್ಲಿ ವಿಧಿವಶರಾದರು. ಚುನಾವಣೆ ೨೦೧೯ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದಿತ್ತು.
ಆಗ ನಡೆದ ಚುನಾವಣೆಯಲ್ಲಿ ಯಶ್, ದರ್ಶನ್ ಸುಮಲತಾ ಜೊತೆಗಿದ್ದರು. ಮಂಡ್ಯದ ಸ್ಥಳೀಯ ನಾಯಕರಾದ ಇಂಡವಾಳು ಸಚ್ಚಿದಾನಂದ, ಡಾ.ರವೀಂದ್ರ ಮೊದಲಾದವರು ಬೆನ್ನಿಗೆ ನಿಂತರು. ಈಗಲೂ ಕಾಂಗ್ರೆಸ್ಸಿನಲ್ಲಿರುವ ಹಲವು ನಾಯಕರು ಒಳಗೊಳಗೇ ಸುಮಲತಾ ಪರ ನಿಂತರು. ಮೋದಿ ಕೂಡಾ ಸುಮಲತಾ ಅವರ ವಿರುದ್ಧ ಕ್ಯಾಂಡಿಡೇಟ್ ಹಾಕದೇ.. ಬೆಂಬಲಿಸಿದರು. ಎಲ್ಲವೂ ಆಗ ಕುಮಾರಸ್ವಾಮಿ ಅವರನ್ನು ಸೋಲಿಸುವುದಕ್ಕಾಗಿ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
ಸುಮಲತಾ ಅವರ ಗೆಲುವಿಗೆ ಅಂಬರೀಷ್ ನಿಧನದ ಅನುಕಂಪ, ಅವರ ಅಭಿಮಾನಿಗಳು ಹೇಗೆ ಸಹಾಯ ಮಾಡಿದವೋ.. ಅದಕ್ಕಿಂತಲೂ ಮಿಗಿಲಾಗಿ ಸುಮಲತಾ ಅವರನ್ನು ಗೆಲ್ಲಿಸಿದ್ದು ಜೆಡಿಎಸ್ ನಾಯಕರ ಕೀಳು ಮಟ್ಟದ ಹೇಳಿಕೆಗಳು. ಆ ರೀತಿಯ ಹೇಳಿಕೆ ಕೊಡುವ ವಿಷಯ ಆರಂಭ ಮಾಡಿದ್ದು ಹೆಚ್.ಡಿ.ರೇವಣ್ಣ ಅವರಾದರೆ.. ಆನಂತರ ಆಗ ಸಿಎಂ ಆಗಿದ್ದ ಕುಮಾರಸ್ವಾಮಿ, ಶಿವರಾಮೇಗೌಡ, ಪುಟ್ಟರಾಜು ಮೊದಲಾದವರೆಲ್ಲ ದಿನಕ್ಕೊಂದು ಹೇಳಿಕೆ ಕೊಟ್ಟು ಸುಮಲತಾ ಅವರ ಗೆಲುವಿಗೆ ಶ್ರೀಕಾರ ಬರೆದರು. ಇಂತಹ ಹೇಳಿಕೆಗಳು ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳಾ ಮತದಾರರು ಸುಮಲತಾ ಅವರ ಬೆನ್ನಿಗೆ ನಿಲ್ಲುವಂತೆ ಮಾಡಿತು ಎನ್ನುವುದು ಸುಳ್ಳಲ್ಲ.
ಆದರೆ.. ಈಗ ಸಮಯ ಬದಲಾಗಿದೆ. ಸುಮಲತಾ ಅವರೂ ಕೂಡಾ ಅದನ್ನೇ ಹೇಳಿದ್ಧಾರೆ. ಸನ್ನಿವೇಶ, ಪರಿಸ್ಥಿತಿ ಎಲ್ಲವೂ ಈಗ ಮೊದಲಿನ ಹಾಗಿಲ್ಲ. ಆಗ ಸುಮಲತಾ ಜೊತೆಯಲ್ಲಿದ್ದ ಇಂಡವಾಳು ಸಚ್ಚಿದಾನಂದ ಈಗ ಬಿಜೆಪಿಯಲ್ಲಿದ್ಧಾರೆ. ಡಾ.ರವೀಂದ್ರ ತಟಸ್ಥರಾಗಿದ್ಧಾರೆ. ಯಶ್ ಸುಮಲತಾ ಅವರ ಕುಟುಂಬದ ಜೊತೆಯಲ್ಲಿದ್ದರೂ.. ರಾಜಕೀಯಕ್ಕೆ ಬರುತ್ತಿಲ್ಲ ಎನ್ನುವುದು ಸ್ಪಷ್ಟ. ದರ್ಶನ್ ಹಾಗೂ ಮಗ ಅಭಿಷೇಕ್ ಅಂಬರೀಷ್ ಜೊತೆಯಲ್ಲಿದ್ಧಾರೆ.
ಇದೆಲ್ಲದರ ನಡುವೆ ಜೆಡಿಎಸ್-ಬಿಜೆಪಿ ನಡುವೆ ಮೈತ್ರಿಯಾಗಿ, ಮಂಡ್ಯವನ್ನು ಜೆಡಿಎಸ್ʻಗೆ ಬಿಟ್ಟುಕೊಟ್ಟಿದ್ಧಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರೇ ಜೆಡಿಎಸ್ ಅಭ್ಯರ್ಥಿ. ಚುನಾವಣೆಗೆ ಮುನ್ನ ನಡೆದ ಆಂತರಿಕ ಸಮೀಕ್ಷೆಗಳೆಲ್ಲ ಸುಮಲತಾ ಅವರ ವಿರುದ್ಧವಾಗಿಯೇ ಇದ್ದವು. ಮಂಡ್ಯದಲ್ಲಿ ಸುಮಲತಾ ಅವರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳೇ ಹೆಚ್ಚಾಗಿದ್ದವು. ಹೀಗಾಗಿ.. ಸುಮಲತಾ ಅವರಿಗೆ ಬೇರೆ ಆಯ್ಕೆಗಳಿರಲಿಲ್ಲ ಎನ್ನುವುದೂ ಸತ್ಯ.
ಸುಮಲತಾ ಇಲ್ಲಿಯೂ ಒಂದು ಸಸ್ಪೆನ್ಸ್ ಹೆಜ್ಜೆ ಇಟ್ಟಿದ್ಧಾರೆ. ಸುಮಲತಾ ಬಿಜೆಪಿ ಸೇರುತ್ತಿದ್ದಾರೆ. ಬಿಜೆಪಿ ಹೇಳಿದ ಕಡೆ ಪ್ರಚಾರವನ್ನೂ ಮಾಡ್ತಾರೆ. ಆದರೆ.. ಕುಮಾರಸ್ವಾಮಿ ಪರ ಪ್ರಚಾರ ಮಾಡೋದ್ರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ನೋಡೋಣ.. ಹಳೆಯ ದ್ವೇಷಗಳನ್ನೆಲ್ಲ ಮರೆಯಬೇಕು ಎನ್ನುತ್ತಿರುವ ಸುಮಲತಾ ಪ್ರಚಾರದ ಬಗ್ಗೆ ನಿಧಾನವಾಗಿ ನಿರ್ಧಾರ ಮಾಡಲಿದ್ದಾರಂತೆ. ಈ ನಡುವೆ ಸುಮಲತಾ ನನ್ನ ಸೋದರಿ ಇದ್ದಂತೆ ಎಂದಿರುವ ಕುಮಾರಸ್ವಾಮಿ, ಸುಮಲತಾ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇಷ್ಟೆಲ್ಲದರ ನಡುವೆ ಸುಮಲತಾ ಅವರಿಗೆ ತಮ್ಮ ವೈಧವ್ಯವನ್ನು ಆಡಿಕೊಂಡಿದ್ದ, ಲೇವಡಿ ಮಾಡಿದ್ದ ಅಂಬರೀಷ್ ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಕುಮಾರಸ್ವಾಮಿ ಅವರ ಮೇಲಿನ ಸಿಟ್ಟು ಇನ್ನೂ ತಣ್ಣಗಾಗಿಲ್ಲ ಎನ್ನುವುದಂತೂ ಸತ್ಯ.
ರಾಜಕೀಯವೇ ಹಾಗೆ. ಅಲ್ಲಿ ಯಾರೂ ಶತ್ರುಗಳೂ ಅಲ್ಲ. ಮಿತ್ರರೂ ಅಲ್ಲ. ಮಿತ್ರರು ಎಂದುಕೊಂಡಿದ್ದವರು ಮಿತ್ರರಾಗಿರೋದಿಲ್ಲ. ಮಂಡ್ಯದಲ್ಲಿ ಕಳೆದ ಬಾರಿ ಮಿತ್ರರಾಗಿದ್ದ ಪಕ್ಷಗಳೇ.. ಒಂದರ ವಿರುದ್ಧ ಒಂದು ಮಸಲತ್ತು ಮಾಡಿದವು ಅನ್ನೋ ಮಾತನ್ನು ಚುನಾವಣೆ ಮುಗಿದ ಮೇಲೆ ನಾಯಕರೇ ಒಪ್ಪಿಕೊಂಡಿದ್ದರು. ಈಗ.. ಅದೇ ಮಿತ್ರರು ಶತ್ರುಗಳಾಗಿದ್ದಾರೆ. ಆಗ ಶತ್ರುಗಳಾಗಿದ್ದವರು.. ಈ ಬಾರಿ ಮಿತ್ರರಾಗಿದ್ದಾರೆ.



