ಸುಜಾತಾ ಭಟ್ ಕಥೆ ನೋಡಿದರೆ.. ಚಿತ್ರ ವಿಚಿತ್ರ ಕಥೆಗಳಿರುವ ಸಿನಿಮಾಗಳು ನೆನಪಾಗುತ್ತವೆ. ಅದರಲ್ಲೂ ಉಪೇಂದ್ರರ ಸಿನಿಮಾಗಳು ಪದೇ ಪದೇ ನೆನಪಾಗುತ್ತವೆ. ಧರ್ಮಸ್ಥಳ, ತಲೆಬುರುಡೆ, ಅತ್ಯಾಚಾರ, ಅನಾಮಿಕ, ಸುಜಾತಾ ಭಟ್ ಮಗಳು ಅನನ್ಯಾ ಭಟ್, ಹೂತಿಟ್ಟ ಶವ.. ದಿನಕ್ಕೊಂದು ತಿರುವು.. ದಿನಕ್ಕೊಂದು ಕಥೆ.. ಬಹುಶಃ ಒಂದಿಷ್ಟು ಹೆಣಗಳು ಸಿಕ್ಕುಬಿಟ್ಟಿದ್ದರೆ.. ಇಡೀ ಕಥೆಯೇ ಬೇರೆಯಾಗುತ್ತಿತ್ತೇನೋ.. ಇಷ್ಟು ಹೊತ್ತಿಗೆ ವೀರೇಂದ್ರ ಹೆಗ್ಗಡೆಯವರ ಬಂಧನಕ್ಕೆ ಒತ್ತಾಯಿಸಿ ಹೋರಾಟ ಶುರುವಾಗುತ್ತಿದ್ದವು. ಧರ್ಮಸ್ಥಳವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯೂ ಶುರುವಾಗುತ್ತಿತ್ತು.
ಹಾಗಾಗಲಿಲ್ಲ. ಆದರೆ.. ಇದೂ ಒಂದು ತಂತ್ರಗಾರಿಕೆಯಾ..?
ಆದರೂ.. ಇಂತಹ ಸುದ್ದಿಗಳು ಕಳೆದ ಎರಡು ತಿಂಗಳಿಂದ ದೊಡ್ಡ ಸದ್ದು ಮಾಡುತ್ತಿರುವುದಕ್ಕೆ ಕಾರಣ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸಮೀರ್ ಎಂಡಿ, ಸುಜಾತಾ ಭಟ್, ಅನಾಮಿಕ.. ಎಡಪಂಥೀಯ ಸಂಘಟನೆಗಳು, ಜಸ್ಟಿಸ್ ಫಾರ್ ಸೌಜನ್ಯ.. ಈ ಹೆಸರುಗಳು. ಈ ನಡುವೆ ಇದ್ದಕ್ಕಿದ್ದಂತೆ ಉಲ್ಟಾ ಪಲ್ಟಾ ಹೊಡೆದಿರುವುದು ಸುಜಾತಾ ಭಟ್. ಆದರೆ.. ಇದೊಂದು ತಂತ್ರಗಾರಿಕೆಯೂ ಇರಬಹುದು.
ಮೊದಲು ಮಗಳ ಕಥೆ ಹೇಳಿದ್ದ ಸುಜಾತಾ ಭಟ್, ರಾಜ್ಯದ ಮುಖ್ಯವಾಹಿನಿಯ ಟಿವಿ ಚಾನೆಲ್ಲಗಳ ಮಾಧ್ಯಮಗಳಿಂದ ತನಿಖಾ ವರದಿಗೆ ಕಂಗಾಲಾಗಿದ್ದು ಹೌದು. ನಿಮಿಷಕ್ಕೊಂದು.. ಗಳಿಗೆಗೊಂದು ಕಥೆ ಕಟ್ಟುವ ಚಾಳಿ ಶುರುವಾಗಿದ್ದೇ ಆಗ. ಈಗ ನೋಡಿದರೆ.. ಸುಜಾತಾ ಭಟ್, ಆಮೇಲೆ ನನಗೆ ಮಗಳೇ ಇಲ್ಲ. ಆ ಕಥೆ ಹೇಳಿಸಿದ್ದು ಗಿರೀಶ್ ಮಟ್ಟಣ್ಣವರ್ ಹಾಗೂ ಜಯಂತ್ ಎಂದು ಹೇಳಿದ್ದರು. ಇನ್ನೊಂದು ಚಾನೆಲ್ಲಿನಲ್ಲಿ ಅನನ್ಯಾ ಭಟ್ ಎಂಬುವವಳು ಇನ್ನೊಬ್ಬರ ಮಗಳು. ನನ್ನ ಕಣ್ಣೆದುರೇ ಕಿಡ್ನಾಪ್ ಆಯಿತು ಎಂದು ಕಥೆ ಕಟ್ಟಿದ್ದರು. ಅದಾದ ನಂತರ.. ಇಲ್ಲ.. ಇಲ್ಲ.. ನಾನು ಹೇಳಿದ್ದೇ ಸತ್ಯ. ನನಗೆ ಅನನ್ಯಾ ಭಟ್ ಎಂಬ ಮಗಳಿದ್ದಾಳೆ ಎಂದು ಮತ್ತೊಮ್ಮೆ ಕಥೆ ಹೇಳುತ್ತಿದ್ದಾರೆ.
ನೆನಪಾಗುತ್ತಿರುವುದು ಉಪೇಂದ್ರರ ಸಿನಿಮಾ..!
ಥಟ್ಟಂತ ನೆನಪಾಗುತ್ತಿರುವುದು ಉಪೇಂದ್ರ ಅವರ A ಮತ್ತು ಉಪೇಂದ್ರ ಸಿನಿಮಾ. ಈ ಸಿನಿಮಾಗಳಲ್ಲಿ ನಾವು ಇದುವರೆಗೂ ನೋಡಿದ್ದು ಸುಳ್ಳು.. ಈಗ ನೋಡುತ್ತಿರುವುದೇ ಸತ್ಯ. ಇದೇ ನಿಜವಾದ ಕಥೆ ಎಂಬ ಭಾವನೆ ಹುಟ್ಟುತ್ತದೆ. ಆದರೆ.. ಕೆಲವು ನಿಮಿಷ ಕಳೆದ ಮೇಲೆ ಇಲ್ಲ.. ಇಲ್ಲ.. ಆಗ ನೋಡಿದ್ದು ಸುಳ್ಳು ಎಂದುಕೊಳ್ಳೂತ್ತಾನೆ ಪ್ರೇಕ್ಷಕ. A ಸಿನಿಮಾ ಶುರುವಾದಾಗ.. ಆರಂಭದಿಂದ ಕೊನೆಯವರೆಗೂ ವಿಲನ್ ಆಗಿ ಪ್ರೇಕ್ಷಕರು ರೊಚ್ಚಿಗೇಳುವಂತೆ ಮಾಡಿದ್ದ ಚಾಂದಿನಿ, ಕ್ಲೈಮಾಕ್ಸ್ ಹೊತ್ತಿಗೆ ದುರಂತ ನಾಯಕಿಯಾಗುತ್ತಾಳೆ.
ಇನ್ನು ಉಪೇಂದ್ರ ಚಿತ್ರದಲ್ಲಿ ಕೊನೆಯವರೆಗೂ ಕಾಡುತ್ತಿದ್ದ ದಾಮಿನಿ, ಪ್ರೇಮ ಹಾಗೂ ರವೀನಾ ಟಂಡನ್, ಕ್ಲೈಮಾಕ್ಸ್ ಹೊತ್ತಿಗೆ ಕೇವಲ ಮನಸ್ಸಿನ ಭಾವನೆಯಾಗುತ್ತಾರೆ. ಆಗ ಸಿನಿಮಾ ನೋಡಿದ್ದ ಪ್ರೇಕ್ಷಕ ತಲೆಗೆ ಹುಳ ಬಿಟ್ಟುಕೊಂಡಿದ್ದ. ಅಂತಹ ಕಥೆ, ಚಿತ್ರಕಥೆಯನ್ನು ಮತ್ತೊಮ್ಮೆ ಬರೆಯಲು ಉಪೇಂದ್ರ ಅವರಿಗೂ ಸಾಧ್ಯವಾಗಿಲ್ಲ.
ಇನ್ನು ತಮಿಳಿನ ಅನ್ನಿಯನ್, ಶಂಕರ್ ನಿರ್ದೇಶನದ ತಮಿಳು ಚಿತ್ರ. ಆ ಚಿತ್ರದ ಕ್ಲೈಮಾಕ್ಸ್‌ನನಲ್ಲಿ ವಿಕ್ರಂ ಒಮ್ಮೆ ಸಾಧುಪ್ರಾಣಿಯಂತೆ.. ಮತ್ತೊಮ್ಮೆ ವ್ಯಘ್ರವಾಗಿ ನಟಿಸುವ ದೃಶ್ಯಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದವು. ಸೆಕೆಂಡುಗಳ ಲೆಕ್ಕದಲ್ಲಿ ಬದಲಾಗುವ ವಿಕ್ರಂ ಆಕ್ಟಿಂಗ್.. ನೋಡಿ ಪ್ರೇಕ್ಷಕರು ಫಿದಾ ಆಗಿದ್ದರು. ಆಪ್ತಮಿತ್ರ ನಾಗವಲ್ಲಿ-ಗಂಗಾ ಪಾತ್ರವೂ ಹಾಗೆಯೇ.. ಒಟ್ಟಿನಲ್ಲಿ ಇದೀಗ ನೀವು ನೋಡುತ್ತಿರುವುದು ಮಾತ್ರವೇ ಸತ್ಯ ಎಂಬಂತೆ ಸುಜಾತಾ ಭಟ್ ವರ್ತನೆ, ಮಾತು ಇದೆ.
ತಂತ್ರಗಾರಿಕೆ ಹೇಗೆ..?
ಯಾವುದೇ ಕ್ರೈಂ ಇರಲಿ.. ಅವರು ಮಾನಸಿಕ ಅಸ್ವಸ್ಥರು ಎಂದು ಅರಿವಾದರೆ.. ಅವರು ಶಿಕ್ಷೆಯಿಂದ ಬಚಾವ್ ಆಗುತ್ತಾರೆ. ಬದಲಾಗಿ.. ಅವರಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಎನ್ನುತ್ತದೆ ಭಾರತೀಯ ಕಾನೂನು. ಇಲ್ಲಿ ಸುಜಾತಾ ಭಟ್ ಅವರ ವರ್ತನೆ, ಮಾತುಕತೆ ನೋಡಿದರೆ.. ಈ ಅಜ್ಜಿ ಮೆಂಟಲ್ಲು, ತಲೆ ಸರಿ ಇಲ್ಲ ಎಂದು ಜನರೇ ಮಾತಾಡಿಕೊಳ್ಳುವಂತಾಗಿದೆ. ಅದೇ ಅಭಿಪ್ರಾಯ ರೂಪುಗೊಂಡರೆ.. ಅದನ್ನೇ ವೈದ್ಯರೂ ಶಿಫಾರಸು ಮಾಡಿದರೂ ಅಚ್ಚರಿ ಇಲ್ಲ. ಹಾಗೇನಾದರೂ ರಿಪೋರ್ಟ್ ಬಂದರೆ.. ಸುಜಾತಾ ಭಟ್ ಅವರು ಇಷ್ಟೆಲ್ಲ ಆರೋಪ ಹೊರಿಸಿದ್ರೂ.. ಶಿಕ್ಷೆಯಿಂದ ಬಚಾವ್ ಆಗೋದು ಖಚಿತ. ಈ ತಂತ್ರಗಾರಿಕೆಯೂ ಇರಬಹುದಾ..? ಸದ್ಯಕೆಕ ಮೂಡುತ್ತಿರುವ ಸಂಶಯ ಇದು.



