ಮುಸ್ಲಿಂರ ಕೆಂಗಣ್ಣು ಎದುರಿಸಿದ್ದ ಗಾಯಕಿ ಸುಹಾನಾ ಮದುವೆ ಹಿಂದೂ ಯುವಕನ ಜೊತೆ ನೆರವೇರುತ್ತಿದೆ. ಮಂತ್ರಮಾಂಗಲದಲ್ಲಿ ಇಬ್ಬರೂ ಸತಿಪತಿಗಳಾಗುತ್ತಿದ್ದಾರೆ. ಸುಹಾನಾ ಸೈಯದ್. ಭಕ್ತಿಗೀತೆಗಳನ್ನು ಚೆಂದವಾಗಿ ಹಾಡುವ ಹೆಣ್ಣು ಮಗಳು. ವೃತ್ತಿಪರ ಗಾಯಕಿ. ವೇದಿಕೆ ಏರಿದರೆ ಭಕ್ತಿಯನ್ನು ಹೃದಯದಲ್ಲಿ ತುಂಬಿಕೊಂಡು ಹಾಡುವ ಸುಹಾನಾ ಅವರ ಭಕ್ತಿಗೀತೆಗಳಿಗೆ ಪ್ರೇಕ್ಷಕರು ಶರಣಾಗುತ್ತಾರೆ.
ಈಕೆಯ ಹೆಸರು ಕನ್ನಡಿಗರಿಗೆ ಹೆಚ್ಚು ಹೆಚ್ಚು ಗೊತ್ತಾಗಿದ್ದು ಜೀ ಕನ್ನಡದ ಸರಿಗಮಪ ಶೋ ಮೂಲಕ. ಆ ಶೋನಲ್ಲಿ ಮುಕುಂದ ಮುರಾರೇ.. ಹಾಡು ಹಾಡಿದ್ದ ಸುಹಾನಾ ಸೈಯದ್, ಹಿಜಾಬ್ ಧರಿಸಿಯೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಮುಸ್ಲಿಂ ಮನೆತನದ ಹುಡುಗಿಯೊಬ್ಬಳು ಶಾಸ್ತ್ರೀಯ ಸಂಗೀತ ಕಲಿತು, ಹಿಂದೂ ದೇವರ ಹಾಡುಗಳನ್ನು ಹಾಡುವುದು ಸಂಪ್ರದಾಯವಾದಿ, ಮೂಲಭೂತವಾದಿ ಮುಸ್ಲಿಮರ ಕೆಂಗಣ್ಣಿಗೆ ಗುರಿಯಾಗಿತ್ತು. ಆ ಟೀಕೆಗಳನ್ನು ಸುಹಾನಾ ಕುಟುಂಬ ಏಕಾಂಗಿಯಾಗಿಯೇ ಎದುರಿಸಿತು. ಏಕೆಂದರೆ ಮುಸ್ಲಿಮರಲ್ಲಿ ಇರುವ ಉದಾರವಾದಿ ಮುಸ್ಲಿಮರೂ ಸುಹಾನಾ ನೆರವಿಗೆ ನಿಲ್ಲಲಿಲ್ಲ.
ವಾಸ್ತವದಲ್ಲಿ ಸುಹಾನಾ ಕುಟುಂಬದ ನೆರವಿಗೆ ಯಾರೊಬ್ಬರೂ ಬರಲಿಲ್ಲ. ಹಿಂದೂಗಳು ಬೆನ್ನು ತಟ್ಟಿದರು. ಹೊಗಳಿದರು. ಅಷ್ಟೇ. ಟೀಕೆ ಎದುರಿಸುವಾಗ.. ಅವರೂ ನೆರವಿಗೆ ನಿಲ್ಲಲಿಲ್ಲ. ಎಂದಿನಂತೆ.. ಜಾತ್ಯತೀತತೆ, ಶಾಂತಿ, ಸಾಮರಸ್ಯ, ವೈವಿಧ್ಯತೆಯಲ್ಲಿ ಏಕತೆಯ ಪಾಠ ಮಾಡುವ, ಎಲ್ಲ ಧರ್ಮಗಳ ಮೂಲಭೂತವಾದದ ವಿರುದ್ಧ ಹೋರಾಡಬೇಕು ಎನ್ನುವವರೂ ಸುಹಾನಾ ನೆರವಿಗೆ ಬರಲಿಲ್ಲ. ಅದೆಲ್ಲವನ್ನೂ ಸುಹಾನಾ ಅವರ ಕುಟುಂಬ ಏಕಾಂಗಿಯಾಗಿಯೇ ಎದುರಿಸಿತು. ಈಗ ಆ ಸವಾಲನ್ನೂ ಮೀರಿ, ಇನ್ನೊಂದು ಸವಾಲು ಎದುರಿಸುತ್ತಿದೆ.
ವಿರೋಧಗಳ ಬಳಿಕವೂ ಸುಹಾನಾ ಗಾಯನವನ್ನು ನಿಲ್ಲಿಸಿರಲಿಲ್ಲ. ಸುಹಾನಾಗೆ ಭಕ್ತಿಗೀತೆ ಎಂದರೆ ಇಷ್ಟ. ಸಿನಿಮಾ ಹಾಡುಗಳನ್ನಷ್ಟೇ ಅಲ್ಲದೆ ಮಂಟೇಸ್ವಾಮಿ ಪದ, ಸಿದ್ದಪ್ಪಾಜಿ ಹಾಡುಗಳು, ಜನಪದ ಗೀತೆ, ಮಾದಪ್ಪನ ಭಕ್ತಿ ಗೀತೆಗಳು.. ಸೇರಿದಂತೆ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.
ನಿಂಬೀಯಾ ಬನದ ಮ್ಯಾಗ..
ಮುಕುಂದ ಮುರಾರೇ..
ಮಾದೇವ.. ಮಾದೇವ..
ವಂದೇಮಾತರಂ..
ತರವಲ್ಲ ತಂಗೀ ನಿನ್ನ ತಂಬೂರಿ ಸ್ವರ..
ಸಿದ್ದಪ್ಪಾ ಸ್ವಾಮಿ ಬನ್ಯೋ..
ಹೀಗೆ.. ಸುಹಾನಾ ಹಾಡುತ್ತಿದ್ದರೆ ಅದರ ಲೋಕವೇ ಬೇರೆ. ಈಗ ಗಾಯಕಿ ಸುಹಾನಾ ಸೈಯದ್ ಹಿಂದೂ ಹುಡುಗ ನಿತಿನ್ ಶಿವಾಂಶು ಅವರ ಜೊತೆ ಮದುವೆ ಆಗ್ತಿದ್ದಾರೆ. ಮೂಲತಃ ಶಿವಮೊಗ್ಗದವರಾದ ಸುಹಾನಾ, ತಮ್ಮ ಜೀವದ ಗೆಳೆಯನೇ ಆಗಿದ್ದ ನಿತಿನ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಅಲ್ಲಲ್ಲ.. ಮಂತ್ರ ಮಾಂಗಲ್ಯ ಮಾಡಿಕೊಳ್ಳುತ್ತಿದ್ದಾರೆ. ಸಾಕಷ್ಟು ವಿರೋಧಗಳಿದ್ದರೂ ಸುಹಾನಾ ಸೈಯದ್ ಧೈರ್ಯವನ್ನು ಮೆಚ್ಚಬೇಕು. ನಿತಿನ್ ಧೈರ್ಯವನ್ನೂ ಮೆಚ್ಚಬೇಕು. ನಿತಿನ್ ಜೊತೆ 16 ವರ್ಷಗಳಿಂದ ಪರಿಚಯ, ಸ್ನೇಹ ಇರುವ ಸುಹಾನಾ.. ಇಬ್ಬರೂ ಪ್ರೇಮಿಗಳಾಗಿದ್ದು ಕೆಲವು ವರ್ಷಗಳ ಹಿಂದೆ. ಇಬ್ಬರೂ ಕುವೆಂಪು ಅವರ ಮಂತ್ರ ಮಾಂಗಲ್ಯದಲ್ಲಿ ಮದುವೆ ಆಗುತ್ತಿದ್ದಾರೆ. ನಿತಿನ್ ಕೂಡಾ ಗಾಯಕ. ರಂಗಭೂಮಿ ಹಿನ್ನೆಲೆಯುಳ್ಳ ಹುಡುಗ. ನೀನಾಸಂನಲ್ಲಿ ತರಬೇತಿ ಆಗಿದೆ. ಕನಕಪುರ ರಸ್ತೆಯಲ್ಲಿರುವ ರೆಸಾರ್ಟಿನಲ್ಲಿ ಮಂತ್ರಮಾಂಲ್ಯ ಮದುವೆ ನೆರವೇರಲಿದೆ. ರೆಸಾರ್ಟಿನಲ್ಲಿ ಮಂತ್ರ ಮಾಂಗಲ್ಯವಾ ಎನ್ನಬೇಡಿ. ಮಂತ್ರಮಾಂಗಲ್ಯ ಅಷ್ಟೇ.
ತಮ್ಮಿಬ್ಬರ ಮದುವೆ ವಿಷಯವನ್ನು ಸುಹಾನಾ ಮತ್ತು ನಿತಿನ್ ಅಧಿಕೃತವಾಗಿಯೇ ಘೋಷಿಸಿಕೊಂಡಿದ್ದಾರೆ. ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ…….. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು.. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ.. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಪೋಸ್ಟ್ ಮಾಡಿದ್ದಾರೆ.



