ರಾಜ್ಯದಲ್ಲಿ ಕಬ್ಬು ಖರೀದಿ ಗಲಾಟೆ.. ಕೇವಲ ಗಲಾಟೆಯಲ್ಲ. ಹೋರಾಟವಲ್ಲ. ರಣರಂಗವೇ ಆಗಿದೆ. ರಾಜ್ಯ ಸರ್ಕಾರ ಇಷ್ಟೂ ಹೋರಾಟಕ್ಕೆ ಮೂಲ ಕಾರಣ ಕೇಂದ್ರ ಸರ್ಕಾರ ಎಂದು ವಾದಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತೂ ಬಹಿರಂಗವಾಗಿಯೇ ಸುದ್ದಿಗೋಷ್ಠಿ ಮಾಡಿ ಹೇಳಿಕೆ ನೀಡಿದ್ದಷ್ಟೇ ಅಲ್ಲ, ಸಮಸ್ಯೆಗೆ ನೀವೇ ಕಾರಣ.. ನೀವೇ ಬಂದು ಬಗೆಹರಿಸಿ ಎಂದು ಮೋದಿಗೆ ಪತ್ರವನ್ನೂ ಬರೆದಿದ್ದಾರೆ. ಅತ್ತ ಕೇಂದ್ರದ ಬಿಜೆಪಿ ನಾಯಕರು ರಾಜ್ಯ ಸರ್ಕಾರವೇ ಸೃಷ್ಟಿಸಿಕೊಂಡಿರುವ ಸಮಸ್ಯೆ, ನಮ್ಮ ಜವಾಬ್ದಾರಿ ನಾವು ಮಾಡಿದ್ದೇವೆ. ಮಿಕ್ಕಿದ್ದು ನಿಮ್ಮದು ಎನ್ನುತ್ತಿದ್ದಾರೆ. ಯಾರ ಜವಾಬ್ದಾರಿ ಎಷ್ಟು… ಇಷ್ಟಕ್ಕೂ ಸಮಸ್ಯೆಯ ಮೂಲ ಇರುವುದು ಎಲ್ಲಿ..?
ಕಬ್ಬು ಖರೀದಿ ನಿಯಂತ್ರಣ ರಾಜ್ಯದ ಜವಾಬ್ದಾರಿ. ಆದರೆ.. ಕಬ್ಬಿಗೆ ಬೆಂಬಲ ಬೆಲೆ ಘೋಷಿಸುವುದು ಕೇಂದ್ರ ಸರ್ಕಾರ. MSPಗಿಂತ ಕಡಿಮೆ ದರವನ್ನು ಫ್ಯಾಕ್ಟರಿಗಳು ಕೊಡುವಂತಿಲ್ಲ ಎಂದು ನಿಗದಿ ಮಾಡುವುದೂ ಕೇಂದ್ರವೇ. ಆದರೆ.. FRPಗಿಂತ ಹೆಚ್ಚು ದರ ಕೊಡಿಸುವ ಅಧಿಕಾರ ರಾಜ್ಯಗಳಿಗೆ ಇದೆ. 2020ರಲ್ಲಿ ಸುಪ್ರೀಂಕೋರ್ಟ್ ರಾಜ್ಯಗಳಿಗೆ ಈ ಅಧಿಕಾರ ನೀಡಿದೆ. FRP ಎಂದರೆ ಕಬ್ಬಿನ ವಿಷಯಕ್ಕೇ ಬಂದರೆ ಕಬ್ಬಿನ ಕ್ವಾಲಿಟಿ ಆಧಾರದ ಮೇಲೆ ನಿಗದಿ ಮಾಡುವ ದರ. ಫ್ಯಾಕ್ಟರಿಗಳ ಮೂಲಕ ರೈತರಿಗೆ ಬೆಲೆ ಕೊಡಿಸುವ ಸರ್ಕಾರ, ಇದನ್ನು ಮೀರಿದ ಮೊತ್ತವನ್ನೂ ಕೊಡಿಸಬಹುದು. ಆ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದು ಸುಪ್ರೀಂಕೋರ್ಟ್.
ಹೀಗಾಗಿ ಕೇಂದ್ರದ ಜವಾಬ್ದಾರಿ ಬೆಂಬಲ ಬೆಲೆ ಘೋಷಣೆಯೊಂದಿಗೆ ಮುಗಿದಂತೆ ಆಗಿದೆ. ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚು ಇದೆ. ಅದನ್ನು ನಿಭಾಯಿಸಬೇಕಾದ್ದು ರಾಜ್ಯವೇ ಹೊರತು, ಕೇಂದ್ರ ಅಲ್ಲ.
ಇನ್ನು ಸಕ್ಕರೆ ದೇಶದ ಅಗತ್ಯ ವಸ್ತುಗಳ ಪಟ್ಟಿಯಲ್ಲಿದೆ. ಆಮದು ಮತ್ತು ರಫ್ತು ಮೇಲೆ ನಿಯಂತ್ರಣ ಹೇರುವ ಅಧಿಕಾರ ಕೇಂದ್ರಕ್ಕೆ ಇದೆ. ಹೀಗಾಗಿ ಸಕ್ಕರೆ ರಫ್ತಿಗೆ ನಿರ್ಬಂಧ ಹೇರಿದಾಗಲೆಲ್ಲ ಕಬ್ಬಿನ ಬೆಲೆ ಕುಸಿಯುತ್ತದೆ ಎಂಬ ವಾದ ಇದೆ. ಆದರೆ.. ಅದು ಸುಳ್ಳು. ಭಾರತದ ಸಕ್ಕರೆಗೆ ಮಾರುಕಟ್ಟೆ ಇದೆ. ದೇಶದ ಒಳಗೆ ಅಗತ್ಯದಷ್ಟು ದಾಸ್ತಾನು ಇಲ್ಲದೇ ಇದ್ದಾಗ ರಫ್ತಿಗೆ ನಿರ್ಬಂಧ ಹೇರಲಾಗುತ್ತದೆ. ದಾಸ್ತಾನು ಸರಿಹೋದಾಗ ಮತ್ತೆ ರಫ್ತು ಶುರುವಾಗುತ್ತದೆ.
ಇನ್ನು ಸಕ್ಕರೆ ಫ್ಯಾಕ್ಟರಿಗಳು ನಷ್ಟದಲ್ಲಿವೆಯೇ ಎಂದು ನೋಡಿದರೆ.. ಎಥೆನಾಲ್ ಖರೀದಿ ಶುರುವಾದ ನಂತರ ನಷ್ಟ ಇಲ್ಲ. ಸರ್ಕಾರಗಳ ಸಹಾಯಧನ ಈಗ ಅನಿವಾರ್ಯ ಅಲ್ಲ. ಏಕೆಂದರೆ ಸಕ್ಕರೆ ಮಾತ್ರವೇ ಈಗ ಆದಾಯದ ಮೂಲ ಅಲ್ಲ.ಎಥೆನಾಲ್ ಲಾಭದ ಹಣ ರೈತರಿಗೆ ವರ್ಗವಾಗುತ್ತಿಲ್ಲ.
ಕಾಕಂಬಿಯ ಲಾಭ ಏನು.. ಎತ್ತ.. ಎಂದು ನೋಡಿದರೆ..
ಕಾಕಂಬಿ/ ಮೊಲಾಸೆಸ್ ಲಿಕ್ಕರ್ ತಯಾರಿಗೆ ಬಳಕೆ ಮಾಡುತ್ತಾರೆ. ಲಿಕ್ಕರ್ ತಯಾರಿಕೆಗೆ ಸ್ಪಿರಿಟ್/ಮೊಲಾಸೆಸ್ ಅನಿವಾರ್ಯ. ಅದೇ ಸರ್ಕಾರಕ್ಕೆ ಲಿಕ್ಕರ್ ತೆರಿಗೆಯೇ ರಾಜ್ಯಕ್ಕೆ 35 ರಿಂದ 40 ಸಾವಿರ ಕೋಟಿ ತೆರಿಗೆ ಲಾಭ ಬರುತ್ತದೆ. ಹಾಗೆ ನೋಡಿದರೆ ಕಬ್ಬು ಬೆಳೆಗಾರರು ಲಿಕ್ಕರ್ ಲಾಭದಲ್ಲೂ ಲಾಭ ಕೇಳಬಹುದು. ಕಬ್ಬಿಗೇ ಬೆಲೆ ಕೊಡದವರು ಲಿಕ್ಕರ್ ಲಾಭ ಕೊಡುವುದು ಸಾಧ್ಯವಿಲ್ಲದ ಮಾತು.
ಇನ್ನು ಒಂದು ಟನ್ ಕಬ್ಬಿನಲ್ಲಿ ಫ್ಯಾಕ್ಟರಿಗಳಿಗೆ 10 ರಿಂದ 12 ಸಾವಿರ ರೂ. ಬರುತ್ತದೆ. ಇದರಲ್ಲಿ 4 ರಿಂದ 5 ಸಾವಿರ ರೂ. ಲಾಭ ಮಾಡುವ ಅವಕಾಶ ಇದೆ. ಸಾಗಣೆ ವೆಚ್ಚ, ತಯಾರಿ ವೆಚ್ಚ, ಕಾರ್ಮಿಕ ವೆಚ್ಚ, ಬಾಡಿಗೆ.. ಎಲ್ಲವನ್ನೂ ಕಳೆದರೂ.. ಒಂದು ಟನ್ ಕಬ್ಬಿಗೆ 3 ರಿಂದ 4 ಸಾವಿರ ಲಾಭ ಗ್ಯಾರಂಟಿ. ಹೀಗಿರುವಾಗ ರೈತರಿಗೆ ಲಾಭ ಹಂಚಬಹುದು. ಆದರೆ.. ಆ ಕೆಲಸವನ್ನು ಕೇಂದ್ರದ ಮೇಲೆ ಎತ್ತಿ ಹಾಕಿ ರಾಜ್ಯ ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ.



