ಡಾ.ರಾಜ್ ಕುಮಾರ್ ಕುಟುಂಬವನ್ನು ಚಿತ್ರರಂಗದ ಹಲವರು ತಮ್ಮದೇ ಮನೆ ಎಂದು ಪರಿಗಣಿಸ್ತಾರೆ. ಪ್ರೀತಿಸ್ತಾರೆ. ಅಂತಹವರಲ್ಲಿ ಸುಧಾರಾಣಿಯೂ ಒಬ್ಬರು. ಈಗಲೂ ಅಷ್ಟೆ, ನಿವೇದಿತಾ ಶಿವ ರಾಜ್ʻಕುಮಾರ್ ನಿರ್ಮಾಣದ ಫೈರ್ ಫ್ಲೈ ಚಿತ್ರದಲ್ಲಿ ನಟಿಸುವುದಕ್ಕೆ ಆಫರ್ ಬಂದ ಕೂಡ್ಲೇ ಸುಧಾರಾಣಿ ಒಪ್ಪಿದ್ದಾರೆ. ಪಾತ್ರ ತುಂಬಾ ತುಂಬಾ ಚಿಕ್ಕದು. ಆದರೆ, ಸುಧಾರಾಣಿ ಮಾತ್ರ ಓಕೆ ಎಂದಿದ್ದಾರೆ.
ಅಪ್ಪಾಜಿಯವರ ಮನೆಯಿಂದ ಯಾರು ಏನೇ ಮಾಡಿದರೂ ಅದು ನನ್ನ ತವರು ಮನೆ. ಹಾಗಾಗಿ ಇವತ್ತಿಗೂ ಅವರಲ್ಲಿ ಯಾರಾದ್ರೂ ಬಂದು ಹಿಂದೆ ಬಂದು ನಿಂತು ಹೋಗು ಅಂದ್ರೆ ನಾನು ತಯಾರಿದ್ದೇನೆ. ಏಕೆಂದರೆ ಇದು ನನ್ನ ಮನೆ ಎಂದು ಆತ್ಮೀಯವಾಗಿ ಹೇಳಿಕೊಳ್ಳೋ ಸುಧಾರಾಣಿಗೆ ಶಿವಣ್ಣನ ಮಗಳ ಸಾಹಸ ಇಷ್ಟವಾಗಿದೆಯಂತೆ. ನಿವೇದಿತಾ ಅವರನ್ನು ಸುಧಾರಾಣಿ ಕರೆಯೋದೇ ನಿವಿ ಅಂತಾ.
ನಿವಿ ನನ್ನ ಕಣ್ಣ ಮುಂದೆ ಹುಟ್ಟಿ ಬೆಳೆದಂತ ಮಗು, ಇವತ್ತು ಅವಳು ಒಂದು ನಿರ್ಮಾಣ ಸಂಸ್ಥೆ ಶುರು ಮಾಡುತ್ತಿದ್ದಾಳೆ, ಅವಳು ನಿರ್ಮಾಪಕಿಯಾಗಿದ್ದಾಳೆ. ನನಗೆ ತುಂಬಾ ಖುಷಿ ಇದೆ. ಕಥೆಯಿಂದ ಹಿಡಿದು ಪ್ರೊಡಕ್ಷನ್‌ವರೆಗೂ ಸಿನೆಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಮ್ಮ ಕನ್ನಡದ ಕಲಾಭಿಮಾನಿಗಳು ಈ ಚಿತ್ರಕ್ಕೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡಿದ್ದಾರೆ ಸುಧಾರಾಣಿ.
ನನ್ನನ್ನು ಇಷ್ಟು ಚಿಕ್ಕ ಪಾತ್ರ ಕೇಳಬೇಕು ಅಂತ ನಿರ್ದೇಶಕರಿಗೆ ಸ್ವಲ್ಪ ಮುಜುಗರ ಇತ್ತು. ಆದರೆ ಚೊಚ್ಚಲ ನಿರ್ದೇಶಕರಾಗಿ ಅವರಲ್ಲಿದ್ದ ಹುಮ್ಮಸ್ಸು, ಆಸಕ್ತಿ ನನಗೆ ಇಷ್ಟ ಆಯಿತು. ನಿರ್ದೇಶಕರಾಗಿ ನಟನೆಯೂ ಮಾಡುತ್ತಿರುವುದರಿಂದ ಎಲ್ಲರಿಗೂ ಅವರ ಮೊದಲ ಸಿನಿಮಾ ದೊಡ್ಡ ಬಜೆಟ್, ಮಲ್ಟಿಸ್ಟಾರ್ಸ್, ಆಕ್ಷನ್ ಸಿನಿಮಾ ಆಗಿರಬೇಕು ಅಂತಾ ಬಹುತೇಕರು ಯೋಚನೆ ಮಾಡುತ್ತಾರೆ. ಆದರೆ ಈ ವಿಚಾರದಲ್ಲಿ ಅವರು ವಿಭಿನ್ನ. ಸಂಬಂಧಗಳ ಬಗ್ಗೆ ಅವರು ಫೋಕಸ್ ಮಾಡಿದ್ದಾರೆ. ಇಡೀ ಕುಟುಂಬ ಕುಳಿತುಕೊಂಡು, ನೋಡಿ ಇಷ್ಟವಾಗುವಂತ ಚಿತ್ರವನ್ನು ಮಾಡಿದ್ದಾರೆ ಎಂದು ಖುಷಿ ಹಂಚಿಕೊಂಡಿದ್ದಾರೆ ಸುಧಾರಾಣಿ.
ದೊಡ್ಮನೆ ಸುಧಾರಾಣಿ ಅವರಿಗೆ ಅವಕಾಶ ಕೊಟ್ಟಿದೆ. ಸುಧಾರಾಣಿ ನಾಯಕಿಯಾಗಿದ್ದು ಆನಂದ್ ಚಿತ್ರದ ಮೂಲಕ. ಅದೇ ಚಿತ್ರದ ಮೂಲಕ ಶಿವ ರಾಜ್ ಕುಮಾರ್ ಕೂಡಾ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶಿವಣ್ಣ ಜೊತೆಗೆ ಆನಂದ್, ಮನ ಮೆಚ್ಚಿದ ಹುಡುಗಿ, ರಣರಂಗ, ಮಿಡಿದ ಶೃತಿ, ಆಸೆಗೊಬ್ಬ ಮೀಸೆಗೊಬ್ಬ, ಆನಂದ ಜ್ಯೋತಿ, ಸಮರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಒಟ್ಟು 7 ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಅಣ್ಣ ತಂಗಿ ಚಿತ್ರದಲ್ಲಿ ಒಂದು ವರ್ಷನ್ನಿನ ಜೋಡಿಯಾಗಿದ್ದಾರೆ. ಬೆಳ್ಳಿ, ತಮಸ್ಸು, ಭಾಗ್ಯದ ಬಳೆಗಾರ ಚಿತ್ರಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದಾರೆ. ವಿಶೇಷ ಎಂದರೆ ಶಿವಣ್ಣ ಜೊತೆ ಹೀರೋಯಿನ್ ಆಗಿ ನಟಿಸಿದ್ದ ಎಲ್ಲ 7 ಚಿತ್ರಗಳೂ ಸೂಪರ್ ಹಿಟ್.
ಇನ್ನು ಪುನೀತ್ ಅವರಿಗೆ ಅತ್ತಿಗೆಯಾಗಿ, ಶಿಕ್ಷಕಿಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಎದುರು ನಾಯಕಿಯಾಗಿಲ್ಲ, ಅಷ್ಟೆ. ಡಾ. ರಾಜ್ ಕುಮಾರ್ ಎದುರು ದೇವತಾ ಮನುಷ್ಯ ಹಾಗೂ ಜೀವನ ಚೈತ್ರ ಚಿತ್ರಗಳಲ್ಲಿ ನಟಿಸಿದ್ದಾರೆ. ತಾನು ಅಪ್ಪಾಜಿಯನ್ನು ನಟ ಎಂದು ನೋಡಿರಲಿಲ್ಲ, ಅವರೂ ಅಷ್ಟೆ, ನನ್ನನ್ನು ಮಗಳೆಂದೇ ಭಾವಿಸುತ್ತಿದ್ದರು. ಒಬ್ಬ ಮಗಳಂತೆ, ತಂದೆಯ ಮೇಲೆ ಮಕ್ಕಳು ಹೇಗೆ ಅಧಿಕಾರ ಚಲಾಯಿಸ್ತಾರೋ.. ಹಾಗೇ ಅಪ್ಪಾಜಿ ಅವರ ಮೇಲೆ ಹಕ್ಕು, ಅಧಿಕಾರ ಚಲಾಯಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಸುಧಾರಾಣಿ. ಈಗ ಶಿವಣ್ಣ ಮಗಳ ನಿರ್ಮಾಣದ ಮೊದಲ ಚಿತ್ರದ ಪುಟ್ಟ ಪಾತ್ರಕ್ಕೆ ಸೈ ಎಂದು ನಟಿಸಿದ್ದಾರೆ.
‘ಫೈರ್ ಫ್ಲೈ’ ಚಿತ್ರದಲ್ಲಿ ವಂಶಿ ಅವರು ಹೀರೋ ಕಂ ಡೈರೆಕ್ಟರ್. ನಿವೇದಿತಾ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಪೂರ್ಣ ಪ್ರಮಾಣದ ಹೀರೋ ಆಗಿ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಶುರು ಮಾಡಿದ್ದಾರೆ. ‘ಶ್ರೀ ಮುತ್ತು ಸಿನಿ ಸರ್ವೀಸಸ್’ ಸಂಸ್ಥೆಯು ನಿವೇದಿತಾ ಅವರ ಕನಸಿನ ಕೂಸು.



