ಡಾ.ಮಂಜುನಾಥ್, ಇತ್ತೀಚೆಗೆ ರಾಜಕೀಯಕ್ಕೆ ಬಂದಿದ್ದರೂ.. ಅವರ ಸಾಧನೆ, ಜನ ಅವರ ಮೇಲೆ ತೋರಿಸುವ ಅಭಿಮಾನ ರಾಜಕೀಯವನ್ನೂ ಮೀರಿದ್ದು. ಮಂಜುನಾಥ್ ಅವರಿಂದಾಗಿ ಜೀವ ಉಳಿಸಿಕೊಂಡಿರುವ ಲಕ್ಷಾಂತರ ಹೃದಯಗಳು ಕರ್ನಾಟಕದಲ್ಲಿವೆ. ಅಂತಹವರಲ್ಲಿ ಅದೆಷ್ಟು ಜನ ಹರಕೆ ಹೊತ್ತುಕೊಂಡಿದ್ಧಾರೋ.. ಏನೋ. ಆದರೆ.. ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ಸುಧಾಮೂರ್ತಿ ಕೂಡಾ ಮಂಜುನಾಥ್ ಅವರ ಗೆಲುವಿಗೆ ಹೊತ್ತುಕೊಂಡಿದ್ಧಾರೆಂದರೆ.. ಅದು ವಿಶೇಷ ಎನಿಸದೇ ಇರದು.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಗೆಲುವಿಗೆ ರಾಜ್ಯಸಭಾ ಸದಸ್ಯೆ, ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರು ಹರಿಕೆ ಹೊತ್ತುಕೊಂಡಿದ್ದಾರೆ. ಇದನ್ನು ಸ್ವತಃ ಡಾ ಮಂಜುನಾಥ್ ಅವರು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸುಧಾಮೂರ್ತಿ ರಾಯರ ಮಠದ ಭಕ್ತೆ. ಹೀಗಾಗಿ ಮಂಜುನಾಥ್ ಅವರು ಗೆದ್ದರೆ.. ಮಂತ್ರಾಲಯದ ಒಂದು ಪುಣ್ಯಸ್ಥಳದಿಂದ 6 ಕಿ.ಮೀ. ಪಾದಯಾತ್ರೆ ಮಾಡಿ ರಾಯರ ದರ್ಶನ ಪಡೆಯಲಿದ್ಧಾರಂತೆ ಸುಧಾಮೂರ್ತಿ. ಡಾ.ಮಂಜುನಾಥ್ ಗೆದ್ದರೆ, ರಾಯರ ಮಠಕ್ಕೆ ಕಾಲ್ನಡಿಗೆ ಹೋಗುವ ಹರಕೆ ಹೊತ್ತಿದ್ಧಾರೆ ಸುಧಾಮೂರ್ತಿ.
ಚುನಾವಣೆ ಮುಗಿದ ಬಳಿಕ ಡಾ ಮಂಜುನಾಥ್ ಅವರು ಇನ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಅವರ ನಿವಾಸಕ್ಕೆ ಭೇಟಿ ನೀಡಿದ ವೇಳೆ ಸುಧಾಮೂರ್ತಿಯವರೇ ಮಂಜುನಾಥ್ ಅವರಿಗೆ ʻʻನೀವು ಗೆದ್ದರೆ ಮಂತ್ರಾಲಯದಿಂದ ಸುಮಾರು ಆರು ಕಿಲೋ ಮೀಟರ್ ಇರುವ ಒಂದು ಸ್ಥಳದಿಂದ ಕಾಲ್ನಡಿಗೆ ಮೂಲಕ ಹೋಗಿ ರಾಯರ ಪಾದ ಪೂಜೆ ಮಾಡುತ್ತೇನೆʼʼ ಎಂದು ಹೇಳಿದರಂತೆ. ಇದನ್ನು ಸ್ವತಃ ಡಾ.ಸಿ.ಎನ್.ಮಂಜುನಾಥ್ ಹೇಳಿದಾಗ ಕೇಳಿದವರು ಮೂಕವಿಸ್ಮಿತರಾದರು.
ರಾಜ್ಯಸಭಾ ಸದಸ್ಯೆಯಾಗಿ, ಅದರಲ್ಲೂ ಇನ್ಫೋಸಿಸ್ ನಂತಹ ಬಹುರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿ ಓರ್ವ ಅಭ್ಯರ್ಥಿಯ ಗೆಲುವಿಗೆ ಹರಕೆ ಹೊತ್ತುಕೊಂಡಿದ್ದಾರೆ ಎನ್ನುವುದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಇನ್ನು ಡಾ. ಮಂಜುನಾಥ್ ಅವರ ಪತ್ನಿ ಅನಸೂಯ ಅವರು ಸಹ ತಮ್ಮ ಮನೆ ದೇವರಲ್ಲಿ ಪತಿಯ ಗೆಲುವಿಗೆ ಹರಕೆ ಹೊತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.
ಡಾ.ಸಿ.ಎನ್.ಮಂಜುನಾಥ್ ಅವರ ಗೆಲುವು ಅಷ್ಟೇನೂ ಸುಲಭವಿಲ್ಲ. ಈ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡಿರುವುದು ಡಿ.ಕೆ.ಸುರೇಶ್ ವಿರುದ್ಧ. ರಾಜ್ಯದಲ್ಲಿ 25+1 ಸ್ಥಾನ ಗೆದ್ದಾಗ, ಅಂತಹ ಪ್ರಚಂಡ ಅಲೆ ಇದ್ಧಾಗಲೂ ಡಿ.ಕೆ.ಸುರೇಶ್ ಸೋತಿರಲಿಲ್ಲ. ರಾಜ್ಯದಲ್ಲಿ ಕಳೆದ ಬಾರಿ ಗೆದ್ದ ಏಕೈಕ ಸಂಸದ ಡಿ.ಕೆ.ಸುರೇಶ್ ಆಗಿದ್ದರು. ಈಗ ಅವರ ಅಣ್ಣ ಡಿಕೆ ಶಿವಕುಮಾರ್, ರಾಜ್ಯದ ಉಪಮುಖ್ಯಮಂತ್ರಿ. ಕೆಪಿಸಿಸಿ ಅಧ್ಯಕ್ಷ.
ಹೀಗಿರುವಾಗ ಡಿಕೆ ಸುರೇಶ್ ಎದುರು ಗೆಲ್ಲುವುದು ಅಷ್ಟು ಸುಲಭವಂತೂ ಆಗಿರಲಿಕ್ಕಿಲ್ಲ. ಆದರೆ.. ಜನಪ್ರಿಯ ಜನಾಭಿಪ್ರಾಯ ನೋಡಿದರೆ.. ಡಾ.ಸಿಎನ್ ಮಂಜುನಾಥ್ ಗೆಲ್ಲಲಿದ್ಧಾರೆ ಎಂಬ ಮಾತುಗಳಿವೆ.
ಡಾ.ಸಿಎನ್ ಮಂಜುನಾಥ್, ಬಿಜೆಪಿಯಿಂದ ಸ್ಪರ್ಧೆ ಮಾಡಿದ್ಧಾರೆ. ದೇವೇಗೌಡರ ಅಳಿಯ ಎಂಬುದಷ್ಟೇ ಅಲ್ಲ, ವೈಯಕ್ತಿಕವಾಗಿಯೂ ಮಂಜುನಾಥ್ ಉತ್ತಮ ಹೆಸರು ಹಾಗೂ ವರ್ಚಸ್ಸು ಹೊಂದಿದ್ಧಾರೆ. ಆದರೆ.. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಟಿವ್ ಇದ್ದಷ್ಟು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಆಕ್ಟಿವ್ ಇರಲಿಲ್ಲ. ಇದು ಮಂಜುನಾಥ್ ಅವರಿಗೆ ಮುಳ್ಳೂ ಆಗಬಹುದು.



