ಸುದೀಪ್ ಅವರು ಹುಬ್ಬಳ್ಳಿಯಲ್ಲಿ ಮಾರ್ಕ್ ಈವೆಂಟ್‌ನಲ್ಲಿ ʻʻನಾನು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ. ಹೊರಗೆ ಒಂದು ಪಡೆಯೇ ಯುದ್ಧಕ್ಕೆ ಸಜ್ಜಾಗುತ್ತಿದೆʼʼ ಎಂದು ಹೇಳಿದ್ದರು. ಆ ಹೇಳಿಕೆ ಅಷ್ಟಕ್ಕೇ ಸೀಮಿತವಾಗದೆ ವಿಜಯಲಕ್ಷ್ಮಿ ದರ್ಶನ್ ಅವರು ʻʻದರ್ಶನ್ ಇದ್ದಾಗ ಸದ್ದಿಲ್ಲದೇ ಇರುತ್ತಿದ್ದವರು ಈಗ ಏನೇನೋ ಮಾತನಾಡುತ್ತಿದ್ದಾರೆʼʼ ಎಂದು ಹೇಳಿಕೆ ಕೊಟ್ಟರು. ಇಬ್ಬರ ಹೇಳಿಕೆ ಇದೀಗ ಸೃಷ್ಟಿಸಿರುವ ವಾರ್ ಬೇರೆಯದೇ ಲೆವೆಲ್ಲಿಗೆ ಹೋಗಿದೆ.
ಹಾಗೆ ನೋಡಿದರೆ ಸುದೀಪ್ ಅವರು ಯುದ್ಧ ಶುರುವಾಗಿದೆ ಎಂದು ಹೇಳಿಕೆ ಕೊಟ್ಟಾಗ ಶಿವರಾಜ್ ಕುಮಾರ್, ಉಪೇಂದ್ರ ಅಭಿಮಾನಿಗಳು ಟ್ರಿಗರ್ ಆಗಬೇಕಿತ್ತು. ಏಕೆಂದರೆ ಸುದೀಪ್ ಅವರ ಮಾರ್ಕ್ ರಿಲೀಸ್ ಆಗುತ್ತಿರುವುದೇ ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ನಟಿಸಿರುವ 45 ಎದುರು. ಆದರೆ ಟ್ರಿಗರ್ ಆಗಿದ್ದು ದರ್ಶನ್ ಅಭಿಮಾನಿಗಳು. ಏಕೆಂದು ನೋಡಿದರೆ.. ಸುದೀಪ್-ದರ್ಶನ್ ನಡುವಿನ ಒಂದು ಹಳೆಯ ಇತಿಹಾಸ ಕೇಳಬೇಕಾದೀತು.
ಮೆಜೆಸ್ಟಿಕ್ ಚಿತ್ರವನ್ನು ಬಿಟ್ಟು ಕೊಟ್ಟಿದ್ದು ಸುದೀಪ್. ಅದರಿಂದಾಗಿಯೇ ದರ್ಶನ್ ಅವರಿಗೆ ಮೆಜೆಸ್ಟಿಕ್ ಸಿಕ್ಕು, ಸ್ಟಾರ್ ಆದರು. ಹಾಗಂತ ಇಲ್ಲಿ ಸುದೀಪ್ ಅವರೇನೂ ದರ್ಶನ್ ಅವರನ್ನು ಹೀರೋ ಮಾಡಲಿಲ್ಲ. ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್ ಅಂತ ಒಬ್ಬ ಹುಡುಗ ಇದ್ದಾನೆ. ಒಳ್ಳೆ ಹೈಟು, ಪರ್ಸನಾಲಿಟಿ, ನೋಡಿ ಎಂದು ಪ್ರೊಡ್ಯೂಸರಿಗೆ ಹೇಳಿದ್ದರು. ಅಷ್ಟೇ. ಮುಂದೆ ಆಗಿದ್ದು ಇತಿಹಾಸ. ಮೊದ ಮೊದಲು ಆರಾಮಾಗಿಯೇ ಇದ್ದ ದರ್ಶನ್. ಸುದೀಪ್ ಅವರ ಇದೇ ಹೇಳಿಕೆ ಮತ್ತೆ ವೈರಲ್ ಆದಾಗ ಟ್ರಿಗರ್ ಆಗಿಬಿಟ್ಟರು. ನಾವಿಬ್ಬರೂ ಒಂದೇ ಇಂಡಸ್ಟ್ರಿಯಲ್ಲಿದ್ದೇವೆಯೇ ಹೊರತು, ಫೆಂಡ್ಸ್ ಅಲ್ಲ ಎಂದುಬಿಟ್ಟರು. ಆ ಹೇಳಿಕೆ ಹಿಂದೆ ಬೇರೆಯದೇ ಕಥೆಗಳೂ ಇವೆ. ಅಂದು ಶುರುವಾದ ಸಮರ ಇಂದಿಗೂ ನಿಂತಿಲ್ಲ.
ಅದಕ್ಕೆ ಉಲ್ಟಾ ಇರುವುದು 45 ಟೀಂ ಮತ್ತು ಮಾರ್ಕ್ ಟೀಂ ಮಧ್ಯೆ ಇರುವ ಬಾಂಧವ್ಯ. ಹೀಗಾಗಿಯೇ ಶಿವಣ್ಣ, ಉಪ್ಪಿ ಫ್ಯಾನ್ಸ್ v/s ಸುದೀಪ್ ಫ್ಯಾನ್ಸ್ ಆಗಬೇಕಿದ್ದ ಅಥವಾ ಆಗಬಹುದಾಗಿದ್ದ ಸಮರ, ಸಮರವಾಗಲೇ ಇಲ್ಲ. ಸ್ನೇಹ ಸಮರವಾಗಿದೆ, ಅಷ್ಟೇ.
45 ನಿರ್ದೇಶಕ ಅರ್ಜುನ್ ಜನ್ಯ, ಸುದೀಪ್ ಅವರ ಪಾಲಿಗೆ ತಮ್ಮನಿದ್ದ ಹಾಗೆ. ಬಹಿರಂಗ ವೇದಿಕೆಯಲ್ಲಿ ಸುದೀಪ್ ಕಾಲಿಗೆ ನಮಸ್ಕಾರ ಮಾಡುವಷ್ಟು ಗೌರವ ಇಟ್ಟುಕೊಂಡಿದ್ದಾರೆ. ಸುದೀಪ್ ಅವರೂ ಅಷ್ಟೇ. ಅರ್ಜುನ್ ಜನ್ಯ ನಮ್ಮ ಹುಡುಗ ಎಂದು ಪ್ರೀತಿಸುತ್ತಾರೆ.
ಇನ್ನು ಶಿವಣ್ಣ ಮನೆಯಲ್ಲಿ ಸುದೀಪ್ ʻಚಿತ್ರರಂಗದ ಇನ್ನೊಬ್ಬ ನಟʼ ಅಲ್ಲ. ಶಿವಣ್ಣ ಅವರನ್ನು ಓಪನ್ ಆಗಿ ಕಿಚಾಯಿಸುವ, ತುಂಟಾಟದ ಡೈಲಾಗ್ ಹೊಡೆಯುವ ನಟ ಚಿತ್ರರಂಗದಲ್ಲಿದ್ದರೆ ಅದು ಸುದೀಪ್ ಮಾತ್ರ. ಶಿವಣ್ಣ ಪಾಲಿಗೂ ಅಷ್ಟೇ. ಸುದೀಪ್ ಕುಟುಂಬದ ಒಬ್ಬ ಸದಸ್ಯ.
ಇನ್ನು ಉಪೇಂದ್ರ ಅವರಿಂದಲೇ ನಾನು ಚಿತ್ರರಂಗಕ್ಕೆ ಬಂದೆ ಎನ್ನುವ ಸುದೀಪ್, ಉಪೇಂದ್ರ ಅವರನ್ನು ಗುರುವಿನಂತೆ ಗೌರವಿಸ್ತಾರೆ. ಉಪೇಂದ್ರ ಅವರಿಗೂ ಸುದೀಪ್ ಅಂದ್ರೆ ಸ್ಪೆಷಲ್ ಲವ್.
ರಾಜ್ ಬಿ ಶೆಟ್ಟಿ, ಕನ್ನಡ ಚಿತ್ರರಂಗಕ್ಕೊಂದು ಆಸ್ತಿ ಎನ್ನುವ ಸುದೀಪ್. ಹೊಸಬರನ್ನು ಪ್ರೋತ್ಸಾಹಿಸುವ ಸುದೀಪ್ ಗುಣ ಇಷ್ಟ ಪಡುವ ರಾಜ್ ಬಿ ಶೆಟ್ಟಿ..
ಅಲ್ಲಿಗೆ ನಟರು ಪರಸ್ಪರ ಚೆನ್ನಾಗಿದ್ದರೆ, ಅಭಿಮಾನಿಗಳೂ ಪರಸ್ಪರ ಚೆನ್ನಾಗಿರುತ್ತಾರೆ ಎಂದು ಅರ್ಥ ತಾನೇ. ಸೋಲು-ಗೆಲುವಿಗಾಗಿ, ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳುವ, ರಸ್ತೆ ರಸ್ತೆಯಲ್ಲಿ ಬೈದಾಡಿಕೊಳ್ಳುವ ರಾಜಕಾರಣಿಗಳೇ ಎಲೆಕ್ಷನ್ ಮುಗಿಯುತ್ತಿದ್ದಂತೆ ಸ್ನೇಹಿತರಂತೆ ಇರುತ್ತಾರೆ. ಅವರಿಗೆ ಹೋಲಿಸಿದರೆ ಕಲಾವಿದರು ಕಳೆದುಕೊಳ್ಳುವಂಥದ್ದು ಏನೂ ಇರಲ್ಲ. ಆದರೆ.. ಪ್ರೀತಿ ಬಾಂಧವ್ಯ ಇದ್ದರೆ ಗಳಿಸಿಕೊಳ್ಳುವಂಥದ್ದು ಖಂಡಿತಾ ಇರುತ್ತದೆ.
ಹೌದು.. ಈ ಪರಸ್ಪರ ಗೌರವಿಸುವ ಬಾಂಧವ್ಯವೇ ನಟರ ಅಭಿಮಾನಿಗಳ ನಡುವೆ ಕಿರಿಕ್ ಆಗದಿರುವುದಕ್ಕೆ ಕಾರಣ. ಇಂತಹ ಒಂದು ಪ್ರೀತಿ, ಸ್ನೇಹ, ಬಾಂಧವ್ಯ ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ಯಶ್ ಮೊದಲಾದ ಕೆಲವು ನಟರ ನಡುವೆಯೂ ಇದೆ.
ಶಿವಣ್ಣ, ಉಪೇಂದ್ರ, ಅರ್ಜುನ್ ಜನ್ಯ.. ಮಾರ್ಕ್ ಚಿತ್ರಕ್ಕೆ ಶುಭ ಕೋರಿದರೆ, ಕಿಚ್ಚ ಸುದೀಪ್ 45 ತಂಡಕ್ಕೆ ವಿಷಸ್ ಹೇಳಿದ್ದಾರೆ.



