ಒಂದು ಸಿನಿಮಾ ಇಷ್ಟವಾಗುವುದಕ್ಕೆ ಹಲವು ಕಾರಣಗಳಿರುತ್ತವೆ. ಮುಸ್ಸಂಜೆ ಮಾತು ಸಿನಿಮಾ ಸುದೀಪ್ ಪಾಲಿಗೆ ಹಾಗೆ. ಸುದೀಪ್ ಮತ್ತು ರಮ್ಯಾ ನಟಿಸಿದ್ದ ಸಿನಿಮಾದ್ದು ಬೇರೆಯದೇ ಫ್ಲೇವರ್.
ಸುದೀಪ್, ರಮ್ಯಾ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾದಲ್ಲಿ ಅನು ಪ್ರಭಾಕರ್ ರಮ್ಯಾ ಅವರ ಅಕ್ಕನ ಪಾತ್ರದಲ್ಲಿ ನಟಿಸಿದ್ದರು. ಗಂಗಾವತಿ ಪ್ರಾಣೇಶ್ ನಟಿಸಿರುವ ಅಪರೂಪದ ಸಿನಿಮಾ ಮುಸ್ಸಂಜೆ ಮಾತು. ಈಗಲೂ ಆ ಚಿತ್ರವನ್ನು ನೆನಪಿಸಿಕೊಂಡು ಆಕ್ಟಿಂಗ್ ಸಖತ್ ಕಷ್ಟ ಎಂದು ಹೇಳ್ತಾನೇ ಇರ್ತಾರೆ ಗಂಗಾವತಿ ಪ್ರಾಣೇಶ್. ಸುದೀಪ್ ಸಖತ್ ಕ್ಯೂಟ್ ಲವರ್ ಬಾಯ್ ಆಗಿ, ರೇಡಿಯೋ ಜಾಕಿ ಪಾತ್ರದಲ್ಲಿ ನಟಿಸಿದ್ದರು. ಬದುಕಿನ ವಿಶ್ವಾಸ ಕಳೆದುಕೊಂಡಿದ್ದವರಿಗೆ ವಿಶ್ವಾಸ ತುಂಬುವ ಆರ್‌ಜೆ ಪಾತ್ರ ಅದು. ಅಂತಹ ಆರ್‌ಜೆ, ಪ್ರೀತಿಗೆ ಬಿದ್ದು, ಪ್ರೀತಿ ಸೋಲುತ್ತದೆ ಎಂದಾದಾಗ ತಾನೇ ವಿಶ್ವಾಸ ಕಳೆದುಕೊಳ್ಳುತ್ತಾನೆ. ಆಗ ಆತನ ಅಭಿಮಾನಿಗಳೇ ಆತನಿಗೆ ವಿಶ್ವಾಸ ತುಂಬುತ್ತಾರೆ. ಕೊನೆಗೆ ಪ್ರೀತಿ ಗೆಲ್ಲುತ್ತದೆ. ಇದು ಕಥೆ.
ʻʻಮೊನ್ನೆ ಮೊನ್ನೆ ಸಿನಿಮಾ ಮಾಡಿದ ಹಾಗೆ ಇದೆ. ನಿಮ್ಮೆಲ್ಲರಿಗೂ ಧನ್ಯವಾದ ಹೇಳುತ್ತೇನೆ. ಸಿನಿಮಾನ ಇನ್ನೂ ಕೂಡ ನೆನಪಿನಲ್ಲಿ ಇಟ್ಟುಕೊಂಡಿರುವುದಕ್ಕೆ. ಹಾಗೆಯೇ ʻಏನಾಗಲಿ ಮುಂದೆ ಸಾಗು ನೀʼ ಹಾಡನ್ನು ಇನ್ನೂ ಕೂಡ ಜೀವಂತವಾಗಿಟ್ಟಿರುವುದಕ್ಕೆ. ಆ ಹಾಡನ್ನು ಕೊಟ್ಟ ಮ್ಯೂಸಿಕ್ ಡೈರೆಕ್ಟರ್, ಸಿನಿಮಾ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ. ಅದ್ಭುತ ಹಾಡು ಅನ್ನೋದಕ್ಕೆ ಕಾರಣವೇನು ಅಂತಂದರೆ ನನ್ನ ತಾಯಿಗೆ ಅದು ಬಹಳ ನೆಚ್ಚಿನ ಗೀತೆ ಆಗಿತ್ತು. ಸಿನಿಮಾ ರಿಲೀಸ್ ಆದ ದಿನದಿಂದ ಹಿಡಿದು ಅವರು ಜೀವಂತವಾಗಿದ್ದ ತನಕ ಅದೇ ಹಾಡು ಅವರ ಕಾಲರ್ ಟ್ಯೂನ್ ಆಗಿತ್ತು” ಎಂದು ಎಕ್ಸ್ ಖಾತೆಯಲ್ಲಿ ಕಿಚ್ಚ ಸುದೀಪ್ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಸುದೀಪ್ ಇಷ್ಟೆಲ್ಲ ಹೇಳಿರೋದು ಮುಸ್ಸಂಜೆ ಮಾತು ಚಿತ್ರದ ಬಗ್ಗೆ. ಇದು 17 ವರ್ಷದ ಕಥೆ. ಸುಮಾರು 17 ವರ್ಷಗಳ ಹಿಂದೆ ಬಂದಿದ್ದ ಮುಸ್ಸಂಜೆ ಮಾತು ಸಿನಿಮಾವನ್ನು ಸುದೀಪ್ ಇವತ್ತಿಗೂ ಮರೆತಿಲ್ಲ. ಮರೆಯುವುದೂ ಇಲ್ಲ. ಏಕೆಂದರೆ ಆ ಸಿನಿಮಾ ಸುದೀಪ್ ಅವರ ತಾಯಿಯ ಇಷ್ಟದ ಸಿನಿಮಾ. ಸುದೀಪ್ ತಾಯಿ ಇಷ್ಟಪಟ್ಟಿದ್ದ ಫೇವರಿಟ್ ಹಾಡು ಇರುವುದೂ ಕೂಡಾ ಆ ಸಿನಿಮಾದಲ್ಲೇ. ಹೀಗಾಗಿಯೇ ಸುದೀಪ್ ಮತ್ತೊಮ್ಮೆ ಆ ಸಿನಿಮಾ ನೆನಪಿಸಿಕೊಂಡಿದ್ದಾರೆ.
ಆ ಸಿನಿಮಾ ಮತ್ತು ಹಾಡನ್ನು ಸುದೀಪ್ ನೆನಪಿಸಿಕೊಂಡಿದ್ದಾರೆ. ಅಂದಹಾಗೆ ತಾಯಿಯ ಆ ಫೋನ್, ಈಗ ಅವರ ತಂದೆಯ ಬಳಿ ಇದೆಯಂತೆ. ಈಗಲೂ ಅದೇ ರಿಂಗ್ ಟೋನ್ ಇದೆಯಂತೆ.
ಕದ್ದಳು ಮನಸ್ಸನ್ನಾ.. ಅವಳಂತಾ ಚೆಲುವೇನಾ.. , ನಿನ್ನ ನೋಡಲೆಂತೋ.. , ಮುಸ್ಸಂಜೆ ಮಾತಲಿ.. ಮೊದಲಾದ ಎಲ್ಲ ಹಾಡುಗಳೂ ಸೂಪರ್ ಹಿಟ್. ಆದರೆ.. ಅದೆಲ್ಲದಕ್ಕೂ ಕಳಸದಂತೆ ಇರುವುದು ಏನಾಗಲಿ.. ಮುಂದೆ ಸಾಗು ನೀ.. ಬಯಸಿದ್ದೆಲ್ಲ ಸಿಗದು ಬಾಳಲಿ.. ಹಾಡು. ಸುದೀಪ್ ಅವರ ತಾಯಿಗೆ ಇಷ್ಟವಾಗಿದ್ದದ್ದೂ ಅದೇ. ಆ ಹಾಡಿನಲ್ಲೇ ಒಂದು ಭರವಸೆ, ಧೈರ್ಯ ತುಂಬುವ ಸಾಹಿತ್ಯ ಇದೆ ಎನ್ನುವ ಕಾರಣಕ್ಕೆ ಇಷ್ಟವಾಗಿದ್ದಂತೆ.
ಈ ಹಾಡಿಗೆ ಸಾಹಿತ್ಯ ನೀಡಿದ್ದವರು ವಿ.ಶ್ರೀಧರ್. ಹಾಡಿದ್ದವರು ಸೋನು ನಿಗಂ. ಸಂಗೀತ ನೀಡಿದ್ದವರು ಕೂಡಾ ವಿ.ಶ್ರೀಧರ್ ಅವರೇ. ಸಂಭ್ರಮ ಶ್ರೀಧರ್ ಎಂದೇ ಫೇಮಸ್. ಮುಸ್ಸಂಜೆ ಮಾತು ಅವರ ಮೊದಲ ಸಿನಿಮಾ. 2008, ಮೇ 16ರಂದು ರಿಲೀ ಆದ ಈ ಸಿನಿಮಾ ಸುದೀಪ್ ಅವರ ಅಚ್ಚುಮೆಚ್ಚಿನ ಸಿನಿಮಾ. ಆ ಸಿನಿಮಾ ಅವರ ಅಚ್ಚುಮೆಚ್ಚಿನದಾಗಿರುವುದಕ್ಕೆ ಕಾರಣ, ಸುದೀಪ್ ಅವರ ತಾಯಿ ಇಷ್ಟಪಟ್ಟಿದ್ದ ಸಿನಿಮಾ. ಆಗಿನ ಕಾಲಕ್ಕೆ 100 ಡೇಸ್ ಪ್ರದರ್ಶನ ಕಂಡಿದ್ದ ಸಿನಿಮಾ, ಬೆಂಗಾಲಿಗೂ ರೀಮೇಕ್ ಆಗಿತ್ತು. ಬೆಂಗಾಲಿ ಭಾಷೆಯಲ್ಲಿ ಬಂದಿದ್ದ ಸಿನಿಮಾದಲ್ಲಿ, ಕನ್ನಡದ ಹಾಡುಗಳ ಸಂಗೀತ, ಸಾಹಿತ್ಯವನ್ನು ಬೆಂಗಾಲಿಯಲ್ಲಿ ಯಥಾವತ್ ಆಗಿ ಬಳಸಿಕೊಳ್ಳಲಾಗಿತ್ತು.