ಕಿಚ್ಚ ಸುದೀಪ್ ಅದ್ಭುತ ಮಾತುಗಾರ. ನಗುತ್ತಲೇ ನಗಿಸುತ್ತಲೇ ಹೇಳಬೇಕಾದ್ದನ್ನು ಹೇಳುವ ಕಲೆ ಸುದೀಪ್ ಅವರಿಗೆ ಸಿದ್ದಿಸಿದೆ. ಅದರೆ.. ಕೆಲವೊಂದು ವಿಷಯದಲ್ಲಿ ಸುದೀಪ್ ಅವರಷ್ಟು ನಿಗೂಢ ವ್ಯಕ್ತಿ ಹಾಗೂ ವ್ಯಕ್ತಿತ್ವ ಇಲ್ಲವೇ ಇಲ್ಲ ಎನ್ನಬೇಕು.
ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರಾ..? ಬರಲ್ವಾ..? ಈ ಮಾತು ಹಲವು ಬಾರಿ ಕೇಳಿ ಬಂದಿದೆ. ಅದಕ್ಕೆ ಸುದೀಪ್ ಕೊಟ್ಟಿರುವುದು ನಿಗೂಢ ಉತ್ತರ. ರಾಜ್ಯದಲ್ಲಿ ಅಸೆಂಬ್ಲಿ ಮತ್ತು ಲೋಕಸಭೆಗೆ ಎಲೆಕ್ಷನ್ ನಡೆದಾಗಲೆಲ್ಲ ಈ ಮಾತು ಕೇಳಿ ಬರುತ್ತಲೇ ಇರುತ್ತೆ. ಇದೀಗ ಮತ್ತೊಮ್ಮೆ ಸುದೀಪ್ ಅವರಿಗೆ ರಾಜಕೀಯಕ್ಕೆ ಬರ್ತೀರಾ ಅನ್ನೋ ಪ್ರಶ್ನೆ ಎದುರಾಗಿದೆ. ಕಳೆದ ಬಾರಿ ಯಾರಿಗಾಗಿ, ಯಾವ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿದ್ದೆ ಎಂಬುದನ್ನು ನಾನು ಸ್ಪಷ್ಟಪಡಿಸಿದ್ದೆ. ಈ ಬಾರಿ ಇನ್ನೂ ಸಹ ಯಾರೂ ನನ್ನನ್ನು ಪ್ರಚಾರಕ್ಕಾಗಿ ಕೇಳಿಲ್ಲ. ಕೇಳಿದಾಗ ಆ ಬಗ್ಗೆ ನಿರ್ಣಯ ಮಾಡುತ್ತೇನೆ ಎಂದಿರುವ ಸುದೀಪ್ ಅಭಿಮಾನಿಗಳ ಮಾತನ್ನೂ ಹೇಳಿದ್ಧಾರೆ. ಈಗಾಗಲೇ ಫ್ಯಾನ್ಸ್ ಸಿನಿಮಾ ಬಿಟ್ಟು ಕ್ರಿಕೆಟ್ ಆಡ್ತಾ ಕಾಲ ಕಳೀತಿದ್ದಾರೆ ಅಂತಾ ಗಲಾಟೆ ಮಾಡ್ತಿದ್ದಾರೆ. ಥಹಾ ಹೊತ್ತಿನಲ್ಲಿ. ಶೂಟಿಂಗ್ ಬಿಟ್ಟು ರಾಜಕೀಯ ಪ್ರಚಾರಕ್ಕೆ ಹೋದರೆ ಇನ್ನಷ್ಟು ಗಲಾಟೆಗಳಾಗುತ್ತವೆಯೋ ಏನೋ ಎಂದು ಡೈಲಾಗ್ ಹೊಡೆದು ನಕ್ಕಿದ್ದಾರೆ. ಕೇಳಿದವರು ಸಿನಿಮಾದಂತೆಯೇ ನಕ್ಕರೆ ಒಂದು ಅರ್ಥ.. ಗಹಗಹಿಸಿ ನಕ್ಕರೆ ಬೇರೆ ಅರ್ಥ ಎಂದುಕೊಳ್ಳಬೇಕು.
ಆದರೆ.. ಪತ್ರಕರ್ತರು ಬಿಟ್ಟಿಲ್ಲ. ರಾಜಕೀಯಕ್ಕೆ ಬರ್ತೀರಾ.. ಅಂತಾ ಪ್ರಶ್ನೆ ಕೇಳ್ತಾ ಕೆದಕಿದಾಗ.. ನೋಡಿ ಈಗ ನಾನು ಹೋಟೆಲ್ ಉದ್ಘಾಟನೆಗೆ ಬರಲ್ಲ ಅಂದುಕೊಂಡಿದ್ದರು ಆದರೆ ಬಂದಿದ್ದೇನೆ. ಹಾಗೆಯೇ ರಾಜಕೀಯದ್ದು ಏನಾಗುತ್ತದೆಯೋ ನೋಡೋಣ. ಎಲ್ಲರೂ ಬರೊಲ್ಲ ಅಂದುಕೊಂಡಿದ್ದಾರೆ, ಬಂದಾಗ ಗೊತ್ತಾಗುತ್ತದೆ. ಒಂದೊಮ್ಮೆ ಬರಲಿಲ್ಲ ಎಂದರೆ ಬರಲಿಲ್ಲ ಅಷ್ಟೆ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
ಈಗ ಅಭಿಮಾನಿಗಳು ಹಾಗೂ ರಾಜಕೀಯ ತಜ್ಞರು ತಲೆಗೆ ಹುಳ ಬಿಟ್ಟುಕೊಂಡಿದ್ಧಾರೆ. ಏಕೆಂದರೆ.. ಬಿಜೆಪಿ ತನ್ನ ಪಾಲಿನ ಎಲ್ಲ 25 ಕ್ಷೇತ್ರಗಳ ಪೈಕಿ, 24 ಕ್ಷೇತ್ರಗಳಿಗೆ ಕ್ಯಾಂಡಿಡೇಟ್ ಅನೌನ್ಸ್ ಮಾಡಿದೆ. ಚಿತ್ರದುರ್ಗ ಕ್ಷೇತ್ರವನ್ನು ಮಾತ್ರ ಬಾಕಿ ಉಳಿಸಿಕೊಂಡಿದೆ. ಹಾಗಂತ ಚಿತ್ರದುರ್ಗಕ್ಕೆ ಸುದೀಪ್ ಅಭ್ಯರ್ಥಿಯಾಗಬಹುದು ಎಂದಲ್ಲ.. ಇದು ಕೇವಲ ಊಹೆ ಮಾತ್ರ.
ಚಿತ್ರದುರ್ಗ ಕ್ಷೇತ್ರಕ್ಕೆ ನಾರಾಯಣ ಸ್ವಾಮಿ ಸಂಸದರಾಗಿದ್ಧಾರೆ. ಈ ಬಾರಿ ನಿಲ್ಲುವುದಕ್ಕೆ ಇಷ್ಟವಿಲ್ಲ ಎಂದು ಹೇಳಿದ್ದ ನಾರಾಯಣ ಸ್ವಾಮಿ, ಎಲೆಕ್ಷನ್ ಘೋಷಣೆಯಾದ ಮೇಲೆ ಆಸಕ್ತಿ ತೋರಿಸಿದ್ದಾರೆ. ಮತ್ತೊಮ್ಮೆ ಮಾದಾರ ಚೆನ್ನಯ್ಯ ಸ್ವಾಮೀಜಿ ಹೆಸರೂ ಕೂಡಾ ಕೇಳಿ ಬರುತ್ತಿದೆ. ಆದರೆ ಸುದೀಪ್ ನಿಲ್ಲುವ ಸಾಧ್ಯತೆ ಇಲ್ಲ. ಏಕೆಂದರೆ ಚಿತ್ರದುರ್ಗ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ. ಒಂದಂತೂ ಪಕ್ಕಾ. ಸುದೀಪ್ ರಾಜಕೀಯಕ್ಕೆ ಬರಬಹುದು, ಆದರೆ.. ಈ ಎಲೆಕ್ಷನ್ನಿನಲ್ಲಿ ಅಂತೂ ಖಂಡಿತಾ ಅಲ್ಲ.
ಆದರೆ.. ಸುದೀಪ್ ಮತ್ತೆ ಪ್ರಚಾರಕ್ಕೆ ಬರ್ತಾರಾ..? ಚುನಾವಣೆ ಇನ್ನೂ ಸುದೀರ್ಘ ಕಾಲ ನಡೆಯುತ್ತದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಈ ಬಾರಿ ಹಾವೇರಿ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ.. ಬೊಮ್ಮಾಯಿಯವರ ಪರವಾಗಿ ಸುದೀಪ್ ಪ್ರಚಾರ ಮಾಡಿದರೂ ಮಾಡಬಹುದು.



