ಸುದೀಪ್ (Kichcha Sudeep) ಮತ್ತು ಎನ್.ಕುಮಾರ್ ಸಂಘರ್ಷ ಇದೀಗ ಫಿಲ್ಮ್ ಚೇಂಬರ್ ಮೆಟ್ಟಿಲನ್ನೂ ದಾಟಿ ರವಿಚಂದ್ರನ್ (Ravichandran) ಮನೆ ಬಾಗಿಲು ತಲುಪಿದೆ. ಈ ನಡುವೆ ಕುಮಾರ್ ಬೆನ್ನಿಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಯೋಗಿ ದ್ವಾರಕೀಶ್ ಕೂಡಾ ಸೇರಿಕೊಂಡಿದ್ದಾರೆ. ವಿವಾದ ಇತ್ಯರ್ಥ ಪಡಿಸುವ ಕುರಿತಂತೆ ಕುಮಾರ್ ಅವರೇನೋ ರವಿಚಂದ್ರನ್ ಮನೆಗೆ ಹೋದರು. ಆದರೆ ವಿವಾದ ಇತ್ಯರ್ಥ ಪಡಿಸಲು ತನ್ನಿಂದ ಸಾಧ್ಯವಿಲ್ಲ ಎಂಬ ಸಂದೇಶ ಕೊಟ್ಟಿದ್ದಾರೆ ರವಿಚಂದ್ರನ್.
ರವಿಚಂದ್ರನ್ (Ravichandran) ಸಮಸ್ಯೆ ಎಂದರೆ, ಸುದೀಪ್. ಸುದೀಪ್ (Kichcha Sudeep) ಅವರನ್ನು ತಮ್ಮ ದೊಡ್ಡ ಮಗ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ ರವಿಚಂದ್ರನ್. ಹಾಗೆಯೇ ನಡೆಸಿಕೊಳ್ಳುತ್ತಾರೆ ಕೂಡಾ. ಹೀಗಿರುವಾಗ ಮಗನ ವಿರುದ್ಧವೇ ನಿರ್ಮಾಪಕರೊಬ್ಬರು ದೂರು ತಂದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ನೀವು ನನ್ನ ಬಳಿ ಬರಬೇಡಿ ಎನ್ನುವುದಕ್ಕೂ ಆಗುವುದಿಲ್ಲ. ಹಿರಿಯರೇ ಸಮಸ್ಯೆ ಕೇಳದಿದ್ದರೆ ಚಿತ್ರರಂಗದವರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಎದ್ದೇಳುತ್ತದೆ.
ಸುದೀಪ್ (Kichcha Sudeep) ಮತ್ತು ಕುಮಾರ್ 20 ವರ್ಷದಿಂದ ಪರಿಚಯ ಇಟ್ಟುಕೊಂಡವರು. ಅವರಿಬ್ಬರದ್ದು ಒಳ್ಳೆ ಗೆಳೆತನ, ಸಡನ್ ಆಗಿ ಬೆರಳು ತೋರಿಸಿದ್ದರಿಂದ ಸುದೀಪ್ ಗೆ ಬೇಜಾರಾಗಿದೆ, ಎರಡು ಕಡೆ ಸಹನೆ ಮೀರಿದೆ. ಹೀಗಾಗಿ ಈ ರೀತಿ ಆಗಿದೆ, ಧರಣಿ ಕುಳಿತವರು ಎದ್ದೇಳಬೇಕು ಆಮೇಲೆ ಏನು ಮಾಡಬೇಕು ಎಂದು ನಾನು ನಿರ್ಧಾರ ಮಾಡ್ತೀನಿ, ಕುಮಾರ್ ಅವರದ್ದು ತಪ್ಪಿದ್ದರೆ ಕರೆಸಿ ಮಾತಾಡ್ತೀನಿ, ಸುದೀಪ್ ಅವರದ್ದು ತಪ್ಪಾಗಿದ್ರೆ ನಾನೇ ಹೋಗಿ ಸುದೀಪ್ ಬಳಿ ಮಾತಾಡ್ತೀನಿ ಎಂದಿದ್ದಾರೆ (Ravichandran) ರವಿಚಂದ್ರನ್.
ಇಷ್ಟಕ್ಕೇ ಸುಮ್ಮನಾಗಿಲ್ಲ. ತಮ್ಮ ಸಂಕಷ್ಟವನ್ನೂ ಹೇಳಿದ್ದಾರೆ. ಏಕೆಂದರೆ ವಿವಾದ ನ್ಯಾಯಾಲಯದ ಮೆಟ್ಟಿಲು ತಲುಪಿದೆ. ಸಾಮಾನ್ಯವಾಗಿ ಮೊದಲೆಲ್ಲ ಹೀಗೆ ಇರಲಿಲ್ಲ. ಸಮಸ್ಯೆ ಯಾವುದೇ ಇದ್ದರೂ ಅದನ್ನು ಡಾ.ರಾಜ್ ಮನೆಯಲ್ಲಿ ಇತ್ಯರ್ಥ ಮಾಡುತ್ತಿದ್ದರು. ರಾಜ್, ಪಾರ್ವತಮ್ಮನವರ ಮಾತು ಅಂತಿಮವಾಗಿರುತ್ತಿತ್ತು. ನಂತರ ಆ ಸ್ಥಾನವನ್ನು ತುಂಬಿದ್ದು ಅಂಬರೀಷ್. ಅಂಬರೀಷ್ ನಿಧನರಾದ ಮೇಲೆ ಆ ಹಿರಿಯನ, ಯಜಮಾನನ ಸ್ಥಾನ ಹಾಗೆಯೇ ಖಾಲಿ ಇದೆ. ಚಿತ್ರರಂಗದ ಹಿರಿಯರಾಗಿದ್ದರೂ, ದೊಡ್ಡ ನಿರ್ಮಾಪಕರೇ ಆಗಿದ್ದರೂ.. ರಾಜ್ ಅವರಿಗೆ ರವಿಚಂದ್ರನ್ ಕುಟುಂಬವೂ ಯಜಮಾನನ ಸ್ಥಾನ ಕೊಟ್ಟಿತ್ತು. ಆದರೆ ಈಗ ಅದೇ ಸಮಸ್ಯೆ..
ಶಿವಣ್ಣನೇ ಲೀಡರ್, ನಮಗೆಲ್ಲ ಮೊದಲು ರಾಜ್ಕುಮಾರ್ (Dr. Raj Kumar) ಕುಟುಂಬವೇ ಮೊದಲು. ರಾಜ್ಕುಮಾರ್ ಮನೆ ನಮಗೆ ಹೆಡ್ ಆಫೀಸ್ ಇದ್ದ ಹಾಗೆ. ಅವರು ಎನ್ ಹೇಳಿದರೆ ಅದೇ ಅಂತಿಮ, ಶಿವಣ್ಣ (Dr.Shiva RajKumar) ಈ ವಿಷಯಕ್ಕೆ ಬಂದರೆ ಅರ್ಧ ಸಮಸ್ಯೆ ಕ್ಲಿಯರ್ ಆಗುತ್ತೆ ಎಂದಿರುವ ರವಿಚಂದ್ರನ್, ಸುದೀಪ್ ತಮ್ಮ ಮಗನಿದ್ದಂತೆ. ನನ್ನ ಮಗನನ್ನ ಬಿಟ್ಟು ಕೋಡೋದಿಲ್ಲ. ಹೀಗಾಗಿ ಮಾತನಾಡುವುದು ಕಷ್ಟ. ಕುಮಾರ್ ಕೂಡಾ ನನಗೆ ಮೊದಲಿನಿಂದಲೂ ಗೊತ್ತು ಎಂದಿದ್ದಾರೆ.
ವಿವಾದ ಈಗ ಮತ್ತೆ ದೊಡ್ಮನೆಯ ಕದ ತಟ್ಟುತ್ತಿದೆ. ರವಿಚಂದ್ರನ್ ಅವರಂತೆಯೇ ಶಿವಣ್ಣ ಕೂಡಾ ಸೀನಿಯರ್. ಆದರೆ ರವಿಚಂದ್ರನ್ (Dr. Raj Kumar) ಅವರಿಗೆ `ಸುದೀಪ್ ನನ್ನ ಮಗನಿದ್ದಂತೆ’ ಎನ್ನುವುದು ಎಷ್ಟು ಸಮಸ್ಯೆಯೋ.. ಹಾಗೆಯೇ ಶಿವಣ್ಣನಿಗೂ `ಸುದೀಪ್ ಜೊತೆಗಿನ ಸ್ನೇಹ’ವೇ ಸಮಸ್ಯೆ. ಏಕೆಂದರೆ ಶಿವಣ್ಣ ಮನೆಯಲ್ಲಿ ಸುದೀಪ್ ಒಬ್ಬ ಸದಸ್ಯನಂತೆಯೇ ಇದ್ದಾರೆ. ಸೇಮ್ ರವಿಚಂದ್ರನ್ ಅವರಿಗೆ ಎದುರಾಗಿರುವ ಸಮಸ್ಯೆಯೇ ಶಿವಣ್ಣ ಅವರಿಗೂ ಎದುರಾಗಿದೆ. ಹೀಗಾಗಿಯೇ ಮನೆಯತ್ತ ಹೊರಟಿದ್ದ ನಿರ್ಮಾಪಕರನ್ನು ರವಿಚಂದ್ರನ್ ಮನೆಗೆ ಸಾಗು ಹಾಕಿದ್ದಾರೆ ಶಿವಣ್ಣ ಎನ್ನುವುದು ಚಿತ್ರರಂಗದವರು ಹೇಳುವ ಮಾತು. ಈಗ ರವಿಚಂದ್ರನ್, ಹೊಣೆಗಾರಿಕೆಯನ್ನು ಶಿವಣ್ಣ ಅವರಿಗೇ ದಾಟಿಸಿದ್ದಾರೆ.
ಇತ್ತ ಚಾಮರಾಜನಗರ, ತಿಪಟೂರು ಸೇರಿದಂತೆ ರಾಜ್ಯದ ವಿವಿಧೆಡೆ ಸುದೀಪ್ ಅಭಿಮಾನಿಗಳು ಕುಮಾರ್ ಮತ್ತು ಸುರೇಶ್ ವಿರುದ್ಧ ದೂರು ಕೊಡುತ್ತಿದ್ದಾರೆ.
ಸಾಮಾನ್ಯವಾಗಿ ನ್ಯಾಯಾಲಯಗಳಲ್ಲಿ ಜಡ್ಜ್`ಗಳಿಗೆ ಇಂತಹ ಪ್ರಸಂಗಗಳು ಎಡತಾಕುತ್ತಲೇ ಇರುತ್ತವೆ. ಜಡ್ಜ್`ಗಳು, ತಾವು ನ್ಯಾಯಾಧೀಶರಾಗುವ ಮುನ್ನ ವಕೀಲರಾಗಿದ್ದಾಗ ಪರ ಅಥವಾ ವಿರೋಧ ಮಾಡಿದ್ದವರ ಕೇಸ್ ಬಂದರೆ, ಅದನ್ನು ಬೇರೆ ನ್ಯಾಯಾಧೀಶರಿಗೆ ವರ್ಗ ಮಾಡುತ್ತಾರೆ. ಅಷ್ಟೇ ಅಲ್ಲ, ದೂರುದಾರರು, ಯಾವುದೇ ಪ್ರಕರಣದ ಆರೋಪಿಗಳು, ಯಾವುದೇ ಪ್ರಕರಣದಲ್ಲಿ ವಕೀಲರು ತಮ್ಮ ಸಂಬಂಧಿಕರಾಗಿದ್ದರೂ ಕೇಸ್`ನಿಂದ ಹಿಂದೆಗೆಯುತ್ತಾರೆ. ಸದ್ಯಕ್ಕೆ ಅಂತಹುದ್ದೇ ಸ್ಥಿತಿ ಶಿವಣ್ಣ ಮತ್ತು ರವಿಚಂದ್ರನ್ ಅವರದ್ದು. ಇಂತಹ ಸಮಸ್ಯೆಗಳು ಪಾರ್ವತಮ್ಮ ಮತ್ತು ಡಾ.ರಾಜ್ ಹಾಗೂ ಅಂಬರೀಷ್ ಅವರಿಗೂ ಇದ್ದವು. ಅವುಗಳನ್ನು ಅವರು ಸಲೀಸಾಗಿ ದಾಟಿದ್ದರು. ಆದರೆ ಶಿವಣ್ಣ ಮತ್ತು ರವಿಚಂದ್ರನ್ ಅವರಿಗೆ ಇದನ್ನು ದಾಟುವುದು ಅಷ್ಟು ಸುಲಭವಲ್ಲ.



