ಸು ಫ್ರಂ ಸೋ. ದಾಖಲೆಗಳು ಒಂದೆರಡಲ್ಲ. ಸುಮ್ಮನೆ ಲಿಸ್ಟ್ ಮಾಡ್ತಾ ಹೋಗಿ..
ದಾಖಲೆ ನಂ.1
2025ರ ಬ್ಲಾಕ್ ಬಸ್ಟರ್ ಸಿನಿಮಾ. 120 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಚಿತ್ರ.
ದಾಖಲೆ ನಂ.2
ಚಿತ್ರದಲ್ಲಿರುವವರೆಲ್ಲ ಹೊಸಬರೇ. ನಿರ್ಮಾಪಕ ರಾಜ್ ಬಿ ಶೆಟ್ಟಿಯವರೂ ಒಂದು ಪಾತ್ರ ಮಾಡಿದ್ದಾರೆ. ಉಳಿದವರು ತೀರಾ ಹೊಸಬರಲ್ಲವಾದರೂ, ಮುಖ ನೋಡಿದರೆ ಗುರುತು ಹಿಡಿಯುವಷ್ಟು ಪರಿಚಿತ ಕಲಾವಿದರೂ ಅಲ್ಲ. ನಿರ್ದೇಶಕ ಕಂ ಆಕ್ಟರ್ ಜೆಪಿ ತುಮಿನಾಡ್ (ಅಶೋಕ್ ಪಾತ್ರಧಾರಿ), ಶನೀಲ್ ಗೌತಮ್ (ರವಿಯಣ್ಣ), ಪುಷ್ಪರಾಜ್ ಬೋಲಾರ್ (ಬಾವ),ಸಂಧ್ಯಾ ಅರಕೆರೆ (ಭಾನು), ಪ್ರಕಾಶ್ ತುಮಿನಾಡ್ (ಚಂದ್ರಾ), ದೀಪಕ್ ರಾಜ್ ಪಂಜೆ (ಸತೀಶ), ಮೈಮ್ ರಾಮ್ ದಾಸ್ (ಯದು), ಮಮತಾ ಶೆಟ್ಟಿ (ಮಾಲಾ) ಪಾತ್ರಧಾರಿಗಳ ಜೊತೆ ರಾಜ್ ಬಿ ಶೆಟ್ಟಿ (ಕರುಣಾಕರ್ ಗುರೂಜಿ) ಪಾತ್ರ ಮಾಡಿದ್ದಾರೆ. ಆದರೂ ಸೂಪರ್ ಹಿಟ್.
ದಾಖಲೆ ನಂ.3
ಸು ಫ್ರಂ ಸೋ ಚಿತ್ರ ಬಜೆಟ್ಟಿಗಿಂತ 20ಕ್ಕೂ ಹೆಚ್ಚು ಪಟ್ಟು ಕಲೆಕ್ಷನ್ ಮಾಡಿದೆ. ಚಿತ್ರದ ಬಜೆಟ್ಟು ನಾಲ್ಕೂವರೆ ಕೋಟಿ. ಮಾಡಿದ ಕಲೆಕ್ಷನ್ 120 ಕೋಟಿಗೂ.. ಹೆಚ್ಚು. ಇನ್ನೂ ಕಲೆಕ್ಷನ್ ಆಗುತ್ತಲೇ ಇದೆ.
ದಾಖಲೆ ನಂ.4
ಚಿತ್ರದ ಪರಭಾಷಾ ರೈಟ್ಸ್ ಕೂಡಾ ಮಾರಾಟವಾಗಿದೆ. ಮಲಯಾಳಂ ಹಾಗೂ ತೆಲುಗಿಗೆ ಡಬ್ ಆಗಿದೆ. ಮಲಯಾಳಂನಲ್ಲಿ ಹಿಟ್ ಆಗಿರುವ ಚಿತ್ರಕ್ಕೆ, ತೆಲುಗಿನಲ್ಲಿ ಅಷ್ಟೇನೂ ದೊಡ್ಡ ಪ್ರತಿಕ್ರಿಯೆ ಸಿಗಲಿಲ್ಲ. ತಮಿಳಿನಲ್ಲೂ ರೀಮೇಕ್ ರೈಟ್ಸ್ ಸೇಲ್ ಆಗಿದ್ದು, ದೊಡ್ಡ ಮೊತ್ತಕ್ಕೇ ಸೇಲ್ ಆಗಿದೆಯಂತೆ.
ದಾಖಲೆ ನಂ.5
ಇದೀಗ ಸ್ಯಾಟಲೈಟ್ ರೈಟ್ಸ್ ಕೂಡಾ ಮಾರಾಟವಾಗಿದೆ. ಚಿತ್ರವನ್ನು ರಿಲೀಸ್ ಮಾಡುವುದಕ್ಕೂ ಮೊದಲು ಒಂದು ಟಿವಿ ಚಾನೆಲ್ಲಿನವರಿಗೆ ಸಿನಿಮಾ ತೋರಿಸಿದ್ದರಂತೆ. ಅವರೋ.. ಎಂದಿನಂತೆ.. ರಿಲೀಸ್ ಆದ್ಮೇಲೆ ನೋಡೋಣ ಎಂದು ಹೇಳಿದ್ರಂತೆ. ಇದೀಗ.. ರಾಜ್ ಬಿ ಶೆಟ್ಟಿಯವರ ಬಳಿ ಸಿನಿಮಾ ಹಕ್ಕುಗಳಿಗಾಗಿ ಟಿವಿ ಚಾನೆಲ್ಲಿನವರೇ ಹೋಗಿ ನಿಂತಿದ್ದಾರೆ. ಚಿತ್ರವನ್ನು ಕಲರ್ಸ್ ಕನ್ನಡ ವಾಹಿನಿ ಖರೀದಿ ಮಾಡಿದೆ. ಆಮೇಲೆ ನೋಡೋಣ ಎಂದವರನ್ನು ಮತ್ತೆ ಸಂಪರ್ಕಿಸದೆ ಟಿವಿ ರೈಟ್ಸ್ ಸೇಲ್ ಮಾಡಿದ್ದಾರೆ. ಚಿತ್ರವನ್ನು ಕಲರ್ಸ್ ಹಾಗೂ ಹಾಟ್ ಸ್ಟಾರ್ ಒಟಿಟಿ ರೈಟ್ಸ್ ಐದೂವರೆ ಕೋಟಿಗೆ ಖರೀದಿಸಿದೆ. GST ಕೂಡಾ ಕಟ್ಟಿ ಖರೀದಿ ಮಾಡಿದೆಯಂತೆ.
ದಾಖಲೆ ನಂ.6
ಜುಲೈ 25ರಂದು ರಿಲೀಸ್ ಆಗಿದ್ದ ಸಿನಿಮಾ, ಇದೀಗ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ವಿಶೇಷ ಎಂದರೆ.. ಈಗಲೂ ಸಿನಿಮಾ ಹೌಸ್ ಫುಲ್.
ದಾಖಲೆ ನಂ.7
ಸ್ಟಾರ್ ಚಿತ್ರಗಳನ್ನೆಲ್ಲ ಗುಡಿಸಿ ಗುಂಡಾಂತರ ಮಾಡಿದ ಚಿತ್ರವೂ ಹೌದು. ‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆ ವೇಳೆ ತೆಲುಗಿನ ಹರಿಹರ ವೀರಮಲ್ಲು, ಕಿಂಗ್ ಡಮ್ ಮೊದಲಾದ ಸ್ಟಾರ್ ಚಿತ್ರಗಳಿದ್ದವರು. ಅದಾದ ಮೇಲೆ ತಮಿಳಿನ ‘ಕೂಲಿ’, ಹಿಂದಿಯ ‘ವಾರ್ 2’ ಸಿನಿಮಾಗಳು ಬಿಡುಗಡೆ ಆದವು. ಅದಕ್ಕೂ ಮುನ್ನ ಬಂದಿದ್ದ ‘ಸೈಯಾರ’ ಸಿನಿಮಾ ಸಹ ಚೆನ್ನಾಗಿ ಪ್ರದರ್ಶನ ಕಾಣುತ್ತಿತ್ತು. ಪವನ್ ಕಲ್ಯಾಣ್, ವಿಜಯ್ ದೇವರಕೊಂಡ, ಎನ್‌ಟಿಆರ್, ಹೃತಿಕ್ ರೋಷನ್, ನಾಗಾರ್ಜುನ.. ಅಂತಹವರ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರವೂ ಬಂತು. ಎಲ್ಲರನ್ನೂ ಮೀರಿ ಸ್ಟಾರ್ ನಟ ನಟಿಯರೇ ಇಲ್ಲದ ಸು ಫ್ರಂ ಸೋ ಭರ್ಜರಿ ಹಿಟ್ ಆಗಿದೆ.
ದಾಖಲೆ ನಂ.8
ಚಿತ್ರದಲ್ಲಿ ಹಿಟ್ ಆಗಿರುವುದು ಒಂದು ಬ್ರಿಡ್ಜ್ ಸಾಂಗ್. ಬಂದರೋ.. ಬಂದರು ಬಾವ ಬಂದರು. ಚಿತ್ರದಲ್ಲಿ ಬೇರೆ ಹಾಡುಗಳಿದ್ದರೂ.. ಹಿಟ್ ಆಗಿರುವುದು, ವೈರಲ್ ಆಗಿರುವುದು ಬ್ರಿಡ್ಜ್ ಸಾಂಗ್.
ದಾಖಲೆ ನಂ.9
ದಿಗ್ಗಜರು ಮೆಚ್ಚಿಕೊಂಡ ಸಿನಿಮಾ. ಚಿತ್ರವನ್ನು ಕನ್ನಡದಲ್ಲಿ ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಮೊದಲಾದವರು ನೋಡಿ ಮೆಚ್ಚಿದ್ದಾರೆ. ನಿರ್ದೇಶಕ ಜೆಪಿ ತುಮಿನಾಡ್ ಅವರನ್ನು ಮನೆಗೆ ಕರೆದು ಸತ್ಕರಿಸಿದ್ದಾರೆ. ಹಿಂದಿಯಲ್ಲಿ ಅಜಯ್ ದೇವಗನ್ ಕೂಡಾ ರಾಜ್ ಬಿ ಶೆಟ್ಟಿ, ತುಮಿನಾಡ್ ಅವರನ್ನು ಕರೆದು ಸತ್ಕಾರ ಮಾಡಿದ್ದಾರೆ.
ದಾಖಲೆ ನಂ.10
ಚಿತ್ರ ಇನ್ನೂ ಚಿತ್ರಮಂದಿರಗಳಲ್ಲಿದೆ. ಹೊಸ ದಾಖಲೆಗಳ ಸೃಷ್ಟಿಯಾಗಲಿವೆ.



