ಮೊದಲೇ ಹೇಳಿ ಬಿಡ್ತೇವೆ. ಸಂಸದ ಪ್ರತಾಪ್ ಸಿಂಹ ಅವರಿಗೂ ಈತನಿಗೂ ಯಾವುದೇ ಸಂಬಂಧ ಇಲ್ಲ. ಹೆಸರು ಮಾತ್ರ ಪ್ರತಾಪ್ ಸಿಂಹ. ಆದರೆ ಈ ವಂಚಕನ ಹಿಸ್ಟರಿ ನೋಡಿದರೆ ಅಬ್ಬಬ್ಬಾ ಎನ್ನಿಸುವುದು ಸಹಜ. ಗೋಲ್ ಮಾಲ್ ಸ್ಟಾರ್, ರೋಲ್ ಕಾಲ್ ಕಿಂಗ್.. ಹೀಗೆ ಏನು ಬೇಕಾದರೂ ಕರೀರಿ.. ಈತ ಮಾತ್ರ ವಂಚನೆಯಲ್ಲಿ ಮಾಸ್ಟರ್ ಪೀಸ್. ಓದಿರೋದು ನೋಡಿದ್ರೆ 10ನೇ ಕ್ಲಾಸು. ವಂಚನೆಗೊಳಾದವರಲ್ಲಿ ಬಹುತೇಕರು ಡಿಗ್ರಿ, ಮಾಸ್ಟರ್ ಡಿಗ್ರಿ, ಡಾಕ್ಟರು, ಎಂಜಿನಿಯರು ಓದಿದ್ದಾರೆ. ಮೋಸ ಹೋದವರಲ್ಲಿ ಅನಕ್ಷರಸ್ತರು ಇಲ್ಲವೇ ಇಲ್ಲ. ಅಂತಹವರಿಗೆಲ್ಲ ಟೋಪಿ ಹಾಕಿರುವ ರಣಧೀರನ ಹೆಸರು ಪ್ರತಾಪ್ ಸಿಂಹ.
ಪ್ರತಾಪ್ ಸಿಂಹ ಯಾರು?
ಕುಟುಂಬದ ಜತೆ ಗಿರಿನಗರದಲ್ಲಿ ನೆಲೆಸಿದ್ದ ಪ್ರತಾಪ್ ಸಿಂಹ, 10ನೇ ತರಗತಿ ಗ್ರಾಜುಯೇಟ್. ದುಡ್ಡು ಮಾಡಬೇಕು, ಕಷ್ಟ ಪಡಬಾರದು ಅನ್ನೋದೇ ಇವನ ಪಾಲಿಸಿ. ಮಂಕೂಬೂದಿ ಎರಚಿ ಹಣ ಸಂಪಾದಿಸುವ ಕಲೆಯಲ್ಲಿ ನುರಿತಿದ್ದ ಪ್ರತಾಪ್ ಸಿಂಹ, ರಾಜಕಾರಣಿಯಾಗಿಯೂ ಯಾಮಾರಿಸಿದ್ದ. ದ 8-9 ವರ್ಷಗಳಿಂದ ನೂರಾರು ಜನರಿಗೆ ಮೋಸ ಮಾಡಿ ಹಣ ಗಳಿಸಿರುವ ಪ್ರತಾಪ್ ಸಿಂಹ, ಇದೂವರೆಗೆ ಪೊಲೀಸರಿಗೆ ಸಿಕ್ಕಿರಲಿಲ್ಲ. ದೂರು ಬಂದಿರಲಿಲ್ಲ ಎನ್ನುವುದೇ ಅಚ್ಚರಿ.
ಎನ್ʻಜಿಓ ಹೆಸರಲ್ಲಿ ಚೀಟಿಂಗ್ ಮಾಡಿ ಸಿಕ್ಕಿಬಿದ್ದ : ಎನ್‌ಜಿಒಗಳಿಗೆ ಖಾಸಗಿ ಕಂಪನಿಗಳಿಂದ ಸಿಎಸ್‌ಆರ್ ನಿಧಿಯಲ್ಲಿ ಆರ್ಥಿಕ ನೆರವು ಮತ್ತು ಪೆಟ್ರೋ ಕಂಪನಿಗಳಿಂದ ₹50 ಲಕ್ಷವರೆಗೆ ಅನುದಾನ, ಜನರಿಗೆ ದುಬಾರಿ ಮೌಲ್ಯದ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್ ಕೊಡಿಸೋದಾಗಿ ಹೇಳಿ ಮೋಸ ಮಾಡಿ ಸಿಕ್ಕಿಬಿದ್ದಿದ್ದಾನೆ. ಈ ವಂಚನೆ ಸಂಬಂಧ ಪೀಣ್ಯ ಠಾಣೆಯಲ್ಲಿ 18 ಎನ್‌ಜಒಗಳು ಹಾಗೂ ಲ್ಯಾಪ್‌ಟಾಪ್ ಬಗ್ಗೆ ಹಲಸೂರು ಠಾಣೆಯಲ್ಲಿ ಸಂತ್ರಸ್ತರು ದೂರು ನೀಡಿದ್ದರು. ಅಲ್ಲದೆ ಆತನ ವಿರುದ್ಧ ಹಲವು ಚೆಕ್ ಬೌನ್ಸ್ ಪ್ರಕರಣಗಳು ಕೂಡಾ ನ್ಯಾಯಾಲಯದಲ್ಲಿ ದಾಖಲಾಗಿದ್ದವು. ಈ ಪ್ರಕರಣಗಳ ಬಗ್ಗೆ ಸಿಸಿಬಿಗೆ ತನಿಖೆಯನ್ನು ಆಯುಕ್ತರು ವಹಿಸಿದ್ದರು. ತನಿಖೆಗಳಿದ ಸಿಸಿಬಿ ಪಿಐ ಶ್ರೀನಿವಾಸ್ ಅವರು, ತನಿಖೆ ಆರಂಭಿಸಿದ ಮೊದಲ ದಿನವೇ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಎಂತೆಂತಹ ವೇಷ ಹಾಕುತ್ತಿದ್ದ.. ಯಾರಿಗೆಲ್ಲ ಮೋಸ ಮಾಡ್ತಿದ್ದ..?
ಎಳನೀರಿಗೆ ದುಬಾರಿ ಬೆಲೆ ಕೊಡಿಸುತ್ತೇನೆ ಎನ್ನುತ್ತಿದ್ದ. ಫಾರಿನ್ ಗಿರಾಕಿಗಳನ್ನು ಹುಡುಕಿ ಕೊಡ್ತೇನೆ. ಅವರಿಗೆ ಒಂದು ಎಳನೀರಿಗೆ 50ರಿಂದ 70ರೂ. ಮಾರಿಸುತ್ತೇನೆ. ನೀವು ಒಂದಿಷ್ಟೂ ಕಷ್ಟ ಪಡಬೇಕಿಲ್ಲ ಎಂದು ಯಾಮಾರಿಸ್ತಿದ್ದ.
ದೆಹಲಿಯ ಸ್ಥಳೀಯ ರಾಜಕೀಯ ಮುಖಂಡನೊಬ್ಬನನ್ನು ತಾನು ಬೆಂಗಳೂರಿನಲ್ಲಿ ದೊಡ್ಡ ರಾಜಕೀಯ ಪಕ್ಷದ ನಾಯಕ ಎಂದು ಹೇಳಿ ಪರಿಚಯಿಸಿಕೊಂಡಿದ್ದ. ಆತನ ಮೂಲಕ ದೆಹಲಿ, ಉತ್ತರಪ್ರದೇಶದ ಲಖನೌ, ಆಗ್ರಾ ಹಾಗೂ ಹಿಮಾಚಲ ಪ್ರದೇಶಗಳ ಎಳನೀರು ವ್ಯಾಪಾರಿಗಳು ಮತ್ತು ರೈತರನ್ನು ಪ್ರತಾಪ್ ಸಿಂಹ ಪರಿಚಯವಾಗಿದ್ದರು. ಆಗ ಆ ರೈತರು ಹಾಗೂ ವ್ಯಾಪಾರಿಗಳಿಗೆ ಬೆಂಗಳೂರಿನಲ್ಲಿ ಎಳನೀರಿಗೆ ಒಳ್ಳೆಯ ಬೆಲೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಟೋಪಿ ಹಾಕಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿಯಲ್ಲಿ ಒಂದು ವರ್ಷ ಬೀಡು ಬಿಟ್ಟಿದ್ದ ಪ್ರತಾಪ್ ಸಿಂಹ, ಅಲ್ಲಿ ಯುವತಿಯೊಬ್ಬಳನ್ನು ತನ್ನ ಮೋಸದ ಜಾಲಕ್ಕೆ ಬೀಳಿಸಿಕೊಂಡಿದ್ದ. ಆಕೆಗೆ ಮದುವೆ ಆಗುವುದಾಗಿ ನಂಬಿಸಿ ಆತ ₹6 ಲಕ್ಷ ಪಡೆದು ನಾಮ ಹಾಕಿದ್ದ ಎಂದು ಮೂಲಗಳು ಹೇಳಿವೆ. ಈತನ ಚೀಟಿಂಗ್ ಸ್ಟೋರಿಗಳನ್ನು ಕೇಳಿದವರು ಅಬ್ಬಬ್ಬಾ.. ಎಂದು ಮೂಗಿಲ ಬೆರಳಿಟ್ಟಿದ್ಧಾರೆ.



