ಮೀಟರ್ ಬಡ್ಡಿ ವ್ಯವಹಾರ. ಕಾನೂನು ಪ್ರಕಾರ ಈ ಮೀಟರ್ ಬಡ್ಡಿ ವ್ಯವಹಾರಕ್ಕೆ ಮಾನ್ಯತೆ ಇಲ್ಲ. ಆದರೂ.. ನಡೆಯುತ್ತಲೇ ಇರುತ್ತದೆ. ಗಂಟೆಗಳ ಲೆಕ್ಕದಲ್ಲಿ, ದಿನಗಳ ಲೆಕ್ಕದಲ್ಲಿ ಸಾಲ ಕೊಡುತ್ತಾರೆ. ಬಡ್ಡಿ ಸಮೇತ ಪಡೆದ ಸಾಲವನ್ನು ವಾಪಸ್ ನೀಡಬೇಕು. ಅಸಲು ನೀಡದೇ ಹೋದರೂ.. ಪರವಾಗಿಲ್ಲ. ಬಡ್ಡಿಯನ್ನು ಮಾತ್ರ ಮಿಸ್ ಮಾಡದೇ ಕೊಡಬೇಕು. ಅಕಸ್ಮಾತ್.. ಆಗದಿದ್ದರೆ.. ಮುಂದೆ ನಡೆಯುವುದೇ ಬೇರೆ. ಏಕೆಂದರೆ ಮೀಟರ್ ಬಡ್ಡಿ ವ್ಯವಹಾರ ಮಾಡುವುವರು ಯಾವುದಕ್ಕೂ ಹೇಸೋದಿಲ್ಲ.
ಕೇವಲ ಹೊಲಸು ಬೈಗುಳಗಳಷ್ಟೇ ಅಲ್ಲ, ಇಡೀ ಕುಟುಂಬವನ್ನು ಬೀದಿಗೆ ತರುತ್ತಾರೆ. ಮಚ್ಚು, ಚಾಕು ಚೂರಿಗಳು ಮಾತನಾಡುತ್ತವೆ. ಮನೆಯ ಹೆಣ್ಣು ಮಕ್ಕಳ ಮೇಲೂ ಕೈಹಾಕ್ತಾರೆ. ಅಂತಾದ್ದೊಂದು ಕರಾಳ ದಂಧೆ ಈಗ ಹೈಸ್ಕೂಲಿಗೂ ಕಾಲಿಟ್ಟಿದೆ. ಪ್ರಕರಣ ನೋಡಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಇಷ್ಟು ದಿನ ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ ಮೀಟರ್ ಬಡ್ಡಿ ಇದೀಗ ಶಾಲೆಗಳಿಗೂ ಕಾಲಿಟ್ಟಿದೆ. ಬಡ್ಡಿ ಸಾಲಕ್ಕೆ ಸಂಬಂಧಿಸಿ ಹೈಸ್ಕೂಲ್ ವಿದ್ಯಾರ್ಥಿಯೊಬ್ಬ ಮತ್ತೊಬ್ಬ ವಿದ್ಯಾರ್ಥಿಗೆ ಚಾಕು ಹಾಕಿದ್ದಾನೆ. ಘಟನೆ ನಡೆದಿರುವುದು ಹುಬ್ಬಳ್ಳಿಯಲ್ಲಿ. ಕರ್ಕಿ ಬಸವೇಶ್ವರ ನಗರದಲ್ಲಿ.
ಸಾಲ ಕೊಟ್ಟವನು 9ನೇ ಕ್ಲಾಸ್.. ಸಾಲ ಪಡೆದವನು 10ನೇ ಕ್ಲಾಸ್ :
ಕರ್ಕಿ ಬಸವೇಶ್ವರ ನಗರದ 10ನೇ ತರಗತಿ ವಿದ್ಯಾರ್ಥಿಯೊಬ್ಬ ₹10 ಸಾವಿರ ಸಾಲವನ್ನು ವಾರದ ಬಡ್ಡಿ ಲೆಕ್ಕದಲ್ಲಿ ಪಡೆದಿದ್ದನಂತೆ. ವಾರಕ್ಕೆ ಸಾಲ ಪಡೆದಿದ್ದವನು, 10 ಸಾವಿರಕ್ಕೆ 1 ಸಾವಿರ ಬಡ್ಡಿ ಕೊಡಬೇಕಿತ್ತು. ಅಂದರೆ ವಾರಕ್ಕೆ 10% ಬಡ್ಡಿ. ಪ್ರತಿವಾರ ನಿಯಮಿತವಾಗಿ ₹1 ಸಾವಿರ ಬಡ್ಡಿ ಕೂಡ ಕೊಡುತ್ತಿದ್ದನಂತೆ. ಆದರೆ ಎರಡ್ಮೂರು ವಾರದಿಂದ ಈತ ಬಡ್ಡಿ ಕೊಟ್ಟಿರಲಿಲ್ಲ. ಹೀಗಾಗಿ ಈತನನ್ನು 9ನೇ ತರಗತಿ ವಿದ್ಯಾರ್ಥಿ ಸೇರಿ 6 ಮಂದಿ ಕರೆದುಕೊಂಡು ಬಂದು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ಅಲ್ಲದೆ, ಚಾಕು ಸೇರಿ ಮತ್ತಿತರ ಮಾರಕಾಸ್ತ್ರಗಳಿಂದ ಬೆದರಿಸಿದ್ದರು. ಈ ವಿಷಯ 10ನೇ ತರಗತಿ ವಿದ್ಯಾರ್ಥಿ ಪಾಲಕರಿಗೆ ಗೊತ್ತಾಗಿ ಶೀಘ್ರದಲ್ಲೇ ಹಣ ಕೊಡುವುದಾಗಿ ಭರವಸೆ ನೀಡಿ ಮಗನನ್ನು ಬಿಡಿಸಿಕೊಂಡು ಬಂದಿದ್ದರು. ಇದಾಗಿ ಒಂದೆರಡು ಗಂಟೆಯಲ್ಲೇ ಮತ್ತೆ ಆ ಅಪ್ರಾಪ್ತರು, ಸಾಲ ಪಡೆದಿದ್ದ 10ನೇ ತರಗತಿ ಬಾಲಕನನ್ನು ಕರೆಸಿಕೊಂಡು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ. ಇದರಿಂದ ರೊಚ್ಚಿಗೆದ್ದ ಆ ಬಾಲಕ, 9ನೇ ತರಗತಿ ಬಾಲಕನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಈತನನ್ನು ಕಿಮ್ಸ್‌ಗೆ ದಾಖಲಿಸಲಾಗಿದೆ. ಚಾಕುವಿನಿಂದ ಇರಿದ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ನಡುವೆ ತಮ್ಮ ಮಗನನ್ನು ಕಿಡ್ನಾಪ್ ಮಾಡಿ ಅಕ್ರಮವಾಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ಮೀಟರ್ ಬಡ್ಡಿಯಂತೆ ಸಾಲ ಕೊಟ್ಟು ಹಣ, ಮೊಬೈಲ್ ಕಸಿದುಕೊಂಡಿದ್ದಾರೆ ಎಂದು 10ನೇ ತರಗತಿಯ ಬಾಲಕನ ಪಾಲಕರು ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
10ನೇ ತರಗತಿ ವಿದ್ಯಾರ್ಥಿಗೆ ₹10 ಸಾವಿರ ಸಾಲವನ್ನು ಮೀಟರ್ ಬಡ್ಡಿ ಲೆಕ್ಕದಲ್ಲಿ ಕೊಟ್ಟಿದ್ದು 9ನೇ ತರಗತಿ ವಿದ್ಯಾರ್ಥಿ. ಈಗ ಅರೆಸ್ಟ್ ಆಗಿರುವ ಯಾರೊಬ್ಬರ ವಯಸ್ಸೂ ಕೂಡಾ 18 ದಾಟಿಲ್ಲ. ಎಲ್ಲರೂ ಅಪ್ರಾಪ್ತರೇ. ಆ ಅಪ್ರಾಪ್ತರಿಗೆ ಹಣ ಎಲ್ಲಿಂದ ಬಂತು..? ಇದನ್ನೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಮೀಟರ್ ಬಡ್ಡಿ, ವಾರದ ಬಡ್ಡಿ ಲೆಕ್ಕದಲ್ಲಿ ಸಾಲ ಕೊಡುವವರು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಯಾರೇ ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದರೂ ಅವರ ವಿರುದ್ಧ ದೂರು ಬಂದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು. ಈ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಏಕೆಂದರೆ ಸಾಲ ಕೊಟ್ಟ ಹುಡುಗ ಹಾಗೂ ಸಾಲ ಪಡೆದಿದ್ದ ಹುಡುಗನ ತಂದೆ ತಾಯಿ ಮಕ್ಕಳಿಗೆ ಅಷ್ಟು ಹಣ ಕೊಡುವವರಲ್ಲ. ಎಲ್ಲ ಓಕೆ, ಈ ವಯಸ್ಸಿಗೆ ಆ ಮಕ್ಕಳು ಮೀಟರ್ ಬಡ್ಡಿಯಾದರೂ ಸರಿ, ದುಡ್ಡು ಬೇಕು ಎಂಬ ಅನಿವಾರ್ಯತೆ ಬಂದಿದ್ದು ಹೇಗೆ..? ಹೇಗೆ ಎಂದರೆ.. ಎಲ್ಲರೂ ಕೈತೋರಿಸುವುದು ಡ್ರಗ್ಸ್, ಗಾಂಜಾ ಮಾಫಿಯಾದ ಕಡೆ. ಇದು ಗಂಭೀರವಾದ ವಿಷಯ.



