ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ ಟುವ್ವಿ ಟುವ್ವಿ ಎಂದು ಹಾಡುವ ಆನಂದ್ ಆಗಿ. ತುಂಟ ಹುಡುಗನಾಗಿ, ಕಾಲೇಜ್ ಲವ್ವರ್ ಬಾಯ್ ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದ ಆನಂದ್, ಈಗ ಮತ್ತೊಮ್ಮೆ ಆನಂದ್ ಆಗುತ್ತಿದ್ದಾರೆ. ಅಮ್ಮ ಪಾರ್ವತಮ್ಮ ಶಿವಣ್ಣನನ್ನು ಕಾಲೇಜ್ ವಿದ್ಯಾರ್ಥಿಯನ್ನಾಗಿ ಮಾಡಿದರೆ, ಪತ್ನಿ ಗೀತಾ ಟೀಚರ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ತುಂಟ ಪ್ರೇಮಿಯಾಗಿ ಕಾಲೇಜು ಹುಡುಗನಾಗಿ ನಟಿಸಿದ್ದ ʻಆನಂದ್ʼ ಎಂಬ ಟುವ್ವಿ ಟುವ್ವಿ ಹುಡುಗ ಈಗ ಮೇಷ್ಟರಾಗಿ A for ಆನಂದ್ ಅಂತಿದ್ದಾರೆ.
ಮೊದಲ ಚಿತ್ರದಲ್ಲಿ ಕಾಲೇಜು ಹುಡುಗನಾಗಿ ನಟಿಸಿದ್ದ ಶಿವಣ್ಣ, 125+ ಸಿನಿಮಾಗಳಲ್ಲಿ ತುಂಟ ಹುಡುಗನಿಂದ ಹಿಡಿದು ದೇಶಪ್ರೇಮಿಯವರೆಗೆ, ಅಮಾಯಕ, ಅಮರಪ್ರೇಮಿ, ಹಳ್ಳಿ ಹುಡುಗ, ಉದ್ಯಮಿ, ರೌಡಿ, ಕ್ರಾಂತಿಕಾರಿ, ಭಕ್ತ, ಲಾಯರ್, ಪೊಲೀಸ್, ಡ್ರೈವರ್.. ಹೀಗೆ ಹಲವಾರು ಪಾತ್ರ ಮಾಡಿದ್ದಾರೆ. ಶಿಕ್ಷಕರಾಗಿಯೂ ಕೂಡಾ ಸುಂದರಕಾಂಡ, ದ್ರೋಣ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಮತ್ತೊಮ್ಮೆ ಶಿಕ್ಷಕನ ಪಾತ್ರಕ್ಕೆ ಯೆಸ್ ಎಂದಿರುವ ಶಿವಣ್ಣ ಚಿತ್ರಕ್ಕೆ ಮುಹೂರ್ತ ನಡೆದಿದೆ. ಅಮ್ಮ ಪಾರ್ವತಮ್ಮ ರಾಜ್ ಕುಮಾರ್, ಮಗನನ್ನು ಕಾಲೇಜಿಗೆ ಕಳಿಸಿದ್ದರೆ, ಹೆಂಡತಿ ಗೀತಾ ಸ್ಕೂಲಿಗೆ ಮೇಷ್ಟರು ಮಾಡಿ ಕಳಿಸ್ತಿದ್ದಾರೆ. ಎ ಫಾರ್ ಆನಂದ್ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದೆ. ನಿರ್ಮಾಪಕಿ ಗೀತಾ ಶಿವರಾಜ್ ಕುಮಾರ್ ಕ್ಲ್ಯಾಪ್ ಮಾಡಿ, ಸಿನಿಮಾಕ್ಕೆ ಚಾಲನೆ ನೀಡಿದ್ದಾರೆ. ಪುಟ್ಟ ಮಗುವಿನಿಂದ ಕ್ಯಾಮೆರಾಗೆ ಚಾಲನೆ ನೀಡಿಸಿದ್ದು ವಿಶೇಷ.
“ನಾನು ನಟಿಸಿದ್ದ ‘ಶಿವ’ ಸಿನಿಮಾಗೆ ಶ್ರೀನಿ ಫೋಟೋಶೂಟ್ ಮಾಡಿದ್ದರು. ಅಂದಿನಿಂದಲೂ ನನಗೆ ಪರಿಚಯ. ಮಕ್ಕಳನ್ನು ಯಾವ ರೀತಿ ಓದಿಸಬೇಕು, ಯಾವ ರೀತಿ ಅವರನ್ನು ದಾರಿಗೆ ತರಬೇಕು ಎಂಬ ಕಥೆ ಈ ಚಿತ್ರದಲ್ಲಿದೆ” ಎನ್ನುವ ಶಿವಣ್ಣ ಅವರಿಗೆ ಆನಂದ್ ಅನ್ನೋ ಹೆಸರಿಟ್ಟಿದ್ದು ತಾಯಿ ಪಾರ್ವತಮ್ಮ ಅವರಂತೆ. ಈ ಆನಂದ್ ಖಂಡಿತಾ ಮಕ್ಕಳ ಮುಖದಲ್ಲಿ ನಗು ತರುತ್ತಾನೆ ಎನ್ನುವುದು ಶಿವಣ್ಣ ಕೊಡುವ ಕಾನ್ಫಿಡೆನ್ಸ್.
ಈ ಹಿಂದೆ ಶಿವರಾಜ್ ಕುಮಾರ್ ಜೊತೆಗೆ ‘ಘೋಸ್ಟ್’ ಸಿನಿಮಾ ಮಾಡಿದ್ದ ನಿರ್ದೇಶಕ ಶ್ರೀನಿ ಈ ಬಾರಿ ‘ಎ ಫಾರ್ ಆನಂದ್’ ಸಿನಿಮಾ ಮಾಡುತ್ತಿದ್ದಾರೆ. “ಹಿಂದೆ ಶಿವಣ್ಣನಿಗೆ ನಾನು ಆಕ್ಷನ್ ಥ್ರಿಲ್ಲರ್ ಸಿನಿಮಾ ಮಾಡಿದ್ದೆ. ಇದು ಕಂಪ್ಲೀಟ್ ಡಿಫರೆಂಟ್ ಜಾನರ್ ಸಿನಿಮಾ. ‘A for ಆನಂದ್’ ಫ್ಯಾಮಿಲಿ ಎಂಟರ್‌ಟೈನರ್ ಜೊತೆಗೆ ಮಕ್ಕಳಿಗೂ ಕನೆಕ್ಟ್ ಆಗುವಂತಹ ಸಿನಿಮಾ ಎಂದಿದ್ದಾರೆ ಶ್ರೀನಿ.
ಒತ್ತಡ ಇಲ್ಲದೇ ಮಕ್ಕಳಿಗೆ ಯಾವ ರೀತಿ ಪಾಠ ಹೇಳಿಕೊಡಬಹುದು ಅನ್ನೋದನ್ನು ಈ ಸಿನಿಮಾ ಮೂಲಕ ಹೇಳುತ್ತೇವೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಾರೆ. ತುಂಬಾ ದಿನದಿಂದ ಮಕ್ಕಳ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು ಎಂದು ಹೇಳಿಕೊಂಡಿದ್ದಾರೆ ಗೀತಾ. ಶಿವಣ್ಣನವರ ಹೋಮ್ ಬ್ಯಾನರ್ ಆಗಿರುವ ಗೀತಾ ಪಿಕ್ಚರ್ಸ್ ಅವರ 3ನೇ ಸಿನಿಮಾ ಎ ಫಾರ್ ಆನಂದ್. ವೇದ ಮತ್ತು ಭೈರತಿ ರಣಗಲ್ ಎರಡೂ ಬಾಕ್ಸಾಫೀಸಿನಲ್ಲೂ ಗೆದ್ದಿವೆ. ಪ್ರೇಕ್ಷಕರ ಹೃದಯವನ್ನೂ ಗೆದ್ದಿವೆ. ಈಗ 3ನೇ ಸಿನಿಮಾ ಎ ಫಾರ್ ಆನಂದ್. ಶಿವಣ್ಣ ಮಕ್ಕಳಿಗೆ ಟುವ್ವಿ ಟುವ್ವಿ ಹೇಳಿಕೊಡ್ತಾರಾ.. ನಿರೀಕ್ಷೆ.. ದೊಡ್ಡದು.