ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ವಿರುದ್ಧ ಆರೋಪಗಳು ಇವತ್ತಿನದ್ದಲ್ಲ. ಡಿಕೆ ಬ್ರದರ್ಸ್‌ನ್ನು ರಾಜಕೀಯವಾಗಿ ಎದುರು ಹಾಕಿಕೊಂಡಿರುವವರೆಲ್ಲ ಮಾಡುವ ಆರೋಪ ಡಿಕೆ ಬ್ರದರ್ಸ್ ರೌಡಿಸಂ ಮಾಡ್ತಾರೆ ಅನ್ನೋದು. ಇತ್ತೀಚೆಗೆ ಅಪಾರ್ಟ್ʻಮೆಂಟ್ ವೊಂದರಲ್ಲಿ ಮತಯಾಚನೆಗೆ ಹೋಗಿದ್ದ ಡಿಕೆ ಶಿವಕುಮಾರ್ ವೋಟು ಕೊಟ್ಟರೆ ನೀರು ಮತ್ತು ಎನ್ʻಒಸಿ ಕೊಡ್ತೀವಿ ಎಂದು ಹೇಳಿರುವುದು ದೊಡ್ಡ ಸುದ್ದಿಯಾಗ್ತಾ ಇದೆ. ಅಲ್ಲದೆ ಡಿಕೆ ಸುರೇಶ್ ಬೆಂಬಲಿಗರು ಬಿಜೆಪಿ ಪರ ಪ್ರಚಾರ ಮಾಡುವವರನ್ನು ಹುಡುಕಿ ಹುಡುಕಿ ಹೊಡೆಯುತ್ತಿದ್ದಾರೆ ಎನ್ನುವುದು ಮತ್ತೊಂದು ಆರೋಪ. ಈ ನಡುವೆಯೇ ದೇವೇಗೌಡರು ಹೊಸ ಕಥೆ ಹೇಳಿದ್ಧಾರೆ. ಅದು ಕಿಡ್ನಾಪ್ ಕಥೆ.
ಏನದು ದೇವೇಗೌಡರು ಹೇಳಿದ ಕಿಡ್ನಾಪ್ ಸ್ಟೋರಿ..?
ಅಮೆರಿಕದಿಂದ ದುಡಿಮೆ ಮಾಡಿಕೊಂಡು ಬಂದು ಒಂದಿಷ್ಟು ಜಮೀನು ಮಾಡಿಟ್ಟುಕೊಂಡಿದ್ದವರಿಗೆ ಡಿಕೆ ಬ್ರದರ್ಸ್ ನಿನ್ನ ಮಗಳು ಬೇಕಾದರೆ.. ಸೈನ್ ಮಾಡಿಕೊಡು. ಇಲ್ಲ ಅಂದ್ರೆ.. ನಿನ್ನ ಮಗಳು ಸಿಕ್ಕೋದಿಲ್ಲ ಎಂದು ಬೆದರಿಸಿ ಆಸ್ತಿ ಬರೆಸಿಕೊಂಡಿದ್ದಾರಂತೆ. ಇದನ್ನು ಖುದ್ದು ದೇವೇಗೌಡರು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಹೇಳಿದ್ಧಾರೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಅಬ್ಬಾ.. ಅವರ ಕೈಯನ್ನು ಬಲಪಡಿಸಬೇಕಂತೆ.. ಅಮೇರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಬಿಡದಿ ವ್ಯಕ್ತಿಯ 9 ವರ್ಷದ ಮಗಳನ್ನು ಕಿಡ್ನಾಪ್ ಮಾಡಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಡುತ್ತಾರೆ. ನಂತರ, ವ್ಯಕ್ತಿಯನ್ನು ಬೆದರಿಸಿ ಎಲ್ಲ ಆಸ್ತಿಯನ್ನು ಬರೆಸಿಕೊಳ್ಳುತ್ತಾರೆ. ಎಲ್ಲವನ್ನೂ ಕಳೆದುಕೊಂಡ ವ್ಯಕ್ತಿ ಜೀವನಕ್ಕಾಗಿ ಬೇರೆಯವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲದಕ್ಕೂ ನನ್ನ ಬಳಿ ದಾಖಲೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡರು ಗುಡುಗಿದ್ಧಾರೆ.
ಅಮೆರಿಕಾದಿಂದ ಹಣ ಸಂಪಾದನೆ ಮಾಡಿಕೊಂಡು ಬಂದ ಮನುಷ್ಯನ ಆಸ್ತಿ ಬರೆಸಿಕೊಂಡಿದ್ದರು. ಬಿಡದಿ ಹತ್ರ ರಸ್ತೆ ಪಕ್ಕದಲ್ಲಿ, ಅವರು ಒಂದು ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದ್ದರು. ಅದರ ಹಿಂದಿನ ದಿನ ಇವರು ಒಂದು ಸುಳ್ಳು ಕ್ರಯ ಪತ್ರ ಸ್ಥಾಪನೆ ಮಾಡುತ್ತಾರೆ. ಅದರ ದಾಖಲೆ ನನ್ನ ಬಳಿ ಇದೆ. ಆಸ್ತಿ ಬರೆಸಿಕೊಂಡಿದ್ದ ಕೇಸ್ ಅನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ಗೆ ಹಾಕಿದರು. ಅಲ್ಲಿ ಅವರಿಗೆ ಭಾರಿ ಮುಖಭಂಗ ಆಯ್ತು. ಇದಾದ ನಂತರ ಆಸ್ತಿ ಮಾಲೀಕನ 9 ವರ್ಷದ ಮಗಳನ್ನ ತೆಗೆದುಕೊಂಡು ಹೋಗಿ ಪಕ್ಕದ ಮನೆಯಲ್ಲಿ ಕಣ್ಣಿಗೆ ಬಟ್ಟೆ ಕಟ್ಡಿ ಇಡ್ತಾರೆ. ನಿನ್ನ ಮಗಳು ಬೇಕು ಅಂದ್ರೆ ಸಹಿ ಮಾಡು ಎಂದು ಬೆದರಿಸುತ್ತಾರೆ. ಆ ಮಗುವಿನ ತಾಯಿ ಎಲ್ಲಾ ಬರೆದುಕೊಟ್ಟು ನನ್ನ ಮಗಳ ಕರೆದುಕೊಂಡು ಬನ್ನಿ ಎಂದು ಗಂಡನ ಕಾಲು ಹಿಡಿಯುತ್ತಾಳೆ.
ಗಂಡ ಹೆಂಡತಿ ಮಗುವಿನ ಬಳಿ ಹೋದಾಗ ಕಣ್ಣಿಗೆ ಬಟ್ಟೆ ಕಟ್ಟಿ ಬಚ್ಚಿಟ್ಟಿದ್ದ ಹೆಣ್ಣು ಮಗುವನ್ನು ಮುಂದೆ ಕರೆದುಕೊಂಡು ಬಂದು ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಚ್ಚುತ್ತಾರೆ. ಆ ಮಗು ಅಪ್ಪ ಅಂತ ಓಡಿ ಬರುತ್ತದೆ. ಮತ್ತೆ ಒಳಗೆ ತೆಗೆದುಕೊಂಡು ಹೋಗ್ತಾರೆ. ಇದಕ್ಕೆ ನನ್ನ ಮುಂದೆ ದಾಖಲೆ ಇದೆ. ಇದನ್ನ ಎಲೆಕ್ಷನ್ ನಲ್ಲಿ ಬಳಸಿಕೊಳ್ಳಿ ಎಂದು ಲಾಯರ್ ಒಬ್ಬರು ನನಗೆ ಸಂಪೂರ್ಣ ದಾಖಲೆ ತಂದುಕೊಟ್ಟರು. ನಾನು ಅನ್ಯಾಯಕ್ಕೊಳಗಾದ ವ್ಯಕ್ತಿಯ ಬಳಿಗೆ ಹೋದಾಗ ಆ ಪುಣ್ಯಾತ್ಮ ನಾನು ಕರ್ನಾಟಕದಲ್ಲಿ ಯಾರಿಗೂ ಮತ ಹಾಕಲ್ಲ. ನಾನು ಓಟರ್ ಲಿಸ್ಟ್‌ನಲ್ಲಿಯೇ ಇಲ್ಲ. ಈ ಕರ್ನಾಟಕ ಸಾಕು ಎಂದರು. ಅವರ ಹೆಸರು ನನಗೆ ಮರೆತೋಗಿದೆ, ಬಹಳ ವರ್ಷ ಆಯ್ತು. ಎಲ್ಲವನ್ನೂ ಕಳೆದುಕೊಂಡ ಮೇಲೆ ಅವರು ಜೀವನಕ್ಕಾಗಿ ಬೇರೆಯವರ ಅಧೀನದಲ್ಲಿ ಕೆಲಸ ಮಾಡ್ತಾರೆ ಎಂಬ ದೊಡ್ಡ ಅಪರಾಧ ಕೃತ್ಯವನ್ನೇ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ ದೇವೇಗೌಡ.
16 ಲಕ್ಷ ರೂ. ಮೌಲ್ಯದ ಹಾಗೂ 4 ಲಕ್ ರೂ. ಮೌಲ್ಯದ ಎರಡು ಚೆಕ್ ಕೊಟ್ಟಿದ್ದರಂತೆ ಡಿಕೆ ಬ್ರದರ್ಸ್. ಅದಕ್ಕೂ ಹಣ ಕೊಡಲಿಲ್ಲವಂತೆ. ಎರಡೂ ಚೆಕ್ ಲ್ಯಾಪ್ಸ್ ಆಗಿ, ಜಮೀನು ಬರೆದುಕೊಟ್ಟವರು ಅದಕ್ಕೂ ದಂಡ ಕಟ್ಟಿದರಂತೆ. ಹೊರಗೆ ಹೇಳಿದ್ರೆ ಕಬ್ಬನ್ ಪಾರ್ಕಿನಲ್ಲಿ ಏನಾಗುತ್ತೆ ಗೊತ್ತಿದ್ಯಲ್ಲ ಎಂದು ಹೆದರಿಸಿದ್ರಂತೆ. ಆ ವ್ಯಕ್ತಿ ಈಗ ಕರ್ನಾಟಕದಲ್ಲಿದ್ದರೂ.. ಯಾವ ಪಕ್ಷಕ್ಕೂ ವೋಟ್ ಹಾಕಲ್ಲ ಎಂದು ಹೇಳಿದ್ಧಾರೆ ದೇವೇಗೌಡ.
ಇತ್ತ ಕನಕಪುರದಲ್ಲಿ ಹಿಂದೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಜಯದೇವ ಆಸ್ಪತ್ರೆಯ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಮಾಡದಂತೆ ತಡೆಯೊಡ್ಡಿದ್ದನ್ನು ಜನ ಮರೆಯಬಾರದು ಎಂದಿರುವ ದೇವೇಗೌಡ ನನ್ನ ಅಳಿಯನನ್ನು ರಾಜಕೀಯಕ್ಕೆ ತರಲು ನನಗೆ ಇಷ್ಟವಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಮಂಜುನಾಥ ಅವರ ಸೇವೆ ದೇಶಕ್ಕೆ ಬೇಕಾಗಿದೆ ಎಂಬ ಒತ್ತಾಯದ ಮೇರೆಗೆ ಈ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಜಯದೇವ ಆಸ್ಪತ್ರೆಯ ಮುಖ್ಯಸ್ಥರಾಗಿ ಮುಂದುವರೆಯುವುದಕ್ಕೆ ಅಡ್ಡಗಾಲು ಹಾಕಿದರು ಎಂದು ಕೂಡಾ ಹೇಳಿದ್ಧಾರೆ.



