ವಂದೇಭಾರತ್, ದೇಶದ ಹೆಮ್ಮೆ. ಮೇಡ್ ಇನ್ ಇಂಡಿಯಾ ಯೋಜನೆಯಲ್ಲಿ ಸಿದ್ಧವಾಗಿರುವ ರೈಲು, ದೇಶದ ರೈಲ್ವೇ ವಲಯದ ಚಹರೆಯನ್ನೇ ಬದಲಿಸಿದೆ. ಆಧುನಿಕ ರೂಪ ಸಿಕ್ಕಿದೆ. ಸ್ವದೇಶಿ ಮೌಲ್ಯವೂ ದಕ್ಕಿದೆ. ಆದರೆ.. ಒಂದು ಪ್ರಾಬ್ಲಂ. ವಂದೇ ಭಾರತ್ ರೈಲಿಗೆ ಕಲ್ಲು ಹೊಡೆಯುತ್ತಿದ್ದಾರೆ. ಆಶ್ಚರ್ಯವಾದರೂ ಸತ್ಯ. ರೈಲುಗಳಿಗೆ ಕಲ್ಲಿ ಹೊಡೆದು ಹಾಳು ಮಾಡುತ್ತಿದ್ಧಾರೆ. ಗಾಜುಗಳನ್ನು ಪುಡಿ ಪುಡಿ ಮಾಡುತ್ತಿದ್ಧಾರೆ. ಒಂದು ರಿಪೇರಿ ಖರ್ಚಿಗೆ ವೆಚ್ಚವಾಗುತ್ತಿರುವುದು 30 ಸಾವಿರ ರೂ.
ದಕ್ಷಿಣ ಭಾರತದ ಏಕೈಕ ‘ವಂದೇ ಭಾರತ್’ ರೈಲೊಂದಕ್ಕೇ ಈವರೆಗೆ ಬೆಂಗಳೂರು ವಲಯದಲ್ಲಿ 18 ಬಾರಿ ಕಲ್ಲೆಸೆದ ಪ್ರಕರಣಗಳು ದಾಖಲಾಗಿವೆ. 25ಕ್ಕೂ ಹೆಚ್ಚು ಕಿಟಕಿ ಗಾಜುಗಳು ಸಂಪೂರ್ಣ ಒಡೆದಿವೆ. ಇತರೆ ವಲಯಗಳೂ ಸೇರಿ ಸುಮಾರು 54 ಕಿಟಕಿ ಗಾಜು ಪುಡಿಯಾಗಿವೆ. ಎರಡು ಬಾರಿ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಮಾಲೂರು, ದೇವನಗೊಂದಿಯಿಂದ ದಂಡು ನಿಲ್ದಾಣದವರೆಗೆ ಹೆಚ್ಚಿನ ಕಲ್ಲೆಸೆತವಾಗಿದೆ. ಈಚೆಗೆ ಮಂಡ್ಯ, ರಾಮನಗರ, ಚನ್ನಪಟ್ಟಣದ ಬಳಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದ ಪ್ರಕರಣ ವರದಿಯಾಗಿದೆ. ಉಳಿದಂತೆ ನಾಯಂಡಹಳ್ಳಿ, ಕೃಷ್ಣದೇವರಾಯ ನಿಲ್ದಾಣದ ಬಳಿಯೂ ಪ್ರಕರಣಗಳು ಜರುಗಿವೆ.
ವಂದೇ ಭಾರತ್ ರೈಲಿಗೆ ಮಾತ್ರವಲ್ಲದೇ ಸಾಮಾನ್ಯ ರೈಲುಗಳಿಗೂ ಕಿಡಿಗೇಡಿಗಳು ಕಲ್ಲು ಎಸೆಯುತ್ತಿದ್ದಾರೆ. ಈ ವರ್ಷ ಇಲ್ಲಿವರೆಗೆ ಇಂತಹ ಸುಮಾರು 65ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ಕೊಡಿಗೇಹಳ್ಳಿ, ಲೊಟ್ಟಗೊಲ್ಲಹಳ್ಳಿ, ಚನ್ನಸಂದ್ರ, ಯಲಹಂಕ, ಚಿಕ್ಕಬಾಣಾವರ, ಯಶವಂತಪುರ, ಕಾರ್ಮೆಲ್ರಾಮ್, ಬಾಣಸವಾಡಿ, ಹೊಸೂರು, ತುಮಕೂರು ಸೇರಿ ಹಲವೆಡೆ ಕಲ್ಲು ಎಸೆಯುವುದನ್ನು ಆರ್ಪಿಎಫ್, ರಾಜ್ಯ ರೈಲ್ವೆ ಪೊಲೀಸರು ಗುರುತಿಸಿದ್ದಾರೆ.
ಗಾಜು ಒಡೆದಾಗ ಅದರ ದುರಸ್ತಿಗಾಗಿ ‘ವಂದೇ ಭಾರತ್’ ರೈಲಿಗೆ ಬಿಡುವಿರುವ ಬುಧವಾರ ಚೆನ್ನೈನ ಐಸಿಎಫ್ನಲ್ಲೇ ದುರಸ್ತಿ ಮಾಡಲಾಗುತ್ತಿದೆ. ಒಂದು ಗಾಜು ಬದಲಿಸಲು ಅಥವಾ ದುರಸ್ತಿಗೆ ಕನಿಷ್ಠ .30 ಸಾವಿರ ವ್ಯಯವಾಗುತ್ತಿದೆ. ಇದು ವಿಶೇಷವಾದ ಗಾಜು, ಸುಲಭವಾಗಿ ಲಭ್ಯವಿರುವುದಿಲ್ಲ. ಇದೇ ಹೊರಗಿನವರಿಂದ ರಿಪೇರಿ ಮಾಡಿಸಿದಲ್ಲಿ ಒಂದು ಗಾಜಿಗೆ .80 ಸಾವಿರ ತಗುಲುತ್ತದೆ ಎಂದು ಎಂದು ನೈಋುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಜನವರಿಯಲ್ಲಿ 21, ಫೆಬ್ರವರಿಯಲ್ಲಿ 13, ಮಾರ್ಚಿನಲ್ಲಿ 18, ಏಪ್ರಿಲ್ ತಿಂಗಳಲ್ಲಿ 8 ಹಾಗೂ ಮೇ ತಿಂಗಳಲ್ಲಿ 2 ಪ್ರಕರಣಗಳು ವರದಿಯಾಗಿವೆ. ಕಡಿಮೆಯಾಗಿದೆಯಾದರೂ ಉದ್ದೇಶಪೂರ್ವಕವಾಗಿ ತಮ್ಮದೇ ದೇಶದ ತಮ್ಮದೇ ಆಸ್ತಿಗಳನ್ನು ಹಾಳು ಮಾಡುತ್ತಿರುವ ವಿಷಯ ಆತಂಕಕಾರಿ.



