ಇದ್ದದ್ದು ತುಂಡು ಭೂಮಿ. ಆ ತುಂಡು ಭೂಮಿ ಎಲ್ಲಿ ತಪ್ಪಿಹೋಗುತ್ತದೋ.. ಎಲ್ಲಿ ಅವಳ ಮಕ್ಕಳೂ ತಮ್ಮ ಆಸ್ತಿಯಲ್ಲಿ ಪಾಲು ಕೇಳುತ್ತಾರೋ.. ಎಲ್ಲಿ ತನ್ನ ಮಕ್ಕಳಿಗೆ ಆಸ್ತಿ ಕಡಿಮೆಯಾಗುತ್ತದೋ… ಎಂದುಕೊಂಡ ಮಲತಾಯಿ 5 ತಿಂಗಳ ಮಗುವಿಗೆ ವಿಷವಿಟ್ಟು ಕೊಂದಿದ್ದಾಳೆ. ಗಂಡನಿಗೆ ಮೊದಲ ಹೆಂಡತಿಯಾಗಿದ್ದರೂ 11 ವರ್ಷ ಬಂಜೆ ಎಂದು ಕರೆಸಿಕೊಂಡು ತಾಯಿ ಮಗುವಿಗೆ ಜನ್ಮ ನೀಡಿದರೆ, ಮಲತಾಯಿ ಮಗು ಕಣ್ಣುಬಿಟ್ಟ 5 ತಿಂಗಳಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿ ಕೊಲೆ ಮಾಡಿದ್ದಾಳೆ.
ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟನೆ ನಡೆದಿದೆ. ಸಿದ್ದಪ್ಪ ಚೆಟ್ಟಿಗೇರಿ ಎನ್ನುವ ವ್ಯಕ್ತಿ ಕಳೆದ 11 ವರ್ಷಗಳ ಹಿಂದೆ ಶ್ರೀದೇವಿ ಎನ್ನುವವರನ್ನು ಮದುವೆ ಆಗಿದ್ದರು. ಆದರೆ, ಮಕ್ಕಳಾಗಲಿಲ್ಲವೆಂದು ನಾಲ್ಕು ವರ್ಷಗಳ ಕಾದು ನೋಡಿದ ಗಂಡ ಹಾಗೂ ಗಂಡನ ಮನೆಯವರು ಈಕೆಗೆ ಬಂಜೆ ಪಟ್ಟವನ್ನು ಕಟ್ಟಿದರು. ನಂತರ ಮೊದಲ ಪತ್ನಿ ಇರುವಾಗಲೇ ದೇವಮ್ಮ ಎನ್ನುವ ಯವತಿಯೊಂದಿಗೆ ಇನ್ನೊಂದು ಮದುವೆಯನ್ನೂ ಮಾಡಿಬಿಟ್ಟರು. ಇನ್ನು ಗಂಡ ತನ್ನ ಸವತಿಯೊಂದಿಗೆ ಸಂಸಾರ ಮಾಡುವುದನ್ನು ನೋಡಿಕೊಂಡಿರಲಾಗದೇ ಮೊದಲ ಪತ್ನಿ ಶ್ರೀದೇವಿ ತವರು ಮನೆಗೆ ಹೋಗಿ ಸೇರುತ್ತಾಳೆ. ಎರಡನೇ ಪತ್ನಿ ದೇವಮ್ಮನಿಗೆ 4 ಮಕ್ಕಳಾದವು. ಈ ನಡುವೆ ಮೊದಲ ಪತ್ನಿ ಶ್ರೀದೇವಿಯನ್ನು ತವರು ಮನೆಯವರು ಮತ್ತೆ ಗಂಡನ ಮನೆಗೇ ತಂದು ಬಿಟ್ಟರು. ಆಗಲೇ ಮೊದಲ ಪತ್ನಿ ಶ್ರೀದೇವಿ ಗರ್ಭಿಣಿಯಾದಳು. ಅದೂ ಬರೋಬ್ಬರಿ 11 ವರ್ಷಗಳ ನಂತರ. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಮೊದಲ ಹೆಂಡತಿ ಶ್ರೀದೇವಿ.
ತವರಿನಲ್ಲಿಯೇ ಬಾಣಂತನಕ್ಕೆ ಹೋಗಿದ್ದ ಶ್ರೀದೇವಿ, ಮಗುವಿಗೆ ಮುಡಿ ಶಾಸ್ತ್ರ (ಜವಳ-ಕೂದಲು ತೆಗೆಸುವುದು) ಮಾಡಿಸಬೇಕು ಎಂದು ಮತ್ತೆ ಗಂಡನ ಮನೆಗೆ ಬಂದಳು. ಕರೆಸಿಕೊಂಡವಳು ಸಿದ್ದಪ್ಪನ ಎರಡನೇ ಹೆಂಡತಿ ದೇವಮ್ಮ. ಮಗುವಿನ ಮುಡಿ ಶಾಸ್ತ್ರಕ್ಕೆ ಇನ್ನೂ ಸಮಯವಿದೆ ಎಂದರೂ ಕೇಳದೇ ಸಿದ್ದಪ್ಪನ ಎರಡನೇ ಪತ್ನಿ ದೇವಮ್ಮ ತನ್ನ ಸವತಿ ಶ್ರೀದೇವಿ ಹಾಗೂ ಆಕೆಯ 5 ತಿಂಗಳ ಮಗುವನ್ನು ಗಂಡನ ಮನೆಗೆ ಕರೆಸಿಕೊಳ್ಳಲು ಹಠ ಮಾಡಿದ್ದಾಳೆ. ಇಬ್ಬರೂ ಹೆಂಡತಿಯರು ಅನ್ಯೋನ್ಯವಾಗಿದ್ದರೆ ಸಾಕು ಎಂದು ಶ್ರೀದೇವಿಯ ಮನವೊಲಿಸಿ ಗಂಡ ಸಿದ್ದಪ್ಪ ಮಗು ಸಮೇತ ಮೊದಲ ಹೆಂಡತಿಯನ್ನು ಆ.28ರಂದು (ಸೋಮವಾರ) ಮನೆಗೆ ಕರೆದುಕೊಂಡು ಬರುತ್ತಾನೆ. ಆದರೆ, ದೇವಮ್ಮ ಮನೆಯಲ್ಲಿ ಅದಾಗಲೇ ಮಗುವನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದಳು. ಅದರಂತೆ ಕೇವಲ ನಾಲ್ಕು ದಿನದಲ್ಲಿ ಶ್ರೀದೇವಿಯ ಮಗುವನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ನಂಬಿಕೆ ಹುಟ್ಟಿಸಿ, ಬುಧವಾರ ಮಗುವಿಗೆ ಬಾಟಲಿ ಹಾಲು ಕುಡಿಸುವುದಾಗಿ ರೂಮಿಗೆ ಎತ್ತಿಕೊಂಡು ಹೋಗಿ ಹೊಲಕ್ಕೆ ಸಿಂಪಡಣೆ ಮಾಡುವ ಕ್ರಿಮಿನಾಶಕವನ್ನು ಹಾಲಿಗೆ ಬೆರೆಸಿ ಕುಡಿಸಿದ್ದಾಳೆ.
ವಿಷ ಬೆರೆಸಿದ ಹಾಲು ಕುಡಿದು ಮಗು ವಾಂತಿ ಮಾಡಿಕೊಳ್ಳುತ್ತಾ ಅಳಲು ಆರಂಭಿಸಿದೆ. ನಂತರ ಬಾಯಲ್ಲಿ ನೊರೆ ಬರಲು ಆರಂಭಿಸಿದೆ. ಆಗ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಸಾವನ್ನಪ್ಪಿತ್ತು. ಈ ಬಗ್ಗೆ ಅನುಮಾನ ಬಂದು ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಬಗ್ಗೆ ಪೊಲೀಸರು ಬಂದು ವಿಚಾರಣೆ ಮಾಡಿದಾಗ ದೇವಮ್ಮ ಮಗುವನ್ನು ಆಸ್ತಿಗಾಗಿಯೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಗಂಡನ ತುಂಡು ಆಸ್ತಿ ಮೊದಲ ಪತ್ನಿ ಮಗಳಿಗೆ ಹೋಗಿಬಿಟ್ಟರೆ ತನ್ನ ಮಕ್ಕಳು ಬೀದಿ ಪಾಲಾಗುತ್ತಾರೆ ಎಂಬ ಆಲೋಚನೆಯಿಂದ ಹೀಗೆ ಮಾಡಿದೆ ಎಂದು ಹೇಳಿದ್ದಾಳೆ.
ಈಗ ಮೊದಲ ಹೆಂಡತಿಗೆ ಮಗುವಾಗಿದ್ದರೂ, ಮಗು ಇಲ್ಲ. ಎರಡನೇ ಹೆಂಡತಿಗೆ ಮಕ್ಕಳಾಗಿದ್ದರೂ, ತಾಯಿ ಜೈಲಿನಲ್ಲಿದ್ದಾಳೆ. ಆ ಮಕ್ಕಳು ಅನಾಥ. ಇತ್ತ ತಾಯಿಯ ಮಡಿಲು ಬರಿದು. ಮಗುವನ್ನು ಕಳೆದುಕೊಂಡ ತಾಯಿಯ ರೋದನೆ ಮುಗಿಲು ಮುಟ್ಟಿದೆ. 2ನೇ ಹೆಂಡತಿ ಕುತಂತ್ರ ತಿಳಿಯದೇ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಬಂದ ಅಪ್ಪ ಮಮ್ಮಲ ಮರುಗುತ್ತಿದ್ದಾನೆ. ಇತ್ತ ತನ್ನ ತಾಯಿ ನಮಗೆ ಆಸ್ತಿ ಕೊಡಿಸಬೇಕೆಂದು ತಮ್ಮ ತಂಗಿಯನ್ನೇ ಕೊಲೆ ಮಾಡಿ ಜೈಲು ಸೇರಿದಳೆಂದು ಅಳುತ್ತಿದ್ದಾರೆ. ಪ್ರಪಂಚವನ್ನೇ ಅರಿಯದ ಪುಟ್ಟ ಕಂದಮ್ಮನನ್ನು ಕೊಲೆ ಮಾಡಿದ ಮಲತಾಯಿ ಆಸ್ತಿ ಹುಚ್ಚಿಗೆ ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.



