ಪೆಟ್ರೋಲಿಯಂ ಟ್ಯಾಕ್ಸ್ ಇಳಿಸೋದು ಯಾರು..? ರಾಜ್ಯಗಳಷ್ಟೇ ಇಳಿಸಬೇಕಾ.. ಮೊದಲು ಕೇಂದ್ರ ಸರ್ಕಾರವೇ ತೆರಿಗೆ ಇಳಿಸಬೇಕಾ.. ರಾಜ್ಯ,ಕೇಂದ್ರದ ನಡುವೆ ಮತ್ತೆ ಸಮರ ಶುರುವಾಗಿದೆ. ಪೆಟ್ರೋಲ್, ಡೀಸೆಲ್ ಟ್ಯಾಕ್ಸ್ ಇಳಿಸಲು ರಾಜ್ಯಗಳಿಗೆ ಕೇಂದ್ರ ಸಲಹೆ ನೀಡಿದೆ. ಈ ಸಲಹೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಲಹೆ ರಾಜಕೀಯವಾಗಿ ವಿವಾದ ಸೃಷ್ಟಿಸಿದೆ.
ಬಜೆಟ್ ನಂತರದ ಸಂದರ್ಶನಗಳಲ್ಲಿ ರಾಜ್ಯಗಳಿಗೆ ಸಲಹೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ʻಅಗತ್ಯ ವಸ್ತುಗಳ ಬೆಲೆ ಇಳಿಸಲು ರಾಜ್ಯಗಳೂ ಕೈ ಜೋಡಿಸಬೇಕು. ಇದಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಸಬೇಕು. ಕೇಂದ್ರ ಎರಡು ಬಾರಿ ಪೆಟ್ರೋಲಿಯಂ ಟ್ಯಾಕ್ಸ್ ಇಳಿಸಿದೆ. ಕರ್ನಾಟಕ ಸರ್ಕಾರ ಒಮ್ಮೆಯೂ ತೆರಿಗೆ ಇಳಿಸಿಲ್ಲʼʼ ಎಂದು ಆರೋಪಿಸಿದ್ಧಾರೆ.
ನಿರ್ಮಲಾ ಸೀತಾರಾಮನ್ ಸಲಹೆಗೆ ಕಿಡಿಕಾರುತ್ತಿರುವ ರಾಜ್ಯ ಸರ್ಕಾರದ ನಾಯಕರು ಕೆರಳುವುದು ಸಹಜ. ಪೆಟ್ರೋಲಿಯಂ ಮೂಲ ಬೆಲೆಗಿಂತ ಕೇಂದ್ರದ ತೆರಿಗೆಯೇ ಹೆಚ್ಚು ಎನ್ನುತ್ತಿರುವ ಪ್ರತಿಪಕ್ಷಗಳು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ರಾಜ್ಯ ಸರ್ಕಾರವನ್ನು ಹೊಣೆ ಮಾಡುವ ಪ್ರಯತ್ನಕ್ಕೆ ಗರಂ ಆಗಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ತೆರಿಗೆಯನ್ನೂ ಪರಿಶೀಲಿಸಿ ಎನ್ನುತ್ತಿರುವ ರಾಜ್ಯ ನಾಯಕರು ಮತ್ತೊಮ್ಮೆ ರಾಜ್ಯ ಮತ್ತು ಕೇಂದ್ರದ ಹೊಡೆದಾಟಕ್ಕೆ ಮುನ್ನುಡಿ ಬರೆದಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ”ಈ ಬಗ್ಗೆ ಜಿಎಸ್‌ಟಿ ಮಂಡಳಿ ತೀರ್ಮಾನಿಸಬೇಕಾಗುತ್ತದೆ. ಆದರೆ, ಇದಕ್ಕೆ ಎಲ್ಲ ರಾಜ್ಯಗಳ ವಿರೋಧವಿದೆ. ಕಡೇಪಕ್ಷ ವಿಮಾನಗಳಿಗೆ ಬಳಸುವ ಇಂಧನವನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ನಾವು ಕೇಳಿದರೂ ರಾಜ್ಯ ಸರಕಾರಗಳ ಹಣಕಾಸು ಸಚಿವರು ಸುತಾರಂ ಒಪ್ಪುತ್ತಿಲ್ಲ. ಹೀಗಾಗಿ ಜಿಎಸ್‌ಟಿ ಮಂಡಳಿ ಒಪ್ಪಿಗೆಯಿಲ್ಲದೆ ತೈಲೋತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಾಧ್ಯವಿಲ್ಲ,” ಎಂದು ಸ್ಪಷ್ಟ ಪಡಿಸಿದ್ದಾರೆ.
ಹಾಗೆ ನೋಡಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಪೆಟ್ರೋಲಿಯಂ ಟ್ಯಾಕ್ಸ್ ಹೇರುತ್ತಿವೆ. ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿಯೇ ಕರ್ನಾಟಕದಲ್ಲಿ ನಾವು ಖರೀದಿ ಮಾಡುವ ಒಂದು ಲೀ. ಪೆಟ್ರೋಲಿಗೆ ಪೆಟ್ರೋಲ್ ಮೂಲ ಬೆಲೆಯಷ್ಟು ಹಣ ತೆರುತ್ತಿದ್ದೇವೆ.
ಪೆಟ್ರೋಲ್ ಮೂಲ ಬೆಲೆ : 57 ರೂ. ಇದ್ದರೆ,
ಡೀಲರ್ ಕಮಿಷನನ್ ಪ್ರತಿ ಲೀಟರಿಗೆ 3.5 ರೂ. (ಮೂರು ರೂ. 50 ಪೈಸೆ)
ಎಕ್ಸೈಸ್ ಡ್ಯೂಟಿ : 19.90 ಪೈಸೆ (ಇದು ಕೇಂದ್ರ ಸರ್ಕಾರದ್ದು)
ವ್ಯಾಟ್ : 21 ರೂ. (ಇದು ರಾಜ್ಯ ಸರ್ಕಾರದ್ದು)
ಇನ್ನು ಸೆಸ್ ಲೆಕ್ಕ ಬೇರೆ. ಸೆಸ್ ವಿಧಿಸಲು ರಾಜ್ಯ ಮತ್ತು ಕೇಂದ್ರ ಎರಡಕ್ಕೂ ಅಧಿಕಾರ ಇದೆ. ಒಟ್ಟಾರೆಯಾಗಿ ನೋಡಿದರೆ ರಾಜ್ಯ ಹಾಕುತ್ತಿರುವ ತೆರಿಗೆ ಅಧಿಕ ಎನಿಸಿದರೂ ಸಹ, ಕೇಂದ್ರ ಸರ್ಕಾರದ ತೆರಿಗೆ ಕಡಿಮೆ ಏನಲ್ಲ. ಕೇವಲ ಒಂದು ರೂಪಾಯಿ ವ್ಯತ್ಯಾಸ. ಇನ್ನು ಕೇಂದ್ರ ಪಡೆಯುವ ಸೆಸ್‌ನಲ್ಲಿ ರಾಜ್ಯಗಳಿಗೆ ಯಾವುದೇ ಪಾಲು ಇಲ್ಲ. ಇನ್ನು ಬಹುತೇಕ ತೆರಿಗೆಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿ ಇರುವುದರಿಂದ ರಾಜ್ಯಕ್ಕೆ ಇರುವ ತೆರಿಗೆಗಳು ಕೇವಲ ಮೂರು.
ರಾಜಸ್ವ ತೆರಿಗೆ : ಸರ್ಕಾರದ ನೀರು, ಕರೆಂಟ್, ನೋಂದಣಿ ಇತ್ಯಾದಿಗಳಿಗೆ ಪಡೆಯುವ ಶುಲ್ಕ
ಅಬಕಾರಿ ತೆರಿಗೆ : ಮದ್ಯದ ಮೇಲೆ ವಿಧಿಸುವ ತೆರಿಗೆ
ಪೆಟ್ರೋಲಿಯಂ ಟ್ಯಾಕ್ಸ್ ; ರಾಜ್ಯ ಹಾಕುವ ತೆರಿಗೆ ಮಾತ್ರ ರಾಜ್ಯಕ್ಕೆ ಸಿಗುತ್ತದೆ.
ಹೀಗಿರುವಾಗ ಹೆಚ್ಚಿನ ಹೊಣೆಗಾರಿಕೆ ಕೇಂದ್ರದ ಮೇಲೆಯೇ ಇದೆ ಎನ್ನುವುದರಲ್ಲಿ ತಪ್ಪೇನಿಲ್ಲ.



