ಸತ್ತರೆ ಸಾಯ್ಲಿ ಬಿಡ್ರಿ.. ನಾವೇ ಬಿಜೆಪಿನ ಗೆಲ್ಲಿಸ್ತೇವೆ. ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಪ್ರಾಬ್ಲಂ ಆಗಿದ್ದೇ ನಾಲಗೆ. ಈ ಬಾರಿಯೂ ಅಂಥದ್ದೇ ಮಾತು ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದಾರೆ ಬಸನಗೌಡ ಪಾಟೀಲ ಯತ್ನಾಳ್. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರನನ್ನು (ಮಗನನ್ನು) ಕೆಳಗಿಳಿಸಿದರೆ ಒಂದು ವಾರದಲ್ಲಿ ಸಾಯುತ್ತೀನಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರ ಸಾವಿನಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದಾದರೆ ಸಾಯಲಿ. ನಮ್ಮ ಕೈಗೆ ಬಿಜೆಪಿ ಸಾರಥ್ಯವನ್ನು ಕೊಡಿ. ಬಿಜೆಪಿಯನ್ನು ನಮ್ಮ ಕೈಯಲ್ಲಿ ಕೊಟ್ಟರೆ 150 ಸೀಟು ತರ್ತೀವಿ ಎಂದು ಹೇಳಿಕೆ ಕೊಟ್ಟಿದ್ದಾರೆ ಯತ್ನಾಳ್.
ಯಡಿಯೂರಪ್ಪ ಈ ಮಾತನ್ನು ಯಾರಿಗೆ ಯಾವಾಗ ಹೇಳಿದರು ಎಂಬ ಬಗ್ಗೆ ಮಾಹಿತಿಯನ್ನೇನೂ ಕೊಟ್ಟಿಲ್ಲ. ಹಾಗೆ ನೋಡಿದರೆ ರೆಬಲ್ ಟೀಂ ಈಗಲೂ ಆಕ್ಟಿವ್ ಆಗಿದೆ. ಆದರೆ.. ಯತ್ನಾಳ್ ಮಾಧ್ಯಮಗಳಲ್ಲಷ್ಟೇ ಬಸುಗುಡುತ್ತಿದ್ದರು. ಈಗ ಇರುವ ರೆಬಲ್ ಟೀಂನವರು, ದೊಡ್ಡ ದೊಡ್ಡ ನಾಯಕರನ್ನು ತಮ್ಮ ಬಳಿಗೆ ಕರೆಸಿಕೊಳ್ಳುತ್ತಿದ್ದಾರೆ. ಹಾಗಾದರೆ ಯತ್ನಾಳ್ ಲೌಡ್ ಸ್ಪೀಕರ್ ಮಾತ್ರನಾ.. ಹಾಗೆಲ್ಲ ಹೇಳುವಂತಿಲ್ಲ. ಅವರದ್ದು ಎಂದಿನಂತೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಫೈರ್ ಫೈರ್ ಫೈರ್.. ಅಷ್ಟೇ.
ವಿಜಯಪುರದಲ್ಲಿ ಮಾತನಾಡಿರುವ ಯತ್ನಾಳ್ ʻʻಯಡಿಯೂರಪ್ಪ ಮೊದಲು ಮಗನ ರಾಜೀನಾಮೆ ಕೊಡಿಸಲಿ. ಕರ್ನಾಟಕದಲ್ಲಿ ಬಿಜೆಪಿ ಪುನರುಜ್ಜೀವನ ಆಗಬೇಕಾದರೆ ಯಡಿಯೂರಪ್ಪ ಮಗನನ್ನ ಮನೆಯಲ್ಲಿ ಇಟ್ಟುಕೊಳ್ಳಲಿ. ವಿಜಯೇಂದ್ರನದ್ದು ಕ್ರಿಮಿನಲ್ ಬುದ್ಧಿ. ನಕಲಿ ಸಹಿ, ಸಿಡಿ ಮಾಡೋ ಕೆಟ್ಟ ಚಟ ಇದೆ. ಇಂಥವರು ರಾಜ್ಯಾಧ್ಯಕ್ಷ ಅಥವಾ ಸಿಎಂ ಆದರೆ ರಾಜ್ಯ ಉದ್ದಾರ ಆಗಲ್ಲ. ಬಿಜೆಪಿ ರಾಜ್ಯಾಧ್ಯಕ್ಷನೇ ಪಕ್ಷಕ್ಕೆ ಒಂದು ದೊಡ್ಡ ಕ್ಯಾನ್ಸರ್. ಯಡಿಯೂರಪ್ಪ ಮಗನಿಂದಲೇ ಬಿಜೆಪಿ ಹಾಳಾಗುತ್ತಿದೆ. ಕ್ಯಾನ್ಸರ್ ಗಡ್ಡೆಯನ್ನ ಕತ್ತರಿಸಿ ತೆಗೆಯಬೇಕಿದೆ. ಒಂದು ವೇಳೆ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದರೆ ಯಡಿಯೂರಪ್ಪ ಪ್ರವಾಸ ಮಾಡ್ತಾರಾ.. ಎಂದೆಲ್ಲ ಯತ್ನಾಳ್ ಚಾಲೆಂಜ್ ಹಾಕಿದ್ದಾರೆ. ಇತ್ತೀಚೆಗೆ ತಾವು ರಾಜ್ಯವನ್ನೆಲ್ಲ ಸುತ್ತಿ ಪ್ರವಾಸ ಮಾಡಿ, ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಯತ್ನಾಳ್ ಈ ಮಾತು ಹೇಳಿದ್ದಾರೆ.
ಯಡಿಯೂರಪ್ಪ ಸಾವಿನ ಬಗ್ಗೆ ಮತ್ತೆ ಮಾತನಾಡಿರುವ ಯತ್ನಾಳ್ ಯಡಿಯೂರಪ್ಪ ಸಾಯೋದ್ರಿಂದ, ಹುಟ್ಟೊದ್ರಿಂದ ಕರ್ನಾಟಕದ ಭವಿಷ್ಯ ನಿಲ್ಲಬಾರದು. ಪ್ರಾಮಾಣಿಕ ಸರ್ಕಾರ ಬೇಕಿದೆ. ಮಗನನ್ನ ಉಳಿಸಲು ಬಿ.ಎಸ್. ಯಡಿಯೂರಪ್ಪ ಸಾಯ್ತಿನಿ ಎನ್ನುತ್ತಿದ್ದಾರೆ. ಯಡಿಯೂರಪ್ಪ ಸಾಯೋದ್ರಿಂದ ಕರ್ನಾಟಕಕ್ಕೆ ಒಳ್ಳೆಯದು ಆಗತ್ತೆ ಎನ್ನುವುದಾದರೆ ಆಗಲಿ ಎಂದಿದ್ದಾರೆ.
ವಿಜಯೇಂದ್ರ ಅಧ್ಯಕ್ಷನಾಗಿ ಇರುವವರೆಗೆ, ಅವನು ಪಕ್ಷದಲ್ಲಿ ಇರುವವರೆಗೆ ತಾನು ಬಿಜೆಪಿಗೆ ವಾಪಸ್ ಹೋಗುವ ಪ್ರಶ್ನೆ ಇಲ್ಲ. ಕಾಂಗ್ರೆಸ್ಸಿಗೆ ಹೋಗುತ್ತೇನೆ ಎನ್ನುವುದು ಅಸಾಧ್ಯ. ಹೊಸ ಪಕ್ಷ ಕಟ್ಟುವ ಆಲೋಚನೆಯೂ ಇಲ್ಲ. ದುಡುಕಿನ ಹೆಜ್ಜೆ ಇಡಬಾರದು ಎಂದೆಲ್ಲ ಮಾತನಾಡಿದ್ಧಾರೆ. ಆದರೆ.. ಯತ್ನಾಳ್ ಅದೇನೇ ದುಡುಕಬಾರದು ಎಂದರೂ.. ಅವರದ್ದೇ ನಾಲಗೆ ಅವರ ಮಾತು ಕೇಳುತ್ತಿಲ್ಲ. ಯತ್ನಾಳ್ ನಾಲಗೆ, ಯತ್ನಾಳ್ ಅವರ ನಿಯಂತ್ರಣ ಕಳೆದುಕೊಂಡು ಯಾವುದೋ ಕಾಲವಾಗಿದೆ.



