ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆ ಶುರುವಾದಾಗಿನಿಂದ ಶಾಕ್ ಮೇಲೆ ಶಾಕ್ ಸಿಗುತ್ತಿವೆ. ಬಹುಶಃ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಬಿಟ್ಟರೆ.. ಮಿಕ್ಕೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರು ಹೊರಹೋಗುವವರೇ ಹೆಚ್ಚು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪ್ರಾಬಲ್ಯದಿಂದಾಗಿ ಅದ್ಭುತ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಲೋಕಸಭೆಯಲ್ಲೂ ದೊಡ್ಡ ಮಟ್ಟದ ಗೆಲುವು ಪಡೆಯುವ ಸೂಚನೆ ನೀಡುತ್ತಿದೆ. ಕರ್ನಾಟಕದಲ್ಲಿ ಮಾತ್ರ ಬೇರೆ ಬೇರೆ ಪಕ್ಷಗಳಿಂದ ನಾಯಕರು ಕಾಂಗ್ರೆಸ್ಸಿಗೆ ಬರುತ್ತಿದ್ಧಾರೆ. ಕರ್ನಾಟಕದ ನಂತರ ತೆಲಂಗಾಣದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂತಾದರೂ.. ಅಲ್ಲಿ ಕರ್ನಾಟಕದ ರೀತಿಯಲ್ಲಿ ಉತ್ಸಾಹದ ವಾತಾವರಣ ಇಲ್ಲ. ಆದರೆ.. ಕರ್ನಾಟಕ ಬಿಟ್ಟರೆ.. ಮಿಕ್ಕೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ʻಗೆ ಶಾಕ್‌ಗಳಷ್ಟೇ ಸಿಗುತ್ತಿವೆ.
ಗುಜರಾತ್‌ನ ಸೂರತ್ ಹಾಗೂ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಬಳಿಕ ಈಗ ಕಾಂಗ್ರೆಸ್‌ಗೆ ಮತ್ತೊಂದು ಕ್ಷೇತ್ರದಲ್ಲಿ ಅಭ್ಯರ್ಥಿಯಿಂದ ಮೋಸವಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ ಅವರು ಚುನಾವಣೆಗೆ ಕೆಲವೇ ದಿನಗಳಿರುವಾಗ ತಾನು ಚುನಾವಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ಇದರಿಂದ ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಕೆಲ ಕ್ಷೇತ್ರಗಳಲ್ಲಿ ಯುದ್ಧಕ್ಕೂ ಮೊದಲು ಸೋಲೊಪ್ಪುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪುರಿಯಲ್ಲಿ ಚುನಾವಣೆ ಗೆಲುವಿಗೆ ಹಣಕಾಸಿ ಕೊರತೆ ಆಗಿದೆ. ತನ್ನ ಬಳಿ ಅಷ್ಟೊಂದು ಹಣವಿಲ್ಲ, ಕೇವಲ ಹಣದ ಕೊರತೆಯೊಂದೇ ನಮ್ಮನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುತ್ತಿದೆ. ಪಕ್ಷದಿಂದ ಹಣಕಾಸಿನ ನೆರವು ಸಿಗದೇ ಈ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಗೆಲುವು ಸಾಧಿಸುವುದು ಕಷ್ಟ ಸಾಧ್ಯ. ಹೀಗಾಗಿ ಪುರಿ ವಿಧಾನಸಭಾ ಕ್ಷೇತ್ರದಿಂದ ನನಗೆ ಕಾಂಗ್ರೆಸ್‌ನಿಂದ ನೀಡಿರುವ ಟಿಕೆಟ್ ಅನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಸುಚರಿತಾ ಮೊಹಂತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಸುಚರಿತಾ ಮೊಹಂತಿ, ಮೂಲತಃ ಜರ್ನಲಿಸ್ಟ್. 10 ವರ್ಷಗಳ ಹಿಂದೆ ಕಾಂಗ್ರೆಸ್ಸಿಗೆ ಬಂದಿದ್ದ ಸುಚರಿತಾ ಮೊಹಂತಿ ಪ್ರತಿ ತಿಂಗಳಾಂತ್ಯಕ್ಕೆ ಸಂಬಳ ಪಡೆಯುವ ವೃತ್ತಿಪರ ಪತ್ರಕರ್ತೆಯಾಗಿದ್ದವರು. ನನಗೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಹಣಕಾಸಿನ ತೊಂದರೆ ಇದೆ ಎಂದು ಖರ್ಗೆಯವರಿಗೆ ಪತ್ರ ಬರೆದು ಚುನಾವಣಾ ಕಣದಿಂದ ಹಿಂದೆ ಸರಿದಿದ್ಧಾರೆ.
ಇನ್ನು ರಾಜಸ್ತಾನದ ಬನ್ಸಾರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ನಾಯಕರೇ ಪ್ರಚಾರ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲು ಸೂರತ್‌ನ ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ ನಾಮಪತ್ರ ತಿರಸ್ಕೃತಗೊಂಡು ಅಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದರು. ಕಾಂಗ್ರೆಸ್‌ನ ಇಂದೋರ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಂಬ್ ಅವರು ಕೂಡ ಲೋಕಸಭೆ ಚುನಾವಣೆಗೆ ಮುನ್ನ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದರು. ಅಲ್ಲಿ ಬಿಜೆಪಿ ಗೆದ್ದಿಲ್ಲವಾದರೂ.. ಎಲೆಕ್ಷನ್ ನಡೆಯುತ್ತಿದೆ.
ಮತ್ತೊಂದೆಡೆ ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಲವ್ಲಿ ಸಿಂಗ್, ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದರು. ಅವರೀಗ ಬಿಜೆಪಿ ಸೇರ್ಪಡೆಯಾಗಿದ್ಧಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರೇ.. ರಾಜೀನಾಮೆ ನೀಡಿ ಮತ್ತೊಂದು ಪಕ್ಷದ ಸಾಮಾನ್ಯ ಸದಸ್ಯರಾಗುತ್ತಿರುವುದು ಕಾಂಗ್ರೆಸ್ಸಿಗೆ ಒಳ್ಳೆಯ ಬೆಳವಣಿಗೆಯಂತೂ ಖಂಡಿತಾ ಅಲ್ಲ. ಆದರೆ.. ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಪರಿಸ್ಥಿತಿ ಭಿನ್ನವಾಗಿದೆ.



