4 ತಿಂಗಳು ಕಳೆದೇಹೋಗಿದೆ. ಕನ್ನಡದಲ್ಲಿ ಗೆದ್ದಿದ್ದು ಒಂದೇ ಒಂದು ಸಿನಿಮಾ. ತೆಲುಗು, ತಮಿಳು, ಹಿಂದಿಯಲ್ಲಿ ಸಿನಿಮಾಗಳು ದುಡ್ಡು ಮಾಡಿವೆ. ಹೆಸರು ಮಾಡಿವೆ. ಆದರೆ, ಕನ್ನಡದಲ್ಲೇ ಪ್ರಾಬ್ಲಂ. ಹಿಂದಿಗೆ ಹೋದರೆ ಛಾವಾ, ಈಗಲೂ ಸಖತ್ತಾಗಿ ಓಡ್ತಿರೋ ಕೇಸರಿ 02 ಇದೆ.
ತೆಲುಗಿನಲ್ಲಿ ಸಂಕ್ರಾಂತಿಗೆ ವಸ್ತುನ್ನಾನು ದಾಖಲೆ ಕಲೆಕ್ಷನ್ ಮಾಡಿದೆ. ಕೋರ್ಟ್ ಜನ ಮೆಚ್ಚುಗೆ ಗಳಿಸಿದೆ. ಹಿಟ್ 03 ಸಖತ್ತಾಗಿ ಓಡ್ತಿದೆ. ತಮಿಳು, ಮಲಯಾಳಂನಲ್ಲಿಯೂ ಕೆಲವು ಸಿನಿಮಾಗಳು ದಾಖಲೆ ಬರೆದಿವೆ. ತಮಿಳಿನಲ್ಲಿ ಅಜಿತ್, ಮಲಯಾಳಂನಲ್ಲಿ ಮೋಹನ್ ಲಾಲ್ ಸಿನಿಮಾ ಗೆದ್ದಿವೆ. ಆದರೆ.. ಕನ್ನಡದಲ್ಲೇ ಪ್ರಾಬ್ಲಂ.
2025ರ ಮೇ ತಿಂಗಳು ಶುರುವಾಗಿದ್ದು, ಇದುವರೆಗೆ ರಿಲೀಸ್ ಆದ ಚಿತ್ರಗಳ ಸಂಖ್ಯೆ ಸರಿಸುಮಾರು 100ರ ಸಮೀಪದಲ್ಲಿದೆ. ಈ 4 ತಿಂಗಳಲ್ಲಿ ಗೆದ್ದಿದ್ದು ಎಷ್ಟು ಸಿನಿಮಾ.. ಹಾಕಿದ ಬಂಡವಾಳ ವಾಪಸ್ ಕೊಟ್ಟ ಸಿನಿಮಾಗಳೆಷ್ಟು.. ನಿರ್ಮಾಪಕರಿಗೆ ಲಾಭ ತಂದ ಸಿನಿಮಾಗಳೆಷ್ಟು ಎಂದು ನೋಡಿದರೆ.. ಆ 90+ ಚಿತ್ರಗಳಲ್ಲಿ ಪರವಾಗಿಲ್ಲ ಎನ್ನಿಸುವಂತೆ ಕಲೆಕ್ಷನ್ ಮಾಡಿರುವುದು ಒಂದೇ ಸಿನಿಮಾ ಎಂಬ ಮಾಹಿತಿ ಹೊರಬರುತ್ತದೆ. ಹಾಗಂತ ಗೆದ್ದ ಆ ಚಿತ್ರವೂ ಧಾಂಧೂಂ ಕಲೆಕ್ಷನ್ ಮಾಡಿಲ್ಲ. ಅನಗತ್ಯವಾಗಿ ಬಾಕ್ಸಿನಲ್ಲೇ ವರ್ಷಗಟ್ಟಲೆ ಕೂತಿದ್ದ ಸಿನಿಮಾ ಓಕೆ ಓಕೆ ಲೆವೆಲ್ಲಿಗೆ ಬಂತಾದರೂ, ನಿರ್ಮಾಪಕರಿಗೆ ದೊಡ್ಡ ಲಾಭವನ್ನೇನೂ ತಂದುಕೊಟ್ಟಿಲ್ಲ.
ಜನವರಿಯಲ್ಲಿ 23 ಸಿನಿಮಾ : ನಿರೀಕ್ಷೆ ಇದ್ದಿದ್ದು ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯ ‘ಸಂಜು ವೆಡ್ಸ್ ಗೀತಾ 2’, ದಿನಕರ್ ತೂಗುದೀಪ ಅವರ ‘ರಾಯಲ್’ ಚಿತ್ರಗಳ ಮೇಲೆ. ಆ ಎರಡೂ ಚಿತ್ರಗಳು ನಿರೀಕ್ಷೆ ಉಳಿಸಿಕೊಳ್ಳಲಿಲ್ಲ. ಪಾರು ಪಾರ್ವತಿ, ನೋಡಿದವರು ಏನಂತಾರೆ, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು, ಫಾರೆಸ್ಟ್ ಸಿನಿಮಾಗಳು ಗಮನ ಸೆಳೆದವಷ್ಟೇ ಗೆದ್ದಿದ್ದು ಛೂಮಂತರ್ ಮಾತ್ರ. ಶರಣ್, ಆದಿತಿ ಪ್ರಭುದೇವ, ಮೇಘನಾ ಗಾಂವ್ಕರ್ ನಟಿಸಿದ್ದ ಚಿತ್ರ ಅಲ್ಲಿಗಲ್ಲಿಗೆ ಸರಿ ಹೋಗುವಂತೆ ಕಲೆಕ್ಷನ್ ಮಾಡಿತು.
ಫೆಬ್ರವರಿಯಲ್ಲಿ 33 ಸಿನಿಮಾ : ಫೆಬ್ರವರಿ ತಿಂಗಳಿಗೆ 28 ದಿನಗಳಷ್ಟೇ ಇದ್ದರೂ, ಈ ತಿಂಗಳಲ್ಲಿ ರಿಲೀಸ್ ಆಗಿದ್ದು 33 ಸಿನಿಮಾ. ದಿನಕ್ಕೊಂದು ಸಿನಿಮಾ ಎಂಬ ಲೆಕ್ಕವನ್ನೂ ಮೀರಿ ಬಂದ ಚಿತ್ರಗಳು ಥಿಯೇಟರಿಗೆ ಬಂದಷ್ಟೇ ವೇಗದಲ್ಲಿ ಮರೆಯಾದ ಚಿತ್ರಗಳು. ‘ಅಪಾಯವಿದೆ ಎಚ್ಚರಿಕೆ’,’ಭಾವ ತೀರ ಯಾನ’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಅನಾಮಧೇಯ ಅಶೋಕ್ ಕುಮಾರ್.. ನೋಡಬಹುದು ಎಂಬ ಅಭಿಪ್ರಾಯ ಪಡೆದರೆ, ನಿರೀಕ್ಷೆ ಹುಟ್ಟಿಸಿದ್ದ ಸಿದ್ಲಿಂಗು 2, ವಿಷ್ಣುಪ್ರಿಯಾ ಚಿತ್ರಗಳೂ ಕೂಡಾ ಗೆಲ್ಲಲಿಲ್ಲ. ಈ ತಿಂಗಳಲ್ಲಿ ಒಂದೇ ಒಂದು ಸ್ಟಾರ್ ಸಿನಿಮಾ ಕೂಡಾ ಇರಲಿಲ್ಲ.
ಮಾರ್ಚ್ ತಿಂಗಳಲ್ಲಿ 18 ಸಿನಿಮಾ : ಅತೀ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದ್ದ ಯೋಗರಾಜ್ ಭಟ್ಟರ ಮನದ ಕಡಲು, ರಕ್ಷಿತ್ ಶೆಟ್ಟಿ ಬ್ಯಾನರಿನ ಮಿಥ್ಯ ನಿರೀಕ್ಷೆಯ ಮಟ್ಟ ಮುಟ್ಟುವಲ್ಲಿ ಸೋತವು. ಪ್ರಜ್ವಲ್ ದೇವರಾಜ್ ಅಭಿನಯದ ರಾಕ್ಷಸ, ಥಿಯೇಟರಿಂದ ವಾಪಸ್ ಹೋದ ಮೇಲೆ ಪ್ರೇಕ್ಷಕರಿಗೆ ಗೊತ್ತಾಯಿತು. ಈ ತಿಂಗಳಲ್ಲಿ ಕೆಲವು ಥಿಯೇಟರಿಗಷ್ಟೇ ಅಲ್ಲದೆ, ನೇರವಾಗಿ ಓಟಿಟಿಯಲ್ಲಿ ರಿಲೀಸ್ ಆದವು.
ಏಪ್ರಿಲ್ ತಿಂಗಳಲ್ಲಿ 16 : ಇನ್ನು ಈಗ ಕಂಪ್ಲೀಟ್ ಆಗಿರುವ ಏಪ್ರಿಲ್ ತಿಂಗಳಲ್ಲಿ ಅಜ್ಞಾತವಾಸಿ, ವಿದ್ಯಾಪತಿ, ವೀರ ಚಂದ್ರಹಾಸ, ಫೈರ್ ಫ್ಲೈ, ವರ್ಷಗಳಿಂದ ಡಬ್ಬಾದಲ್ಲಿದ್ದ ವಾಮನ ಸ್ವಲ್ಪ ಸದ್ದು ಮಾಡಿದವು. ಗೆಲ್ಲಲಿಲ್ಲ. ಅಜ್ಞಾತವಾಸಿಗೆ ಮೆಚ್ಚುಗೆ ಬಂತು. ಅದೇಕೋ ಅದು ಪ್ರಚಾರವನ್ನೇ ಮರೆತಿತ್ತು. ಇನ್ನು ಇದ್ದುದರಲ್ಲಿ ಓಕೆ ಎನ್ನುವ ಕಲೆಕ್ಷನ್ ಮಾಡಿರುವುದು ಅಜೇಯ್ ರಾವ್ ಅಭಿನಯದ ಯುದ್ಧಕಾಂಡ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಇಷ್ಟಾಗಿಯೂ ಲಾಭ ಪಕ್ಕಾ ಎನ್ನುವಂತಿಲ್ಲ.
ಒಟ್ಟಾರೆಯಾಗಿ ಆಟವನ್ನೇನೋ ಭರ್ಜರಿಯಾಗಿ ಆಡಲಾಗಿದೆ. ತಂಡ ಸೋತಿದೆ ಎನ್ನಬಹುದು. ಇಷ್ಟೆಲ್ಲದರ ಮಧ್ಯೆ ಒಂದಿಷ್ಟು ದುಡ್ಡು ಆಡಿದ ಏಕೈಕ ಸಿನಿಮಾ ಛೂಮಂತರ್. ಆ ಚಿತ್ರದಲ್ಲಿ ಇದ್ದದ್ದು ಶರಣ್, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಚಿಕ್ಕಣ್ಣ ಅವರಂತಹವರೇ.