ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕದ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆಯಾಗಿದ್ದು ಮಂಡ್ಯ, ಹಾವೇರಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾಸನ, ವಿಜಯಪುರ, ತುಮಕೂರು ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಲ್ಪಟ್ಟಿದೆ. ಈ ಪೈಕಿ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಸುದ್ದಿ ಮಾಡ್ತಿದ್ಧಾರೆ. ಇಷ್ಟಕ್ಕೂ ಯಾರಿದು ಸ್ಟಾರ್ ಚಂದ್ರು..?
ಸ್ಟಾರ್ ಚಂದ್ರು ಒಬ್ಬ ಉದ್ಯಮಿ. ಸ್ಟಾರ್ ಬಿಲ್ಡರ್ಸ್ ಎಂಬ ಕಂಪನಿಯ ಓನರ್. ದೊಡ್ಡ ದೊಡ್ಡ ಮಟ್ಟದ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರೂ ಹೌದು. ವಿಸಿ ನಾಲೆ ಆಧುನೀಕರಣ ಕಾಮಗಾರಿ ಸಹ ಇವರ ಕಂಪನಿಯಿಂದಲೇ ಆಗುತ್ತಿದೆ. ಸಚಿವ ಎನ್. ಚಲುವರಾಯ ಸ್ವಾಮಿ ಅವರ ಆಪ್ತ ಹಾಗೆಯೇ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಪರಮಾಪ್ತ.
ಸ್ಟಾರ್ ಚಂದ್ರು ಗೌರಿಬಿದನೂರಿನ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ ಅವರಿಗೆ ಸೋದರರಾಗಬೇಕು. ಚಿಕ್ಕಬಳ್ಳಾಪುರದ ಹಾಲಿ ಸಂಸದ ಬಿ.ಎನ್.ಬಚ್ಚೇಗೌಡ್ರ ಮಗ ಶಾಸಕ ಶರತ್ ಬಚ್ಚೇಗೌಡರಿಗೆ ಇದೇ ಪುಟ್ಟಸ್ವಾಮಿ ಗೌಡ್ರ ಮಗಳು ಪ್ರತಿಭಾ ಅವರನ್ನು ಮದುವೆ ಮಾಡಿ ಕೊಡಲಾಗಿದೆ. ಅಲ್ಲಿಗೆ ಸ್ಟಾರ್ ಚಂದ್ರು ಅವರು, ಶರತ್ ಬಚ್ಚೇಗೌಡರಿಗೆ ಮಾವನಾಗಬೇಕು. ಬಚ್ಚೇಗೌಡ ಕುಟುಂಬದ ಬೀಗರಾದ ಸ್ಟಾರ್ ಚಂದ್ರು, ರಾಜಕೀಯದಲ್ಲಿ ಸ್ಪರ್ಧೆ ಮಾಡುತ್ತಿರುವ ಹೊಸಬರಾದರೂ, ರಾಜಕೀಯಕ್ಕೆ ಹಳಬರೇ.
ಸುಮಾರು 60 ವರ್ಷ ವಯಸ್ಸಿನ ಸ್ಟಾರ್ ಚಂದ್ರು ಮೂಲತಃ ಮಂಡ್ಯ ಜಿಲ್ಲೆಯವರೇ. ನಾಗಮಂಗಲ ತಾಲೂಕಿನವರು. ಬೆಳ್ಳೂರು ಹೋಬಳಿಯ ಅಗಚಹಳ್ಳಿ ಮತ್ತು ಬೆಳ್ಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮುಗಿಸಿ, ಆದಿಚುಂಚನಗಿರಿಯಲ್ಲಿ ಪಿಯುಸಿ ಶಿಕ್ಷಣ ಪಡೆದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ಅವರು ವಿವೇಕಾನಂದ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಬಿ.ಎಸ್‌ಸಿ ಪದವಿ ಪಡೆದಿದ್ದಾರೆ.
ಈಗಾಗಲೇ ತನಗೇ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಸ್ಟಾರ್ ಚಂದ್ರು ಅವರು ಮಂಡ್ಯ ಲೋಕಸಭಾ ಕ್ಷೇತ್ರ ಸಂಚಾರ ನಡೆಸಿದ್ದಾರೆ. ಸ್ಥಳೀಯ ನಾಯಕರನ್ನು ಮಾತನಾಡಿಸುವ ಕೆಲಸ ಆರಂಭಿಸಿದ್ದು, ತಾಲೂಕು ಮಟ್ಟದ, ಗ್ರಾಮ ಮಟ್ಟದ ಮುಖಂಡರ ಭೇಟಿ ಮಾಡಿ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿದ್ದರು. ಈಗ ಅಧಿಕೃತವಾಗಿ ಪ್ರಚಾರವನ್ನು ಆರಂಭಿಸಲು ಸನ್ನದ್ಧರಾಗಿದ್ದಾರೆ.
ಇನ್ನು ಇವರ ಎದುರಾಳಿ ಯಾರಾಗ್ತಾರೆ ಅನ್ನೋ ಕುತೂಹಲ ಇದೆ. ಮಂಡ್ಯ, ಬಿಜೆಪಿಯವರ ಕೈಗೇ ಸಿಕ್ಕರೆ ಸುಮಲತಾ ಅಂಬರೀಷ್ ಸ್ಪರ್ಧೆ ಮಾಡಲಿದ್ಧಾರೆ. ಅಥವಾ ಜೆಡಿಎಸ್ʻಗೆ ಸಿಕ್ಕರೆ ಆಗ ಪುಟ್ಟರಾಜು, ತಮ್ಮಣ್ಣ ಅಥವಾ ಕುಮಾರಸ್ವಾಮಿ ಕುಟುಂಬದವರು ಸ್ಪರ್ಧೆ ಮಾಡಬಹುದು.



