ನೀವು ಊಪಿರಿ ಅನ್ನೋ ತೆಲುಗು ಸಿನಿಮಾ ನೋಡಿದ್ದರೆ, ಇದು ಸರಳವಾಗಿ ಅರ್ಥವಾಗುತ್ತದೆ. ಏಕೆಂದರೆ ಇದು ಹೆಚ್ಚೂ ಕಮ್ಮಿ ಊಪಿರಿ ಸಿನಿಮಾವನ್ನೇ ಹೋಲುವ ಕಥೆ. ಆ ಸಿನಿಮಾದಲ್ಲಿ ನಾಗಾರ್ಜುನ, ಕಾರ್ತಿ, ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿದ್ದರು. ಮಾತನಾಡುವುದೊಂದನ್ನು ಬಿಟ್ಟು, ಕೈಕಾಲು ಎತ್ತುವುದಕ್ಕೂ ಆಗದ ನಾಯಕ, ಆದರೆ ಕೋಟ್ಯಧಿಪತಿ. ಆತನಿಗೆ ಕೆಲಸಕ್ಕೆ ಸೇರುವ ಕಾರ್ತಿ, ತಮ್ಮನಂತೆ ಆರೈಕೆ ಮಾಡುತ್ತಾನೆ. ಅತ್ತ ಕಾರ್ತಿಯ ಬದುಕನ್ನೂ ನಾಗಾರ್ಜುನ ಸರಿಪಡಿಸುತ್ತಾನೆ. ಕೊನೆಗೆ ಅಣ್ಣನನ್ನು ಬಿಟ್ಟು ಹೋಗುವಾಗ, ಕಾರ್ತಿ.. ನಾಗಾರ್ಜುನನಿಗೆ ಪ್ರಿಯತಮೆಯೊಬ್ಬಳ ಜೊತೆ ಸೇರಿಸುತ್ತಾನೆ. ನಾಗಾರ್ಜುನನ ಪರಿಸ್ಥಿತಿ ತಿಳಿದೂ ಆತನನ್ನು ಪ್ರೀತಿಸುವ ಯುವತಿಯಾಗಿ ಶ್ರೀಯಾ ಸರಣ್ ನಟಿಸಿದ್ದರು. ಸಿನಿಮಾದಲ್ಲಿ ಎಲ್ಲವೂ ಸಾಧ್ಯ. ಆದರೆ ನಿಜ ಜೀವನದಲ್ಲಿ ಹೀಗಾಗುತ್ತದೆಯೇ..
ಹೌದು, ಆಗುತ್ತದೆ ಎಂದು ಮಾಡಿ ತೋರಿಸಿರುವುದು ನಟ, ಕೋಟ್ಯಧಿಪತಿ ರಾಜಕಾರಣಿ ನೆಪೋಲಿಯನ್. ನೆಪೋಲಿಯನ್, ಮೂಲತಃ ತಮಿಳು ನಟ. ತಮಿಳಿನಲ್ಲಿ ಸ್ಟಾರ್ ಹೀರೋ ಆಗಿರುವ ಈತ ಕನ್ನಡದಲ್ಲಿ ಜಯಸೂರ್ಯ, ಬಿಲ್ಲಾರಂಗ, ಗೌರ್ನಮೆಂಟ್, ರೌಡಿ ಬ್ರದರ್ಸ್ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ನಟಿಸಿದ್ದ ಯಾವ ಚಿತ್ರವೂ ಹಿಟ್ ಆಗಿಲ್ಲ. ಈ ನಟನ ಬಳಿ ಕೋಟಿ ಕೋಟಿ ಆಸ್ತಿ ಇದೆ. ಹೆಸರಿದೆ. ಕೀರ್ತಿಯೂ ಇದೆ. ಸಾಫ್ಟ್‌ವೇರ್ ಉದ್ಯಮಿ. ರಾಜಕಾರಣಕ್ಕೆ ಸೇರಿದ್ದ ಕಾರಣ, ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ ಮಿನಿಸ್ಟರ್ ಕೂಡಾ ಆಗಿದ್ದ ಕಾರಣ, ಅಧಿಕಾರವೂ ಇದೆ. ಆದರೆ.. ಇವರ ಮಗನ ಪರಿಸ್ಥಿತಿಯೇ ಘೋರ.
ನೆಪೋಲಿಯನ್ ಮದುವೆಯಾಗಿರೋದು ಜಯಸುಧಾ ಎಂಬುವವರನ್ನ. ಇವರಿಗೆ ಇಬ್ಬರು ಮಕ್ಕಳು. ಅದೇನು ದುರ್ವಿಧಿಯೋ ಏನೋ.. ಒಬ್ಬ ಮಗ ಧನುಷ್, ಈಗಲೂ ವ್ಹೀಲ್ ಚೇರ್ ಬಿಟ್ಟು ಏಳಲಾರ. ಕೈ ಎತ್ತಲಾರ. ಥೇಟು ಊಪಿರಿ ಸಿನಿಮಾದ ನಾಗಾರ್ಜುನನಂತೆ. ಏಕೆಂದರೆ ಈತನಿಗೆ ಬಾಲ್ಯದಿಂದಲೇ ಸ್ನಾಯು ಕ್ಷಯ (ಸ್ನಾಯುಗಳ ಶಕ್ತಿ ದುರ್ಬಲವಾಗುವ ಅಪರೂಪದ ಕಾಯಿಲೆ) ಮಸ್ಯುಲರ್ ಡಿಸ್ಟ್ರೋಫಿ ಅನ್ನೋ ಕಾಯಿಲೆ ಇದೆ. ಈ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸುವುದು ಸಾಧ್ಯವೇ ಇಲ್ಲ. ಹೀಗಿದ್ದರೂ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋದ ದಂಪತಿ ಇಂದಿಗೂ ಅಲ್ಲಿಯೇ ಇದ್ದಾರೆ. ಮಗನಿಗೆ ಈಗ ೨೫ ವರ್ಷ. ಆ 25 ವರ್ಷದ, ಕೈಕಾಲು ಚಲಿಸಲೂ ಸಾಧ್ಯವಾಗದ 25 ವರ್ಷದ ಧನುಷ್ʻನನ್ನು ಅಕ್ಷಯ ಎಂಬ ಯುವತಿ ಮದುವೆಯಾಗಿದ್ದಾರೆ.
ತಿರುನಲ್ವೇಲಿ ಜಿಲ್ಲೆಯ ಅಕ್ಷಯ, ನರ್ಸಿಂಗ್ ಮುಗಿಸಿದ್ದಾರೆ. ಅಕ್ಷಯ್ ದೇಹಸ್ಥಿತಿಯೂ ಗೊತ್ತಿದೆ. ಆತನ ಜೊತೆ ಇನ್ನು ಮುಂದೆ ಅಕ್ಷಯ ಪತ್ನಿಯಾಗಿರಬಹುದು, ಆದರೆ ಲೈಂಗಿಕ ಸುಖವೂ ಸೇರಿದಂತೆ ಯಾವುದೇ ದಾಂಪತ್ಯ ಸುಖ ಇಲ್ಲ. ಆತನ ಸೇವೆ ಮಾಡಿಕೊಂಡಿರಬೇಕಷ್ಟೆ.
ಅಕ್ಷಯ ಅವರ ತಂದೆ ತಾಯಿ ಶ್ರೀಮಂತರೇನಲ್ಲ. ಬಡವರೂ ಅಲ್ಲ. ಇತ್ತೀಚೆಗೆ ಇವರ ಮದುವೆ ಜಪಾನ್‌ನ ಟೋಕಿಯೋದಲ್ಲಿ ನೆರವೇರಿದೆ. ದುಡ್ಡಿದ್ದರೆ ಏನೂ ಮಾಡಬಹುದು, ಎಂಥವರು ಬೇಕಾದರೂ, ಎಂಥವರನ್ನು ಬೇಕಾದರೂ ಮದುವೆಯಾಗಬಹುದು ಎಂದೆಲ್ಲ ನೆಟ್ಟಿಗರು ವಾದ ಮಾಡ್ತಿದ್ದಾರೆ.
ಇದು ಆಸೆಗಳನ್ನೆಲ್ಲ ತ್ಯಜಿಸಿದ ಪ್ರೇಮವೋ.. ದುಡ್ಡಿನ ಆಸೆಗೆ ಮೂಡಿದ ಪ್ರೀತಿಯೋ.. ನೆಟ್ಟಿಗರು ಕಮೆಂಟ್ ಮಾಡುತ್ತಿದ್ದರೆ, ಅಕ್ಷಯ-ಧನುಷ್ ದಂಪತಿ ಹೊಸ ಜೀವನ ಆರಂಭಿಸಿದ್ದಾರೆ.



