ಕನ್ನಡದ ಬೇರೆಯ ಚಿತ್ರ ನಿಮರ್ಮಾಕರು, ಬ್ಯಾನರುಗಳಿಗೆ ಹೋಲಿಸಿದರೆ ಹೊಂಬಾಳೆಯವರು ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕ ಕೊಡ್ತಾರೆ. ಏಕೆಂದರೆ ಇನ್ನೂ ಹಲವರು ನಾವು ಲೆಕ್ಕ ಕೊಡ್ತೀವಿ.. ಕೊಡ್ತೀವಿ.. ಅಂತಾನೇ ಹೇಳಿ ಆಮೇಲೆ ಲೆಕ್ಕ ಕೊಡಲ್ಲ. ಕಾಟೇರ, ಕೃಷ್ಣಂ ಪ್ರಣಯ ಸಖಿ, ಭೀಮ.. ಹೀಗೆ ಗೆದ್ದಿರುವ ಚಿತ್ರಗಳೂ ಲೆಕ್ಕ ಕೊಟ್ಟಿಲ್ಲ. ಮಾರ್ಟಿನ್ ಅಂತಹ ಸೋತ ಚಿತ್ರಗಳೂ ಕೂಡಾ ಸರಿಯಾದ ಲೆಕ್ಕ ಕೊಟ್ಟಿಲ್ಲ. ಆದರೆ ಹೊಂಬಾಳೆಯವರು ಕೆಲವೊಮ್ಮೆ ಲೆಕ್ಕ ಕೊಡ್ತಾರೆ. ಈಗ ಅವರೇ ಕೊಟ್ಟಿರೋ ಲೆಕ್ಕದ ಪ್ರಕಾರ ಶ್ರೀಮುರಳಿ ಅಭಿನಯದ ಬಘೀರ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ 20 ಕೋಟಿ ದಾಟಿದೆ.
ಸರಾಸರಿ ಪ್ರತಿದಿನ ಮೂರೂವರೆ ಕೋಟಿ ಕಲೆಕ್ಷನ್ ಆಗಿದೆ. 18 ರಿಂದ 20 ಕೋಟಿ ಕಲೆಕ್ಷನ್ ಆಗಿದೆ ಎಂದು ಚಿತ್ರತಂಡದವರೇ ಹೇಳಿದ್ದಾರೆ. ಬಘೀರ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಡಾ.ಸೂರಿ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ.
‘ಬಘೀರ’ ಮೊದಲ ವಾರ ಒಳ್ಳೆ ಕಲೆಕ್ಷನ್ ಮಾಡಿದೆ. ಇನ್ನು ಮುಂದಿನ ವಾರ ಹೇಗೆ ಕಲೆಕ್ಷನ್ ಮಾಡುತ್ತೆ. ಎಷ್ಟು ಕೋಟಿ ಕಲೆಕ್ಷನ್ ಆಗಬಹುದು ಅನ್ನುವ ಕುತೂಹಲವಿದೆ. ಅಲ್ಲದೆ ಈ ವೀಕೆಂಡ್‌ನಲ್ಲಿ ‘ಬಘೀರ’ ಕಲೆಕ್ಷನ್ ಮತ್ತಷ್ಟು ಹೆಚ್ಚಾಗಬಹುದು. 25 ಕೋಟಿ ರೂಪಾಯಿ ಕಲೆಕ್ಷನ್ ಆಗುವ ನಿರೀಕ್ಷೆ ಕೂಡ ಇದೆ. ಒಟ್ನಲ್ಲಿ ಕನ್ನಡದ ಮೊದಲ ಸೂಪರ್ ಹೀರೋಗೆ ಭರ್ಜರಿ ಸಕ್ಸಸ್ ಸಿಕ್ಕಂತೆ ಆಗಿದೆ.
ಏಕೆಂದರೆ ಚಿತ್ರತಂಡ ಎರಡು ಸ್ನೀಕ್ ಪೀಕ್ ಬಿಡುಗಡೆ ಮಾಡಿದೆ. ವಿದ್ಯಾರ್ಥಿಯ ಮೂಲಕ ಕರೆಂಟ್ ಶಾಕ್ ಕೊಡುವ ಟೆಕ್ನಾಲಜಿ ಕಲಿಯುವ ಬಘೀರ ಹಾಗೂ ಬಘೀರನ ಮಾಸ್ಕ್ ಸೃಷ್ಟಿಸುವ ಹವಾ ಇರುವ ಎರಡು ದೃಶ್ಯಗಳನ್ನು ಹೊಂಬಾಳೆ ಸಂಸ್ಥೆಯೇ ರಿಲೀಸ್ ಮಾಡಿದೆ. ಅದು ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.
ಕರೆಂಟ್ ಶಾಕ್ ಸೀನ್ : ಬಘೀರ ದೃಶ್ಯ 01 ರಲ್ಲಿ ಪೊಲೀಸ್ ಸ್ಟೇಷನ್ನಿಗೆ ಒಬ್ಬ ಹುಡುಗ ಬರುತ್ತಾನೆ. ಆತನನ್ನು ಮುಟ್ಟಿದರೆ ಕರೆಂಟ್ ಶಾಕ್ ಹೊಡೆಯುತ್ತೆ. ಹೇಗೆ.. ಪೊಲೀಸ್ ಆಫೀಸರ್ ವೇದಾಂತ್ ಕೂಡಾ ಥ್ರಿಲ್ ಆಗ್ತಾನೆ. ಆಮೇಲೆ ಆ ಹುಡುಗನಿಂದ ಎಕ್ಸ್‌ಪೆರಿಮೆಂಟ್ ಮಾಡೋದು ಹೇಗೆ ಅನ್ನೋದನ್ನ ತಿಳ್ಕೊಳ್ತಾನೆ. ಮುಂದೆ.. ಬಘೀರ ಅದನ್ನು ದುಷ್ಟ ಸಂಹಾರಕ್ಕೆ ಬಳಸಿಕೊಳ್ತಾನಾ.. ಏಕೆಂದರೆ ಸ್ವಲ್ಪ ತಮಾಷೆಯಾಗಿ ಚಿತ್ರಿಸಿರುವ ದೃಶ್ಯದಲ್ಲಿ ಅಷ್ಟೇ ಗಂಭೀರತೆಯೂ ಇದೆ. ದೃಶ್ಯ ಸಖತ್ತಾಗಿದೆ.
ಇನ್ನೊಂದು ದೃಶ್ಯ..
ರಸ್ತೆಯಲ್ಲೇ ಹುಚ್ಚನಾಗುವ ಪ್ರಕಾಶ್ ರಾಜ್ : ಸಿಬಿಐ ಅಧಿಕಾರಿ ಪ್ರಕಾಶ್ ರಾಜ್ʻಗೆ ಅವನಾಶ್ ಕರೆ ಮಾಡ್ತಾರೆ. ನನ್ನ ಮಗನ ಸಾವಿಗೆ ಕಾರಣನಾದ ಬಘೀರನನ್ನು ಹುಡುಕಬೇಕು, ನನ್ನ ಮಗ, ನಿನಗೂ ಮಗನಂತೆಯೇ ಪ್ರೀತಿ ಪಾತ್ರನಾಗಿದ್ದ ಎಂದು ಹೇಳ್ತಾರೆ. ಪ್ರಕಾಶ್ ರಾಜ್ ಬಘೀರ.. ಬಘೀರ.. ಎಂದು ಟೆನ್ಷನ್ನಿನಲ್ಲಿ ಕೂಗುವಾಗ.. ಕಾರಿನ ಬಳಿ ಬಘೀರ ಮಾಸ್ಕ್ ಹಾಕ್ಕೊಂಡು ಬರೋ ವ್ಯಾಪಾರಿ, ಬಘೀರ ಮಾಸ್ಕ್ ತಗೊಳ್ಳಿ ಅಂತಾನೆ. ಅವನನ್ನು ನಡುರಸ್ತೆಯಲ್ಲೇ ಹಿಡಿದು ಚಚ್ಚುತ್ತಾರೆ ಪ್ರಕಾಶ್ ರಾಜ್. ಆಮೇಲೆ ಇದು ರಸ್ತೆ ಎಂದು ಸುಮ್ಮನಾಗಿ, ಶಾಂತವಾಗುವಾಗ.. ಅಲ್ಲಿಯೇ ಬೈಕ್ ಮೇಲೆ ಕುಟುಂಬದ ಜೊತೆ ಹೋಗುತ್ತಿದ್ದ ವ್ಯಕ್ತಿ, ಮಗನಿಗೆ ಹಾಕಿದ್ದ ಬಘೀರನ ಮಾಸ್ಕ್ ತೆಗೆದು ಇಟ್ಟುಕೊಳ್ತಾನೆ.
ಈ ಎರಡು ದೃಶ್ಯಗಳನ್ನ ಹೊಂಬಾಳೆ ರಿಲೀಸ್ ಮಾಡಿದೆ. ಎರಡು ದೃಶ್ಯಗಳನ್ನೂ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಏಕೆಂದರೆ ಬಘೀರ ಪ್ರೇಕ್ಷಕರಿಗೆ ಇಷ್ಟವಾಗಿದ್ದಾನೆ.
ಏಕೆಂದರೆ ಚಿತ್ರದಲ್ಲಿ ಕ್ಲಾಸ್ ಮತ್ತು ಮಾಸ್ ಎರಡೂ ಹದವಾಗಿ ಬೆರೆತಿದೆ. ಪ್ರಶಾಂತ್ ನೀಲ್ ಕಥೆಯನ್ನೂ ಅಷ್ಟೇ ಚೆಂದವಾಗಿ ತಂದಿದ್ದಾರೆ ಡಾ.ಸೂರಿ. ಹೊಂಬಾಳೆ ನಿರ್ಮಾಣದ ಅದ್ಧೂರಿತನವೂ ಇದೆ. ಸುಧಾರಾಣಿಯ ತಾಯಿ ಸೆಂಟಿಮೆಂಟ್, ರುಕ್ಮಿಣಿ-ಶ್ರೀಮುರಳಿಯ ಕ್ಯೂಟ್ ಲವ್ ಸ್ಟೋರಿಯೂ ಇದೆ. ಮತ್ತು ಮಕ್ಕಳು ಇಷ್ಟಪಡುತ್ತಿರುವ ಚಿತ್ರದಲ್ಲಿ ಡಬಲ್ ಮೀನಿಂಗ್ ಸಂಭಾಷಣೆ ಇಲ್ಲ. ಇದೆಲ್ಲದರ ಜೊತೆಗೆ ಚಿತ್ರದ ಎರಡು ದೃಶ್ಯಗಳನ್ನು ನೋಡಿಯೇ.. ಇನ್ನೂ ಸಿನಿಮಾ ನೋಡದಿರುವ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ.
ಶ್ರೀಮುರಳಿ ಅಭಿನಯದ ಬಘೀರ ರಿಲೀಸ್ ಆಗಿ ಒಂದು ವಾರವಾಗಿದ್ದು, ವಾರದ ಕಲೆಕ್ಷನ್ ಈಗಾಗಲೇ ೨೦ ಕೋಟಿ ದಾಟಿದೆ. ಬಾಕ್ಸಾಫೀಸ್ ದಾಖಲೆ ಬರೆಯುವುದಕ್ಕೆ ಎಲ್ಲ ರೀತಿಯಲ್ಲೂ ಸಿದ್ಧವಾಗಿದೆ.



