ಭಕ್ತಿ ಎಂದರೇ ಹಾಗೆ. ನಾವೇ ಡಾ.ರಾಜ್ ಅವರಲ್ಲಿ ರಾಮ, ಕೃಷ್ಣ, ತಿಮ್ಮಪ್ಪ, ರಾಘವೇಂದ್ರ ಸ್ವಾಮಿಯವರನ್ನೆಲ್ಲ ಕಂಡು ನಮಸ್ಕರಿಸಿದ್ದೇವೆ. ತೆಲುಗಿನ ಎನ್ʻಟಿಆರ್ ಕಥೆ ಬಿಡಿ, ಅದು ಬೇರೆಯದ್ದೇ ಆದ ಭಕ್ತಿ. ತೀರಾ ಇತ್ತೀಚೆಗೆ ರಿಷಬ್ ಶೆಟ್ಟಿ ಅವರಿಗೆ ದೈವಕ್ಕೆ ಕೊಡುವಂತಹ ಮರ್ಯಾದೆ, ಗೌರವವನ್ನೇ ಕೊಡುತ್ತಿದ್ಧಾರೆ. ಅಂತಹುದರಲ್ಲಿ ರಾಮಾಯಣದಲ್ಲಿ ನಟಿಸಿದ್ದ ರಾಮ ಸೀತೆ ಲಕ್ಷ್ಮಣ ಹನುಮಂತರ ಪರಿಸ್ಥಿತಿ ಹೇಗಿರಬಹುದು. ಈಗಲೂ ಎಲ್ಲಿ ಕಂಡರೆ ಅಲ್ಲಿ ರಾಮಾಯಣ ಧಾರಾವಾಹಿಯ ರಾಮ ಸೀತೆ ಲಕ್ಷ್ಮಣರಿಗೆ ಕಾಲಿಗೆ ಬೀಳುವವರಿದ್ಧಾರೆ. ಅಂತಹ ರಾಮ ಸೀತೆ ಲಕ್ಷ್ಮಣ ಅಯೋಧ್ಯೆಗೇ ಬಂದರೆ.. ಅಲ್ಲಿ ನಡೆಯುವುದು ಭಕ್ತಿಯ ಉತ್ಸವ.
ಶ್ರೀರಾಮ ಅರುಣ್ ಗೋವಿಲ್. ಸೀತೆ ದೀಪಿಕಾ ಚಿಕಾಲಿಯಾ. ಲಕ್ಷ್ಮಣ ಸುನಿಲ್ ಲಹರಿ. ನಿರ್ದೇಶಕ ರಮಾನಂದ ಸಾಗರ್. ಎಲ್ಲರೂ ಅಯೋಧ್ಯೆ ತಲುಪಿದ್ದಾರೆ. ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಬಂದಿರುವ ಅರುಣ್ ಗೋವಿಲ್, ದೀಪಿಕಾ ಚಿಖಾಲಿಯಾ ಮತ್ತು ಸುನಿಲ್ ಲಹರಿ ಅವರಿಗೆ ಅಯೋಧ್ಯೆಯ ಮಂದಿ ಅದ್ಧೂರಿ ಸ್ವಾಗತ ನೀಡಿದ್ದಾರೆ.
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮ ಲಲ್ಲಾನ ‘ಪ್ರಾಣ ಪ್ರತಿಷ್ಠಾ’ ಸಮಾರಂಭ ನಡೆಯಲಿದೆ. ಈ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಈಗಾಗಲೇ ಹಲವು ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ. ಅದರಲ್ಲಿ ನಮ್ಮ ಬಾಲ್ಯದ ದಿನಗಳ ರಾಮ, ಸೀತೆ, ಲಕ್ಷ್ಮಣರಾಗಿ ಕಾಣಿಸಿಕೊಂಡಿದ್ದ ನಟರಿಗೂ ಆಹ್ವಾನ ಕೊಟ್ಟಿದ್ದಾರೆ.
ಭಗವಾನ್ ರಾಮನ ಪ್ರತಿಷ್ಠಾಪನೆಯು ಈ ರೀತಿ ನಡೆಯುತ್ತದೆ ಎಂದು ನನಗೆ ತಿಳಿದಿರಲಿಲ್ಲ, ಇದು ಅಂತಹ ಐತಿಹಾಸಿಕ ಘಟನೆಯಾಗಿದೆ. ಇದು ನನ್ನ ಜೀವನದ ದೊಡ್ಡ ಘಟನೆಯಾಗಿದೆ. ಭಗವಾನ್ ರಾಮನಿರುವಲ್ಲೆಲ್ಲಾ ಇಡೀ ದೇಶವು ರಾಮನ ಹೆಸರನ್ನು ಮಾತ್ರ ತೆಗೆದುಕೊಳ್ಳುತ್ತಿದೆ. ನಾವು ಅಂತಹ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ ಎಂಬುದೆ ನಮಗೆ ಖುಷಿ ಎಂದಿದ್ದಾರೆ ಅರುಣ್ ಗೋವಿಲ್.
ಅಯೋಧ್ಯೆಗೆ ರಾಮಾಯಣದ ರಾಮ ಸೀತೆ ಲಕ್ಷ್ಮಣರೂ ಅತಿಥಿಗಳೇ. ಬಂದಿರೋದು ಹಮಾರೇ ರಾಮ್ ಆಯೇಂಗೆ ಅನ್ನೋ ಆಲ್ಬಂ ಚಿತ್ರೀಕರಣಕ್ಕೆ. ಈ ಹಾಡನ್ನು ಗುಪ್ತರ್ ಘಾಟ್, ಹನುಮಾನ್ ಗರ್ಹಿ ಮತ್ತು ಲತಾ ಚೌಕ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ.
ಶ್ರೀರಾಮನ ಪಾತ್ರ ಮಾಡಿದ್ದ ಅರುಣ್ ಗೋವಿಲ್, ರಮಾನಂದ್ ಸಾಗರ್ ಅವರನ್ನು ಈಗಲೂ ಹಲವು ಕಡೆ ಭಕ್ತಿ ಭಾವದಿಂದ ಪೂಜಿಸುವ ಸಾವಿರಾರು ಅಭಿಮಾನಿಗಳಿದ್ಧಾರೆ. ಎಲ್ಲೇ ಕಂಡರೂ ಕಾಲಿಗೆ ಬಿದ್ದು ನಮಸ್ಕರಿಸುವ ಹಿರಿಯರಿದ್ಧಾರೆ.
ಹಾಗೆ ನೋಡಿದರೆ ರಾಮಾಯಣ ಧಾರಾವಾಹಿ ಹಲವು ಕಲಾವಿದರ ಹಣೆಬರಹವನ್ನೇ ಬದಲಿಸಿತು. ಅಷ್ಠೇ ಅಲ್ಲ, ರಾಮಜನ್ಮಭೂಮಿ ಹೋರಾಟದಲ್ಲಿ ರಾಮಾಯಣ ಧಾರಾವಾಹಿ ವಹಿಸಿದ್ದ ಪಾತ್ರ ಬಹಳ ದೊಡ್ಡದು. ಮನೆ ಮನೆಗೂ ರಾಮಾಯಣ ಕಥೆಯನ್ನು ತಲುಪಿಸಿದ ಕೀರ್ತಿ ರಾಮಾಯಣ ಧಾರಾವಾಹಿಯದ್ದು. ಇವತ್ತಿಗೂ ನೂರಾರು ಕರಸೇವಕರು ರಾಮಾಯಣ ಧಾರಾವಾಹಿ ತಮ್ಮ ಹೋರಾಟಕ್ಕೆ ನೀಡಿದ ಜನಬೆಂಬಲವನ್ನು ಸ್ಮರಿಸಿಕೊಳ್ಳುತ್ತಾರೆ. ಅಯೋಧ್ಯೆಯವರೂ ಅಷ್ಟೆ. ಅಯೋಧ್ಯೆಯ ಹಣೆಬರಹವೂ ಬದಲಾಗಿದೆ.



