ಗಾಯಕಿ ಕೆ.ಎಸ್.ಚಿತ್ರಾ. ಮೊದಲಿಗೆ ಇವರು ಹಾಡಿರುವ ಕನ್ನಡದ ಮಧುರ ಗೀತೆಗಳನ್ನೊಮ್ಮೆ ನೋಡೋಣ.
ಕೇಳಿಸದೆ ಕಲ್ಲು ಕಲ್ಲಿನಲಿ.. ಕನ್ನಡ ನುಡಿ..
ಓಂಕಾರದಿ ಕಂಡೆ ಪ್ರೇಮನಾದವಾ..
ಕನಸುಗಾರನ ಒಂದು ಕನಸು ಕೇಳಮ್ಮ್.
ಶ್ರೀಗಂಧದಾ ಗೊಂಬೆ.. ಮೆಲ್ಲ ಮೆಲ್ಲನೆ ಬರುತಾಳಮ್ಮ..
ಒಂದೇ ಉಸಿರಂತೆ ಇನ್ನು ನಾನು ನೀನು..
ಊರ ಕಾಯೋ ಮುತ್ತೈದೆ..ಅಣ್ಣಮ್ಮಾ ಬಾರಮ್ಮಾ
ಇವು ಚಿತ್ರ ಅವರು ಹಾಡಿದ ಗೀತೆಗಳ ಒಂದು ಸ್ಯಾಂಪಲ್ ಅಷ್ಟೇ. ಈಗ ವಯಸ್ಸು 60 ವರ್ಷ. ಕೇರಳದವರು. ಅವರು ಮಾಡಿದ್ದು ಒಂದೇ ಒಂದು ಅಪರಾಧ. ಎರಡು ದಿನಗಳ ಹಿಂದಷ್ಟೇ ಕೆ. ಎಸ್. ಚಿತ್ರಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪುಟ್ಟದೊಂದು ವಿಡಿಯೋ ಅಪ್‌ಡೇಟ್ ಮಾಡಿ ಜನವರಿ 22 ರಂದು ಮಧ್ಯಾಹ್ನ 12.20ಕ್ಕೆ ಎಲ್ಲರೂ ‘ಶ್ರೀರಾಮ, ಜಯ ರಾಮ, ಜಯ ಜಯ ರಾಮ’ ಎಂಬ ಮಂತ್ರವನ್ನು ಭಜನೆ ಮಾಡಿ ಎಂದು ಕರೆ ಕೊಟ್ಟಿದ್ದು. ಶ್ರೀರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಆಗುವ ಹೊತ್ತಲ್ಲಿ ಎಲ್ಲರೂ ರಾಮ ನಾಮ ಭಜಿಸಿ ಧ್ಯಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗುವಂತೆ, ಕೃತಾರ್ಥರಾಗುವಂತೆ ಕೆ. ಎಸ್. ಚಿತ್ರಾ ಅವರು ಕರೆ ನೀಡಿದ್ದರು.
ಇಡೀ ದೇಶ ಒಂದು ರೀತಿಯಲ್ಲಿ ರಾಮೋತ್ಸವದ ಸಂಭ್ರಮದಲ್ಲಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯಾಗುತ್ತಿದೆ. ಆ ದಿನ ಖುದ್ದು ಪ್ರಧಾನಿ ಮೋದಿಯವರೇ ರಾಮಲಲ್ಲ ಪ್ರತಿಷ್ಠಾಪನೆ ಮಾಡಲಿದ್ಧಾರೆ. ಸಾವಿರಾರು ಸೆಲಬ್ರಿಟಿಗಳು ಭಾಗವಹಿಸುತ್ತಿದ್ದಾರೆ. ಮನೆ ಮನೆಗೆ ಮಂತ್ರಾಕ್ಷತೆ ಬರುತ್ತಿದೆ. ಎಲ್ಲೆಲ್ಲೂ ರಾಮಜಪ. ಹೀಗಿರುವಾಗಲೇ.. ಹಿರಿಯ ಗಾಯಕಿ ಚಿತ್ರಾ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಶ್ರೀರಾಮ ಜಪ ಮಾಡುವಂತೆ ವಿಡಿಯೋ ಮಾಡಿದ್ದರು. ಆದರೆ ಅವರಿಗೆ ಸೈಬರ್ ಟಾರ್ಚರ್ ಯಾವ ಮಟ್ಟಿಗೆ ಆಗಿದೆಯೆಂದರೆ ರಾಜ ಜಪ ಮಾಡಿ ಎಂದು ಮಾಡಿದ್ದ ವಿಡಿಯೋವನ್ನು ಸ್ವತಃ ಡಿಲೀಟ್ ಮಾಡುವಂತೆ ಆಗಿದೆ. ಇನ್ನು ರಾಮ ಮಂದಿರ ಉದ್ಘಾಟನೆ ದಿನ ಸಂಜೆ ವೇಳೆಗೆ ಜನರು ತಮ್ಮ ಮನೆ ಮುಂದೆ 5 ದೀಪಗಳನ್ನು ಹಚ್ಚಿಡಬೇಕು ಎಂದೂ ಚಿತ್ರಾ ಅವರು ಕರೆ ನೀಡಿದ್ದರು. ವಿಡಿಯೋ ಸಂದೇಶದ ಕೊನೆಯಲ್ಲಿ ‘ಲೋಕ ಸಮಸ್ತ ಸುಖಿನೋ ಭವಂತು’ ಎಂಬ ಸಂಸ್ಕೃತ ಶ್ಲೋಕದೊಂದಿಗೆ ವಿಡಿಯೋ ಪೂರ್ತಿ ಮಾಡಿದ್ದರು.
ಮಂತ್ರ ಜಪಿಸಿ ಎಂದು ಹೇಳುವ ಮೂಲಕ ಚಿತ್ರಾ ಅವರು ರಾಜಕೀಯ ಮಾಡುತ್ತಿದ್ಧಾರೆ. ಬಿಜೆಪಿಯತ್ತ ವಾಲಿದ್ಧಾರೆ ಎಂದು ಟೀಕೆ ವ್ಯಕವಾಗಿತ್ತು. ಕೀಳು ಮಟ್ಟದ ಟೀಕೆಗಳಂತೂ ಎಗ್ಗಿಲ್ಲದೆ ಬಂದಿದ್ದವು. ಕೊನೆಗೆ ಆ ರೀತಿಯ ಟೀಕೆಯನ್ನು ಎದುರಿಸಲಾಗದೆ ಸ್ವತಃ ಚಿತ್ರಾ ಅವರೇ ವಿಡಿಯೋ ಡಿಲೀಟ್ ಮಾಡಿದ್ಧಾರೆ.
ಚಿತ್ರಾ ಅವರಿಗೆ ರಕ್ಷಣೆ ನೀಡುವಲ್ಲಿ ಕೇರಳ ಪೊಲೀಸರು ವಿಫಲರಾಗಿದ್ದಾರೆ. ಸೈಬರ್ ಕ್ರೈಂ ಮಾಡುವವರಿಗೆ ಕನಿಷ್ಠ ಒಂದು ಎಚ್ಚರಿಕೆಯನ್ನೂ ನೀಡಲಾಗದಷ್ಟು ಕೇರಳ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಟೀಕಿಸಿರುವ ಕೇರಳ ಬಿಜೆಪಿ ಘಟಕ, ಕೇರಳವನ್ನು ಎಡರಂಗ ಸರ್ಕಾರ ತಾಲಿಬಾನ್ ಮಾಡಲು ಹೊರಟಿದೆ ಎಂದು ಕಿಡಿ ಕಾರಿದೆ. ಕೇರಳ ಸರ್ಕಾರದ್ದು ಮಾತ್ರ ಸದ್ಯದವರೆಗೂ ನೋ ಆಕ್ಷನ್.



