ಒಂದು ಕಡೆ ರೇಣುಕಾಸ್ವಾಮಿ ಕೊಲೆ ಕೇಸ್ ಸರಿಯಾಗಿ ನಡೆಯುತ್ತಿದೆ ಎಂಬ ನಂಬಿಕೆ ಬೇರೂರುತ್ತಿರುವಾಗಲೇ.. ಸರ್ಕಾರ ಒಂದು ಅನುಮಾನಕ್ಕೆ ಎಡೆ ಮಾಡುವ ಹೆಜ್ಜೆ ಇಟ್ಟಿದೆ. ಭಾರಿ ಚರ್ಚೆಗೆ ಕಾರಣವಾಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಇದೇ ಮೊದಲ ಬಾರಿಗೆ ಅನುಮಾನ ಕಾಡುವುದಕ್ಕೆ ಶುರುವಾಗಿದೆ. ಆರಂಭದಲ್ಲಿ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ದೊಡ್ಡವರು ಚಿಕ್ಕವರು ಎಂದು ನೋಡದೆ ಲೀಗಲ್ ಆಕ್ಷನ್ ತೆಗೆದುಕೊಂಡಿದ್ದವರು ಪೊಲೀಸರು. ಅದಾದ ಮೇಲೆ ಸ್ಟೇಷನ್ನಿಗೆ ಶಾಮಿಯಾನ ಹಾಕಿದ್ದು, ಸಚಿವರು ಹಾಗೂ ರಾಜಕಾರಣಿಗಳ ಮಧ್ಯ ಪ್ರವೇಶ ಸುದ್ದಿಗಳು ಬಂದವಾದರೂ.. ಸಿಎಂ ಸಿದ್ದರಾಮಯ್ಯ ಭರವಸೆ ಕೊಟ್ಟಿದ್ದ ಹಿನ್ನೆಲೆಯಲ್ಲಿ ʻನ್ಯಾಯದ ಪ್ರಕ್ರಿಯೆʼ ಜರುಗಲಿದೆ ಎಂಬ ವಿಶ್ವಾಸ ಮೂಡಿತ್ತು. ಆದರೆ ಇದೀಗ ಇದ್ದಕ್ಕಿದ್ದಂತೆ ಎಸ್ʻಪಿಪಿ ಬದಲಾವಣೆಯ ಸುದ್ದಿ ಬರುತ್ತಿದೆ.
ಪ್ರಸನ್ನ ಕುಮಾರ್ ಇತಿಹಾಸ ವ್ಯಕ್ತಿತ್ವ ಎಂಥದ್ದು ?
ರಾಜ್ಯ ಸರ್ಕಾರ ಜೂನ್ 15ರಂದು ಹಿರಿಯ ವಕೀಲ ಪಿ.ಪ್ರಸನ್ನಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿತ್ತು. ಎಸ್‌ಪಿಪಿ ಸಹಾಯಕರಾಗಿ ವಕೀಲ ಸಿ.ಸಚಿನ್ ಅವರನ್ನು ನಿಯೋಜಿಸಿತ್ತು. ಪ್ರಸನ್ನ ಅವರ ಖ್ಯಾತಿಯೇನೆಂದರೆ ಎನ್ʻಐಎ ಹಾಗೂ ಸಿಬಿಐ ಪರ ವಕೀಲರಾಗಿ ಕೆಲಸ ಮಾಡಿದ ಅನುಭವ ಇರುವವರು. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದರಲ್ಲಿ ಯಶಸ್ವಿಯಾಗಿರುವ ಪ್ರಕರಣಗಳೇ ಹೆಚ್ಚು. ಸೋತಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅವರು ವಕೀಲಿಕೆ ಮಾಡಿದ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ಶೇ.90ಕ್ಕಿಂತಲೂ ಹೆಚ್ಚು. ಇನ್ನು ಎನ್ʻಐಎ ಪರ ವಾದಿಸಿದ್ದ ಉಗ್ರಗಾಮಿ ಪ್ರಕರಣಗಳಲ್ಲಂತೂ ಪ್ರಸನ್ನ ಅವರ ಸಾಧನೆ ಶೇ.99.99 ಕಾಂಪ್ರಮೈಸ್ ಆಗಲ್ಲ, ಹಾಗೂ ಪ್ರಭಾವಗಳಿಗೆ ಬಗ್ಗಲ್ಲ ಎನ್ನುವುದು ಪ್ರಸನ್ನ ಅವರ ಹಿರಿಮೆ.
ಆದರೆ ಇದೀಗ ಎಸ್ʻಪಿಪಿ ಸ್ಥಾನಕ್ಕೆ ಬೇರೆಯವರನ್ನು ಸಂಪರ್ಕ ಮಾಡಿದ್ದು, ಆ ಹಿರಿಯ ವಕೀಲರು ನೋ ಎಂದಿದ್ದಾರೆ ಎನ್ನಲಾಗಿದೆ. ಎರಡನೇ ಬಾರಿ ಡಿ ಗ್ಯಾಂಗ್ ಅನ್ನು ಪೊಲೀಸ್ ಕಸ್ಟಡಿಗೆ ನೀಡುವಲ್ಲಿ ಕೋರ್ಟ್‌ನಲ್ಲಿ ವಾದಿಸಿ ಕೇಸ್‌ಗೆ ಮುನ್ನಡೆ ತಂದಿದ್ದು, ಇದೇ ಪ್ರಸನ್ನಕುಮಾರ್. ಆದರೆ ಪ್ರಭಾವಿ ಸಚಿವರುಗಳು ಯಾಕೆ ಬದಲಾವಣೆಗೆ ಒತ್ತಾಯಿಸುತ್ತಿದ್ದಾರೆ ಎಂಬುದು ಮಾತ್ರ ನಿಗೂಢ ಪ್ರಶ್ನೆ.
ಇನ್ನು ಸಿಎಂ ಸಿದ್ದರಾಮಯ್ಯ ಈ ಹಿಂದೆಯೇ ದರ್ಶನ್ ವಿಚಾರವನ್ನು ಎತ್ತಿಕೊಂಡು ಯಾರು ಕೂಡ ನನ್ನ ಬಳಿಗೆ ಬರಬೇಡಿ ಎಂದೇನೋ ಹೇಳಿದ್ದರು. ಆದರೆ ಇದೀಗ ಸಿಎಂ ಎದುರು ಮತ್ತೆ ಬಂದಿರುವ ರಾಜಕಾರಣಿಗಳು ಖಡಕ್ ವಕೀಲರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ದರ್ಶನ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ತಪ್ಪೊಪ್ಪಿಕೊಂಡ್ರಾ ದರ್ಶನ್..?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರಂಭದಲ್ಲಿ ತನಿಖಾಧಿಕಾರಿಗಳ ಮುಂದೆ ತನಗೆ ಏನೂ ಗೊತ್ತಿಲ್ಲ ಎಂದೇ ವಾದಿಸುತ್ತಿದ್ದ ದರ್ಶನ್, ಸತತ ವಿಚಾರಣೆ ಬಳಿಕ ತಪ್ಪೊಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಜೂನ್ 8 ರಂದು ಪಟ್ಟಣಗೆರೆ ಶೆಡ್‌ನಲ್ಲಿ ಕರೆಂಟ್ ಶಾಕ್, ಮಾರಣಾಂತಿಕ ಹಲ್ಲೆಯಿಂದ ರೇಣುಕಾಸ್ವಾಮಿ ಮೃತಪಟ್ಟ ಮೇಲೆ ದರ್ಶನ್ ಟೆನ್ಷನ್ ಆಗಿದ್ದರು. ಇದೀಗ ಪೊಲೀಸರ ಎದುರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತಮ್ಮ ಹೆಸರು ಎಲ್ಲಿಯೂ ಹೊರಬರದಂತೆ ತಡೆಯಲು ಪರಮಾಪ್ತ ಪ್ರದೂಶ್‌ಗೆ 30 ಲಕ್ಷ ರೂ. ಕೊಟ್ಟಿದ್ದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊಲೆಯಾದ ರೇಣುಕಾಸ್ವಾಮಿ ಮೃತದೇಹವನ್ನು ವಿಲೇವಾರಿ ಮಾಡುವಂತೆ ದರ್ಶನ್ ಹೇಳಿದ್ದರಂತೆ. ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು ಎಂದು ಸೂಚಿಸಿದ್ದರಂತೆ. ಮಾತ್ರವಲ್ಲದೆ, ಪೊಲೀಸ್, ಲಾಯರ್, ಶವ ಸಾಗಿಸೋ ವ್ಯಕ್ತಿಗಳಿಗೆ ದರ್ಶನ್ ಹಣ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಪೊಲೀಸರ ಬಳಿ ದರ್ಶನ್ ರೇಣುಕಾಸ್ವಾಮಿಯನ್ನು ಹೊಡೆಯುವ ವಿಡಿಯೋ ಇದೆ ಎನ್ನಲಾಗಿದ್ದು, ಆ ವಿಡಿಯೋವನ್ನು ದರ್ಶನ್ʻಗೆ ತೋರಿಸಿದ ಬಳಿಕವೇ ದರ್ಶನ್ ಇನ್ನು ಬೇರೆ ದಾರಿ ಇಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾನೆ ಎನ್ನಲಾಗಿದೆ.ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ತನಿಖಾ ತಂಡ ಕಲೆಹಾಕುತ್ತಿದ್ದು ಜೂ.8ರಂದು ದರ್ಶನ್ ಧರಿಸಿದ್ದ ಬಟ್ಟೆ, ನೀಲಿಬಣ್ಣದ ಶೂ ಹಾಗೂ ಮನೆಯ ಸಿಸಿಟಿವಿ ಡಿವಿಆರ್ ಸಹ ಜಪ್ತಿ ಮಾಡಿದೆ.ರೇಣುಕಾಸ್ವಾಮಿ ಕೊಲೆ ದಿನ ದರ್ಶನ್ ಟ್ರೂ ರಿಲಿಜಿಯನ್ ಹೆಸರಿನ ನೀಲಿಬಣ್ಣದ ಜೀನ್ಸ್ ಪ್ಯಾಂಟ್, ಓಪಿಯಮ್ ವ್ಯಾಲಿ ಕಂಪನಿಯ ಕಪ್ಪು ಬಣ್ಣದ ರೌಂಡ್ ಟೀ ಶರ್ಟ್ ಧರಿಸಿದ್ದರು. ಜತೆಗೆ, ಲೊಪೋರ್ಸ್ ಕಂಪನಿ ಶೂ ಧರಿಸಿದ್ದರು. ಐಡಿಯಲ್ ಹೋಮ್ಸ್‌ನಲ್ಲಿರುವ ದರ್ಶನ್ ನಿವಾಸದ ಮಹಜರು ವೇಳೆ ತಾನು ಧರಿಸಿದ್ದ ಬಟ್ಟೆಗಳನ್ನು ದರ್ಶನ್ ಗುರುತಿಸಿದ್ದು ಜಪ್ತಿ ಮಾಡಲಾಗಿದೆ. ಜತೆಗೆ, ಲೊಪೊರ್ಸ್ ಶೂ ತನ್ನ ಅಸಿಸ್ಟೆಂಟ್ ಮುಖಾಂತರ ಪತ್ನಿ ವಿಜಯಲಕ್ಷ್ಮೀ ವಾಸವಿರುವ ಹೊಸಕೆರೆಹಳ್ಳಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿಇಡಲಾಗಿತ್ತು. ಇವುಗಳನ್ನು ಜಪ್ತಿ ಮಾಡಲಾಗಿದೆ.
ಡಬಲ್ ಪಾರ್ಟಿ : ರೇಣುಕಾಸ್ವಾಮಿ ಹತ್ಯೆ ಬಳಿಕ ಎರಡು ಪ್ರತ್ಯೇಕ ಪಾರ್ಟಿಗಳಾಗಿವೆ. ಜೂನ್ 8ರ ರಾತ್ರಿ ಎರಡು ತಂಡಗಳಾಗಿ ಬೇರೆ ಬೇರೆ ಕಡೆ ಪಾರ್ಟಿ ಮಾಡಿದ್ದಾರೆ. ದರ್ಶನ್, ವಿನಯ್, ದೀಪಕ್, ಪ್ರದೋಶ್, ನಾಗರಾಜ್ ಒಂದ್ಕಡೆ ಪಾರ್ಟಿ ಮಾಡಿದ್ದಾರೆ. ಆರ್.ಆರ್.ನಗರದ ಸ್ಟೋನಿ ಬ್ರೂಕ್ ಹೋಟೆಲ್ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಅತ್ತ ಶವವನ್ನು ರಾಜಾಕಾಲುವೆಗೆ ಎಸೆದು ಬಂದ ಕಾರ್ತಿಕ್, ಕೇಶವ್, ನಿಖಿಲ್ ಕೂಡ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆರ್.ಆರ್.ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್ಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ದೀಪಕ್ ನೀಡಿದ ಹಣದಲ್ಲಿ ಆರೋಪಿಗಳು ಹೋಟೆಲ್ನಲ್ಲಿ ಪಾರ್ಟಿ ಮಾಡಿದ್ದರು.



