ಮುಖ್ಯಮಂತ್ರಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲಿ ನಡೆಯುತ್ತಿರುವ ತಿಕ್ಕಾಟವನ್ನು ಇದೀಗ ಸೋನಿಯಾ ಗಾಂಧಿಯವರ ಸಲಹೆ ಮೇರೆಗೆ ಮಲ್ಲಿಕಾರ್ಜುನ ಖರ್ಗೆಯವರಿಗೇ ವರ್ಗಾಯಿಸಿದ್ದಾರಂತೆ ಸೋನಿಯಾ ಗಾಂಧಿ. ಅದರ ಪರಿಣಾಮವೇ ಮಲ್ಲಿಕಾರ್ಜುನ ಖರ್ಗೆಯವರ ಈ ಹೇಳಿಕೆ. ಇದು ಸ್ಥಳೀಯ ಸಮಸ್ಯೆ, ಇದನ್ನು ಸ್ಥಳೀಯ ನಾಯಕರೇ ಇತ್ಯರ್ಥಪಡಿಸಿಕೊಳ್ಳಬೇಕು.. ಎಂಬ ಖರ್ಗೆಯವರ ಹೇಳಿಕೆ ಹಿಂದೆ ಸೋನಿಯಾ ಗಾಂಧಿಯವರ ಎಂಟ್ರಿಯೂ ಇದೆ.
ನಾಯಕತ್ವ ಕುರಿತ ಗೊಂದಲಗಳು ಸ್ಥಳೀಯ ಮಟ್ಟದಲ್ಲಿ ಮಾತ್ರ ಇದೆಯೇ ಹೊರತೂ ಹೈಕಮಾಂಡ್ ಮಟ್ಟದಲ್ಲಿ ಅಲ್ಲ ಎಂದಿರುವ ಖರ್ಗೆ ಈ ವಿಷಯದಲ್ಲಿ ಹೈಕಮಾಂಡ್ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಇದು ಸ್ಥಳೀಯ ಮಟ್ಟದಲ್ಲಿ ಮಾತ್ರ ಇದೆ. ಇದು ಸೃಷ್ಟಿಯಾಗಿರುವುದು ಸ್ಥಳೀಯವಾಗಿ. ಹೀಗಾಗಿ ಪಕ್ಷದೊಳಗಿನ ಆಂತರಿಕ ಗೊಂದಲಗಳ ಕುರಿತು ಸ್ಥಳೀಯ ನಾಯಕತ್ವ ಹೊಣೆ ಹೊರಬೇಕೇ ಹೊರತೂ, ಹೈಕಮಾಂಡ್ ಹೊಣೆ ಮಾಡಬಾರದು. ಎಲ್ಲದ್ದಕ್ಕೂ ಹೈಕಮಾಂಡ್ ಹೊಣೆ ಎಷ್ಟು ಮಾಡುವುದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟು ಕ್ಲಿಯರ್ ಕಟ್ ಆಗಿ ಇದೂವರೆಗೆ ಏನನ್ನೂ ಹೇಳದೇ ಇದ್ದ ಖರ್ಗೆ ಇದ್ದಕ್ಕಿದ್ದಂತೆ ಈ ಮಾತು ಹೇಳಿದ್ದು ಏಕೆ..? ಅದರ ಹಿಂದೆ ಒಂದು ಸ್ಟೋರಿ ಇದೆ.
ಕಾಂಗ್ರೆಸ್ ಹೈಕಮಾಂಡ್ ಆಗಿರುವ ರಾಹುಲ್ ಗಾಂಧಿ ಅವರಿಗೆ ಎರಡೂವರೆ ವರ್ಷಗಳ ನಂತರ ನನಗೆ ಸಿಎಂ ಹುದ್ದೆ ಕೊಡಿಸ ಬೇಕು’ ಅಂತ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಕಿದ ಪಟ್ಟು ಚಿಂತೆ ಹೆಚ್ಚಿಸಿತ್ತು. ಸಿಎಂ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಸಾಲಿಡ್ಡು ನಾಯಕ. ಅಂಥವರನ್ನು ಕೆಳಗಿಳಿಸಿದರೆ ಪಕ್ಷದ ಮತಬ್ಯಾಂಕ್ ದುರ್ಬಲವಾಗುತ್ತದೆ ಎಂದು ಆತಂಕಗೊಂಡಿದ್ದರು ರಾಹುಲ್ ಗಾಂಧಿ. ಅದಕ್ಕೆ ಏನು ಪರಿಹಾರ ಎಂದು ಸೋನಿಯಾ ಅವರಲ್ಲಿ ಕೇಳಿದಾಗ ʻʻಅಧಿಕಾರ ಹಂಚಿಕೆ ವಿಷಯದಲ್ಲಿ ಸ್ಪಷ್ಟತೆ ಇಲ್ಲದಿದ್ದರೆ ಈ ಕುರಿತು ಎಐಸಿಸಿ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸಬೇಕು. ಅವರು ಸಿಎಂ ಮತ್ತು ಡಿಸಿಎಂ ಜತೆ ಮಾತನಾಡಿ ಒಂದು ತೀರ್ಮಾನಕ್ಕೆ ಬರಲಿ. ಆನಂತರ ಅಂತಿಮ ನಿರ್ಧಾರಕ್ಕೆ ಬರೋಣʼʼ ಎಂದು ಸಲಹೆ ಕೊಟ್ಟಿದ್ದಾರೆ. ತಾಯಿಯ ಮಾತಿನಂತೆ ರಾಹುಲ್ ಗಾಂಧಿ ಇಡೀ ಪ್ರಕರಣ ನಿಭಾಯಿಸುವ ಜವಾಬ್ದಾರಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವರ್ಗಾಯಿಸಿದ್ದಾರೆ.
ರಾಹುಲ್ ಗಾಂಧಿ ಅವರು ಖರ್ಗೆ ಅವರಿಗೆ ʻʻ ಅಧಿಕಾರ ಹಂಚಿಕೆ ಒಪ್ಪಂದ ಎಂಬುದು ನನ್ನ ಸಮ್ಮುಖದಲ್ಲಿ ನಡೆದ ಬೆಳವಣಿಗೆಯಲ್ಲ. ಆದರೆ ಈ ಬೆಳವಣಿಗೆ ನಡೆದಿದ್ದೇ ಆಗಿದ್ದರೆ ನೀವು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರನ್ನೂ ಒಟ್ಟಿಗೆ ಕೂರಿಸಿ ಮಾತನಾಡಿ. ಅದರ ಅಧಾರದ ಮೇಲೆ ತೀರ್ಮಾನ ತೆಗೆದುಕೊಂಡರಾಯಿತುʼʼ ಎಂದು ಹೇಳಿದ್ದಾರೆ. ಇದಾದ ನಂತರವೇ ಹೊರಬಿದ್ದಿರುವ ಖರ್ಗೆಯವರ ಈ ಹೇಳಿಕೆ.
ಖರ್ಗೆಯವರ ಮನಸ್ಸಿನಲ್ಲಿ ಏನಿದೆ..?
ಅಧಿಕಾರ ಹಂಚಿಕೆ ಎಪಿಸೋಡು ಕೂಲ್ ಆಗಿ ನಡೆಯಬೇಕು ಎಂದರೆ ಮೊದಲು ಸಿದ್ದರಾಮಯ್ಯ ಅವರ ಮನ ಒಲಿಸಲೇಬೇಕು ಎನ್ನುವುದು ಖರ್ಗೆಯವರ ಇಂಗಿತ. ಮೂಲಗಳ ಪ್ರಕಾರ, ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಹುದ್ದೆ ವಹಿಸಿ ಕೊಡುವ ವಿಷಯದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಸಹಮತವಿದೆ. ಆದರೆ ಈ ವಿಷಯವನ್ನು ಖಡಕ್ಕಾಗಿ ಹೇಳಿದರೆ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂಬ ಅತಂಕವೂ ಇದೆ. ಏಕೆಂದರೆ ಸಿದ್ದರಾಮಯ್ಯ ಅವರ ಪವರ್ ಏನು ಎನ್ನುವುದು ಮಲ್ಲಿಕಾರ್ಜುನ ಖರ್ಗೆಯವರಿಗೆ ಚೆನ್ನಾಗಿ ಗೊತ್ತು. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಖರ್ಗೆ.



