ಉತ್ತರ ಕರ್ನಾಟಕದ ಜನಪದ ಹಾಡುಗಳೆಂದರೆ ಯಾವುವು..? ಅಲ್ಲಿನ ಮಣ್ಣಿನ ಸೊಗಡನ್ನು ಹೇಳುವ ಹಾಡುಗಳು. ಕಿವಿಗೆ ತಂಪು ನೀಡುವ, ಹೃದಯಕ್ಕೆ ಹತ್ತಿರವಾಗಿರುವ, ಮನಸ್ಸನ್ನು ಚಿಂತನೆಗೆ ಹಚ್ಚುವ ಹಾಡುಗಳಿಗೆ ಉತ್ತರ ಕರ್ನಾಟಕದಲ್ಲಿ ಬರವೇ ಇಲ್ಲ. ಆದರೆ, ಇದೀಗ ಬರುತ್ತಿರುವ ಉತ್ತರ ಕರ್ನಾಟಕ ಜನಪದ ಹಾಡುಗಳ ವಿರುದ್ಧ ಅಲ್ಲಿನ ಕಲಾವಿದರೇ ಕೆರಳಿ ನಿಂತಿರುವ ಪ್ರಕರಣ ನಡೆದಿದೆ. ಇಷ್ಟಕ್ಕೂ ಆಗಿರುವುದೇನೆಂದರೆ..
ಹುಡುಗಿ ಕತ್ತಲದಾಗ.. ಹುಡುಗ ನೀ ಹಿತ್ತಲದಾಗ..
ಸೋಗಲಾಡಿ ಸುಂದ್ರಿ..
ತೋರ್ಸೋದೂ ತೋರುಸ್ತಿ..
ಆಂಟಿ ಸುದ್ದಿ ತರರರ..
ಊರನ ಹುಡುಗಿ ತೋಟದಾಗ ಹುಡುಗನ ತಲೆ ಕೆಡಿಸಿ..
ನೋಡಾಕ ಬಂದಾಳ ನಮ್ಮೂರ ಹುಡುಗಿ..
ನಂಬಿ ಹುಚ್ಚಾಗಿನಿ ಚಿಲ್ಲಾರ ಹುಡುಗ್ಯಾರನ..
ಏನ ಗಂಟ ಬಿದ್ದಾಳಪ್ಪ..
ನಾ ನಿಮಗಿಂತ ಬೆರಕಿ..
ಏನೈತಿ ಹುಡುಗಿ ನಿನ್ನ ಎಳೆ ಸೊಂಟ..
ಹತ್ತ ಹುಡುಗಿ ಬಂಡಿಯಾಗ.. ಹಣಕಿ ನೋಡಬೇಡ ಕಿಂಡಿಯಾಗ..
ಪಟ್ಟಿ ಹೇಳುತ್ತಾ ಹೋದರೆ ಉದ್ದ ಇದೆ. ಆದರೆ ಜನಪದ ಗೀತೆಗಳೆಂದರೆ ನಿಜವಾದ ಜನಪದ ಗೀತೆಗಳು. ಉತ್ತರ ಕರ್ನಾಟಕದ ಸೊಗಡನ್ನೇ ತೆಗೆದುಕೊಂಡರೆ..
ಶಿವನು ಭಿಕ್ಷಕೆ ಬಂದ ನೋಡು ಬಾರೆ..
ತಿಂಗಾಳು ಮುಳುಗಿದವೋ.. ರಂಗೋಲಿ ಬೆಳಗಿದವೋ..
ಶರಣು ಶರಣುವಯ್ಯ..
ಯಾಕೆ ಬಡಿದಾಡ್ತೀ ತಮ್ಮ..
ಕೋಡಗನ ಕೋಳಿ ನುಂಗಿತ್ತಾ..
ಇಂತಹ ಎಲ್ಲ ಹಾಡುಗಳು ಮರೆತೇ ಹೋಗುವಷ್ಟು ಅಶ್ಲೀಲತೆ ತುಂಬಿಕೊಂಡಿದೆ ಅದು ಯಾವ ಮಟ್ಟಿಗೆ ಎಂದರೆ ಇಂತಹ ಹಾಡುಗಳ ವಿರುದ್ಧ ಪೊಲೀಸರಿಗೆ ದೂರು ನೀಡುವ ಮಟ್ಟಕ್ಕೆ ಹೋಗಿದೆ. ಅಶ್ಲೀಲ ಜಾನಪದ ಹಾಡುಗಳ ವಿರುದ್ಧ ಹೋರಾಟ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟಿಲ್ ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಹಾಗೂ ಪೊಲೀಸ್ ಮಹಾನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದಾರೆ.
ಇಂತಹ ಹಾಡುಗಳನ್ನೇ ಹಾಕಿಕೊಂಡು ಆಟೋ, ಬಸ್, ಟ್ರ್ಯಾಕ್ಟರುಗಳಲ್ಲಿ ಹಾಕುತ್ತಾರೆ. ಹಾಡುಗಳನ್ನು ಕೇಳಿದರೆ ಹೆಣ್ಣು ಮಕ್ಕಳೀಗೆ ಮುಜುಗರವಾಗುತ್ತದೆ. ಕರೆದ ಕಡೆ ಬರುತ್ತಾರೆ, ಕರೆದವರ ಜೊತೆ ಮಲುಗುತ್ತಾರೆ, ಯಾವಾಗಲೂ ಲೈಂಗಿಕತೆಯ ಧ್ಯಾನದಲ್ಲಿರುತ್ತಾರೆ ಎಂಬ ಅರ್ಥ ಬರೋ ಹಾಡುಗಳು ಕೇಳುತ್ತಿದ್ದರೆ ಹೆಣ್ಣು ಮಕ್ಕಳು ನೆಮ್ಮದಿಯಾಗಿ ಓಡಾಡೋಕೆ ಆಗಲ್ಲ. ಹೆಣ್ಣು ಮಕ್ಕಳು ಕಂಡರೆ ಚುಡಾಯಿಸುವ, ರೇಗಿಸುವ, ಪೋಲಿ ಮಾತುಗಳ ಗಡಿಯನ್ನೂ ಮೀರಿ ನೇರಾನೇರಾ ಲೈಂಗಿಕತೆಯ ಸಾಹಿತ್ಯಗಳನ್ನೇ ತುಂಬಲಾಗಿದೆ. ಇದು ಎಂತವಹರಿಗೂ ಮುಜುಗರ ತರುವ ವಿಷಯ ಎನ್ನುವುದು ಆರ್ಕೆಸ್ಟ್ರಾ ಕಲಾವಿದರ ವಾದ.
ಹೀಗಾಗಿಯೇ ಉತ್ತರ ಕರ್ನಾಟಕದ ಜನಪದ ಕಲೆಗಳು ತಮ್ಮ ಶ್ರೀಮಂತ ಪರಂಪರೆಗೆ ಹೆಸರುವಾಸಿಯಾಗಿವೆ. ಆದರೆ, ಇತ್ತೀಚೆಗೆ ಹಾಡು, ನೃತ್ಯ ಮತ್ತು ನಾಟಕಗಳಲ್ಲಿ ಅಶ್ಲೀಲ ಪದಗಳ ಬಳಕೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಉತ್ತರ ಕರ್ನಾಟಕದ ಕಲಾವಿದರೇ ಆಕ್ರೋಶ ವ್ಯಕ್ತಪಡಿಸಿದ್ದು, ಅಶ್ಲೀಲತೆಗೆ ಕಡಿವಾಣ ಹಾಕುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಮ್ಯೂಸಿಕ್ ಮೈಲಾರಿ ಅರೆಸ್ಟ್ ನಂತರವಂತೂ ಆರ್ಕೆಸ್ಟ್ರಾ ಕಲಾವಿದರೆಲ್ಲ ಒಟ್ಟಾಗುತ್ತಿದ್ದು, ಅಶ್ಲೀಲ ಸಾಹಿತ್ಯದ ವಿರುದ್ಧ ಸಮರ ಸಾರಿದ್ದಾರೆ.



