ಸುದೀಪ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ‘ಮ್ಯಾಕ್ಸ್’ ಚಿತ್ರದ ಟೀಸರ್ ಬಂದ್ ಬಿಟ್ಟಿದೆ. ಮ್ಯಾಕ್ಸ್ ಟೀಸರ್ ನೋಡಿದವರಿಗೆ ಗೊತ್ತಾಗೋದು ಇದು ಮ್ಯಾಕ್ಸಿಮಮ್ ಎಂಟರ್ʻಟೈನ್ʻಮೆಂಟ್ ಸಿನಿಮಾ ಅನ್ನೋದಷ್ಟೇ. ಮ್ಯಾಕ್ಸ್ ʻಪಕ್ಕಾ ಮಾಸ್ ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ʼ ಸಿನಿಮಾ. ಬಾಕಿ ಉಳ್ಕೊಂಡಿದ್ದು ಏನು ಅನ್ನೋ ಪ್ರಶ್ನೆಗೆ ಉತ್ತರ ಸಿಗೋದು ಥಿಯೇಟರಿನಲ್ಲಿ.
ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದಕ್ಕೆ ಸುಳಿವು ಸಿಕ್ಕಿವೆ. ಆಕ್ಷನ್ ದೃಶ್ಯಗಳು ಮೈ ಜುಂ ಎನ್ನಿಸುವಂತಿವೆ. ಸುದೀಪ್ ಡ್ಯಾನ್ಸ್.. ಹೌದು ಸುದೀಪ್ ಡ್ಯಾನ್ಸ್.. ಅಭಿಮಾನಿಗಳಿಗೆ ಪೈಸಾ ವಸೂಲ್ ಸಿಗುವಂತೆ ಮಾಡಲಿದೆ. ಚಿತ್ರದ ಬಗ್ಗೆ ಕುತೂಹಲ ಹುಟ್ಟುತ್ತದೆಯೇ ಹೊರತು, ಕಥೆಯ ಬಗ್ಗೆ ಸುಳಿವು ಸಿಕ್ಕೋದಿಲ್ಲ ಅನ್ನೋದು ಟೀಸರ್ ಹೈಲೈಟ್.
‘ಬಾ ಬಾ ಬ್ಲಾಕ್ ಶೀಪ್’ ಇಂಗ್ಲೀಷ್ ಪದ್ಯದ ಸಾಹಿತ್ಯವನ್ನು ಬದಲು ಮಾಡಿ ಟೀಸರ್ನಲ್ಲಿ ಬಳಸಿಕೊಂಡಿದ್ದು, ಅದರ ಮೂಲಕವೇ ಕೆಲವು ಸುಳಿವುಗಳನ್ನಷ್ಟೆ ನೀಡಲಾಗಿದೆ. ‘ನೀನು ನನ್ನನ್ನು ಕೆಣಕಬಾರದ ರೀತಿ ಕೆಣಕಿದ್ದೀಯ, ನಾನೀಗ ಆಟವನ್ನು ಮುಗಿಸುತ್ತೇನೆ’. ಈ ಸಾಲನ್ನು ಗಮನದಲ್ಲಿಟ್ಟುಕೊಂಡು ವಿಶ್ಲೇಷಿಸುವುದಾದರೆ ‘ಮ್ಯಾಕ್ಸ್’ ಸಿನಿಮಾ ಒಂದು ರಿವೇಂಜ್ ಆಕ್ಷನ್ ಡ್ರಾಮಾ ಜಾನರ್ನ ಸಿನಿಮಾ ಆಗಿರುವ ಸಾಧ್ಯತೆ ಇದೆ. ತೆಲುಗಿನ ನಟ ಸುನಿಲ್ ಅನ್ನು ವಿಲನ್ ಆಗಿ ತೋರಿಸಲಾಗಿದೆ. ಅವರ ದೃಶ್ಯ ಟೀಸರ್ನಲ್ಲಿ ಕಾಣಿಸಿಕೊಳ್ಳುವ ಸಮಯಕ್ಕೆ ಸರಿಯಾಗಿ ಸುದೀಪ್ ಹಿನ್ನೆಲೆಯಲ್ಲಿ ಹೇಳುವ ಪದ್ಯದ ‘ಸ್ಕ್ರೌಂಡ್ರಲ್’ ಸಾಲನ್ನು ಜೋಡಿಸಲಾಗಿದೆ. ಟೀಸರ್ನಲ್ಲಿ ವರಲಕ್ಷ್ಮಿ ಶರತ್ಕುಮಾರ್ ಪಾತ್ರವನ್ನೂ ತುಸು ಹೈಲೆಟ್ ಮಾಡಲಾಗಿದ್ದು, ವರಲಕ್ಷ್ಮಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸುದೀಪ್ ಒಟ್ಟಿಗೆ ಎರಡು ಆಯುಧಗಳನ್ನು ಹಿಡಿದು ತಮ್ಮನ್ನು ಕೊಲ್ಲಲು ಬರುವ ಗೂಂಡಾಗಳ ಮೇಲೆ ಹಾರಿ ಬೀಳುವ ದೃಶ್ಯವಿದೆ. ಕೊನೆಯಲ್ಲಿ ಸುದೀಪ್ ಒಳ್ಳೆ ಸ್ಟೆಪ್ ಸಹ ಹಾಕಿದ್ದಾರೆ. ಅವರ ಹಿನ್ನೆಲೆಯಲ್ಲಿ ಕಾಣುವ ಮಹಾಕಾಳಿಯ ವಿಗ್ರಹವೂ ಗಮನ ಸೆಳೆಯುತ್ತಿದೆ. ಟೀಸರ್ನಲ್ಲಿ ತೋರಿಸಲಾಗಿರುವ ಎಲ್ಲ ದೃಶ್ಯಗಳು ಕತ್ತಲ ರಾತ್ರಿಯಲ್ಲಿಯೇ ನಡೆಯುತ್ತಿವೆ. ಅಥವಾ ಯಾವುದೋ ಹಳೆಯ ಗೋಡಾನ್ನಲ್ಲಿ ನಡೆಯುತ್ತಿರುವಂತೆ ತೋರುತ್ತಿದೆ.
ಶರತ್ ಲೋಹಿತಾಶ್ವ, ‘ಕಾಲಕೇಯ’ ಪ್ರಭಾಕರ್, ಪ್ರಮೊದ್ ಶೆಟ್ಟಿ, ನರೇನ್, ಸಂಯಕ್ತಾ ಹೊರನಾಡು ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನವಿದ್ದು, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದೆ. ಕಲೈಪುಲಿ ಎಸ್ ತನು ಅವರ ವಿ ಕ್ರಿಯೇಷನ್ಸ್ ಹಾಗೂ ‘ಕಿಚ್ಚ’ ಸುದೀಪ್ ಅವರ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ‘ಮ್ಯಾಕ್ಸ್’ ಸಿನಿಮಾ ನಿರ್ಮಾಣವಾಗಿದೆ.



