ಸಂಥಿಂಗ್ ಈಸ್ ರಾಂಗ್ ಎಂಬ ಸಿಗ್ನಲ್ ಕೊಡುತ್ತಿದೆ ಸಿಎಂ ಸಿದ್ದರಾಮಯ್ಯನವರ ವಿಶೇಷ ವರ್ತನೆ. ಹೌದು, ಸಿದ್ದರಾಮಯ್ಯನವರ ಕಾರ್ಯವೈಖರಿ ನೋಡಿದವರಿಗೆ ಇದು ವಿಚಿತ್ರ ವರ್ತನೆ ಎನ್ನಿಸದೇ ಇರದು. ಸಿಎಂ ಸಿದ್ದರಾಮಯ್ಯ ಅವರು ತಮ್ಮ 40+ ವರ್ಷಗಳ ರಾಜಕೀಯ ಬದುಕಿನಲ್ಲಿ ಅತ್ಯಂತ ಸವಾಲಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆರೋಪಗಳು ಬಂದಿದ್ದವಾದರೂ.. ಅವು ಈಗಿನ ಮುಡಾ ಸೈಟು ಹಗರಣದ ಲೆವೆಲ್ಲಿಗೆ ಹೋಗಿರಲಿಲ್ಲ. ಅದು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಡಿಯೂ ಎಂಟ್ರಿ ಕೊಟ್ಟಾಗಿದೆ. ಇದರ ನಡುವೆ ಬುಧವಾರ ನಡೆದಿರುವ ಬೆಳವಣಿಗೆಗಳು ಬೇರೆಯದೇ ಕಥೆ ಹೇಳುತ್ತಿವೆ.
ಬುಧವಾರ, ಗಾಂಧಿ ಜಯಂತಿ ಇತ್ತು. ಹೀಗಾಗಿ ಇಡೀ ದಿನ ಗಾಂಧಿ ಜಯಂತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಅದಕ್ಕೂ ಮುನ್ನ ಮಂಗಳವಾರ ಮಧ್ಯರಾತ್ರಿಯವರೆಗೂ ಕೆಲಸ ಮಾಡಿದ್ದಾರೆ. ಹೌದು, ಮುಡಾ ಕೇಸ್ ಬಗ್ಗೆ ಕೋರ್ಟ್ ತೀರ್ಪು ಹೊರಬಿದ್ದಾಗಿನಿಂದ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಹೆಚ್ಚುತ್ತಲೇ ಇದೆ. ಕಾಂಗ್ರೆಸ್ ಮುಖಂಡರೆಲ್ಲ ಸಿದ್ದರಾಮಯ್ಯ ಜೊತೆಗೆ ನಿಂತಿದ್ದಾರಾದರೂ, ಮುಂದಿನ ತಯಾರಿಗೂ ಸಿದ್ಧತೆಗಳು ನಡೆಯುತ್ತಿವೆ. ಹೀಗಿರುವಾಗಲೇ ಮಂಗಳವಾರ ಮಧ್ಯರಾತ್ರಿ ಎರಡು ಗಂಟೆಯವರೆಗೂ ಸಿದ್ದರಾಮಯ್ಯ ಆಫೀಸ್ ಫೈಲ್ ನೋಡಿದ್ದಾರೆ. ಕೆಲವು ಕಡತಗಳಿಗೆ ಸಹಿಯನ್ನೂ ಮಾಡಿದ್ದಾರೆ.
ಸಾಮಾನ್ಯವಾಗಿ ಈ ರೀತಿ ಮಂತ್ರಿಗಳು ಕೆಲಸ ಮಾಡುವುದು ಅಧಿಕಾರದ ಕೊನೆಯ ದಿನಗಳಲ್ಲಿ ಹಾಗೂ ಚುನಾವಣೆ ಹತ್ತಿರ ಇರುವಾಗ. ಅಂದರೆ ನೋಟಿಫಿಕೇಷನ್ ಜಾರಿಯಾಗುವ ಸಮಯ ಹತ್ತಿರದಲ್ಲಿರುವಾಗ. ಆದರೆ ಸದ್ಯಕ್ಕೆ ಅಂತಹ ಯಾವುದೇ ಪರಿಸ್ಥಿತಿ ಬಂದಿಲ್ಲ. ಸಿದ್ದರಾಮಯ್ಯ ಎಲ್ಲೇ ಓಡಾಡಿದರೂ, ದೈನಂದಿನ ಕರ್ತವ್ಯವನ್ನು ಮರೆಯುವವರೂ ಅಲ್ಲ. ಸಿಎಂ ಆಗಿ ಯಾವ ಕೆಲಸ ಮಾಡಬೇಕೋ.. ಯಾವಾಗ ಮಾಡಬೇಕೋ.. ಅದೆಲ್ಲವನ್ನೂ ಕರಾರುವಾಕ್ಕಾಗಿ ಮಾಡ್ತಾರೆ. ಹೆಚ್ಚುವರಿ ಡ್ಯೂಟಿಯನ್ನೂ ಮಾಡುವವರಲ್ಲ. ಹಾಗಂತ ಇರುವ ಕೆಲಸವನ್ನು ಮುಂದೂಡುವ ಜಾಯಮಾನದವರೂ ಅಲ್ಲ.
ಹೀಗಿರುವಾಗ ಸಿದ್ದರಾಮಯ್ಯ ಮಧ್ಯರಾತ್ರಿ ಎರಡು ಗಂಟೆಯವರೆಗೂ ಕೆಲಸದಲ್ಲಿ ಬ್ಯುಸಿಯಾಗಿದ್ದರು ಎನ್ನುವುದೇ ಸಂಥಿಂಗ್ ಈಸ್ ರಾಂಗ್ ಎಂಬ ಸೂಚನೆ ಕೊಡುತ್ತಿದೆ. ಬಹುತೇಕ ವರ್ಗಾವಣೆ ಹಾಗೂ ಪ್ರಮುಖ ಕ್ಲಿಯರೆನ್ಸ್ ಕಡತಗಳಿಗೆ ಸಹಿ ಹಾಕಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಸಂಥಿಂಗ್ ಈಸ್ ರಾಂಗ್.
ಈ ನಡುವೆ ಸಿಎಂ ಸಿದ್ದರಾಮಯ್ಯ ಆತ್ಮಸಾಕ್ಷಿಯ ಮಾತನ್ನಾಡುತ್ತಿದ್ದಾರೆ. ಮುಡಾ ಸೈಟು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಮಹಾತ್ಮ ಗಾಂಧಿ ಅವರ ಮಾತನ್ನು ಉಲ್ಲೇಖಿಸಿ, “ಆತ್ಮಸಾಕ್ಷಿಯ ನ್ಯಾಯಾಲಯ” ಎಲ್ಲಾ ನ್ಯಾಯಾಲಯಗಳಿಗಿಂತ ದೊಡ್ಡದು ಎಂದು ಹೇಳಿದ್ದಾರೆ.
“ನಮ್ಮ ಎಲ್ಲಾ ನ್ಯಾಯಾಲಯಗಳಿಗಿಂತ ಅತ್ಯುನ್ನತ ನ್ಯಾಯಾಲಯವೊಂದಿದೆ. ಅದು ಆತ್ಮಸಾಕ್ಷಿಯ ನ್ಯಾಯಾಲಯ. ಅದು ಇತರ ಎಲ್ಲ ನ್ಯಾಯಾಲಯಗಳನ್ನು ಮೀರಿಸುತ್ತದೆ ಎಂದು ಮಹಾತ್ಮ ಗಾಂಧಿಜಿ ಹೇಳಿದ್ದರು…. ಕೆಲವೊಮ್ಮೆ ಎಲ್ಲರಿಗೂ ನ್ಯಾಯಾಲಯಗಳಿಂದ ನ್ಯಾಯ ಸಿಗದಿರಬಹುದು. ಆದರೆ ನಾನು ಸ್ಪಷ್ಟವಾಗಿ ಹೇಳಬಲ್ಲೆ, ಗಾಂಧೀಜಿ ಹೇಳಿದಂತೆ ನಾವು ನೋಡುವ ನ್ಯಾಯಾಲಯಗಳು ಈ ಆತ್ಮಸಾಕ್ಷಿಯ ನ್ಯಾಯಾಲಯಕ್ಕಿಂತ ಮೇಲಿರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಎಲ್ಲವನ್ನೂ ಒಂದಕ್ಕೊಂದು ಲಿಂಕ್ ಮಾಡಿದರೆ.. ಕೊನೆಗೆ ಅನ್ನಿಸುವುದಿಷ್ಟೇ.. ಸಂಥಿಂಗ್ ಈಸ್ ರಾಂಗ್. ಕೌಂಟ್ ಡೌನ್ ಸ್ಟಾರ್ಟ್.



