ಸ್ನೇಹಮಯಿ ಕೃಷ್ಣ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಪ್ರಬಲವಾಗಿ ನಿಂತಿದ್ದವರು. ಈಗಲೂ ಇದ್ದಾರೆ. ಹೀಗಿರುವಾಗಲೇ ಸ್ನೇಹಮಯಿ ಕೃಷ್ಣ ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ನಟೇಶ್ ಅವರು 1.5 ಕೋಟಿ ರೂ. ಲಂಚ ನೀಡಿದ್ದಾರೆ ಎಂದು ಆರೋಪ ಮಾಡಿದ್ದರು. ಸಾಕ್ಷಿಗಳಿವೆ, ದಾಖಲೆಗಳಿವೆ ಎಂದು ಕೂಡಾ ಹೇಳಿದ್ದರು. ಆದರೆ, ಸ್ನೇಹಮಯಿ ಕೃಷ್ಣ ಅವರು ನೀಡಿದ ದೂರಿನ ವಿಚಾರಣೆ ಶುರುವಾಗುವ ಮೊದಲೇ, ಪ್ರತಿದೂರು ನೀಡಿದ್ದವರ ದೂರಿನಂತೆ ಅರೆಸ್ಟ್ ಮಾಡಲಾಗಿದೆ. ಈ ಹಾದಿಯಲ್ಲಿ ರಾಜ್ಯ ಸರ್ಕಾರ, ಪೊಲೀಸರು ಹಲವು ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಪ್ರಕರಣ ಶುರುವಾಗಿದ್ದು ಹೇಗೆ..?
ಮುಡಾದಲ್ಲಿ ಸೈಟ್ ಪಡೆದುಕೊಂಡ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ ಸೇರಿದಂತೆ ನಾಲ್ವರ ವಿರುದ್ದ ದೂರು ನೀಡಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ , ಮುಡಾದ ಮಾಜಿ ಆಯುಕ್ತ ಡಿಬಿ ನಟೇಶ್ ಹಾಗೂ ಶಾಲಿನಿ ರಜನೀಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮುಡಾ ನಿವೇಶನ ಹಂಚಿಕೆ ಹಗರಣದ ಸಂದರ್ಭದಲ್ಲಿ ಮುಡಾದ ಆಯುಕ್ತರಾಗಿದ್ದ ನಟೇಶ್ 5 ಬ್ಯಾಗ್ ಗಳಲ್ಲಿ ಕೋಟ್ಯಂತರ ರೂಪಾಯಿ ಹಣವನ್ನು ನೀಡಿದ್ದಾರೆ ಎಂದು ಆರೋಪಿಸಿದ್ದರಷ್ಟೇ ಅಲ್ಲ, ಟೇಶ್ ಅವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1998ರ ಕಲಂ 13(1)( ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ ಅವರಿಗೆ ಮುಂಬಡ್ತಿ ನೀಡಲಾಗಿದೆ ಎಂಬುವುದು ಕೃಷ್ಣ ವಾದವಾಗಿತ್ತು. ಆದರೆ ಅವರು ಕೊಟ್ಟಿದ್ದ ದೂರಿನ ವಿಚಾರಣೆ ಶುರುವಾಗುವ ಮೊದಲೇ ಅವರ ಬಂಧನವಾಗಿದೆ.
ಸ್ನೇಹಮಯಿ ಕೃಷ್ಣ ಅವರು ಸಾಕ್ಷಿ, ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಲು ಹೋಗುತ್ತಿದ್ದಾಗಲೇ ಅರೆಸ್ಟ್ ಆಗಿರುವುದು ಹಲವು ಅನುಮಾನ ಹುಟ್ಟುಹಾಕಿದೆ. ಡಿಬಿ ನಟೇಶ್ ಅವರಿಂದ ಲಂಚ ಪಡೆದುಕೊಳ್ಳಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸ್ಪಷ್ಟನೆ ನೀಡಿ, ಆರೋಪ ನಿರಾಧಾರವಾಗಿದೆ. ದೂರುದಾರು ಆರೋಪಕ್ಕೆ ಯಾವುದೇ ದಾಖಲೆ ನೀಡಿಲ್ಲ. ಸೂಕ್ತ ಸಾಕ್ಷಾಧಾರ ನೀಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿರುವುದು ಶಾಲಿನಿ ರಜನೀಶ್ ಮತ್ತು ನಟೇಶ್.
ಆದರೆ, ಸ್ನೇಹಮಯಿ ಕೃಷ್ಣ ಕೊಟ್ಟ ದೂರು, ಪಡೆದುಕೊಂಡ ಆಡಿಯೋಗಳನ್ನು ಪರಿಶೀಲನೆ ಮಾಡದೆ, ಅವು ನಕಲಿ ಎಂದು ದೂರು ಕೊಟ್ಟ ಕಾರಣಕ್ಕೆ ಸ್ನೇಹಮಯಿ ಕೃಷ್ಣ ಅವರ ಬಂಧನ ಆಗಿದೆ. ಕೇವಲ ಒಬ್ಬರ ದೂರನ್ನು ಮಾತ್ರ ಗಂಭೀರವಾಗಿ ತೆಗೆದುಕೊಂಡು, ಇನ್ನೊಬ್ಬರ ದೂರನ್ನು ಗಣನೆಗೆ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ, ಯಾವುದೇ ನೋಟಿಸ್ ನೀಡದೆ ಬಂಧಿಸಲಾಗಿದೆ. ಕಾನೂನು ಪ್ರಕಾರ ನೋಟಿಸ್ ಕೊಟ್ಟು, ವಿಚಾರಣೆಗೆ ಬರದೇ ಹೋದರೆ, ದಾಖಲೆಗಳನ್ನು ಕೊಡದೇ ಹೋದಾಗ ಮಾತ್ರ ಅರೆಸ್ಟ್ ಮಾಡಬೇಕು. ಆ ನಿಯಮವನ್ನೂ ಪೊಲೀಸರು ಬ್ರೇಕ್ ಮಾಡಿದ್ದಾರೆ.
ಬಂಧನದ ನಂತರ ಮೈಸೂರಿನಲ್ಲಿರುವ ಇವರ ಮನೆಗಳ ಮೇಲೆ ಪೊಲೀಸರು ಸರ್ಚ್ ವಾರಂಟ್‌ನೊಂದಿಗೆ ಶೋಧ ನಡೆಸಿದ್ದಾರೆ ಮತ್ತು ಸಿಸಿಬಿ ಕಚೇರಿಯಲ್ಲಿ ಸುದೀರ್ಘ ವಿಚಾರಣೆ ನಡೆಸಲಾಗಿದೆ.
ಬೆಂಗಳೂರು ಪೊಲೀಸರ ಪ್ರಕಾರ, ಇದು “ಡಿಜಿಟಲ್ ಫೋರ್ಜರಿ” (Digital Forgery) ಪ್ರಕರಣವಾಗಿದೆ.
ನಕಲಿ ಆಡಿಯೋ ಕ್ಲಿಪ್ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕ ಅಧಿಕಾರಿಯೊಬ್ಬರ ಗೌರವಕ್ಕೆ ಧಕ್ಕೆ ತಂದಿರುವ ಕಾರಣ, ಐಟಿ ಕಾಯ್ದೆ ಮತ್ತು ಬಿಎನ್‌ಎಸ್ (BNS) ಅಡಿಯಲ್ಲಿ ಕ್ರಮ ಜರುಗಿಸಲಾಗಿದೆ. ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದೇ ಇವರ ಮನೆಗಳ ಮೇಲೆ ದಾಳಿ ನಡೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ.
ಬೆಂಬಲಿಗರ ಮತ್ತು ವಿರೋಧ ಪಕ್ಷಗಳ ವಾದ (ರಾಜಕೀಯ ಪ್ರೇರಿತ):
ಇದು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿರುವುದಕ್ಕೆ ಪ್ರತಿಯಾಗಿ ನಡೆಸಿದ “ಸೇಡಿನ ಕ್ರಮ” ಎಂದು ಪ್ರತಿಪಕ್ಷಗಳು ಟೀಕಿಸಿವೆ. ಯಾವುದೇ ಪೂರ್ವ ನೋಟಿಸ್ ನೀಡದೆ ನೇರವಾಗಿ ಬಂಧಿಸಿರುವುದು ಸರಿಯಲ್ಲ ಎಂಬುದು ಅವರ ವಾದ.



