ಜನರು ಲೈಂಗಿಕ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳೋದಕ್ಕೆ ನಾಚಿಕೆ ಪಟ್ಟುಕೊಳ್ತಾರೆ. ವೈದ್ಯರ ಬಳಿಗೆ ಹೋಗಿದ್ದನ್ನೂ ಮುಚ್ಚಿಡ್ತಾರೆ. ಗುಟ್ಟು ಗುಟ್ಟಾಗಿಯೇ ನಡೆಯಬೇಕು ಎಂದು ಬಯಸುವವರ ಸಂಖ್ಯೆ ಹೆಚ್ಚು. ಅಂತಹ ಗೌಪ್ಯತೆ ಕಾಪಾಡುಕೊಳ್ಳುವ ಮನಸ್ಥಿತಿಯೇ ಟೆಕ್ಕಿಯೊಬ್ಬ 40 ಲಕ್ಷ ಕಳೆದುಕೊಳ್ಳುವಂತೆ ಮಾಡಿದೆ. ಹೇಗೆ ಎನ್ನುವ ಕಥೆಯೂ ಅಷ್ಟೇ ರೋಚಕವಾಗಿದೆ.
ಬೆಂಗಳೂರಿನ ಟೆಕ್ಕಿ ಒಬ್ಬನಿಗೆ ಲೈಂಗಿಕ ದೌರ್ಬಲ್ಯ ಇತ್ತು. ಲೈಂಗಿಕ ದೌರ್ಬಲ್ಯ ಎಂದರೆ ಸಾಮರ್ಥ್ಯದ ದೌರ್ಬಲ್ಯ. ನ್ಯಾಚುರಲ್ ಆಗಿ ಸರಿಯಾಗಿಯೇ ಇದ್ದ ಆ ಟೆಕ್ಕಿಗೆ ನೀಲಿ ಚಿತ್ರಗಳನ್ನು ನೋಡಿ ತಾನೂ ಹಾಗೆಯೇ ಗಂಟೆಗಟ್ಟಲೆ ಕೆಲಸ ಮಾಡಬೇಕು ಎನ್ನುವ ಆಸೆ ಶುರುವಾಗಿದೆ. ಅಂತಹ ಆಸೆ ಇರುವವರ ಸಂಖ್ಯೆಗೇನೂ ಕಡಿಮೆ ಇಲ್ಲ ಬಿಡಿ. ಹಾಗೆ ಲೈಂಗಿಕ ಶಕ್ತಿಯ ಆಸೆ ಬಿದ್ದವನು ಒಬ್ಬ ನಾಟಿ ವೈದ್ಯನ ಬಳಿಗೆ ಹೋಗಿದ್ದಾನೆ.
ಮನೆಗೆ ಮರಳುತ್ತಿದ್ದಾಗ, ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಟೆಂಟ್ ಒಂದರಲ್ಲಿ `ಲೈಂಗಿಕ ಸಮಸ್ಯೆಗೆ ಆಯುರ್ವೇದಿಕ್ ಚಿಕಿತ್ಸೆ’ ಎಂಬ ಜಾಹೀರಾತನ್ನು ಗಮನಿಸಿ ಟೆಂಟ್‌ಗೆ ಹೋಗಿದ್ದಾನೆ. ಆ ನಾಟಿ ವೈದ್ಯ ರಸ್ತೆಯಲ್ಲಿ ನಾಟಿ ಔಷಧ ಮಾರುವವನು. ‘ವಿಜಯ್ ಚಿತ್ತೋಡಿಯಾ ಗುರೂಜಿ’ ಎಂದವನ ಹೆಸರು. ‘ನಿಮ್ಮ ಸಮಸ್ಯೆ ಸರಿಪಡಿಸುತ್ತೇವೆ’ ಎಂದು ಭರವಸೆ ನೀಡಿದ ಸ್ವಾಮೀಜಿ ಮತ್ತವನ ಗ್ಯಾಂಗ್ ಸದಸ್ಯರು, ಇದನ್ನು ರಹಸ್ಯವಾಗಿ ಮಾಡಬೇಕು. 6 ತಿಂಗಳು ಈ ಔಷಧಿಯನ್ನು ಗುಟ್ಟಾಗಿ ತೆಗೆದುಕೊಳ್ಳಬೇಕು. ಯಾರಿಗಾದರೂ ಹೇಳಿದರೆ ಈ ಔಷಧಿ ಕೆಲಸ ಮಾಡುವುದಿಲ್ಲ ಎಂದು ನಂಬಿಸಿದ್ದಾರೆ. ಆ ಬುದ್ದಿವಂತ ಟೆಕ್ಕಿ ಆ ಮಾತನ್ನು ನಂಬಿದ್ದಾನೆ.
ಆ ಸ್ವಾಮೀಜಿ ಕೊಟ್ಟಿರುವ ಔಷಧಿಯ ಹೆಸರು `ದೇವರಾಜ್ ಬೂಟಿ’ ಒಂದು ಗ್ರಾಂ ಔಷಧಿಗೆ 1.5 ಲಕ್ಷ ರೂ. ಎಂದು ಹೇಳಿದ್ದ ಗುರೂಜಿ, ಅದರಂತೆ ಟೆಕ್ಕಿಯಿಂದ 1,60,000 ರೂ. ಪಡೆದುಕೊಂಡಿದ್ದಾನೆ. ಈ ಔಷಧಿಗೆ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಬಾರದು ಮತ್ತು ಒಬ್ಬರೇ ಬಂದು ತೆಗೆದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಿದ್ದನಂತೆ. ಹೀಗಾಗಿ ಬ್ಯಾಂಕ್ ದಾಖಲೆ, ಡಿಜಿಟಲ್ ದಾಖಲೆ ಯಾವುದೂ ಈ ಟೆಕ್ಕಿಯ ಬಳಿ ಇಲ್ಲ.
ಅದಾದ ಮೇಲೆ ದೇವರಾಜ್ ಬೂಟಿ ಮತ್ತು ಭವನ ಬೂಟಿ ತೈಲ ಎಂಬ ಔಷಧಿಯನ್ನೂ ಮಾರಿದ್ದಾನೆ. ಇದನ್ನು ಬಳಸದೇ ಹೋದರೆ ಇಷ್ಟು ದಿನ ಮಾಡಿದ್ದೆಲ್ಲ ವೇಸ್ಟ್ ಎಂದಿದ್ದಾನೆ ಸ್ವಾಮೀಮಿ. ಮೊದಲಿಗೆ 17 ಲಕ್ಷ ಕೊಟ್ಟು ಔಷಧಿ ಪಡೆದಿದ್ದ ಟೆಕ್ಕಿ, ಮಿಕ್ಕ ಔಷಧಿ ಖರೀದಿಗೆ ಬ್ಯಾಂಕ್ ಲೋನ್ ಮಾಡಿದ್ದಾನೆ. ಪರ್ಸನಲ್ ಬ್ಯಾಂಕ್ ಲೋನ್ 20 ಲಕ್ಷವಂತೆ. ಕೈಸಾಲದಲ್ಲೂ ಹಣ ಪಡೆದು ಸ್ವಾಮೀಜಿಗೆ ಕೊಟ್ಟಿದ್ದಾನೆ.
ಫೈನಲ್ ಆಗಿ ಆಗಿರುವುದೇನೆಂದರೆ ಆ ಟೆಕ್ಕಿಯ ಲೈಂಗಿಕ ಸಮಸ್ಯೆ ಪರಿಹಾರ ಆಗಿಲ್ಲ. ಬದಲಿಗೆ ಚೆಕಪ್ ಮಾಡಿಸಿದಾಗ ಮೆಗ್ನೀಷಿಯಂ ಹೆಚ್ಚಿದ್ದ ಆಯುರ್ವೇದ ಔಷಧಿ ಸೇವಿಸಿದ ಪರಿಣಾಮ, ಟೆಕ್ಕಿಯ ಕಿಡ್ನಿಗಳಿಗೆ ಡ್ಯಾಮೇಜ್ ಆಗಿರುವ ವಿಷಯ ಗೊತ್ತಾಗಿದೆ. ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಾದ ಮೇಲೆ ತನಿಖೆ ಮಾಡಿರುವ ಪೊಲೀಸರು ಆರೋಪಿಯನ್ನೇನೋ ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳಿಂದ ಪೊಲೀಸರು 17 ರೀತಿಯ ಆಯುರ್ವೇದ ಔಷಧಿಗಳು, ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಟೆಂಪೋ ಟ್ರಾವೆಲರ್ ಮತ್ತು 19.50 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಔಷಧಿಗಳು, ನಗದು ಮತ್ತು ವಾಹನದ ಒಟ್ಟು ಮೌಲ್ಯ 23.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇಬ್ಬರು ಆರೋಪಿಗಳು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ದೇಶದ ಇತರ ಭಾಗಗಳಲ್ಲಿ ರಸ್ತೆಬದಿಯ ಟೆಂಟ್‌ಗಳನ್ನು ಸ್ಥಾಪಿಸಿ, ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಡಿಮೆ ಗುಣಮಟ್ಟದ ಔಷಧಿಗಳನ್ನು ನೀಡುವ ಮೂಲಕ ಜನರನ್ನು ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.



