ಧರ್ಮಸ್ಥಳ. ಸೌಜನ್ಯ ಪ್ರಕರಣದಲ್ಲಿ ಸತತವಾಗಿ ಸುದ್ದಿಯಾಗುತ್ತಲೇ ಇರುವ ಧರ್ಮಸ್ಥಳದಲ್ಲೀಗ ತಲೆಬುರುಡೆ ಸಮರ ಶುರು ಆಗಿದೆ. ಇತ್ತೀಚೆಗೆ ಅಂದರೆ ಸುಮಾರು 4 ತಿಂಗಳ ಹಿಂದೆ ಸಮೀರ್ ಎಂಬ ಯೂಟ್ಯೂಬರ್, ಸೌಜನ್ಯ ಅತ್ಯಾಚಾರ – ಕೊಲೆ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಮೇಲೆ ಅನುಮಾನ ಬರುವಂತೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಗೌರವ ಭಕ್ತಿ ಕಡಿಮೆಯಾಗುವಂತೆ ಪರೋಕ್ಷವಾಗಿ ಬಿಂಬಿಸಿದ್ದರು. ಅದಾದ ಮೇಲೆ ಕೋರ್ಟಿನಲ್ಲಿ ಹಿನ್ನಡೆಯಾಗಿದ್ದೂ ಆಯಿತು. ಇದೀಗ ಮತ್ತೊಮ್ಮೆ ಸುದ್ದಿಗೆ ಜೀವ ಬಂದಿರುವುದು ತಲೆಬುರುಡೆಗಳಿಂದ.
ಧರ್ಮಸ್ಥಳ ಗ್ರಾಮದಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ್ದೇನೆ. ಎಲ್ಲೆಲ್ಲಿ ಹೂತುಹಾಕಿದ್ದೇನೆ ಎಂದು ತೋರಿಸುತ್ತೇನೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದರು. ದೂರನ್ನೂ ಕೊಟ್ಟಿದ್ದರು. ಅದಾದ ಮೇಲೆ ಅವರು ಕೋರ್ಟಿಗೂ ಹಾಜರಾಗಿದ್ದಾರೆ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ಕುರಿತು ದೂರು ನೀಡಿರುವ ಕೇಸ್‌ನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜುಲೈ 11 ರಂದು ಒಂದು ಪ್ರಕರಣ ದಾಖಲಾಗಿದ್ದು, ಎರಡು ಪ್ರತ್ಯೇಕ ವಿಚಾರಣೆಗಳನ್ನು ಪ್ರಾರಂಭಿಸಲಾಗಿದೆ.
ನ್ಯಾಯಾಲಯದ ಸೂಚನೆಯಂತೆ ʻಹೆಣಗಳನ್ನು ಹೂತು ಹಾಕಿದ್ದೇನೆʼ ಎಂದು ಹೇಳಿದ್ದ ವ್ಯಕ್ತಿಯ ಕುರಿತ ದೂರು, ಎಫ್‌ಐಆರ್ ಸೇರಿದಂತೆ ಯಾವುದೇ ಮಾಹಿತಿಗಳನ್ನು ಪೊಲೀಸರು ಬಹಿರಂಗಪಡಿಸುತ್ತಿಲ್ಲ. ಆ ವ್ಯಕ್ತಿ ಹೇಳಿದ್ದ ಒಂದು ಕಡೆ ಅಗೆಯಾಗಿದ್ದು, ಅಲ್ಲಿ ತಲೆಬರುಡೆ ಸಿಕ್ಕಿದೆ. ಟೈಮ್ಸ್ ನೌ ಇಂಗ್ಲಿಷ್ ಚಾನೆಲ್ ʻಧರ್ಮಸ್ಥಳ ಹಾರರ್ʼ ಎಂಬ ಹೆಸರಿನಲ್ಲಿ ಸುದ್ದಿ ಪ್ರಸಾರ ಮಾಡಿದೆ. ಕನ್ನಡದಲ್ಲಿ ಅದೇ ಸುದ್ದಿ ಪ್ರಸಾರ ಮಾಡಿದ ಈದಿನ ಡಾಟ್ ಕಾಂನ ಯೂಟ್ಯೂಬ್ ಚಾನೆಲ್ ಬಂದ್ ಆಗಿದೆ.
ಇದೆಲ್ಲವೂ ಒಂದು ಕಥೆ ಆದರೆ.. ಇತ್ತ ಸಮೀರ್ ಎಂಡಿ ಎಂಬ ಯೂಟ್ಯೂಬರ್ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸುಳ್ಳು ಮಾಹಿತಿಗಳನ್ನು ಒಳಗೊಂಡ ವಿಡಿಯೋ ಪ್ರಸಾರ ಮಾಡಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತು ಹಾಕಿರುವ ಕುರಿತು ದೂರು ನೀಡಿರುವ ಪ್ರಕರಣದಲ್ಲಿ ಕಾಲ್ಪನಿಕವಾಗಿ (ಎಐ) ಸೃಷ್ಟಿಸಲಾದ, ಸುಳ್ಳು ಮಾಹಿತಿಗಳನ್ನೊಳಗೊಂಡ ವಿಡಿಯೋ ಪ್ರಸಾರ ಮಾಡಿದ್ದಾರೆ ಎನ್ನುವುದು ಆರೋಪ.
ಇನ್ನೊಬ್ಬರು ಪ್ರವೀಣ್ ಲೋಬೋ ಎಂಬುವವರ ಫೇಸ್ ಬುಕ್ ಪೇಜ್ ವಿರುದ್ಧಾನೂ ಕೇಸ್ ಆಗಿದೆ. ಕೊಕ್ಕುರಾಡಿ ಗ್ರಾಮದ ಜಯಂತ್ ಅನ್ನೋವರು ಈ ಪೇಜಿನಲ್ಲಿ ಧರ್ಮಸ್ಥಳದ ಬಗ್ಗೆ ಹಾಗೂ ಸೌಜನ್ಯ ಕೇಸಿನಲ್ಲಿ ಕೆಟ್ಟ ಕೆಟ್ಟ ಮೆಸೇಜ್ ಸರ್ಕ್ಯೂಲೇಟ್ ಆಗ್ತಿವೆ ಅಂತಾ ದೂರು ಕೊಟ್ಟಿದ್ದಾರೆ.
ಇನ್ನು ಇದೇ ಸಮಯ ಅಂದುಕೊಂಡು ಕೆಲವರು ಧರ್ಮಸ್ಥಳ ಕ್ಷೇತ್ರ, ಕ್ಷೇತ್ರದ ನಂಬಿಕೆಯ ಬಗ್ಗೆ ಅವಹೇಳಕಾರಿ ಹೇಳಿಕೆ ಕೊಡುವುದು, ಪೋಸ್ಟ್ ಹಾಕುವುದನ್ನು ಮಾಡ್ತಿದ್ದಾರೆ..
ಬೆಳ್ತಂಗಡಿ ಪೊಲೀಸರಿಂದ ತನಿಖೆ ನಡೀತಾ ಇದೆ. ಆದರೆ.. ಕೆಲವು ಪೋಸ್ಟುಗಳಲ್ಲಿ ಬರುತ್ತಿರುವ ವರದಿಗಳು ನೈಜತೆಗೆ ಹತ್ತಿರ ಕೂಡಾ ಇಲ್ಲ. ಅವರವರೇ ಕಲ್ಪಿಸಿಕೊಂಡು ಸುದ್ದಿ ಮಾಡ್ತಿದ್ದಾರೆ. ಇವು ತನಿಖೆಯ ದಾರಿ ತಪ್ಪಿಸುತ್ತವೆ ಹಾಗೂ ಸಾರ್ವಜನಿಕರು ಪ್ರಚೋದನೆಗೊಳಗಾಗುವಂತೆ ಪ್ರೇರೇಪಣೆ ನೀಡುತ್ತವೆ. ಎಚ್ಚರಿಕೆ ಇರಲಿ ಎಂದು ಪೊಲೀಸರು ಎಚ್ಚರಿಕೆ ಸಂದೇಶ ಕೊಟ್ಟಿದ್ದಾರೆ.
ಇಷ್ಟಕ್ಕೂ ದೂರು ನೀಡಿರುವ ವ್ಯಕ್ತಿ ಹೇಳಿರುವ ಪ್ರಕಾರ ಆತ ಇದೇ ಧರ್ಮಸ್ಥಳದಲ್ಲಿ 1998ರಿಂದ 2014ರ ವರೆಗೆ ಸ್ವಚ್ಚತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ರಂತೆ. ಇವರು ಕೆಲಸ ಮಾಡ್ತಿದ್ದಷ್ಟೂ ದಿನ ನೂರಾರು ಹೆಣಗಳನ್ನ ಹೂತು ಹಾಕಿದ್ದಾರಂತೆ. ಮೇಲ್ವಿಚಾರಕರ ಸೂಚನೆ ಮೇರೆಗೇ ಹೂತು ಹಾಕಿದ್ದಾರಂತೆ. ಜೀವ ಬೆದರಿಕೆ ಹಾಕ್ತಿದ್ರಂತೆ. ಈ ಜೀವಬೆದರಿಕೆಗಳಿಗೆ ಹೆದರಿ 2014ರಿಂದ ಅವರು.. ಮತ್ತು ಅವರ ಕುಟುಂಬ ತಲೆಮರೆಸಿಕೊಂಡು ಬದುಕ್ತಾ ಇದ್ಯಂತೆ. ಈಗ ಪಾಪ ಪ್ರಜ್ಞೆ ಕಾಡಿದ್ದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾರಂತೆ. ಅವರು ಹೂತು ಹಾಕಿರೋ ಹೆಣಗಳಲ್ಲಿ, ಹೆಣ್ಣು ಮಕ್ಕಳ ಶವಗಳೇ ಜಾಸ್ತಿ ಅಂತೆ.
ಧರ್ಮಸ್ಥಳದಲ್ಲಿ ಹಲವು ವರ್ಷಗಳಿಂದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೀತಾ ಇದೆ. ಧರ್ಮಸ್ಥಳದ ಗೋಮುಖ ವ್ಯಾಘ್ರಗಳಿಗೆ ಇಲ್ಲಿನ ಮಹಿಳೆಯರು ಬಲಿಯಾಗಿದ್ದಾರೆ. ಧರ್ಮಸ್ಥಳದಲ್ಲಿ ನ್ಯಾಯ ಸಿಗಬೇಕು ಅಂತಾ ವುಮೆನ್ ಇಂಡಿಯಾ ಫೌಂಡೇಷನ್ ಅಧ್ಯಕ್ಷೆ ಫಾತಿಮಾ ನಸೀಮಾ ಒತ್ತಾಯಿಸಿದ್ದಾರೆ.



