ಸ್ಟೇಜ್ ಯಾವ್ದೇ ಇರಲಿ.. ಕುಣಿಯೋದು ನನಗಾ ಅಪ್ಪನು ಕೊಟ್ಟ ಬಳುವಳಿ.. ಅನ್ನೋದು ಶಿವಣ್ಣನ ಮಂತ್ರ. ಜನ ಪ್ರೀತಿಸೋದೇ, ನಮಗೆ ಅನ್ನ ಹಾಕೋದೇ ನಾವು ನಟಿಸೋದಕ್ಕೆ.. ಹಾಡಿ ಕುಣಿಯೋದಕ್ಕೆ.. ಎನ್ನುವ ಶಿವಣ್ಣ, ಸ್ಟೇಜ್ ಹತ್ತಿದರೆ ಸಾಕು.. ಇವತ್ತಿಗೂ ಕುಣಿಯೋದು ಬಿಟ್ಟಿಲ್ಲ. ಕನ್ನಡಿಗರಿಗೆ ಇದು ಹೊಸದಲ್ಲವಾದರೂ, ತಮಿಳಿಗರಿಗೆ ಇದು ಅಚ್ಚರಿಯೋ ಅಚ್ಚರಿ.
ಕನ್ನಡಿಗರು ಶಿವಣ್ಣನ ಕುಣಿತವನ್ನ ಅಚ್ಚರಿಯಿಂದ ನೋಡೋದಿಲ್ಲ. ಅಭಿಮಾನದಿಂದ ನೋಡ್ತಾರೆ. ಆದರೆ ತಮಿಳಿನವರಿಗೆ ಇದು ಹೊಸದು. ತಾರೆಯರನ್ನು ಅಲ್ಲಿ ಬೇರೆಯದೇ ಲೆವೆಲ್ಲಿನಲ್ಲಿಟ್ಟು ಪೂಜೆ ಮಾಡೋ ಪದ್ಧತಿ ಇದೆ. ಅಂಥಾದ್ದರಲ್ಲಿ ತಮಿಳಿನವರಿಗೆ ಅಚ್ಚರಿಯಾಗುವಂತೆ ಶಿವಣ್ಣ ವೇದಿಕೆಯಲ್ಲಿ ಹಾಡಿ ಕುಣಿದು ಕುಪ್ಪಳಿಸಿ ಧನುಷ್ ಅವರನ್ನೂ ಎಳೆದುಕೊಂಡು ವೇದಿಕೆ ಹತ್ತಿ ಅಚ್ಚರಿ ಸೃಷ್ಟಿಸಿದ್ಧಾರೆ.
ಧನುಷ್ ಶಿವಣ್ಣ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಸಾಂಗ್ ರಿಲೀಸ್ ಆಗಿದೆ. ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ವೇದಿಕೆಯಲ್ಲೂ ಕುಣಿದು ಕುಪ್ಪಳಿಸಿದ್ಧಾರೆ. ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿದ್ದ ಶಿವಣ್ಣ, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ಧಾರೆ. ಆ ಚಿತ್ರದ ಹಾಡು ಕರಘಟ್ಟದ ಈರಪ್ಪನು.. ಕನ್ನಡದಲ್ಲಿಯೂ ಕ್ಯಾಪ್ಟನ್ ಮಿಲ್ಲರ್ ರಿಲೀಸ್ ಆಗುತ್ತಿದೆ.
ಈರಪ್ಪನು ಹಾಡಿನಲ್ಲಿ ಧನುಷ್ ಜೊತೆ ಸ್ಟೆಪ್ ಹಾಕಿರುವ ಶಿವಣ್ಣ, ಬೆರಗು ಮೂಡಿಸುತ್ತಾರೆ. ರೆಟ್ರೋ ಶೈಲಿಯ ಹಾಡು ಇದಾಗಿದ್ದು, ಬುಡಕಟ್ಟು ಹಾಡಿಯೊಂದರಲ್ಲಿ ಧನುಶ್ ಹಾಗೂ ಶಿವಣ್ಣ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಹಾಡು ಸಹ ಜನಪದದ ಫೀಲ್ ನೀಡುವಂತಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದ್ದು, ಕನ್ನಡದಲ್ಲಿ ‘ಕರಘಟ್ಟದ ಈರಪ್ಪನೂ’ ಹೆಸರಿನಲ್ಲಿ ಹಾಡು ಪ್ರಾರಂಭವಾಗುತ್ತದೆ. ಶಿವಣ್ಣ ರೆಟ್ರೋ ಶೈಲಿಯ ಶರ್ಟ್-ಪ್ಯಾಂಟ್ ಧರಿಸಿದ್ದರೆ, ಧನುಶ್ ಹಳ್ಳಿ ಹೈದನ ರೀತಿ ಉಡುಪು ಧರಿಸಿ ಸಖತ್ ಆಗಿ ಕುಣಿದಿದ್ದಾರೆ. ಬಿಹೈಂಡ್ ದಿ ಕ್ಯಾಮೆರಾ ದೃಶ್ಯಗಳಲ್ಲಿ ಧನುಶ್ ಹಾಗೂ ಶಿವಣ್ಣ ಆಪ್ತವಾಗಿ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಕೆಲಸ ಮಾಡುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತಿವೆ.
ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಸಿನಿಮಾವನ್ನು ಅರುಣ್ ಮಟ್ಟೇಶ್ವರನ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡುತ್ತಿರುವುದು ಸತ್ಯಜ್ಯೋತಿ ಫಿಲಮ್ಸ್, ಈ ಸಿನಿಮಾದಲ್ಲಿ ಶಿವಣ್ಣ-ಧನುಷ್ ಜೊತೆಗೆ ಪ್ರಿಯಾಂಕಾ ಅರುಲ್, ಸಂದೀಪ್ ಕಿಶನ್, ನಿವೇದಿತಾ ಸತೀಶ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಜನವರಿ 12ಕ್ಕೆ ದೇಶಾದ್ಯಂತ ರಿಲೀಸ್ ಆಗುತ್ತಿದೆ.



