ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಗುರುಪೀಠ ಡಾ.ಶಿವಮೂರ್ತಿ ಶಿವಾಚಾರ್ಯಶ್ರೀ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಮಠದ ಡಾ,ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಪೀಠತ್ಯಾಗ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಒತ್ತಾಯ ಅಷ್ಟೇ ಅಲ್ಲ, ಸಾದರ ಲಿಂಗಾಯತ ಸಮಾಜ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಿಟ್ಟಿನಲ್ಲಿ ಬಹಿರಂಗವಾಗಿಯೇ ತಮ್ಮ ನಿಲುವು ಘೋಷಿಸಿವೆ.
ಏನಿದು ವಿವಾದ..?
ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. 2012ರಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳ ಶ್ರದ್ಧಾಂಜಲಿ ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ತಮ್ಮ ನಿರ್ಧಾರ ತಿಳಿಸಿದ್ದರು. ಪೀಠತ್ಯಾಗ ಮಾಡುವುದು ಬೇಡ ಎಂದು ಅದೇ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕಣ್ಣೀರಿಟ್ಟು ಪರಿಪರಿಯಾಗಿ ಬೇಡಿಕೊಂಡಿದ್ದರು. ಇದೆಲ್ಲ ನಡೆದದ್ದು 2012ರ ಸೆಪ್ಟೆಂಬರ್ 5ನೇ ತಾರೀಕು.
ಪೀಠತ್ಯಾಗ ಬೇಡ ಎಂದು ಆಗ ಬೇಡಿಕೊಂಡಿದ್ದವರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಕೂಡಾ ಒಬ್ಬರು. ಆದರೆ ಈಗ ಪ್ರಶ್ನೆ ಎತ್ತಿರುವವರಲ್ಲಿ ಶಾಮನೂರು ಶಿವಶಂಕರಪ್ಪನವರೇ ಪ್ರಮುಖರು. ಹತ್ತು ವರ್ಷದ ಹಿಂದೆ ಸಿರಿಗೆರೆ ಸ್ವಾಮೀಜಿ ಪದತ್ಯಾಗ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಭಕ್ತರ ಆಗ್ರಹದಿಂದ ತ್ಯಾಗ ಮಾಡಲಿಲ್ಲ. ನಂತರ ಮಠದ ಟ್ರಸ್ಟ್ ತಿದ್ದು ಮಾಡಿಕೊಂಡಿದ್ದಾರೆ. ಅದು ಅಗತ್ಯ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಈ ವಿಚಾರ ಕೋರ್ಟಿನಲ್ಲಿ ಇದೆ. ನಾವು ಕೆಲ ಜನ ಸೇರಿ ನಿರ್ಧಾರ ಮಾಡಬೇಕಾಗಿದೆ. ವೈಭವದಿಂದ ಇದ್ದ ಸಿರಿಗೆರೆ ಮಠಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸ್ವಾಮೀಜಿ ನಾನೇ ಇರುತ್ತೇನೆ ಎಂದು ಹಠ ಮಾಡಿದರೆ ಸಿರಿಗೆರೆ ಹಾಗೂ ಸಾಣಿಹಳ್ಳಿ ಸ್ವಾಮೀಜಿಗಳ ಬದಲಾಗಲಿ. ಉತ್ತರಾಧಿಕಾರಿಗಳನ್ನ ಮಾಡಲಿ ಎಂದು ಹೇಳಿದ್ದಾರೆ.
30 ವರ್ಷಗಳ ಹಿಂದೆ ಏಕವ್ಯಕ್ತಿ ಡೀಡ್ ಆಗಿದೆಯಂತೆ. ಏಕವ್ಯಕ್ತಿ ಡೀಡ್ ಎಂದರೆ ಆ ಸಂಸ್ಥೆಯ ಮೇಲೆ ಯಾರಿಗೂ ಅಧಿಕಾರ ಇರುವುದಿಲ್ಲ. ಓನರ್ ಶಿಪ್ ವ್ಯವಸ್ಥೆಯಂತೆ ಇರುತ್ತದೆ. ಈ ಮಠಗಳಲ್ಲಿ ಇದೇ ರೀತಿ ಆಗಿದ್ದು, ಈಗ ಈ ಎರಡೂ ಮಠಗಳ ಮೇಲೆ ಭಕ್ತರೂ ಸೇರಿದಂತೆ ಯಾರಿಗೂ ಅಧಿಕಾರ ಇಲ್ಲವಂತೆ.
ಆ.18ಕ್ಕೆ ಬೆಂಗಳೂರಿನಲ್ಲಿ ಸಮಾಜದ ಪ್ರಮುಖರೆಲ್ಲಾ ಸೇರಿ, ಸ್ವಾಮೀಜಿ ಭೇಟಿ ಮಾಡಿ ಪೀಠ ತ್ಯಾಗ ಮಾಡುವಂತೆ, ಏಕವ್ಯಕ್ತಿ ಡೀಡ್ ರದ್ಧುಪಡಿಸಲು, ಶ್ರೀಮಠಕ್ಕೆ ಮರಿ ಅಥವಾ ಉತ್ತರಾಧಿಕಾರಿ ನೇಮಕ ಮಾಡುವಂತೆ ಮನವಿ ಮಾಡೋಣ. ಏಕವ್ಯಕ್ತಿ ಡೀಡ್ ಯಾರೂ ಸಹ ಒಪ್ಪಲ್ಲ. ಯಾರೋ ಒಬ್ಬರು ಮಾಡಿದ್ದನ್ನು ನೋಡಿ, ಉಳಿದವರು ಅದನ್ನು ಆರಂಭಿಸುತ್ತಾರೆ. ಅಂತಹದ್ದೆಲ್ಲಾ ಯಾವುದೇ ಸಮಾಜದಲ್ಲೂ ಆಗಬಾರದು ಎಂದಿದ್ದಾರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ.
ಪೂರ್ವ ರೆಸಾರ್ಟ್‌ನ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು
ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಬಿ.ಸಿ.ಪಾಟೀಲ, ಎಂಎಲ್‌ಸಿ ರುದ್ರೇಗೌಡ, ಸಮಾಜದ ಹಿರಿಯ ಮುಖಂಡರಾದ ಆನಗೋಡು ನಂಜುಂಡಪ್ಪ, ಅಣಬೇರು ರಾಜಣ್ಣ ಇತರರು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಶ್ರೀಮಠದ ಏಕವ್ಯಕ್ತಿ ಡೀಡ್ ರದ್ಧುಪಡಿಸಿ, ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥವತ್ತಾಗಿ ಜಾರಿಗೊಳಿಸುವಂತೆ ಸಾದರ ಲಿಂಗಾಯತ ಸಮಾಜ ಒಕ್ಕೊರಲ ನಿರ್ಣಯ ಕೈಗೊಂಡಿದೆ. ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ, ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟಿದೆ.
ಸಿರಿಗೆರೆ ಮಠದ ಬೈಲಾ ಪ್ರಕಾರ.. ಸಿರಿಗೆರೆ ಮಠದ ಪರಂಪರೆಯಲ್ಲಿ ಸ್ವಾಮೀಜಿಗೆ 60 ವರ್ಷವಾದರೆ ಪೀಠ ತ್ಯಾಗ ಮಾಡಬೇಕೆಂಬ ನಿಯಮವಿದೆ. ಇದನ್ನೇ ಹೇಳಿದ ಮಾಜಿ ಶಾಸಕ ಬಿಸಿ ಪಾಟೀಲ್ ಮಠದ ಆಸ್ತಿ, ಸ್ಥಿರ, ಚರ ಆಸ್ತಿಯೆಲ್ಲಾ ಸಮಾಜದ ಭಕ್ತರಿಗೆ ಸೇರಿದ್ದು. ಆದರೆ, ಸ್ವಾಮೀಜಿ ಸಮಾಜದ ಯಾರೊಬ್ಬರ ಗಮನಕ್ಕೂ ಬರದಂತೆ 1990ರಲ್ಲಿ ಏಕವ್ಯಕ್ತಿ ಡೀಡ್ ಮಾಡಿಕೊಂಡಿದ್ದು ಸರಿಯಲ್ಲ. ಈ ವಿಚಾರ ಈಚೆಗಷ್ಟೇ ಹೊರ ಬಂದಿದೆ. ಏಕವ್ಯಕ್ತಿ ಡೀಡ್ ರದ್ಧುಪಡಿಸಬೇಕು. ಮೂವರೂ ಸ್ವಾಮೀಜಿಗಳು ಪೀಠ ತ್ಯಾಗ ಮಾಡಬೇಕು. ಮರಿ ಅಥವಾ ಉತ್ತರಾಧಿಕಾರಿಗಳನ್ನು ಬಿಡಬೇಕು. ಗುರುಗಳು ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಸಿರಿಗೆರೆ ಮಠದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭಕ್ತರು ಮಾಡಲಿದ್ದಾರೆ ಎಂದಿದ್ದಾರೆ.
ಸಭೆಯಲ್ಲಿ ಸಮಾಜದ ಮುಖಂಡರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಅಪೂರ್ವ ಹೊಟೆಲ್‌ಗಳ ಸಮೂಹದ ಅಧ್ಯಕ್ಷ ಅಣಬೇರು ರಾಜಣ್ಣ, ಹರಿಹರ ಶಾಸಕ ಬಿ.ಪಿ.ಹರೀಶ, ಚಿಕ್ಕಮಗಳೂರು ಎಂಎಲ್‌ಸಿ ರುದ್ರಗೌಡ, ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಟಿ.ಗುರುಸಿದ್ದನಗೌಡ, ಮಲ್ಲಿಕಾರ್ಜುನ ಮಾಡಾಳ, ಜೆ.ಆರ್.ಷಣ್ಮುಖಪ್ಪ, ಎಚ್.ಎನ್.ಚಂದ್ರಶೇಖರಪ್ಪ, ಬೆನಕಪ್ಪ, ಪ್ರೊ.ಸಿದ್ದಪ್ಪ, ಚಟ್ನಹಳ್ಳಿ ಮಹೇಶ, ಮಹೇಶ ಪಲ್ಲಾಗಟ್ಟೆ, ಚೇತನ ಎಲೆಬೇತೂರು, ಬಿ.ಜಿ.ರಮೇಶ, ಶ್ರೀನಿವಾಸ ಮೆಳ್ಖೆಕಟ್ಟೆ, ಮೆಳ್ಳೆಕಟ್ಟೆ ನಾಗರಾಜ, ನಾಗರಾಜ ಪಲ್ಲಾಗಟ್ಟೆ, ಸಂತೋಷ ಮೆಳ್ಳೆಕಟ್ಟೆ,ನಾಗರಾಜ ಬಣಕಾರ ಕುರುಡಿ, ವಿಶ್ವ ಮಂಡಲೂರು, ಶಿವಮೂರ್ತೆಯ್ಯ ಹಿರೇಮೇಗಳಗೆರೆ, ಬಸವಲಿಂಗಪ್ಪ ಕಲ್ಪನಹಳ್ಳಿ, ಆವರಗೆರೆ ಲಿಂಗರಾಜ, ಶ್ರೀನಿವಾಸ ಇತರರು ಇದ್ದರು.



