ನಿರ್ದೇಶಕ ತರುಣ್ ಸುಧೀರ್ ಮತ್ತು ದರ್ಶನ್ ನಡುವಿನ ಬಾಂಧವ್ಯದ ಬಗ್ಗೆ ಬೇರೆ ಹೇಳಬೇಕಿಲ್ಲ. ದರ್ಶನ್ ಅವರಿಗೆ ಒಂದಲ್ಲ.. ಎರಡಲ್ಲ.. ಮೂರು ಮೂರು ಹಿಟ್ ಕೊಟ್ಟಿರುವ ಡೈರೆಕ್ಟರ್ ತರುಣ್. ಮೊದಲ ಚಿತ್ರ ಆವರೇಜ್ ಹಿಟ್. ಎರಡನೇ ಚಿತ್ರ ಸೂಪರ್ ಹಿಟ್. ಮೂರನೇ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್. ಹೀಗೆ ಹಿಟ್ ಕೊಟ್ಟಿರುವ ತರುಣ್ ಅವರ ಮುಂದಿನ ಚಿತ್ರ ಸಿಂಧೂರ ಲಕ್ಷ್ಮಣ. ಆ ಚಿತ್ರಕ್ಕೆ ಹೀರೋ ದರ್ಶನ್ ಎಂದು ಘೋಷಿಸಿ ಆಗಿದೆ.
ದರ್ಶನ್ ಅವರೇನೋ ಈಗ ಜೈಲಿನಲ್ಲಿದ್ಧಾರೆ. ಯಾವಾಗ ರಿಲೀಸ್ ಎನ್ನುವುದು ಗೊತ್ತಿಲ್ಲ. ದರ್ಶನ್ ಅವರು ನಟಿಸುತ್ತಿದ್ದ ಡೆವಿಲ್, ಸದ್ಯಕ್ಕೆ ಶೂಟಿಂಗ್ ಸ್ಥಗಿತಗೊಂಡು ನಿಂತಿದೆ. ದರ್ಶನ್ ಅವರು ಜೈಲಿನಿಂದ ಹೊರಬಂದ ಮೇಲೆ ಮೊದಲು ವೀರ್ ಪ್ರಕಾಶ್ ಅವರ ಡೆವಿಲ್ ಕಂಪ್ಲೀಟ್ ಮಾಡಬೇಕು. ಅದಾದ ಮೇಲೆ ಇನ್ನೊಂದು ಸಿನಿಮಾ ಕಾಯುತ್ತಿದ್ದು, ಅದು ಮುಗಿದ ಮೇಲೆ ತರುಣ್ ಸುಧೀರ್ ಅವರ ಸಿಂಧೂರ ಲಕ್ಷ್ಮಣ ಟೇಕಾಫ್ ಆಗಲಿದೆ.
ಜೈಲಿನಿಂದ ಹೊರ ಬಂದ ಮೇಲೆ ಸರ್ ಡೆವಿಲ್ ಮಾಡಬೇಕು. ಆಮೇಲೆ ಇನ್ನೊಂದು ಸಿನಿಮಾ ಮಾಡಬೇಕು. ಅದಾದ್ಮೇಲೆ ನಮ್ಮದು 59ನೇ ಸಿನಿಮಾ ಅಂತ ಅನೌನ್ಸ್ ಮಾಡಿದ್ವಿ. ಅದಕ್ಕೆ ಬೇಕಿರೋ ಕೆಲಸವನ್ನೆಲ್ಲ ಮಾಡಿದ್ವಿ. ಅವರು ಯಾವಾಗ ಬಂದರೂ, ಅವರು ಯಾವಾಗ ಅಂದರೂ, ಅದೇನೆ ಪರಿಸ್ಥಿತಿ ಇದ್ದರೂ ನಾನಂತೂ ಸಿನಿಮಾ ಮಾಡುತ್ತೇನೆ. ಅಷ್ಟಂತೂ ನನ್ನ ಕಡೆಯಿಂದ ಹೇಳುತ್ತೇನೆ.” ಎಂದಿದ್ದಾರೆ ತರುಣ್ ಸುಧೀರ್.
ತರುಣ್ ಸುಧೀರ್ ಅವರ ಕನಸಿನ ಪ್ರಾಜೆಕ್ಟ್ ಸಿಂಧೂರ ಲಕ್ಷ್ಮಣ. ತರುಣ್ ಅವರ ತಂದೆ ಸುಧೀರ್ ಅವರು ಹೆಸರು ಮಾಡಿದ್ದು, ಖ್ಯಾತಿ ಗಳಿಸಿದ್ದು ರಂಗಭೂಮಿಯ ಸಿಂಧೂರ ಲಕ್ಷ್ಮಣನ ಪಾತ್ರದಿಂದ. ಹೀಗಾಗಿ ತರುಣ್ ಅವರಿಗೆ ಅಪ್ಪನಿಗೆ ಹೆಸರು ತಂದುಕೊಟ್ಟ ಸ್ವಾತಂತ್ರ್ಯ ಯೋಧನ ಕಥೆಯನ್ನು ಸಿನಿಮಾ ಮಾಡುವ ಆಸೆ ಇದೆ. ಆ ಪಾತ್ರಕ್ಕೆ ದರ್ಶನ್ ಅವರನ್ನು ಆಯ್ಕೆ ಮಾಡಿಕೊಂಡೂ ಆಗಿದೆ.
ಅವರು ನಿರಪರಾಧಿ ಅಂತ ಹೊರ ಬರುತ್ತಾರೆ. ಅದೇ ಸತ್ಯ. ಅದೇ ಆಗಲಿ ಅಂತ ನಂಬಿದ್ದು, ಹಾಗೆ ಆಗುತ್ತೆ ಅನ್ನುವ ನಂಬಿಕೆ ನನಗಿದೆ ಎಂದು ಮಾಧ್ಯಮಗಳ ಮುಂದೆ ತರುಣ್ ಸುಧೀರ್ ಹೇಳಿಕೊಂಡಿದ್ದಾರೆ ಮತ್ತು ಕಣ್ಣೀರಿಟ್ಟಿದ್ದಾರೆ.
ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ ದರ್ಶನ್ ಹೇಳಿ ಮಾಡಿಸಿದಂತಿದ್ದಾರೆ. ಸುಧೀರ್ ಅವರು ಪಾತ್ರಕ್ಕೆ ಆಯ್ಕೆಯಾಗಿದ್ದಕ್ಕೆ ಮೊದಲ ಕಾರಣವೇ ಅವರ ಹೈಟು. ಆರು ಅಡಿಗಿಂತ ಹೆಚ್ಚು ಹೈಟ್ ಇದ್ದ ಸುಧೀರ್ ಅವರಂತೆಯೇ ದರ್ಶನ್ ಕೂಡಾ ಲೈಟ್ ಕಂಬ. ಜೊತೆಗೆ ರಾಯಣ್ಣ, ದುರ್ಯೋಧನನ ಪಾತ್ರ ಮಾಡಿರುವ ಹಿಸ್ಟರಿಯೂ ಇದೆ. ಹೀಗಾಗಿ ತರುಣ್ ಸುಧೀರ್ ಅವರ್ಗೆ ದರ್ಶನ್ ಅವರನ್ನು ಬಿಟ್ಟು ಬೇರೆ ಆಯ್ಕೆ ಕಾಣುತ್ತಿಲ್ಲ.



