ಇದನ್ನು ವಿಪರ್ಯಾಸ ಎನ್ನಿ. ವಿಪರೀತ ಎನ್ನಿ. ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಈ ಹಿಂದೆಯೂ ವಿಲನ್ ಆಗಿದ್ದವರು ಅವರ ಆಪ್ತರೇ. ಈ ಬಾರಿಯೂ ಸಿದ್ದರಾಮಯ್ಯ ಸರ್ಕಾರಕ್ಕೆ ವಿಲನ್ ಆಗಿರುವುದು ಸಿದ್ದರಾಮಯ್ಯ ಆಪ್ತರೇ. ಇದೀಗ ಹೊರಬಿದ್ದಿರುವ ವಸತಿ ಇಲಾಖೆಯ ಲಂಚ ಕೊಟ್ಟರೆ ಮಾತ್ರ ಮನೆ ಎಂಬ ಹಗರಣ ಇದೆಯಲ್ಲ.. ಅದಕ್ಕೆ ಕಾರಣವಾಗಿರೋದು, ಸಿದ್ದರಾಮಯ್ಯ ಹೆಸರಿಗೆ ಕೆಟ್ಟ ಹೆಸರು ತಂದಿರೋದು ಅವರ ಪರಮಾಪ್ತ ಜಮೀರ್ ಅಹ್ಮದ್. ಇದು ಕೇವಲ ಒಮ್ಮೆ ಸಂಭವಿಸುವ ಕಥೆ ಅಲ್ಲ. ಸುಮ್ಮನೆ ನೋಡುತ್ತಾ ಹೋದರೆ ಸಾಕು..
ಜಮೀರ್ ಅಹ್ಮದ್ : ಸಿದ್ದರಾಮಯ್ಯ ಅವರು ಅತೀ ಹೆಚ್ಚು ನಂಬಿಕೆ ಇಟ್ಟಿರುವ ನಾಯಕ. ಕಾಂಗ್ರೆಸ್ಸಿಗೆ ಬಂದಿದ್ದಕ್ಕೂ ಸಿದ್ದುನೇ ಕಾರಣ. ಕುಮಾರಸ್ವಾಮಿ ಜೊತೆ ಠೂ ಬಿಟ್ಟಿದ್ದಕ್ಕೂ ಸಿದ್ದೂನೇ ಕಾರಣ. ಆಗಾಗ್ಗೆ ಕಾಂಟ್ರವರ್ಸಿ ಹೇಳಿಕೆ ಕೊಟ್ಟು ಮುಜುಗರ ತರುವ ಜಮೀರ್ ಅಹ್ಮದ್ ಈ ಬಾರಿ ಹಗರಣದ ಮೂಲಕ ಕೆಟ್ಟ ಹೆಸರು ಕೊಟ್ಟಿದ್ದಾರೆ.
ಗೋವಿಂದರಾಜ್ : ಸಿದ್ದರಾಮಯ್ಯ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಗೋವಿಂದ ರಾಜ್ ಅವರ ಮೇಲೆ ಅವರದ್ದೇ ಸರ್ಕಾರದ ಸಚಿವರೆಲ್ಲರೂ ಯಾವ ಪರಿ ಆಕ್ರೋಶ ಗೊಂಡಿದ್ದರು ಎಂದರೆ, ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೊದಲು ಟಾರ್ಗೆಟ್ ಆದ ವ್ಯಕ್ತಿಯೇ ಗೋವಿಂದರಾಜು. ತಮ್ಮ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ತಮ್ಮ ಪರಮಾಪ್ತನಿಗೆ ಕೊಟ್ಟಿದ್ದ ಸ್ಥಾನದಿಂದ ಅವರನ್ನು ವಜಾಗೊಳಿಸಿದ್ದು ಸಿದ್ದರಾಮಯ್ಯ.
ಬಸವರಾಜ ರಾಯರೆಡ್ಡಿ : ಕಾಂಗ್ರೆಸ್ಸಿನ ಸೀನಿಯರ್ ಲೀಡರ್. ಬುದ್ದಿವಂತ. ಆದರೆ, ಯಾವ ಗ್ಯಾರಂಟಿಗಳನ್ನು ತಮ್ಮ ಟ್ರಂಪ್ ಕಾರ್ಡ್ ಎಂದು ಬಿಂಬಿಸುತ್ತಿದೆಯೋ.. ಅದೇ ಗ್ಯಾರಂಟಿಗಳ ವಿರುದ್ಧ ಧ್ವನಿ ಎತ್ತಿದವರು ರಾಯರೆಡ್ಡಿ. ಗ್ಯಾರಂಟಿಗಳಿಂದಾಗಿಯೇ ಅನುದಾನಕ್ಕೆ ಸಮಸ್ಯೆಯಾಗಿದೆ ಎಂದು ಹೇಳಿದ್ದವರು ಇದೇ ರಾಯರೆಡ್ಡಿ.
ಭೈರತಿ ಸುರೇಶ್ : ಇನ್ನು ಮುಡಾ ಹಗರಣ ಸೇರಿದಂತೆ ಹಲವು ಕಡೆ ಕೇಳಿಬಂದ ಹೆಸರು ಭೈರತಿ ಸುರೇಶ್ ಅವರದ್ದು. ದಾಖಲೆಗಳನ್ನು ಶಿಫ್ಟ್ ಮಾಡಿದ್ದಾರೆ ಎಂಬ ಆರೋಪ ಹೊತ್ತರು. ಸಿದ್ದುಗೂ ಕೆಟ್ಟ ಹೆಸರು ತಂದುಕೊಟ್ಟರು. ಇವರೂ ಸಿದ್ದರಾಮಯ್ಯ ಪರಮಾಪ್ತರೇ.
ಕೆಎನ್ ರಾಜಣ್ಣ : ವಿಧಾನಸಭೆಯಲ್ಲಿ ಹನಿ ಟ್ರಾಪ್ ಕಥೆ ಹೇಳಿ, ಆನಂತರ ಬಿಜೆಪಿ ಶಾಸಕರ ಸಸ್ಪೆಂಡ್ ಆಗಿ, ಅತ್ತ ದೂರನ್ನೂ ಕೊಡದೆ.. ಇತ್ತ ಸಾಕ್ಷಿಯನ್ನೂ ಕೊಡದೆ ಹಂಗಾಮ ಸೃಷ್ಟಿಸಿದ್ದು ಕೆಎನ್ ರಾಜಣ್ಣ. ಡಿಕೆಗೆ ಠಕ್ಕರ್ ಕೊಡುತ್ತಾರೆ ಎಂದುಕೊಂಡರೆ, ಕೆಎನ್ ರಾಜಣ್ಣ, ಸಿದ್ದುಗೇ ಶೇಮ್ ಶೇಮ್ ಮಾಡಿದರು.
ಕೆಸಿ ಜಾರ್ಜ್ : ಸ್ಮಾರ್ಟ್ ಮೀಟರ್ ಹಗರಣದಲ್ಲಿ ಹೆಸರು ಕೆಡಿಸಿದರು.
ನಾಗೇಂದ್ರ : ವಾಲ್ಮೀಕಿ ಹಗರಣದಲ್ಲಿ ಹೆಸರು ಕೆಡಿಸಿದ ನಾಗೇಂದ್ರ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು.
ಸಂತೋಷ್ ಲಾಡ್ : ಮಾಧ್ಯಮಗಳಲ್ಲಿ ಅಬ್ಬರಿಸಿದರೂ.. ಕಾರ್ಮಿಕ ಇಲಾಖೆ ಅಪಸವ್ಯಗಳು ಎದುರಾಳಿಗಳಿಗೆ ಆಹಾರ ಒದಗಿಸಿವೆ.
ತಿಮ್ಮಾಪುರ : ಅಬಕಾರಿ ಹಗರಣದಿಂದ ಕೆಟ್ಟ ಹೆಸರು
ಈ ಹಿಂದಿನ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರಿಗೆ ಡ್ಯಾಮೇಜ್ ಮಾಡಿದ್ದ ಆಪ್ತರಲ್ಲಿ ಎಚ್ ವೈ ಮೇಟಿ, ಹೆಚ್ ವಿಶ್ವನಾಥ್, ಸಿಎಂ ಇಬ್ರಾಹಿಂ ಮೊದಲಾದವರಿದ್ದರು. ಅವರಲ್ಲಿ ಇಬ್ಬರನ್ನು ಕಾಂಗ್ರೆಸ್ಸಿನಿಂದಲೇ ದೂರ ಇಡಲಾಗಿದೆ. ಈಗ ಇರುವ ಇನ್ನಷ್ಟು ಸಿದ್ದು ಆಪ್ತರಲ್ಲಿ ಸತೀಶ್ ಜಾರಕಿಹೊಳಿ, ಪರಮೇಶ್ವರ್, ಎಚ್‌ಸಿ ಮಹದೇವಪ್ಪ, ಕೃಷ್ಣ ಭೈರೇಗೌಡ ಮೊದಲಾದವರು ಸರ್ಕಾರಕ್ಕೆ ಹಾಗೂ ಸಿದ್ದರಾಮಯ್ಯ ಅವರಿಗೆ ಡ್ಯಾಮೇಜ್ ಮಾಡಿಲ್ಲ. ಪ್ರಿಯಾಂಕ್ ಖರ್ಗೆ ಅವರನ್ನು ಮಾತ್ರ ಎರಡೂ ಲಿಸ್ಟಿಗೆ ಸೇರಿಸಬಹುದು. ಡ್ಯಾಮೇಜ್ ಕೂಡಾ ಆಗಿದೆ. ಎದುರಾಳಿಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿಯೂ ಇದೆ.



