ರಾಜ್ಯದಲ್ಲೀಗ ಸಿದ್ಧರಾಮಯ್ಯ ಅವರ ಸಿಎಂ ಕುರ್ಚಿ ಯಾವಾಗ ಬೀಳಲಿದೆ ಎಂಬ ಪ್ರಶ್ನೆಯೇ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ನಾನೇ 5 ವರ್ಷ ಖಾಯಂ ಸಿಎಂ ಎಂಬ ಸಿದ್ದು ಹೇಳಿಕೆಗೆ ಅಷ್ಟೊಂದು ಬಲವಿದ್ದಂತೆ ಕಾಣುತ್ತಿಲ್ಲ. ಡಿಕೆ ಮತ್ತು ಸಿದ್ಧರಾಮಯ್ಯ ಇಬ್ಬರೂ ದೆಹಲಿ ಸೇರುತ್ತಿರುವಾಗ.. ಸಿಎಂ ಕುರ್ಚಿ ಅಲುಗಾಡುತ್ತಿರುವಾ.. ರಾಜ್ಯ ಬಿಜೆಪಿ ನಾಯಕರು ಏನ್ ಮಾಡ್ಬೇಕು..? ಈ ವಿಷಯದಲ್ಲಿ ನರೇಂದ್ರ ಮೋದಿ..ಮತ್ತವರ ಟೀಂ ವಿಜಯೇಂದ್ರಗೆ ಒಂದು ಮೆಸೇಜ್ ಕೊಟ್ಟಿದೆ.
ಸಂದೇಶ ತಲುಪಿಸುವ ಮುನ್ನ ಏನೇನಾಯ್ತು..?
ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಮತ್ತು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಇಬ್ಬರಿಗೂ ಒಂದು ಟಾಸ್ಕ್ ಕೊಟ್ಟರು. ಮೋದಿಯವರೇ ಈ ಟಾಸ್ಕ್ ಕೊಡಬೇಕು ಎಂದು ಹೇಳಿದ್ದವರು ಅಮಿತ್ ಶಾ. ಟಾಸ್ಕ್ ಪಡೆವರಿಗೆ ಕೊಟ್ಟಿದ್ದ ಜವಾಬ್ದಾರಿಯೂ ಇಷ್ಟೇ..
ಸಿಎಂ ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ಅಧಿಕಾರ ಬಿಟ್ಟುಕೊಡುವುದಿಲ್ಲ. ಹಾಗಾದಾಗ ಸಿದ್ದರಾಮಯ್ಯ ಅವರ ವಿರುದ್ಧ ಒಂದು ಬಣ ತಿರುಗಿ ಬಿದ್ದು ಬಿಜೆಪಿಯ ಕಡೆ ನೋಡಲಿದೆ. ಹೀಗಾಗಿ ಈ ಸನ್ನಿವೇಶವನ್ನು ಎನ್‌ಕ್ಯಾಶ್ ಮಾಡಿಕೊಳ್ಳಲು ಬಿಜೆಪಿಗೆ ಸಾಧ್ಯ. ಆದರೆ ಅದಕ್ಕೆ ರಾಜ್ಯ ಬಿಜೆಪಿ ನಾಯಕರಿಂದ ಸ್ಟೇಟಸ್ ರಿಪೋರ್ಟ್ ಬೇಕು. ಅವರು ಪರ್ಫೆಕ್ಟ್ ರಿಪೋರ್ಟ್ ಕೊಡಬೇಕು. ಬಿಜೆಪಿ ಮಧ್ಯಪ್ರವೇಶ ಮಾಡಬೇಕೇ.. ಬೇಡವೇ.. ಎಂಬ ಬಗ್ಗೆ ಕ್ಲಾರಿಟಿ ಪಡೆದುಕೊಳ್ಳಬೇಕು.
ಈ ಇಬ್ಬರಿಗೇ ಯಾಕೆ..?
ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಸಿಕ್ಕಾಪಟ್ಟೆ ಆಕ್ಟಿವ್ ಇದ್ದರೂ.. ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡ ಅವರು ರಾಜ್ಯ ಬಿಜೆಪಿಯ ತಟಸ್ಥ ಬಣದಲ್ಲಿದ್ದಾರೆ. ಪ್ರಲ್ಹಾದ್ ಜೋಷಿ ಬಗ್ಗೆ ವಿಜಯೇಂದ್ರ ಟೀಂ ಗೊಣಗುತ್ತದೆಯಾದರೂ.. ಅದಕ್ಕೆ ಬಲವಾದ ಸಾಕ್ಷ್ಯಗಳಿಲ್ಲ. ಪಕ್ಷದಲ್ಲಿ ಆಂತರಿಕ ಕಚ್ಚಾಟ ಭುಗಿಲೆದ್ದಾಗಲೆಲ್ಲ.. ಇದಕ್ಕೇನು ಕಾರಣ? ಅಂತ ವರಿಷ್ಠರಿಗೆ ಸ್ಪಷ್ಟ ವರದಿಗಳನ್ನು ಕೊಟ್ಟವರು ಡಿವಿಎಸ್ ಮತ್ತು ಜೋಷಿ. ಇಬ್ಬರೂ ಸೀನಿಯರ್ಸ್. ಬಿಜೆಪಿ ಅಧ್ಯಕ್ಷರಾಗಿ ಸಂಕಷ್ಟದ ದಿನಗಳನ್ನು ನಿಭಾಯಿಸಿದವರು. ಹಿರಿತನವಿದೆ. ಕರ್ನಾಟಕದ ರಾಜಕಾರಣವನ್ನು ಅಳೆದು-ತೂಗಿ, ಅದರ ದಿಕ್ಕು ಯಾವ ಕಡೆ ಸಾಗುತ್ತಿದೆ ಅಂತ ಹೇಳುವ ಜಾಣ್ಮೆ ಇದೆ.
ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಈ ಇಬ್ಬರು ನಾಯಕರಿಗೆ ಆ ಜವಾಬ್ದಾರಿ ವಹಿಸಲು ನಿರ್ಧರಿಸಿದ್ದಾರೆ.
ಜೋಷಿ, ಗೌಡ ರಿಪೋರ್ಟ್ ಏನಿತ್ತು..?
ಅಧಿಕಾರ ಹಸ್ತಾಂತರದ ಗೊಂದಲದಿಂದ ಒಂದು ಬಣ ಕಾಂಗ್ರೆಸ್ ತೊರೆದು ಬಿಜೆಪಿ ಕಡೆ ಬಂದರೂ ನಾವು ಆಸರೆ ನೀಡುವುದು ಬೇಡ. ಹಾಗೇನಾದರೂ ಆದರೆ.. ಜೆಡಿಎಸ್ ದೂರವಾಗುವ ಸಾಧ್ಯತೆಯೇ ಹೆಚ್ಚು. ಕರ್ನಾಟಕದಲ್ಲಿ ಒಕ್ಕಲಿಗ ಮತಬ್ಯಾಂಕಿನ ಮೇಲೆ ಬಲವಾದ ಹಿಡಿತ ಹೊಂದಿರುವ ಜೆಡಿಎಸ್ ದೂರವಾದರೆ.. ಅಗುವ ನಷ್ಟವನ್ನು ತುಂಬಿಕೊಡುವ ಶಕ್ತಿ, ಕಾಂಗ್ರೆಸ್ಸಿಂದ ಬಿಜೆಪಿಗೆ ಬರಲು ಸಿದ್ಧವಾಗಿರುವ ನಾಯಕರಿಗೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಇವತ್ತು ಚುನಾವಣೆಗೆ ಹೋದರೂ ನೂರೈವತ್ತು ಸೀಟು ಗೆಲ್ಲುತ್ತದೆ. ಹೀಗಾಗಿ ಅಧಿಕಾರ ಹಸ್ತಾಂತರ ಸಂಘರ್ಷದಲ್ಲಿ ನಾವು ಮಧ್ಯೆ ಪ್ರವೇಶಿಸದೆ ಸುಮ್ಮನಿದ್ದರೆ ಸಾಕು ಎಂಬ ರಿಪೋರ್ಟ್ ರವಾನೆಯಾಗಿದೆ.
ಆ ರಿಪೋರ್ಟ್‌ನ್ನು ಸ್ಥಳೀಯ ಆರ್‌ಎಸ್‌ಎಸ್ ನಾಯಕರು, ದೆಹಲಿಯಲ್ಲಿ ಕುಳಿತಿರುವ ಕರ್ನಾಟಕ ರಾಜಕೀಯ ಗೊತ್ತಿರುವವರಿಗೆ ತಲುಪಿಸಿ, ಅಲ್ಲಿಂದಲೂ ರಿಪೋರ್ಟ್ ಪಡೆದುಕೊಂಡಿದ್ದಾರೆ. ಅದಾದ ನಂತರ.. ಮೋದಿ ಮತ್ತು ಅಮಿತ್ ಶಾ ಜೋಡಿ, ಸದ್ಯಕ್ಕೆ ಕರ್ನಾಟಕ ಬಿಜೆಪಿಯ ಗೊಂದಲವನ್ನು ಪರಿಹರಿಸಿಕೊಳ್ಳೋಣ. ಮುಂದೇನಾಗುತ್ತದೋ ನೋಡೋಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಿಜೆಪಿ ಬಣಗಳನ್ನು ಒಂದಾಗಿಸುವ ಹೊಣೆಯನ್ನು ಪ್ರಲ್ಹಾದ್ ಜೋಷಿ ಮತ್ತು ಡಿ.ವಿ.ಸದಾನಂದಗೌಡರಿಗೇ ಕೊಟ್ಟಿದ್ದಾದ್ಧಾರೆ.
ವಿಜಯೇಂದ್ರೆಗೆ ಏನು ಸಂದೇಶ..?
ಸದ್ಯಕ್ಕೆ ನಡೆಯುತ್ತಿರುವ ಕಾಂಗ್ರೆಸ್ ಆಂತರಿಕ ಸಂಘರ್ಷದಲ್ಲಿ ಕಾಂಗ್ರೆಸ್ಸಿಂದ ಸಂಪರ್ಕಿಸುವ ಯಾವ ನಾಯಕರಿಗೂ.. ಯಾವುದೇ ಭರವಸೆ ಕೊಡಬೇಡಿ. ಪಕ್ಷಕ್ಕೆ ಕರೆತರುವ ಪ್ರಯತ್ನ ಬೇಡ. ನಿಮ್ಮ ಇರುವಿಕೆಯನ್ನೇ ತೋರಿಸಿ, ಆ ನಾಯಕರು ಲಾಭ ಮಾಡಿಕೊಳ್ಳಬಹುದು. ಈ ವಿಷಯದಲ್ಲಿ ಸೈಲೆಂಟ್ ಆಗಿರಿ ಎಂಬ ಸಂದೇಶ ತಲುಪಿಸಿದ್ದಾರೆ ಮೋದಿ. ಅಲ್ಲಿಗೆ ಕಾಂಗ್ರೆಸ್ ಒಳಗಿನ ತಿಕ್ಕಾಟದಲ್ಲಿ ಬಿಜೆಪಿ ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯಲಿದೆ.



