ರಾಜ್ಯ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗೂ.. ಕಾಂಗ್ರೆಸ್ ಅಧ್ಯಕ್ಷರಿಗೂ ತಾಳಮೇಳ ತಪ್ಪಿದೆಯಾ.. ಇಂತಾದ್ದೊಂದು ಅನುಮಾನ ಮೂಡುವುದು ಸಹಜ. ಏಕೆಂದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಡುವ ಪ್ರತಿ ಹೆಜ್ಜೆಗೂ.. ಅವರನ್ನು ವಿರೋಧಿಸುವ ಬಣ ವಿರುದ್ಧವಾಗಿಯೇ ಹೆಜ್ಜೆ ಇಡುತ್ತಿದೆ. ಇದೀಗ ಅರ್ ಎಸ್ ಎಸ್ ಹೊಸ ಕಾರಣ.
ಡಿಕೆ ಆರ್.ಎಸ್.ಎಸ್. ಹೊಗಳಿದ ಬೆನ್ನಲ್ಲೇ ಪ್ರಿಯಾಂಕ್ ಶಾಕ್..!
ಕಾಂಗ್ರೆಸ್ಸಿನಲ್ಲಿರುವವರಿಗೆ ಪ್ರತಿಯೊಬ್ಬರಿಗೂ ಗೊತ್ತಿರುವಂತೆ ಪ್ರಿಯಾಂಕ್ ಖರ್ಗೆ, ಸಿದ್ದು ಟೀಂ. ಅದರಲ್ಲೂ ಆರ್‌ಎಎಸ್‌ಎಸ್ ಸೇರಿದಂತೆ ಕೆಲವು ಬಲಪಂಥೀಯ ವಿಚಾರವಾದಿಗಳನ್ನು ತರಾಟೆಗೆ ತಗೊಳ್ಳೋದ್ರಲ್ಲಿ ಸಿದ್ಧರಾಮಯ್ಯ ಅವರಿಗಿಂತ ಒಂದು ಕೈ ಮುಂದೆ. ಇದೀಗ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್ ಸಂಘ ಚಟುವಟಿಕೆಗಳನ್ನು ಸರ್ಕಾರಿ ಶಾಲೆ, ಆವರಣಗಳಲ್ಲಿ ನಿಷೇದ ಮಾಡುವ ಪ್ರಸ್ತಾವನೆ ಕೊಟ್ಟಿದ್ದಾರೆ.
ಇತ್ತೀಚೆಗೆ ಉಪಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ ವಿಧಾನಸಬೆಯಲ್ಲಿ ಆರ್‌ಎಸ್‌ಎಸ್ ಗೀತೆಯಾದ ನಮಸ್ತೇ ಸದಾ ವತ್ಸಲೇ ಹಾಡಿದ್ದರು. ಅದಾದ ನಂತರ ನೇರವಾಗಿ ಹೆಸರು ಹೇಳದೆ ಪ್ರಿಯಾಂಕ್ ಖರ್ಗೆ, ಬಿಕೆ ಹರಿಪ್ರಸಾದ್ ಮೊದಲಾದವರು ಡಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಚಿತ್ರ ಎಂದರೆ.. ಎಲ್ಲರನ್ನೂ ಗದರಿಸಿಯೇ ಮಾತನಾಡುವ ಡಿಕೆ, ಅವತ್ತು ತಣ್ಣಗಾಗಿ ಕ್ಷಮೆ ಕೇಳಿದ್ದರು.
ಇದೀಗ ಮುನಿರತ್ನ ಗಲಾಟೆಯಲ್ಲಿ ಡಿಕೆಶಿ, ಆರ್‌ಎಸ್‌ಎಸ್‌ನ್ನು ಹೊಗಳಿದ ದಿನವೇ, ಆರ್‌ಎಸ್‌ಎಸ್‌ಗೆ ನಿರ್ಬಂಧ ವಿಧಿಸುವ ಪ್ರಸ್ತಾವನೆ ಹೊರ ಬಂದಿದೆ. ಅಂದಹಾಗೆ ಈ ಪ್ರಸ್ತಾವನೆಯನ್ನು ಸಿದ್ಧ ಮಾಡಲು, ಸಾಧಕ ಬಾಧಕ, ಕಾನೂನು ಅಡ್ಡಿ ಆತಂಕಗಳನ್ನು ಗಮನಿಸಲು ಶುರು ಮಾಡಿದ್ದೇ ಡಿಕೆ ಶಿವಕುಮಾರ್ ಸದನದಲ್ಲಿ ನಮಸ್ತೇ ಸದಾ ವತ್ಸಲೇ.. ಹಾಡಿದ ನಂತರ ಅಂತೆ.
ಧರ್ಮಸ್ಥಳ ವಿಷಯದಲ್ಲೂ ಡಿಕೆಗೆ ಎದಿರೇಟು..!
ಇನ್ನು ಧರ್ಮಸ್ಥಳದ ವಿಷಯದಲ್ಲೂ ಅಷ್ಟೇ. ಇತ್ತ ಡಿಕೆ ಶಿವಕುಮಾರ್, ಧರ್ಮಸ್ಥಳ, ಹೆಗ್ಗಡೆ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಘಂಟಾಘೋಷವಾಗಿ ಹೇಳಿದರು. ಬಿಜೆಪಿಯವರಿಗಿಂತ ದೊಡ್ಡ ಮೈಲೇಜ್ ಸಿಕ್ಕಿತು. ಆದರೆ.. ಎಸ್‌ಐಟಿ ತನಿಖೆಯನ್ನು ಆಮೆ ಮಾಡಿಸಿ.. ಷಡ್ಯಂತ್ರ ಎಂಬ ಡಿಕೆ ಮಾತಿಗೆ ಸಾಕ್ಷಿ ಸಿಕ್ಕರೂ.. ಕುಂಟುತ್ತಲೇ ಇರುವಂತೆ ನೋಡಿಕೊಂಡಿದ್ದು ಸಿದ್ಧರಾಮಯ್ಯ ಟೀಂ. ಹೀಗಾಗಿಯೇ.. ಗೃಹ ಸಚಿವ ಪರಮೇಶ್ವರ್ ಕೂಡಾ ಏನು ಹೇಳಬೇಕೋ ತಿಳಿಯದೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಲಿಂಗಾಯತ ಧರ್ಮದ ವಿಷಯದಲ್ಲೂ ಡಿಕೆಗೆ ಎದಿರೇಟು..!
ಇನ್ನು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರಕ್ಕೆ ತಲೆ ಹಾಕಲೇಬಾರದಿತ್ತು. ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದರು ಡಿಕೆ. ಆದರೆ.. ಸಿದ್ಧರಾಮಯ್ಯ ಬಣ ಈಗ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮದ ಕಹಳೆ ಊದುತ್ತಲೇ ಇದೆ.
ಕುಂಭಮೇಳಕ್ಕೆ ಡಿಕೆ ಹೋಗಿಬಂದರೆ.. ಅತ್ತ ತಲೆಯನ್ನೂ ಹಾಕದೆ ಕುಳಿತವರು ಸಿದ್ಧರಾಮಯ್ಯ ಟೀಂ. ದಸರಾ ಉದ್ಘಾಟನೆ ವಿವಾದದಲ್ಲೂ ಅಷ್ಟೇ.. ಬಾನು ಮುಷ್ತಾಕ್ ಹೆಸರಿಗೆ ಡಿಕೆ ವಿರೋಧಿಸಿದ್ದರಂತೆ. ಆದರೆ.. ಪರಮಾಧಿಕಾರ ಚಲಾಯಿಸಿದ ಸಿದ್ಧರಾಮಯ್ಯ, ವಿವಾದವಾಗುವಂತೆ ಮಾಡಿದರು.
ಒಟ್ಟಿನಲ್ಲಿ ಡಿಕೆ ಹಾಕುವ ಪ್ರತಿ ಹೆಜ್ಜೆಗೂ ಸಿದ್ಧರಾಮಯ್ಯ ಬಣ ಅಡ್ಡಗಾಲು ಹಾಕುತ್ತಲೇ ಇದೆ ಎನ್ನುವುದು ವಿಧಾನಸೌಧದ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿರುವ ಚರ್ಚೆ.



