ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮಧ್ಯೆ ಈಗ ವಾರ್ ಇನ್ನೊಂದು ಹಂತಕ್ಕೆ ಹೋಗಿದೆ. ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳ ಮೂಲಕ ಬಿರುಗಾಳಿ ಎಬ್ಬಿಸಿದ್ದರೆ, ಡಿಕೆ ಶಿವಕುಮಾರ್ ಬೆಂಬಲಿಗರು ಸಿಡಿಯುವ ಸೂಚನೆ ಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ . ರಣರಂಗದಿಂದ ಓಡುವ ಹೇಡಿ ನಾನಲ್ಲ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವೆ ಎನ್ನುತ್ತಿದ್ದರೆ, ಡಿಕೆ ಶಿವಕುಮಾರ್ ʻಸಮಯ ಬರಲಿʼ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಕ್ಲೈಮಾಕ್ಸ್ ಸುಳಿವು ಕೊಟ್ಟಿದ್ದಾರೆ ಸತೀಶ್ ಜಾರಕಿಹೊಳಿ.
ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ಬಂದ ನಂತರ ಅವರ ಟೀಂ ಆಕ್ಟಿವ್ ಆಗಿದೆ. ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ಕುಣಿಗಲ್ ರಂಗನಾಥ್, ಮಾಗಡಿ ಬಾಲಕೃಷ್ಣ, ಕದಲೂರು ಉದಯ್..ಇತರರು ಬಹಿರಂಗವಾಗಿಯೇ ಮಾತನಾಡುತ್ತಿದ್ದಾರೆ. ಆದರೆ ಈ ಬಾರಿ ಡಿಕೆ ಶಿವಕುಮಾರ್ ಸೈಲೆಂಟ್. ಗಪ್ ಚುಪ್ ಎನ್ನುತ್ತಿಲ್ಲ. ಸಿದ್ದರಾಮಯ್ಯ ಕಾರಣ ಕೇಳೋಕೆ ಆಗಲ್ಲ. ಯಾಕಂದ್ರೆ, ಸಿದ್ದರಾಮಯ್ಯ ಪುತ್ರ ಯತೀಂದ್ರಗಾಗಲೀ, ಮಹದೇವಪ್ಪ ಅವರಿಗಾಗಲೀ ಡಿಕೆ ಶಿವಕುಮಾರ್ ಏನೂ ಹೇಳಿಲ್ಲ. ಮಧ್ಯೆ ಮಧ್ಯೆ ಸಿಎಂ ಕುರ್ಚಿ ಬದಲಾಗಬೇಕು ಎಂದು ವಾದಿಸಿದ್ದವರನ್ನು ನಾಯಿಗಳು ಎನ್ನುವ ಮೂಲಕ ಹೋರಾಟ ಇನ್ನೊಂದು ಹಂತಕ್ಕೆ ಹೋಗಿದೆ.
ಹೀಗಿರುವಾಗಲೇ ಸಿದ್ದರಾಮಯ್ಯ ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರ ಇರೋವರೆಗೆ ಹೋರಾಡುತ್ತೇನೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ, ಅದು ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ ಎಂದು ಬರೆದುಕೊಂಡಿದ್ದಾರೆ.
ಇಲ್ಲಿ ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಜಾತಿಯ ಅಸ್ತ್ರ ಬಳಸಿದ್ದಾರೆ. ಜೊತೆಗೆ ಸಿಎಂ ಬಳಸಿದ ಪದಗಳು ಹರಿತವಾಗಿವೆ. ಇದಾಗುತ್ತಿದ್ದಂತೆಯೇ ದೆಹಲಿಗೆ ಭೇಟಿ ನೀಡಿದ್ದ ಸತೀಶ್ ಜಾರಕಿಹೊಳಿ ತಂಡ ಖರ್ಗೆ ಅವರನ್ನು ಭೇಟಿ ಮಾಡಿದೆ.ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನಾವು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಅದಷ್ಟೂ ಬೇಗ ರಾಜ್ಯದಲ್ಲಿನ ಗೊಂದಲ ಬಗೆಹರಿಸುತ್ತೇವೆ ಎಂದು ಖರ್ಗೆ ಅವರು ತಿಳಿಸಿದ್ದಾರಂತೆ. ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಪರಿಗಣಿಸಿ ಮತ್ತು ಸಂಪುಟದಿಂದ ಹೊರ ಬಿದ್ದಿರುವ ನಾಯಕ ಸಮುದಾಯದ ಇಬ್ಬರನ್ನೂ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಕೇಳಿದ್ರಂತೆ ಸತೀಶ್ ಜಾರಕಿಹೊಳಿ.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉದ್ಭವಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದಿದೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಸುತ್ತೇವೆ ಆಶ್ವಾಸನೆ ಕೊಟ್ಟರಂತೆ.ಈ ವಿಷಯದಲ್ಲಿ ಈಗಾಗಲೇ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದಿದೆ ಎಂದು ಖರ್ಗೆ ಮಾಹಿತಿ ನೀಡಿದ್ದು, ಖರ್ಗೆ ಇಂಥ ಮಾಹಿತಿ ನೀಡಿದ್ದು ಇದೇ ಮೊದಲ ಸಲವಾದ ಕಾರಣ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ.



