ಡಿಕೆ ಶಿವಕುಮಾರ್.. ನಿಗೂಢವಾಗಿ.. ಮಾರ್ಮಿಕವಾಗಿ ಮಾತನಾಡ್ತಾ ಸಂದೇಶ ಕೊಡ್ತಾರೆ. ಸಿದ್ದರಾಮಯ್ಯ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತಾರೆ. ಅವರವರ ಬೆನ್ನಿಗೆ ನಿಂತಿರೋ ಸಂಘ, ಸಂಘಟನೆಗಳು, ಮಠಗಳು.. ಬಹಿರಂಗವಾಗಿ ಮಾತನಾಡ್ತಾರೆ. ಸಚಿವರು, ಶಾಸಕರೇ ಓಪನ್ ಆಗಿ ಮಾತಾಡ್ತಾರೆ. ಆದರೆ.. ಎಲ್ಲದಕ್ಕೂ ಮಾಧ್ಯಗಳೇ ಕಾರಣ ಎನ್ನುವ ಕುಂಟು ನೆಪ ಹೇಳಿ ಬಚಾವ್ ಆಗುತ್ತಿರುವ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರೂ ಈಗ ಉಪ್ಪಿಟ್ಟು ತಿಂದು ಸಮಾಧಾನ ಮಾಡ್ಕೊಳ್ಳೋ ಹಂತಕ್ಕೆ ಬಂದಿದ್ದಾರೆ. ಹೈಕಮಾಂಡ್ ನಾಯಕರೇ ಹೇಳಿದ್ದಾರಂತೆ. ಹೈಕಮಾಂಡ್ ಎಂದರೆ.. ಅದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂತೂ ಅಲ್ಲ.
ಪರಸ್ಪರ ಭೇಟಿ ಮಾಡಿ ಹೊಂದಾಣಿಕೆಗೆ ಪ್ರಯತ್ನಿಸಿ. ಉಪಾಹಾರ ಕೂಟ ಮಾಡಿ. ಮಾತನಾಡಿ.. ರಾಜ್ಯ ಬಿಕ್ಕಟ್ಟಿನ ಬಗ್ಗೆ ತನ್ನ ಅಂತಿಮ ನಿಲುವು ಪ್ರಕಟಿಸುವ ಮುನ್ನ ಉಭಯ ನಾಯಕರು ಹೊಂದಾಣಿಕೆಗೆ ಅಂತಿಮ ಯತ್ನ ನಡೆಸಲಿ ಎಂಬ ಉದ್ದೇಶದಿಂದ ಹೈಕಮಾಂಡ್ ಇಬ್ಬರನ್ನೂ ಬ್ರೇಕ್ ಫಾಸ್ಟ್ ಮಾಡಿ ಅಂಥಾ ಹೇಳಿದೆ. ಒಟ್ಟಿನಲ್ಲಿ ಇಬ್ಬರು ನಾಯಕರ ಬ್ರೇಕ್ ಫಾಸ್ಟ್ ಟೈಂನ್ನೂ ಹೈಕಮಾಂಡ್ ನಿರ್ಧಾರ ಮಾಡುವಂತಾಗಿದೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಶನಿವಾರ ಬೆಳಗ್ಗೆ ಶಿವಕುಮಾರ್ ತಿಂಡಿ ತಿನ್ನೋಕೆ ಬರುತ್ತಾರೆ. ಅಲ್ಲಿ ಕೇವಲ ಸಿಎಂ ಹಾಗೂ ಡಿಸಿಎಂ ಮಾತ್ರ ಇರಲಿದ್ದು, ಸಭೆಯ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಮೂಡಿಸಿದೆ. ಈ ಹಿಂದೆ ಆದ ಮೀಟಿಂಗಿನ ವಿಷಯವನ್ನು ಮಾತನಾಡುತ್ತಾ.. ದೆಹಲಿಯಲ್ಲಿ ಆದ ಮೀಟಿಂಗ್ ನಾವು ಐದಾರು ಜನರ ನಡುವೆ ನಡೆದ ಗುಟ್ಟಿನ ವ್ಯಾಪಾರ ಎಂದಿದ್ದರು ಡಿಕೆ. ಈಗ ಬ್ರೇಕ್ ಫಾಸ್ಟ್ ಮುಗಿಸಿ ಬಂದು.. ಆಮೇಲೆ ಅದು ನಮ್ಮಿಬ್ಬರ ನಡುವೆ ನಡೆದ ಗುಟ್ಟಿನ ವ್ಯಾಪಾರ ಎಂದು ಹೇಳಬಾರದು.. ಅಷ್ಟೇ.
ಮೂಲಗಳ ಪ್ರಕಾರ, ಅಧಿಕಾರ ಹಸ್ತಾಂತರದ ಕುರಿತು ಮೊದಲೇ ಸ್ಪಷ್ಟತೆ ನೀಡುವ ಅಗತ್ಯವಿದೆ ಎಂದು ಕಳೆದ ಆಗಸ್ಟ್‌ನಲ್ಲೇ ಸುರ್ಜೇವಾಲಾ ಅವರು ವರಿಷ್ಠರಿಗೆ ತಿಳಿಸಿದ್ದರು. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ಗಾಂಧಿ ಅವರು ಈ ಸಲಹೆಗೆ ಸ್ಪಂದಿಸಿರಲಿಲ್ಲ ಎನ್ನಲಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದ ಸುರ್ಜೇವಾಲಾ ಅವರು, ಕಾಂಗ್ರೆಸ್ ಪಾಳೆಯದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದರೂ ಯಾಕೆ ಮಧ್ಯಪ್ರವೇಶಿಸುತ್ತಿಲ್ಲ ಎಂಬುದು ಕಾರ್ಯಕರ್ತರ ಪ್ರಶ್ನೆ.
ಕೆಲ ತಿಂಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಸುರ್ಜೇವಾಲಾ ಅವರು, ಕಾಂಗ್ರೆಸ್ ಶಾಸಕರು ಮತ್ತು ಸಚಿವರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಜತೆ ಸಭೆ ನಡೆಸಿ ಶಾಸಕರು, ಸಚಿವರ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು. ಸರ್ಕಾರಿ ಅಧಿಕಾರಿಗಳ ಸಭೆಗೂ ಮುಂದಾಗಿದ್ದರು ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳಿಂದ ‘ಸೂಪರ್ ಸಿಎಂ’ ಎಂದೇ ಟೀಕೆಗೆ ಗುರಿಯಾಗಿದ್ದರು.
ವಾರದ ಹಿಂದೆ ಬಣ ರಾಜಕೀಯ ಉಂಟಾಗಿ ಡಿನ್ನರ್ ಸಭೆಗಳು, ದೆಹಲಿ ಪರೇಡ್‌ಗಳು ನಡೆದಾಗಲೂ ಸುರ್ಜೇವಾಲಾ ಮೌನವಹಿಸಿದ್ದರು. ಇದು ಬಿಜೆಪಿ ಹಾಗೂ ಕೆಲ ವರ್ಗದ ಮಾಧ್ಯಮಗಳ ಅಪಪ್ರಚಾರ ಎಂದು ತೇಪೆ ಹಚ್ಚಲು ಯತ್ನಿಸಿ ಒಂದು ಟ್ವೀಟ್ ಮಾಡಿದ್ದರು. ಬಳಿಕ ಯಾವುದೇ ಸುದ್ದಿ ಇಲ್ಲದೆ ನಾಪತ್ತೆಯಾಗಿದ್ದಾರೆ.
ಸುರ್ಜೇವಾಲ ಜೊತೆ ಏಕೆ ಒಂದು ಡಿನ್ನರ್ ಮೀಟಿಂಗ್ ಮಾಡಬಾರದು..



